ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲಾಧಾರಿತ ಶಿಕ್ಷಣಕ್ಕೆ ಸಲಹೆ

Last Updated 10 ಏಪ್ರಿಲ್ 2013, 8:36 IST
ಅಕ್ಷರ ಗಾತ್ರ

ಬೆಳಗಾವಿ: `ವಿಶ್ವವಿದ್ಯಾಲಯಗಳು ಕೌಶಲಾಧಾರಿತ ಮತ್ತು ಆನ್ವಯಿಕ ಜ್ಞಾನ ಆಧಾರಿತ ಶಿಕ್ಷಣ ನೀಡುವ ಮೂಲಕ ಯುವ ಪೀಳಿಗೆಯನ್ನು ಔದ್ಯಮಿಕ ಕ್ಷೇತ್ರಕ್ಕೆ ತರಬೇತುಗೊಳಿಸಬೇಕು' ಎಂದು ಬೆಳಗಾವಿ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಸತೀಶ ತೆಂಡೊಲ್ಕರ್ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ಉದ್ಯೋಗ ಕೇಂದ್ರದ ಅಧಿಕಾರಿಗಳಿಗಾಗಿ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

`ಜಾಗತಿಕ ಮಾನವ ಸಂಪನ್ಮೂಲ ಮಾರುಕಟ್ಟೆಯ ಇಂದಿನ ಒಲವುಗಳನ್ನು ಗಮನಸಿದರೆ, ಬೆಳಗಾವಿಯಂತಹ ನಗರಗಳು ಬೆಂಗಳೂರಿನಂತೆ ಔದ್ಯಮಿಕ ಕೇಂದ್ರವಾಗಿ ಪರಿವರ್ತನೆಯಾಗಲಿದೆ. ಬಂಡವಾಳವನ್ನು ಹೂಡಲು ವಿಪುಲ ಅವಕಾಶಗಳು ಬೆಳಗಾವಿಯಂತಹ ನಗರಗಳು ಸೂಕ್ತವಾಗಿವೆ. ಕೌಶಲ್ಯಾಧಾರಿತ ಮಾನವ ಸಂಪನ್ಮೂಲದ ಕೊರತೆ ಇಂದು ಔದ್ಯಮಿಕ ಕ್ಷೇತ್ರದಲ್ಲಿ ಎದ್ದು ಕಾಣುತ್ತಿದೆ. ಹೀಗಾಗಿ ವಿಶ್ವವಿದ್ಯಾಲಯಗಳು ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಬೇಕು' ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಬಿ.ಆರ್. ಅನಂತನ್, ವಿದ್ಯಾರ್ಥಿಗಳಲ್ಲಿ ಔದ್ಯೋಗಿಕ ಮನೋಧರ್ಮವನ್ನು ಬೆಳೆಸುವ ಶಿಕ್ಷಣವು ಇಂದು ಅನಿವಾರ್ಯವಾಗಿದೆ. ಕೌಶಲ್ಯಾಧಾರಿತ ಉನ್ನತ ಶಿಕ್ಷಣವನ್ನು ಕೊಡುವುದು ವಿಶ್ವವಿದ್ಯಾಲಯಗಳ ಜವಾಬ್ದಾರಿಯಾಗಿದೆ.

ಪಠ್ಯವನ್ನು ಬೋಧಿಸುವಾಗಲೇ ಉದ್ಯೋಗಮುಖಿಯಾದ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು. ಪಠ್ಯಕ್ರಮದ ಜೊತೆ ಜೊತೆಗೆ ಆಧುನಿಕ ಜಗತ್ತಿಗೆ ಸಂವಾದಿಯಾಗುವ ಕೌಶಲ್ಯಗಳನ್ನು ಬಳಸಿಕೊಳ್ಳುವ ತಂತ್ರಗಳನ್ನು ತಿಳಿಸಬೇಕು ಎಂದು ಕಾಲೇಜುಗಳ ಉದ್ಯೋಗ ಕೇಂದ್ರ ಅಧಿಕಾರಿಗಳಿಗೆ ಸಲಹೆ ನೀಡಿದರು. ಮೊದಲ ಗೋಷ್ಠಿಯಲ್ಲಿ ವಿದ್ಯಾರ್ಥಿಗಳಲ್ಲಿ ಉದ್ಯೋಗ ಕೇಂದ್ರದ ಅಧಿಕಾರಿಗಳ ಪಾತ್ರ ಕುರಿತು. ಪ್ರೊ. ಎ.ಬಿ. ಕಾಲಕುಂದ್ರೀಕರ್ ಹಾಗೂ ಡಾ. ಶ್ರೀನಿವಾಸ ಎಸ್. ಬಳ್ಳಿ ಮಾತನಾಡಿದರು.

ಎರಡನೇ ಗೋಷ್ಠಿಯಲ್ಲಿ ವಿದ್ಯಾರ್ಥಿಗಳ ಔದ್ಯೋಗಿಕ ವಲಯಾಧಾರಿತ ಸಾಮರ್ಥ್ಯವನ್ನು ಬೆಳೆಸುವಲ್ಲಿ ಉದ್ಯೋಗ ಕೇಂದ್ರದ ಅಧಿಕಾರಿಗಳ ಪಾತ್ರ ಕುರಿತು ಬೆಳಗಾವಿಯ ಹಿಂಡಾಲ್ ಕೈಗಾರಿಕಾ ಸಮೂಹ ಸಂಸ್ಥೆಯ ಗ್ರೀರಾರ್ಡ್ ರೋಡ್‌ರಿಕ್ಸ್ ಹಾಗೂ ಬೆಂಗಳೂರಿನ ಐ ಸೋಲ್ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಡಿ.ಎಂ. ಕಿರಣ ತಮ್ಮ ವಿಚಾರಗಳನ್ನು ಮಂಡಿಸಿದರು.
ಕುಲಸಚಿವ ಪ್ರೊ. ವಿಷ್ಣುಕಾಂತ ಎಸ್. ಚಟಪಲ್ಲಿ ಹಾಗೂ ವಿಶ್ವವಿದ್ಯಾಲಯದ ಉದ್ಯೋಗ ವಿಭಾಗದ ಸಂಯೋಜಕ ಡಾ. ಎಸ್.ಸಿ. ಪಾಟೀಲ ಹಾಜರಿದ್ದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜನೆಯ ಕಾಲೇಜುಗಳ ಉದ್ಯೋಗ ಕೇಂದ್ರದ ಅಧಿಕಾರಿಗಳು, ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT