ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಥರೀನ್ ಎಂಬ

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

`ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಮುಖಪುಟಕ್ಕೆ ನನ್ನನ್ನು ಆಯ್ಕೆ ಮಾಡಿದ್ದು ನನ್ನ ಸೌಭಾಗ್ಯವೆಂದೇ ಭಾವಿಸಿದ್ದೇನೆ. ಪ್ರಜಾವಾಣಿಯ ಮೂಲಕ ನಾಡಿಗೆ ದೀಪಾವಳಿ ಶುಭಾಶಯ ಹೇಳುವ ಅವಕಾಶ ಲಭಿಸಿದ್ದು ನನಗೆ ಅತೀವ ಸಂತಸ ತಂದಿದೆ. ಇದು ನನ್ನ ವೃತ್ತಿ ಜೀವನದಲ್ಲಿ ಸಿಕ್ಕ ದೊಡ್ಡ ಗೌರವ~.

ದೀಪಾವಳಿ ವಿಶೇಷಾಂಕದ ಪುಟಗಳನ್ನು ತಿರುವುತ್ತಲೇ, `ಸಿನಿಮಾ ರಂಜನೆ~ ಜೊತೆ ಮಾತಿಗಿಳಿದ ನಟಿ ಕ್ಯಾಥರೀನ್ ತ್ರೇಸಾ ಅವರ ಮುಖ ಕೂಡ ದೀವಳಿಗೆ ಬೆಳಕಿನ ಒಂದು `ಹೂಕುಂಡ~ದಂತಿತ್ತು. 

ಕ್ಯಾಥರೀನ್ ಮೂಲತಃ ಮಲಯಾಳಿ. ಆದರೆ, ಹುಟ್ಟಿದ್ದು ಬೆಳೆದಿದ್ದು ದುಬೈನಲ್ಲಿ. ಶಿಕ್ಷಣದ ಸಲುವಾಗಿ ಬೆಂಗಳೂರಿಗೆ ಬಂದರು. ಕಲಿಕೆಯ ಕಾರಣದಿಂದಾಗಿ ಬೆಂಗಳೂರಿಗೆ ಬಂದ ಈ ಚೆಲುವೆಯನ್ನು `ಫ್ಯಾಷನ್ ಪ್ರಪಂಚ~ ಕೈಬೀಸಿ ಕರೆಯಲು ಹೆಚ್ಚು ದಿನ ಬೇಕಾಗಲಿಲ್ಲ.

ಮಾಡಲಿಂಗ್ ಹವ್ಯಾಸವಾಯಿತು, ವೃತ್ತಿಯಾಗಿಯೂ ಬದಲಾಯಿತು. ರೂಪದರ್ಶಿಯಾಗಿ ಹಂತಹಂತವಾಗಿ ಮೇಲೇರಿದ ಈಕೆ ಹಲವು ಶೋಗಳ ಶೋ ಸ್ಟಾಪರ್. ಫ್ಯಾಷನ್ ಲೋಕಕ್ಕೂ ಚಿತ್ರರಂಗಕ್ಕೂ ಇರುವ ನಂಟಿನ ಕಾರಣದಿಂದಾಗಿ ಕ್ಯಾಥರೀನ್‌ಗೆ ಸಿನಿಮಾದಲ್ಲೂ ಅವಕಾಶಗಳು ಬರಲಾರಂಭಿಸಿದವು.
 
ಹೀಗೆ, ಓದಲಿಕ್ಕೆಂದು ಬೆಂಗಳೂರಿಗೆ ಬಂದು ನಟಿಯಾದ ಕ್ಯಾಥರೀನ್‌ಗೆ ಕನ್ನಡ ಚಿತ್ರರಂಗದಲ್ಲಿ ನೆಲೆಯೂರುವ ಆಸೆ. ಅವರ ಸಂದರ್ಶನದ ಮುಖ್ಯಾಂಶಗಳು ಇಲ್ಲಿವೆ...

ಬೆಂಗಳೂರು ಜೊತೆ ನಿಮ್ಮ ನಂಟು ಗಾಢವಾದದ್ದು ಹೇಗೆ?
ಶಿಕ್ಷಣಕ್ಕೆಂದು ಬೆಂಗಳೂರಿಗೆ ಬಂದೆ. `ಫ್ಯಾಷನ್ ಲೋಕ~ದಲ್ಲಿ ಬೆಂಗಳೂರು ವಿಶ್ವದ ಗಮನವನ್ನೇ ಸೆಳೆದಿದೆ. ಈ ಸೆಳೆತ ನನ್ನನ್ನೂ  ಆಕರ್ಷಿಸಿತು. ಪ್ರಸಾದ್ ಬಿದಪ್ಪ ಅವರ ಮಾರ್ಗದರ್ಶನದಲ್ಲಿ ಕೆಲ ಕಾಲ ರ‌್ಯಾಂಪ್ ತುಳಿದೆ. ಇದರೊಂದಿಗೆ ಕನ್ನಡ ಚಿತ್ರರಂಗದಿಂದಲೂ ಸಾಕಷ್ಟು ಅವಕಾಶಗಳು ಬರತೊಡಗಿದವು. ಹೀಗಾಗಿ ಬೆಂಗಳೂರಲ್ಲಿ ನೆಲೆ ನಿಂತೆ.

ಈವರೆಗಿನ ಸಿನಿಮಾ ಅವಕಾಶಗಳ ಬಗ್ಗೆ ಹೇಳಿ?
ಕನ್ನಡದಲ್ಲಿ ನನ್ನ ಮೊದಲ ಚಿತ್ರ `ಶಂಕರ್ ಐಪಿಎಸ್~. ಇದರ ನಂತರ ಚಿತ್ರರಂಗದಿಂದ ಒಂದೊಂದೇ ಅವಕಾಶಗಳು ಬರತೊಡಗಿದವು. ಅಭಿಜಿತ್ ಅವರ `ವಿಷ್ಣು~, ಉಪೇಂದ್ರ ನಟನೆಯ `ಗಾಡ್ ಫಾದರ್~ ಚಿತ್ರಗಳು ತೆರೆ ಕಾಣಲು ಸಿದ್ಧವಾಗಿವೆ. ಕನ್ನಡ ಚಿತ್ರರಂಗ, ನಿರ್ಮಾಪಕರು, ತಂತ್ರಜ್ಞರು ಹಾಗೂ ಕಲಾವಿದರು ನೀಡುತ್ತಿರುವ ಪ್ರೋತ್ಸಾಹ ನನ್ನನ್ನು ಇಲ್ಲಿಯೇ ಹಿಡಿದಿಟ್ಟಿವೆ. ಈ ನಡುವೆ `ಥ್ರಿಲ್ಲರ್~ ಎಂಬ ಮಲಯಾಳಿ ಚಿತ್ರವನ್ನೂ ಮಾಡಿದ್ದೇನೆ.

ಕನ್ನಡ ಎಷ್ಟರಮಟ್ಟಿಗೆ ಗೊತ್ತು?
ಈಗಷ್ಟೇ ಕಲಿಯಲು ಆರಂಭಿಸಿದ್ದೇನೆ.

ಭಾಷೆ ಗೊತ್ತಿಲ್ಲದಿರುವುದು ತೊಡಕೆನ್ನಿಸುತ್ತಿಲ್ಲವೇ?
ನನ್ನ ಪ್ರಕಾರ ಕಲಾವಿದರಿಗೆ ಭಾಷೆ ಮುಖ್ಯವಲ್ಲ. ನಟನೆಗೆ ಅವಕಾಶವಿದ್ದಲ್ಲಿ ಒರಿಯಾ, ಬಂಗಾಳಿ ಹೀಗೆ ಯಾವ ಭಾಷೆಯ ಚಿತ್ರಗಳನ್ನಾದರೂ ಮಾಡಲು ನಾನು ಸಿದ್ಧ.

ಗ್ಲಾಮರ್ ಪಾತ್ರಗಳ ಕುರಿತು?
ಅಭಿನಯಕ್ಕೆ ಅವಕಾಶ ಸಿಗಬೇಕು ಎನ್ನುವುದೇನೋ ನಿಜ. ಆದರೆ ಅದರಲ್ಲಿ ಅಲ್ಪ ಸ್ವಲ್ಪ ಗ್ಲಾಮರ್ ಪಾತ್ರವಿದ್ದರೆ ನನ್ನದೇನೂ ಅಭ್ಯಂತರವಿಲ್ಲ. ಹಾಗೆಂದ ಮಾತ್ರಕ್ಕೆ ಅತಿಯಾದ ತೊಗಲು ಪ್ರದರ್ಶನ ನನಗಿಷ್ಟವಿಲ್ಲ.

ಫ್ಯಾಷನ್ ಲೋಕ ಮತ್ತೆ ನಿಮ್ಮನ್ನು ಕರೆದರೆ ಹೋಗುತ್ತೀರಾ?
ಖಂಡಿತಾ. ನನಗೆ ನನ್ನ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆ ಬೇಕು. ಅದು ಚಿತ್ರರಂಗವಾದರೂ ಆಯಿತು, ಫ್ಯಾಷನ್ ಲೋಕವಾದರೂ ಸರಿ ಅಥವಾ ಉತ್ಪನ್ನಗಳ ರೂಪದರ್ಶಿಯಾಗಿಯಾದರೂ ಸರಿ. ಆ ಕೆಲಸದಲ್ಲೇ ನಾನು ತೃಪ್ತಿಪಟ್ಟುಕೊಳ್ಳುತ್ತೇನೆ.

ಸದ್ಯಕ್ಕೆ ಕನ್ನಡ ಚಿತ್ರರಂಗದಿಂದ ಬಹಳಷ್ಟು ಅವಕಾಶಗಳು ಬರುತ್ತಿವೆ. ಆಯ್ಕೆಯಲ್ಲಿ ಯಾವುದೇ ಅವಸರ ಮಾಡುತ್ತಿಲ್ಲ. ಅಭಿನಯಕ್ಕೆ ಅವಕಾಶವಿರುವ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಒಂದೆರಡು ಉತ್ತಮ ಚಿತ್ರಗಳ ಮಾತುಕತೆ ಅಂತಿಮ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT