ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಉದ್ಘಾಟನೆ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಆರೋಗ್ಯ ಸೇವೆಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ಕೇಂದ್ರ ಆರಂಭಿಸಲಾಗಿದ್ದು, ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ~ ಎಂದು  ಆದಿಚುಂಚನಗಿರಿ ಮಠದ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಹೇಳಿದರು.

ಬೆಂಗಳೂರಿನ ಹೊರ ವಲಯದ ಕೆಂಗೇರಿಯಲ್ಲಿ ಬುಧವಾರ ನಡೆದ ಸ್ವಾಮೀಜಿ ಅವರ 68ನೇ ಹುಟ್ಟಹಬ್ಬ, ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ `ಕ್ಯಾನ್ಸರ್ ಇನ್‌ಸ್ಟಿಟ್ಯೂಟ್~ ಉದ್ಘಾಟನೆ ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಅತ್ಯಾಧುನಿಕ  `ಟ್ರ್ಯೂಬೀಮ್ ಎಸ್‌ಟಿಎಕ್ಸ್~ ಯಂತ್ರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ರೋಗಗಳು ವೇಗವಾಗಿ ಬರುತ್ತಿವೆ. ಇದಕ್ಕೆ ತಕ್ಕಂತೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಯತ್ನಿಸುತ್ತಿದೆ. ಇದೇ ನಿಟ್ಟಿನಲ್ಲಿ ಆರೋಗ್ಯ ಸೇವೆಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಉದ್ದೇಶ. ಆದ್ದರಿಂದ ಕ್ಯಾನ್ಸರ್ ಕೇಂದ್ರ ಆರಂಭಿಸಲಾಗಿದ್ದು, ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಶ್ರೀಲಂಕಾದಲ್ಲಿ ಸಹ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಆರಂಭಿಸಿ ಅಲ್ಲಿನ ಜನರಿಗೂ ಸೇವೆ ವಿಸ್ತರಿಸುವ ಚಿಂತನೆ ಇದೆ~ ಎಂದು ಅವರು ಹೇಳಿದರು.

`ಜನತಾ ದರ್ಶನಕ್ಕೆ ಬರುವ ಬಹುತೇಕ ಮಂದಿ ಚಿಕಿತ್ಸೆಗೆ ಹಣ ಕೇಳುತ್ತಾರೆ. ಅದರಲ್ಲಿ ಹೆಚ್ಚಿನವರು ಕ್ಯಾನ್ಸರ್ ರೋಗಿಗಳು. ಐದೂವರೆ ತಿಂಗಳಲ್ಲಿ ರೂ 17 ಕೋಟಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೀಡಲಾಗಿದೆ~ ಎಂದು ಸಿಎಂ ಸದಾನಂದಗೌಡ ಹೇಳಿದರು.

25 ಕೋಟಿ ರೂಪಾಯಿ ಮೌಲ್ಯದ `ಟ್ರ್ಯೂಬೀಮ್ ಎಸ್‌ಟಿಎಕ್ಸ್~ ಯಂತ್ರವನ್ನು ಏಷ್ಯಾ ಪೆಸಿಫಿಕ್‌ನಲ್ಲೇ ಪ್ರಥಮ ಬಿಜಿಎಸ್ ಆಸ್ಪತ್ರೆ ಹೊಂದಿದೆ. ಇಡೀ ವಿಶ್ವದಲ್ಲಿ ಏಳು ಯಂತ್ರಗಳು ಮಾತ್ರ ಇವೆ.

ಗೃಹ ಸಚಿವ ಆರ್.ಅಶೋಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗೋವಿಂದ ಕಾರಜೋಳ, ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿಜಿಎಸ್ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶಾನಂದ ಸ್ವಾಮೀಜಿ, ಗ್ಲೋಬಲ್ ಆಸ್ಪತ್ರೆ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ರವೀಂದ್ರನಾಥ್, ಜರ್ಮನಿಯ ವೇರಿಯಾನ್ ಮೆಡಿಕಲ್ ಸಿಸ್ಟಮ್ಸನ ಶಸ್ತ್ರಚಿಕಿತ್ಸಾ ವಿಜ್ಞಾನಗಳ ನಿರ್ದೇಶಕ ಡೇವಿಡ್ ಜೇಮ್ಸ ಮತ್ತಿತರರು ಉಪಸ್ಥಿತರಿದ್ದರು.

ಸದಾನಂದಗೌಡ ಮುಂದುವರೆಯಲಿ...
ಮುಖ್ಯಮಂತ್ರಿ ಸದಾನಂದಗೌಡ ಅವರು ನೇರ ನಡೆ- ನುಡಿಯ ವ್ಯಕ್ತಿತ್ವ ಹೊಂದಿ ಸ್ವಚ್ಛ ಜೀವನ ನಡೆಸುತ್ತಿದ್ದಾರೆ. ಇಂತಹ ಮುಖಂಡರು ಜನರಿಗೆ ಬೇಕು. ಆದ್ದರಿಂದ ಅವರು ದೀರ್ಘ ಕಾಲದವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆದು ಅಧಿಕಾರ ಅವಧಿಯನ್ನು ಪೂರ್ಣಗೊಳಿಸಲಿ. ಅಂದುಕೊಂಡ ಕೆಲಸವನ್ನೆಲ್ಲ ಮಾಡಲಿ. ಇದಕ್ಕೆ ಆರ್.ಅಶೋಕ, ಗೋವಿಂದ ಕಾರಜೋಳ ಮತ್ತು ಸಂಸದ ಅನಂತಕುಮಾರ್ ಸಹಕಾರ ನೀಡಲಿ ಎಂದು ಬಾಲಗಂಗಾಧರನಾಥ ಸ್ವಾಮೀಜಿ ಹೇಳಿದರು.

ಗೌಡರ ಜತೆ ನಾವಿರುತ್ತೇವೆ:  ಸದಾನಂದಗೌಡ  ಆಡಳಿತದಲ್ಲಿ ಸುಧಾರಣೆ ಮತ್ತು ಬದಲಾವಣೆ ತರುತ್ತಿದ್ದಾರೆ. ಅಭಿವೃದ್ಧಿ ಮಂತ್ರದಿಂದ ಉತ್ತಮ ಕೆಲಸ ಮಾಡುತ್ತಿರುವ ಅವರ ಜತೆ ನಾವಿರುತ್ತೇವೆ ಎಂದು ಅನಂತ್‌ಕುಮಾರ್ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT