ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌದಿ ಹೊಲಿಯುವವರ ಬದುಕು ಮೂರಾಬಟ್ಟೆ

Last Updated 16 ಸೆಪ್ಟೆಂಬರ್ 2013, 6:17 IST
ಅಕ್ಷರ ಗಾತ್ರ

ಬಳ್ಳಾರಿ: ಅಜ್ಜಿಯ ಸೀರೆ, ಅಮ್ಮನ ಪತ್ತಲ, ಅಜ್ಜನ ದೋತರ, ಅಪ್ಪನ ಪಂಚೆ, ಅಕ್ಕನ ದುಪ್ಪ­ಟ್ಟಾ, ತಂಗಿಯ ಲಂಗ... ಹೀಗೆ ಉಟ್ಟು ಬಿಟ್ಟ ಹಳೇ ಬಟ್ಟೆಗಳಿಂದ ಸಿದ್ಧಪಡಿಸುವ ಕೌದಿ­ಯನ್ನು ಹಾಸಿ, ಹೊದ್ದುಕೊಳ್ಳುವುದೇ ಅಪ್ಯಾಯಮಾನ.

ಹಳೆಯ ಬಟ್ಟೆಗಳನ್ನು ನೀಡಿ, ಪಾತ್ರೆ ಖರೀದಿಸುವುದಕ್ಕೂ ಆದ್ಯತೆ ನೀಡುವ ಮಹಿಳೆಯರು, ಹಳೆಯದಾದ ಆದರೆ ಸಂಪೂರ್ಣ ಹರಿಯದ ಬಟ್ಟೆಗಳಿಂದ ಕೌದಿ ಹೊಲಿಸಿಕೊಳ್ಳುವುದು ರೂಢಿ. ಆಧುನೀಕತೆಯ ಭರಾಟೆಯ ಇತ್ತೀಚಿನ ದಿನಗಳಲ್ಲಿ ಕೌದಿಯು ಬಳಕೆಯಿಂದ ದೂರ­ವಾಗುತ್ತಿದೆ. ಹಳೆ ಬಟ್ಟೆ ಕತ್ತರಿಸಿ, ಜೋಡಿಸಿ ಕೌದಿ ಹೊಲಿಯುವವರ ಬದುಕು ಮೂರಾಬಟ್ಟೆಯಾಗುತ್ತಿದೆ.

ಸಾಂಪ್ರದಾಯಿಕ ಕೌದಿ ಹೊಲಿದು ಜೀವನ ನಡೆಸುವ ಒಂದು ವರ್ಗವೇ ನಗರದಲ್ಲಿದ್ದು, ಮುಂಜಾನೆಯಿಂದ ಸಂಜೆಯವರೆಗೆ ಮನೆಮನೆಗೆ ತೆರಳಿ ಕೌದಿ ಹೊಲಿದುಕೊಟ್ಟು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದೆ. ವಿಷಾದಕರ ಸಂಗತಿಯೆಂದರೆ, ಈ ವರ್ಗ ಇತ್ತೀಚಿನ ದಿನಗಳಲ್ಲಿ ಕೆಲಸವೇ ಸಿಗದೆ ದುಃಸ್ಥಿತಿಯಲ್ಲಿ ಕಾಲ ನೂಕುತ್ತಿದೆ.

ನಗರದ ಎಪಿಎಂಸಿ ಮಾರುಕಟ್ಟೆ ಬಳಿಯ ಬಂಡಿಮೋಟ ಪ್ರದೇಶದ ಮಾರೆಮ್ಮನ ಗುಡಿ ಹತ್ತಿರ ವಾಸಿಸುತ್ತಿರುವ ಬುಡುಬುಡಿಕೆ ಜನಾಂಗದ ಮಹಿಳೆಯರು, ಈ ರೀತಿ ಓಣಿಓಣಿಗಳಲ್ಲಿ ಓಡಾಡಿ, ‘ಕೌದಿ ಹೊಲಿಸ್ತೀರೇನಮ್ಮ’ ಎಂದು ಕೂಗಿ, ಕೆಲಸ ಗಿಟ್ಟಿಸಿಕೊಂಡು, ಒಂದೂವರೆ ಗಂಟೆಯಲ್ಲಿ ಒಂದು ಕೌದಿ ಸಿದ್ಧಪಡಿಸುತ್ತಾರೆ. ಸಾಮಾನ್ಯ­ವಾಗಿ ಸಿಂಗಲ್‌ ಮತ್ತು ಡಬಲ್‌ ಕೌದಿ ಹೊಲಿ­ಯುವ ಇವರು, ಕ್ರಮವಾಗಿ 100ರಿಂದ 150, 200ರಿಂದ 300 ರೂಪಾಯಿ ಪಡೆದರೇ ಹೆಚ್ಚು.

‘ನಗರದ ಕೌಲ್‌ಬಝಾರ್‌, ತಾಲ್ಲೂಕಿನ ಕೊಳಗಲ್ಲು, ಕುರುಗೋಡು ಮತ್ತಿತರ ಕಡೆ ನಮ್ಮ ಜನಾಂಗದವರಿದ್ದಾರೆ. ಮಹಿಳೆಯರು ಕೌದಿ ಹೊಲಿಯುವ ಕಸುಬನ್ನೇ ನೆಚ್ಚಿಕೊಂಡಿದ್ದರೆ, ಗಂಡಸರು ತಳ್ಳು ಗಾಡಿಯಲ್ಲಿ ತೆರಳುತ್ತ ಗುಜರಿ, ರದ್ದಿ ಪೇಪರ್‌ ಖರೀದಿ ಕೆಲಸವನ್ನೂ, ಅಲ್ಯೂ­ಮಿನಿ­ಯಂ ಪಾತ್ರೆ, ಪ್ಲಾಸ್ಟಿಕ್‌ ವಸ್ತುಗಳ ಮಾರಾಟ ಮಾಡುತ್ತಾರೆ. ಬಡತನ, ಅನಕ್ಷರತೆ ಇರುವುದರಿಂದ ನಮ್ಮ ಜನಾಂಗ ಅಭಿವೃದ್ಧಿ ಸಾಧಿಸಿಲ್ಲ. ಶಿಕ್ಷಣ, ಸೂಕ್ತ ನೆಲೆ, ಸೌಲಭ್ಯಗಳು ಮರೀಚಿಕೆಯಾಗಿವೆ’ ಎಂದು ಕೌದಿ ಹೊಲೆ­ಯುವ ಗಿರಿಜಮ್ಮ ಹಾಗೂ ಲಕ್ಷ್ಮಿ ಹೇಳಿದರು.

‘ಬಳ್ಳಾರಿಯಲ್ಲಿ ಮೊದಲು ನಮಗೆ ಸ್ಪರ್ಧೆ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ಆಂಧ್ರದವರು ಕೌದಿಯನ್ನೂ ಹೊಲಿಗೆ ಯಂತ್ರಗಳಲ್ಲಿ ಸಿದ್ಧಪಡಿಸಿ ಕೊಡುತ್ತಿರುವುದರಿಂದ ಕೆಲಸ ಕಡಿಮೆಯಾಗಿದೆ. ಕೌದಿ ಬೇಕೆಂದವರು ಆಗಾಗ ಕೆಲಸ ಕೊಡು­ತ್ತಾರೆ. ಹೇಗೋ ಜೀವನ ಸಾಗಿದೆ’ ಎಂದೂ ಅವರು ವಿವರಿಸಿದರು.

ಮರಾಠಿಯನ್ನೇ ಹೋಲುವ ಭಾಷೆ ಬಲ್ಲ ಈ ಜನಾಂಗದ ವಂಡ್ರಮ್ಮ, ಮಾರೆಮ್ಮ, ಶಾರದಮ್ಮ, ಹುಲುಗಮ್ಮ, ನಾಗಮ್ಮ, ಮಲ್ಲಮ್ಮ ಮತ್ತಿತರರು ದಶಕಗಳಿಂದ ಮಾಡುತ್ತಿರುವ ಈ ಕಸುಬು ಅವರ ನಂತರ ಮರೆಯಾಗದೆ ಮುಂದುವರಿ­ಯುವಂತಾಗಲು ಸಾರ್ವಜನಿಕರ ಸಹಕಾರ, ಪ್ರೋತ್ಸಾಹದ ಅಗತ್ಯವಿದೆ. ಕೌದಿ ಹೊಲಿಸಬೇಕು ಎಂದು ಬಯಸುವವರು ಗಿರಿಜಮ್ಮನನ್ನು ಅವರ ಮಗ ಶೇಖರ್‌ ಅವರ ಮೊಬೈಲ್‌ ದೂರವಾಣಿ ಸಂಖ್ಯೆ 81399– 75680 ಮೂಲಕ ಸಂಪರ್ಕಿಸಬಹುದು.

ಯಂತ್ರಗಳ ಹಾವಳಿ
‘ಬಟ್ಟೆ ಹೊಲಿಯುವ ಹೊಲಿಗೆ ಯಂತ್ರಗಳಿಂದಲೇ ಕೌದಿ ಹೊಲಿಯುವ ಸಂಪ್ರದಾಯ ಆರಂಭವಾಗಿದ್ದು, ಅನೇಕರು ತಮ್ಮ ಮನೆಯಲ್ಲಿರುವ ಹಳೆಯ ಬಟ್ಟೆಗಳನ್ನು ಅಲ್ಲೇ ತೆಗೆದುಕೊಂಡು ಹೋಗಿ ಕೌದಿ ಹೊಲಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ಕೆಲಸಕ್ಕೇ ಕುತ್ತು ಬಂದಿದೆ’ ಎಂದು ಕೌದಿ ಹೊಲಿಯುವ ಗಿರಿಜಮ್ಮ ಹಾಗೂ ಲಕ್ಷ್ಮಿ  ಎದುರು ಬೇಸರ­ದಿಂದ ತಿಳಿಸಿದರು.

‘ಬಿಸಾಡಿದ ಹಳೆಯ ಬಟ್ಟೆಗಳು,  ಹಾಸಿಗೆ­ಯಾಗಿ, ಹೊದಿಕೆ­ಯಾಗಿ ನೆರವಾಗುತ್ತವೆ. ಬೇಸಿಗೆಯಲ್ಲಿ ಹಾಸಿಕೊಳ್ಳುವುದಕ್ಕೂ, ಮಳೆ, ಚಳಿಗಾಲ­ದಲ್ಲಿ ಹೊದ್ದುಕೊಳ್ಳುವುದಕ್ಕೂ ಬಳಕೆಯಾ­ಗುವ ಕೌದಿ ಅತ್ಯಂತ ಆಪ್ತ ಎಂಬುದು ಅನೇಕರಿಗೆ ಗೊತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT