ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ತಡೆಗೆ ಸೋಲಿಗರ ಔಷಧಿ ಪರಿಣಾಮಕಾರಿ

Last Updated 29 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ತುಮಕೂರು: ಪುರುಷರಲ್ಲಿ ಕಂಡುಬರುವ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಆದಿವಾಸಿ ಸೋಲಿಗರು ಬಳಸುತ್ತಿರುವ ನಾಟಿ ಔಷಧಿ ಸಾಕಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ವಿದ್ಯಾರ್ಥಿಗಳಿಬ್ಬರು ಸಂಶೋಧನೆಯಿಂದ ಬೆಳಕಿಗೆ ತಂದಿದ್ದಾರೆ.

ನಗರದ ಶ್ರೀದೇವಿ ತಾಂತ್ರಿಕ ಕಾಲೇಜು ಬಯೋಟೆಕ್ನಾಲಜಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ಅನುಷಾ ಕುಲಕರ್ಣಿ ಹಾಗೂ ರಮ್ಯಾ ಅವರು ಸೋಲಿಗರಿಂದ ಪಡೆದುಕೊಂಡು ಬಂದಿದ್ದ ~ಕ್ಯಾನ್ಸರ್ ಲೇಪನ~ವನ್ನು ಕಾಲೇಜಿನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಜಿ.ಪಾಂಡುರಂಗಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದಾರೆ. ಕ್ಯಾನ್ಸರ್‌ಗೆ ಸೋಲಿಗರು ನೀಡುವ ಲೇಪನ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವಲ್ಲಿ ಪರಿಣಾಮಕಾರಿಯಾಗಿದೆ ಎಂಬುದನ್ನು ವೈಜ್ಞಾನಿಕವಾಗಿ ದೃಢೀಕರಿಸಿದ್ದಾರೆ.

ಸಂಶೋಧನೆಗಾಗಿ ಲಖನೌದಿಂದ ಪ್ರಾಸ್ಟೇಟ್ ಕ್ಯಾನ್ಸರ್ ಜೀವಕೋಶಗಳನ್ನು ತರಿಸಿಕೊಳ್ಳಲಾಗಿತ್ತು. ಜೀವಕೋಶಗಳ ಮೇಲೆ ಸೋಲಿಗರ ಲೇಪನವನ್ನು ವೈಜ್ಞಾನಿಕ ಸಂಶೋಧನೆಗೆ ಒಳಪಡಿಸಿದಾಗ ಈ ಲೇಪನದ ಅಂಶಗಳು ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಶಕ್ತಿ ಹೊಂದಿರುವುದು ತಿಳಿದು ಬಂತು ಎಂದು ಸಂಶೋಧನಾ ಮಾರ್ಗದರ್ಶಕ ಡಾ. ಜಿ. ಪಾಂಡುರಂಗಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದರು.

ಸೋಲಿಗರು ಅಷ್ಟು ಸುಲಭವಾಗಿ ತಮ್ಮಲ್ಲಿರುವ ಚಿಕಿತ್ಸಾ ಕ್ರಮದ ಗುಟ್ಟು ಬಿಟ್ಟುಕೊಡುವುದಿಲ್ಲ. ಎರಡು ವರ್ಷಗಳಿಂದ ಸೋಲಿಗರ ಚಿಕಿತ್ಸಾ ಕ್ರಮಗಳ ಕುರಿತು ಅಧ್ಯಯನ ನಡೆಸುತ್ತಿದ್ದು, ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಲಾಗಿದೆ. ಹೀಗಾಗಿ ಸೋಲಿಗರು ಕ್ಯಾನ್ಸರ್ ಲೇಪನದ ವೈಜ್ಞಾನಿಕ ಸಂಶೋಧನೆಗೆ ಅವಕಾಶ ಮಾಡಿಕೊಟ್ಟರು. ಮರದ ಕಾಂಡ, ಎಲೆಗಳನ್ನು ಅರೆದು ಈ ಲೇಪನವನ್ನು ಸಿದ್ಧಪಡಿಸುತ್ತಾರೆ. ಈ ಮೂಲಿಕೆ ಸಿದ್ಧಪಡಿಸಲೇ ~ಸೋಲಿಗ ವೈದ್ಯರು~ ಇರುತ್ತಾರೆ ಎಂದು ಅವರು ಮಾಹಿತಿ ನೀಡಿದರು.

ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೆ ಬಿಳಿಗಿರಿರಂಗನಬೆಟ್ಟದ ಸೋಲಿಗರಲ್ಲಿ ತಲಾತಲಾಂತರದಿಂದಲೂ ಅವರದ್ದೇ ಆದ ಔಷಧ ಕ್ರಮ ಬಳಕೆಯಲ್ಲಿದ್ದು, ಇದಕ್ಕಾಗಿ ಆ ಸಮುದಾಯದಲ್ಲಿ ~ಸೋಲಿಗ ವೈದ್ಯರು~ ಇದ್ದಾರೆ.
 
ಸೋಲಿಗ ವೈದ್ಯರು ಹಲವು ಗಿಡ ಮೂಲಿಕೆಗಳನ್ನು ಬಳಸಿ ಪ್ರಾಸ್ಟೇಟ್, ಸ್ತನ ಕ್ಯಾನ್ಸರ್, ಚರ್ಮ ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳಿಗೆ ಮದ್ದು ನೀಡುತ್ತಾರೆ. ಆದರೆ ಅವರು ಮದ್ದಿನ ಬಳಕೆಯನ್ನು ಮಾತ್ರ ಯಾರಿಗೂ ಹೇಳದೇ ಗುಟ್ಟಾಗಿ ಇಡುವುದರಿಂದ ವೈಜ್ಞಾನಿಕ ಸಂಶೋಧನೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ.

ಈ ವಿದ್ಯಾರ್ಥಿಗಳಿಬ್ಬರ ಈ ವೈಜ್ಞಾನಿಕ ಸಂಶೋಧನೆಗೆ ಈಚೆಗೆ ಶಿವಮೊಗ್ಗದಲ್ಲಿ ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾ ಇಲಾಖೆ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸಂಶೋಧನಾ ವಿಚಾರ ಸಂಕಿರಣದಲ್ಲಿ ರಾಜ್ಯ ಮಟ್ಟದ ಮೊದಲ ಪ್ರಶಸ್ತಿಯೂ ದಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT