ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ವಾಸ್‌ನಲ್ಲಿ ಬಾಲ್ಯದ ಬಣ್ಣ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬದುಕಿನ ಬಂಡಿ ಇಳಿಸಂಜೆಯಲ್ಲಿ ಬಂದು ನಿಂತಾಗ, ಇಡಿಯ ಬಾಳಯಾನದ ಯಾವುದಾದರೂ ಗಳಿಗೆ ಮರಳಿ ಬರಬಾರದೇ ಎಂದು ಯಾರಾದರೂ ಹಪಹಪಿಸಿದರೆ ಅದು ಬಾಲ್ಯದ ದಿನಗಳೇ ಆಗಿರುತ್ತವೆ. ಬಾಲ್ಯವೆಂದರೆ ಹಾಗೆ.

ದುರಂತವೊಂದು ಎಲ್ಲರನ್ನೂ ಮೂಕವಾಗಿಸಿದ ಕ್ಷಣದಲ್ಲೂ ಪುಟಾಣಿಗಳು `ಕಣ್ಣಾಮುಚ್ಚೇ ಕಾಡೇ ಗೂಡೆ~ ಅಂತ ಅಮ್ಮನ ಸೆರಗಿನಲ್ಲಿ ಬಚ್ಚಿಟ್ಟುಕೊಳ್ಳುವುದನ್ನು ಕಂಡು ದುಃಖತಪ್ತ ಮನಸ್ಸುಗಳೂ `ಈ ಕ್ಷಣವೇ ನಮಗೂ ಬಾಲ್ಯ ಮರಳಿಬರಬಾರದೇ~ ಎಂದು ಹಂಬಲಿಸುತ್ತವೆ. ಬಾಲ್ಯಕ್ಕಿರುವ ಮಾಂತ್ರಿಕ ಶಕ್ತಿಯೇ ಅಂತಹುದು.

ಯಾವುದೇ ವಯಸ್ಸಿನಲ್ಲಿ ಬಾಲ್ಯ ಕಾಡಿದರೆ ಧ್ಯಾನಸ್ಥ ಸ್ಥಿತಿ ನಮ್ಮದಾಗುತ್ತದೆ. ಅದನ್ನು ಅಭಿವ್ಯಕ್ತಿಗೊಳಿಸುವ ಅವಕಾಶ ಎಲ್ಲರಿಗೂ ಇರುವುದಿಲ್ಲವಲ್ಲ?
ಆದರೆ ಜಯಾ ಜವೇರಿ ಎಂಬ ಕುಂಚ ಕಲಾವಿದೆ ಬಾಲ್ಯದ ನೆನಪುಗಳಿಗೆ ಬಣ್ಣ, ಭಾವ ತುಂಬಿ ಕ್ಯಾನ್ವಾಸ್‌ನಲ್ಲಿ ಕಟ್ಟಿಕೊಟ್ಟಿದ್ದಾರೆ.

`ಮುಗ್ಧತೆಯ ವಯಸ್ಸು~
ಮಕ್ಕಳದು ಮುಗ್ಧ ಲೋಕ. ತಮ್ಮ ಕಲಾಕೃತಿಗಳ ಸಂಗ್ರಹಕ್ಕೆ ಜಯಾ ಅವರು ಕೊಟ್ಟಿರುವ ಶೀರ್ಷಿಕೆಯೂ ಅದುವೇ- ಮುಗ್ಧತೆಯ ವಯಸ್ಸು.

ಕಾಗದವನ್ನು ಜಾಣತನದಿಂದ ಮಡಚಿ ಮಾಡಿದ ವಿಮಾನ, ಚಿಟ್ಟೆ, ಗಾಳಿಪಟ, ಅಪ್ಪನ ಪಂಚೆ ಹೊದ್ದು ಹಾಲ್‌ನ ಮಧ್ಯದಲ್ಲೇ `ಅಡಗಿ~ ಕುಳಿತು ಕಣ್ಣಾಮುಚ್ಚಾಲೆ ಆಡಿದ್ದು, ಹೀಗೆ ಕಚಗುಳಿಯಿಡುವಂತಹ ನೆನಪುಗಳೇ ಈ ಸಂಗ್ರಹದಲ್ಲಿನ ಕಲಾಕೃತಿಗಳು.

ಒಂದೊಂದು ಸರಣಿಗೆ ಅವರಿಟ್ಟ ಹೆಸರುಗಳೂ ಅಷ್ಟೇ ಕುತೂಹಲಕಾರಿ. `ಹೈಡ್ ಅಂಡ್ ಸೀಕ್~ (ಕಣ್ಣಾಮುಚ್ಚಾಲೆ!)ನಲ್ಲಿ ದಟ್ಟಡವಿ ಮತ್ತು ಸೂರ್ಯಕಾಂತಿ ಹೂಗಳ ಹೊಲದಲ್ಲಿ ಆಡುವ ಮಕ್ಕಳು, ಯಾವುದೋ ಆಕರ್ಷಣೀಯ ಅರಮನೆಯನ್ನೂ ಮತ್ತೊಮ್ಮೆ ಯಾವುದೋ ಕೋಟೆಯನ್ನೂ ಆಟದ ಅಂಗಳವಾಗಿಸಿಕೊಂಡ ಬಗೆ ರೋಚಕ ಬಣ್ಣಗಳಲ್ಲಿ ಮೂಡಿಬಂದಿದೆ.

`ಸೀ... ಐ ಮೇಡ್ ಮ್ಯಾಜಿಕ್!~ ಸರಣಿ, ಕಲಾವಿದೆ ಬದುಕು ಮತ್ತು ಬಾಲ್ಯವನ್ನು ಎಷ್ಟು ಸೂಕ್ಷ್ಮವಾಗಿ ಪರಿಭಾವಿಸಿದ್ದಾರೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ. ಮಗು ಮೊದಲ ಬಾರಿಗೆ  ಸಮಸ್ಯೆಯೋ, ಒಗಟೋ ಬಿಡಿಸಿದಾಗ ತಾನೊಂದು ಮ್ಯಾಜಿಕ್ ಮಾಡಿದಂತೆ ಅದು ಸಂಭ್ರಮಿಸುತ್ತದೆ ನೋಡಿ. ಆ ಕ್ಷಣವನ್ನು ಜಯಾ ಅವರು ಬಣ್ಣದಲ್ಲಿ ಹಿಡಿದಿಟ್ಟಿದ್ದಾರೆ.

`ಫೈರ್ ಇನ್ ದಿ ಸ್ಕೈ` ಸರಣಿ ಸೂರ್ಯನ ಮೂಡ್‌ಗಳನ್ನು ಕುರಿತಾದ್ದು. ಅಂದರೆ ಬಾಲಸೂರ್ಯನ ಹೊಂಗಿರಣ ಕ್ಷಣಕ್ಷಣಕ್ಕೂ ಬಲಿತು ಬಿಸಿಲಿನ ಬಣ್ಣ ಪಡೆದುಕೊಳ್ಳುವ ಪರಿ, ಆತ ಪಶ್ಚಿಮದತ್ತ ವಾಲುತ್ತಲೇ ಮತ್ತೆ ಬಾನಂಗಳದಲ್ಲಿ ಮೂಡುವ ವರ್ಣಜಾಲ  ಕೆಂಪು, ಕೇಸರಿ, ಹಳದಿ ಮುಂತಾದ ಗಾಢ ಛಾಯೆಗಳಲ್ಲಿ ಚಿತ್ತಾಕರ್ಷಕವಾಗಿ ಮೂಡಿಬಂದಿದೆ.

ತಮ್ಮ ಕಲಾಕೃತಿಗಳನ್ನು ವೀಕ್ಷಕರು ತಮ್ಮಳಗೆ ಆವಾಹನೆ ಮಾಡಿಕೊಳ್ಳಬೇಕು ಎಂಬುದು ಜಯಾ ಜವೇರಿ ಅವರ ಆಶಯ. ಐದು ವರ್ಷ ವಿದೇಶದಲ್ಲಿದ್ದು, ಇದೀಗ ನಗರಕ್ಕೆ ಮರಳಿರುವ ಜಯಾ, ವಿದೇಶದಲ್ಲೂ ಕುಂಚಕ್ಕೆ ವಿಶ್ರಾಂತಿ ಕೊಟ್ಟಿರಲಿಲ್ಲ.

ಜತೆಗೆ, ಸಿಂಗಪೂರ್, ಲಂಡನ್ ಹಾಗೂ ನ್ಯೂಯಾರ್ಕ್‌ನಲ್ಲಿ 15 ಬಾರಿ ಚಿತ್ರಕಲಾ ಪ್ರದರ್ಶನಗಳನ್ನು ಏರ್ಪಡಿಸಿ ಅಲ್ಲಿನ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದವರು.
ಅಂದಹಾಗೆ, `ಮುಗ್ಧತೆಯ ವಯಸ್ಸು~ ಚಿತ್ರಕಲಾ ಪ್ರದರ್ಶನ ಇಂದು (ಅ.12) ಐಟಿಸಿ ವಿಂಡ್ಸರ್ ಮ್ಯಾನರ್‌ನಲ್ಲಿ ಸಂಜೆ 7ಕ್ಕೆ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT