ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ಪತ್ತೆಗೆ `ಎಂಎಸ್' ಚಿಪ್

Last Updated 18 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕ್ಯಾನ್ಸರ್ ಮನು ಕುಲದ ಕಂಟಕ. ವೈದ್ಯಕೀಯ ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಇಂದಿಗೂ ಸವಾಲಾಗಿಯೇ ಇರುವ ಕಾಯಿಲೆ. ಎಷ್ಟೋ ಬಾರಿ ಇದರ ಪತ್ತೆ ಸಾಧ್ಯವಾಗದೇ ಅಂತಿಮ ಹಂತದಲ್ಲಿ ವೈದ್ಯರ ಬಳಿಗೆ ಬರುವ ಹೊತ್ತಿಗೆ ಆಯಸ್ಸು ಮುಗಿದಿರುತ್ತದೆ. ಈ ರೀತಿಯ ಭಯವೇ ರೋಗಿಯನ್ನು ಸಾವಿನತ್ತ ದೂಡುತ್ತದೆ. ಕ್ಯಾನ್ಸರ್, ದೇಹವನ್ನು ಎಷ್ಟು ಕಾಡಿಸುತ್ತದೋ ಅದರ ಭಯವೂ ಅದಕ್ಕಿಂತ ತುಸು ಹೆಚ್ಚಾಗಿಯೇ ಮನಸ್ಸನ್ನು ಕಾಡಿಸುತ್ತದೆ, ಸಾವಿನ ಮನೆಯ ಬಾಗಿಲು ಬಡಿಯುವಂತೆ ಮಾಡುತ್ತದೆ. ಈ ಭಯದ ನೆರಳಿನಲ್ಲಿ, ಕ್ಯಾನ್ಸರ್ ಇದ್ದರೂ ಚಿಕಿತ್ಸೆ ಪಡೆದು ಬಾಳುವ ಅನೇಕರ ಬಾಳಿನ ಬೆಳಕೂ ಕಾಣದಾಗುತ್ತದೆ.
ಕ್ಯಾನ್ಸರ್ ಪತ್ತೆಗೆ ಅನೇಕ ಮಾರ್ಗಗಳು ಇವೆಯಾದರೂ ಅವ್ಯಾವುವೂ ಅಷ್ಟೇನೂ ನಿಖರವಾಗಿಲ್ಲ. ಈ ನಿಟ್ಟಿನಲ್ಲಿ ನಿರಂತರ ಸುಧಾರಣೆ ಅತ್ಯಗತ್ಯ. ಇದಕ್ಕೆಂದೇ ಇದೀಗ ಅಮೆರಿಕ ಮೆಥೋಡಿಸ್ಟ್ ಆಸ್ಪತ್ರೆಯ ವೈದ್ಯ ವಿಜ್ಞಾನಿಗಳು ಹೊಸ ಉಪಕರಣವೊಂದನ್ನು ಕಂಡುಹಿಡಿದಿದ್ದಾರೆ.

ಖಇಏಐ ಎಂದು ಕರೆಯಲಾಗುವ ಈ ಉಪಕರಣ ಕ್ಯಾನ್ಸರ್ ಜೀವಾಣುಗಳನ್ನು ಅತ್ಯಂತ ಹೆಚ್ಚು ನಿಖರವಾಗಿ ಹಾಗೂ ವೇಗವಾಗಿ ಪತ್ತೆ ಮಾಡುತ್ತದೆ ಎಂದು ಇತ್ತೀಚೆಗೆ ಬಿಡುಗಡೆಗೊಂಡ ಅಮೆರಿಕದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪ್ರಕಟಣಾ ಪೂರ್ವ ಅಂತರ್ಜಾಲ ವರದಿ ತಿಳಿಸಿದೆ.ಜೀವಾಣುಗಳು ಈ ಉಪಕರಣದಲ್ಲಿ ಸಾಗುವಾಗ ಸಹಜ ಸೆಲ್(ಜೀವಕೋಶ)ಗಳು ತುಂಬಾ ಸುಲಭವಾಗಿ ಸಾಗುತ್ತವೆ. ಆದರೆ ಕ್ಯಾನ್ಸರ್‌ಕಾರಕ ಅಪಾಯಕಾರಿ ಸೆಲ್‌ಗಳು ಮಾತ್ರ ಈ ಉಪಕರಣದಲ್ಲಿ ಸಿಕ್ಕಿ ಬೀಳುತ್ತವೆ. ಇದರಿಂದ ದೇಹದಲ್ಲಿರುವ ಕ್ಯಾನ್ಸರ್‌ಕಾರಕ ಜೀವಕೋಶಗಳ ಪ್ರಮಾಣವನ್ನು ಅರಿಯಬಹುದು.

ಒಮ್ಮೆ ಕ್ಯಾನ್ಸರ್‌ಗೆ ತುತ್ತಾಗಿ ಚಿಕಿತ್ಸೆ ಪಡೆದ ನಂತರ ದೇಹದಲ್ಲಿ ಉಳಿದಿರುವ ಕ್ಯಾನ್ಸರ್ ರೋಗಾಣುಗಳ ವಿವರ ಹಾಗೂ ಅವುಗಳ ಪ್ರಮಾಣ ಈ ಉಪಕರಣದಿಂದ ತಕ್ಷಣವೇ ಗೊತ್ತಾಗುವುದರಿಂದ ವೈದ್ಯರು, ತಾವು ನೀಡುತ್ತಿರುವ ಚಿಕಿತ್ಸೆ ಎಷ್ಟರಮಟ್ಟಿಗೆ ಫಲಪ್ರದವಾಗಿದೆ ಎಂಬುದನ್ನು ತ್ವರಿತವಾಗಿ ಅರಿಯಬಹುದಾಗಿದೆ.ಈ ಸಾಧನದ ತಯಾರಿ ವೆಚ್ಚ ಕೇವಲ 10 ಡಾಲರ್(ಸುಮಾರು ರೂ. 550) ಎಂದು ವರದಿ ತಿಳಿಸಿದೆ. ಆದರೆ ಇದರ ಮಾರಾಟ ದರ ಮತ್ತು ಇದರ ಕಾರ್ಯನಿರ್ವಹಣಾ ವಿವರ ಇನ್ನಷ್ಟೇ ಪ್ರಕಟವಾಗ  ಬೇಕಿದೆ.

ಪೇಸ್‌ಮೇಕರ್‌ಗೆ ಬ್ಯಾಟರಿ ಬೇಕಿಲ್ಲ!
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರ ಹೃದಯ ಬಡಿತವನ್ನು ನಿಯಂತ್ರಣದಲ್ಲಿಟ್ಟು ಜೀವ ಕಾಪಾಡುವ ಅತ್ಯಾಧುನಿಕ ಸಾಧನವಾದ ಫೇಸ್‌ಮೇಕರ್ ಶಾಶ್ವತವಾಗಿ ದೇಹದೊಳಗೆ ಕಾರ್ಯನಿರ್ವಹಿಸುವಂತೆ ಮಾಡಬಲ್ಲಂತಹ ಉಪಕರಣವೊಂದು ತಯಾರಿಕಾ ಹಂತದಲ್ಲಿದೆ ಎಂದು ಇತ್ತೀಚೆಗೆ ನಡೆದ ಅಮೆರಿಕದ ಹೃದಯ ವಿಜ್ಞಾನ ಸಂಸ್ಥೆಯ `ಸಮ್ಮೇಳನ-2012'ರಲ್ಲಿ ಬಿಡುಗಡೆಯಾದ ವರದಿ ತಿಳಿಸಿದೆ.

ಸದ್ಯ ಹೃದಯದಲ್ಲಿ ಅಳವಡಿಸಲಾಗುವ ಪೇಸ್‌ಮೇಕರ್ ಎಂಬ ಸಾಧನ ಹೃದಯದ ಅಗತ್ಯಕ್ಕೆ ತಕ್ಕಂತೆ ಬಡಿತವನ್ನು ನಿಯಂತ್ರಣದಲ್ಲಿಡುತ್ತದೆ. ಇದು ಅತಿ ನಿಧಾನಗತಿ ಬಡಿತ ಇರುವವರಿಗೆ ಬಡಿತವನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚುವಂತೆ ಮಾಡುತ್ತದೆ. ಇನ್ನೊಂದೆಡೆ, ಶ್ರಮದಾಯಕ ಕೆಲಸ ಮಾಡಿದಾಗ ಆಗುವ ಹೆಚ್ಚುವ ಹೃದಯ ಬಡಿತವನ್ನು ನಿಯಂತ್ರಣಕ್ಕೂ ತರುತ್ತದೆ. ಹಾಗಾಗಿ ಇದೊಂದು ಜೀವರಕ್ಷಕ ಸಾಧನ ಎನಿಸಿಕೊಂಡಿದೆ.ಪೇಸ್‌ಮೇಕರ್‌ನಲ್ಲಿನ ಬ್ಯಾಟರಿ ಶರೀರದ ಅಗತ್ಯಕ್ಕೆ ತಕ್ಕಂತೆ ಕಡಿಮೆಯಾಗುತ್ತಾ ಹೋಗುತ್ತದೆ. ಮತ್ತೆ ಐದಾರು ವರ್ಷಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಬ್ಯಾಟರಿಯನ್ನು ಬದಲಿಸಬೇಕಾಗುತ್ತದೆ.

ಆದರೆ ಮಿಚಿಗನ್ ವಿಶ್ವವಿದ್ಯಾನಿಲಯದ ತಜ್ಞರು ಅಭಿವೃದ್ಧಿಪಡಿಸಿರುವ ಈ ಸಾಧನವನ್ನು ಪೇಸ್‌ಮೇಕರ್‌ಗೆ ಅಳವಡಿಸಿದರೆ ಅದು ಹೃದಯ ಬಡಿತದಿಂದ ಉಂಟಾಗುವ ಅದುರುವಿಕೆಯನ್ನೇ ಬಳಸಿಕೊಂಡು ವಿದ್ಯುತ್ ತಯಾರಿಸಿಕೊಳ್ಳುತ್ತದೆ. ಹೃದಯದ ಬಡಿತ ನಿಧಾನಗೊಂಡಾಗ ಅದನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಲು ಆ ವಿದ್ಯುತ್‌ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಹಾಗಾಗಿ ಇದಕ್ಕೆ ಬ್ಯಾಟರಿ ಅಗತ್ಯವೇ ಇಲ್ಲ. ಅಂದರೆ ಪೇಸ್‌ಮೇಕರ್ ತನಗೆ ಬೇಕಾದ ಇಂಧನವನ್ನು ಬ್ಯಾಟರಿಯ ಬದಲಿಗೆ ಎದೆ ಬಡಿತದಿಂದಲೇ ಭರ್ತಿ ಮಾಡಿಕೊಳ್ಳುತ್ತದೆ. ಅಗತ್ಯ ಇದ್ದಾಗ ಎದೆಬಡಿತವನ್ನು ನಿಯಂತ್ರಣಕ್ಕೂ ತರುತ್ತದೆ.

ಸಾಮಾನ್ಯವಾಗಿ ಚಿಕ್ಕ ವಯಸ್ಸಿನ್ಲ್ಲಲೇ ಪೇಸ್‌ಮೇಕರ್ ಉಪಕರಣವನ್ನು ಅಳವಡಿಸಿಕೊಂಡವರು ಬ್ಯಾಟರಿಯ ಬದಲಾವಣೆಗೆ ಸಾಕಷ್ಟು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ನೂತನವಾಗಿ ಆವಿಷ್ಕರಿಸಿರುವ ಈ ಸಾಧನ ತಪ್ಪಿಸಿ ಅನಗತ್ಯ ಖರ್ಚು ಹಾಗೂ ನೋವಿನಿಂದ ಪಾರು ಮಾಡುತ್ತದೆ.ಎಲ್ಲಕ್ಕಿಂತ ಮಿಗಿಲಾಗಿ ಎದೆಯಲ್ಲಿನ ಪೇಸ್‌ಮೇಕರ್ ಬ್ಯಾಟರಿ ಒಂದುವೇಳೆ ಖಾಲಿಯಾದರೆ? ಈ ಭಯದಿಂದ ಮುಕ್ತಿ ನೀಡಿ ವ್ಯಕ್ತಿ ನಿರಾಂತಕವಾಗಿ ಬದುಕಲು ಸಹಕರಿಸುತ್ತದೆ.ಸದ್ಯ ಹೃದಯ ಬಡಿತದ ಶಕ್ತಿ ಸಂಗ್ರಾಹಕ ಎಂದು ಹೆಸರಿಡಲಾಗಿರುವ ಈ ಉಪಕರಣದಲ್ಲಿ `ಲೈನರ್' ಹಾಗೂ `ನಾನ್ ಲೈನರ್' ಎಂಬ ಎರಡು ಬಗೆಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT