ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ರೋಗಿಗಳಿಗೆ ಯೋಗಚಿಕಿತ್ಸೆ

Last Updated 4 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಕ್ಯಾ ನ್ಸರ್ ರೋಗ ಪತ್ತೆ ಮತ್ತು ಚಿಕಿತ್ಸೆ ರೋಗಿಗಳಲ್ಲಿ ಅಪಾರವಾದ ಮಾನಸಿಕ ಸಂಕಟಕ್ಕೆ ಕಾರಣವಾಗುತ್ತದೆ; ರೋಗಿಗೆ ಆಘಾತ ಮತ್ತು ಅಪನಂಬಿಕೆಯನ್ನುಂಟು ಮಾಡುತ್ತದೆ. ಸಾವಿನ ಭಯ, ರೋಗದ ಮರುಕಳಿಕೆಯ ಭಯದಿಂದಾಗಿ ಆತಂಕ, ಅಸಹಾಯಕತೆ,  ನಿದ್ರಾಹೀನತೆ, ಆಹಾರ ರುಚಿಸದಿರುವಿಕೆ, ಸಿಡುಕು, ದುಃಖ, ಖಿನ್ನತೆ, ವ್ಯಥೆ ಮುಂತಾದ ಭಾವನೆಗಳಿಗೆ ಕಾರಣವಾಗುತ್ತದೆ. ಆದರೆ ಈ ರೀತಿಯ ಭರವಸೆ ಕಳೆದುಕೊಳ್ಳುವುದು ಮತ್ತು ಅಸಹಾಯಕತೆಯ ಭಾವವನ್ನು ಹೊರದೂಡಿದರೆ ಅವರಲ್ಲಿ ಹೋರಾಟದ ಸ್ಫೂರ್ತಿ ಹೆಚ್ಚಾಗುತ್ತದೆ. ಇದು ಒತ್ತಡ ಕಡಿಮೆ ಮಾಡುತ್ತದೆ ಎನ್ನುತ್ತವೆ ಸಂಶೋಧನೆಗಳು.

ಮಾನಸಿಕ ಮತ್ತು ಮನೋ ಶೈಕ್ಷಣಿಕ ಮಾರ್ಗದರ್ಶನ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನೆರವಾಗುತ್ತದೆ. ಈ ರೀತಿಯ ಮಾರ್ಗದರ್ಶನ ರೋಗದ ನಿಯಂತ್ರಣ ಹೆಚ್ಚಿಸಿ ಮಾನಸಿಕ ಸಮಸ್ಯೆಯಾಗಬಹುದಾದ ಕೊರಗನ್ನು ನಿವಾರಿಸುತ್ತದೆ ಮತ್ತು ರೋಗಿಗಳು ತಮ್ಮ ಆಲೋಚನೆಗಳು, ಭಯ, ಆತಂಕ ಇತ್ಯಾದಿ ಕುರಿತಂತೆ ಚರ್ಚಿಸುವ ವಾತಾವರಣ ನಿರ್ಮಿಸುತ್ತದೆ. ಮಾನಸಿಕ ಮಾರ್ಗದರ್ಶನ  ಅಥವಾ ಆಪ್ತಸಲಹೆಯು ಖಿನ್ನತೆ, ಆತಂಕ ಕಡಿಮೆ ಮಾಡುತ್ತದೆ ಮತ್ತು ಆತ್ಮಸ್ಥೆರ್ಯ ಹೆಚ್ಚಿಸಿ ರೋಗದೊಂದಿಗೆ ಹೊಂದಿಕೊಳ್ಳುವ ಗುಣ ಬೆಳೆಸುತ್ತದೆ. 

ಸಾಮಾನ್ಯವಾಗಿ ಯೋಗಾಭ್ಯಾಸದಿಂದ ಆಗುವ ಪ್ರಯೋಜನಗಳ ಕುರಿತು ಸಾಕಷ್ಟು ಬರಹಗಳು ಪ್ರಕಟವಾಗುತ್ತಿವೆ. ಭಾರತದಲ್ಲಿ ಶತಮಾನಗಳಿಂದ ಯೋಗದಿಂದ ರೋಗವನ್ನು ಗುಣಪಡಿಸಲಾಗುತ್ತಿತ್ತು. ಪಾಶ್ಚಿಮಾತ್ಯ ರಾಷ್ಟ್ರಗಳು ಇದರ ಸಾಧ್ಯತೆಗಳನ್ನು ಇತ್ತೀಚೆಗಷ್ಟೇ ಮನಗಾಣುತ್ತಿವೆ. ಹಲವಾರು ಸಾಂಪ್ರದಾಯಿಕ ಬರಹಗಳು ವಿವಿಧ ಬಗೆಯ ಸಂಧಿವಾತಗಳನ್ನು ಗುಣಪಡಿಸುವಲ್ಲಿ ಯೋಗದ ಬಳಕೆ ಕುರಿತು ವಿವರಿಸಿವೆ. ಯೋಗದಿಂದ ಅಪಸ್ಮಾರದ ಮರುಕಳಿಕೆ ಮತ್ತು ಅವಧಿ ಕಡಿಮೆಯಾಗಿರುವ ಉದಾಹರಣೆಗಳಿವೆ, ಅಲ್ಲದೆ ಅಸ್ತಮಾದ ತೀವ್ರತೆ ಮತ್ತು ಆಘಾತದ ತೀವ್ರತೆ ಕೂಡಾ ಕಡಿಮೆಯಾಗಿದೆ.  ಹೃದಯರೋಗಿಗಳಲ್ಲಿ ಲಿಪಿಡ್ ಪ್ರೊಫೈಲ್ ಸುಧಾರಿಸುತ್ತದೆ ಮತ್ತು ರಕ್ತದೊತ್ತಡ ನಿಯಂತ್ರಿಸುತ್ತದೆ. 

ಯೋಗ ಒಂದು ಪ್ರಾಚೀನ ಏಷ್ಯಾದ ವಿಜ್ಞಾನ ಮತ್ತು ಜೀವನಶೈಲಿಯಾಗಿದ್ದು ಅದರಲ್ಲಿ ನಿಯಂತ್ರಿತ ಉಸಿರಾಟ, ವಿವಿಧ ದೈಹಿಕ ಭಂಗಿಗಳು ಮತ್ತು ಧ್ಯಾನ ಒಳಗೊಂಡಿದೆ. ಯೋಗ ಎಂಬ ಪದ ಸಂಸ್ಕೃತ ಮೂಲವಾಗಿದ್ದು ‘ಒಂದಾಗು’ ಎಂಬ ಅರ್ಥ ನೀಡುತ್ತದೆ. ಇಲ್ಲಿ ಮನಸ್ಸು ಮತ್ತು ದೇಹ ಏಕೀಭವಿಸುತ್ತದೆ. ಇದರಲ್ಲಿ ದೇಹ, ಉಸಿರಾಟ ಮತ್ತು ಮನಸ್ಸು ಸೌಹಾರ್ದದಿಂದ ಒಗ್ಗೂಡುತ್ತವೆ. ಯೋಗ ಎಂದರೆ ಮನಸ್ಸಿನಲ್ಲಿರುವ ಎಲ್ಲ ಆಲೋಚನೆಗಳನ್ನೂ ದೂರ ತಳ್ಳುವ ಒಂದು ಪ್ರಕ್ರಿಯೆ ಮತ್ತು ಮೌನದಲ್ಲಿ ವಿಶ್ರಾಂತಿ ಪಡೆಯಲು ನೀಡುವ ಅವಕಾಶ ಎಂದು ಪತಂಜಲಿ ವ್ಯಾಖ್ಯಾನ ಮಾಡಿದ್ದಾನೆ. ಸಮತೋಲನ ಮನಸ್ಸು ದೇಹದ ಸಮತೋಲನಕ್ಕೆ ಕಾರಣವಾಗುತ್ತದೆ.  ಯೋಗ ತೀವ್ರವಾದ ಮಾನಸಿಕ ಬದಲಾವಣೆಗಳನ್ನು ತರುತ್ತದೆ ಎನ್ನುವುದಕ್ಕೆ ಹಲವಾರು ಅಧ್ಯಯನಗಳು ಪುಷ್ಟಿ ನೀಡಿವೆ.

ಯೋಗ ಸಾಧಕರು ಸ್ವಯಂ ನಿಯಂತ್ರಣ ಮತ್ತು ಬುದ್ಧಿಪೂರ್ವಕ ಅರಿವಿನೊಂದಿಗೆ ಸಕ್ರಿಯವಾಗಿರುತ್ತಾರೆ. ಅಂತಹ ಅರಿವು ಮತ್ತು ಮಾನಸಿಕ ಸಾಮರ್ಥ್ಯದಿಂದ ಬಾಹ್ಯ ಹಾಗೂ ಆಂತರಿಕ ಮಾನಸಿಕ ಪ್ರತಿಕ್ರಿಯೆಯನ್ನು ಕಡಿಮೆ ಮಾಡಿ ಪರಿಸ್ಥಿತಿಯ ಕುರಿತು ಹೆಚ್ಚಿನ ನಿಯಂತ್ರಣ ನೀಡುತ್ತದೆ. ಕ್ಯಾನ್ಸರ್ ರೋಗ ಒಂದು ಆತಂಕ ಎಂದು ಭಾವಿಸುವ ಕ್ಯಾನ್ಸರ್ ರೋಗಿಗಳಲ್ಲಿ ಇದು ಉಪಯುಕ್ತ. ಯೋಗದ ವಿವಿಧ ಅಂಶಗಳು ಅಂದರೆ ಧ್ಯಾನ, ಉಸಿರಾಟದ ವ್ಯಾಯಾಮಗಳು ಮತ್ತು ಆಸನಗಳು ಕ್ಯಾನ್ಸರ್ ರೋಗಿಗಳಲ್ಲಿ ಉಪಯುಕ್ತ ಫಲಿತಾಂಶಗಳನ್ನು ನೀಡಿವೆ.

ರಿಲ್ಯಾಕ್ಸೇಷನ್ ಟೆಕ್ನಿಕ್ಸ್: ಇದು ನರಮಂಡಲವನ್ನು ಶಾಂತವಾಗಿರಿಸುತ್ತದೆ. ಆತಂಕ ನಿವಾರಿಸುತ್ತದೆ.  ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಉಸಿರಾಟದ ವ್ಯಾಯಾಮಗಳು: ಶ್ವಾಸೋಚ್ಛಾಸ ಸುಧಾರಿಸುತ್ತದೆ, ಒತ್ತಡ ಕಡಿಮೆ ಮಾಡುತ್ತದೆ.

ಧ್ಯಾನ: ನಮ್ಮ ವಸ್ತುಸ್ಥಿತಿಯನ್ನು ಅರ್ಥೈಸಿಕೊಂಡು ಅದನ್ನು ಒಪ್ಪಿಕೊಳ್ಳುವ ಸ್ಪಷ್ಟತೆ ಮತ್ತು ನಿರ್ಲಿಪ್ತತೆ ಬೆಳೆಸಿಕೊಳ್ಳಲು ನೆರವಾಗುತ್ತದೆ. ಅಲ್ಲದೆ ಭಯ ನಿಯಂತ್ರಿಸಲೂ ನೆರವಾಗುತ್ತದೆ.

ದೈಹಿಕ ವ್ಯಾಯಾಮ ಅಥವಾ ಆಸನಗಳು: ದೇಹದ ಜಡತ್ವ ಓಡಿಸಿ ದೈಹಿಕ ಕಾರ್ಯ ನಿರ್ವಹಣೆ ಸುಧಾರಿಸಿ ಒತ್ತಡ ಕಡಿಮೆ ಮಾಡುತ್ತದೆ. ಯೋಗ ಮತ್ತು ಕ್ಯಾನ್ಸರ್ ಕುರಿತಾದ ಇತ್ತೀಚಿನ ಅಧ್ಯಯನಗಳು ಕಾಂಪ್ಲಿಮೆಂಟರಿ ಥೆರಪಿಯಿಂದ ರೋಗಿಗಳಿಗೆ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ತಂದುಕೊಟ್ಟಿರುವುದನ್ನು ದೃಢಪಡಿಸಿವೆ.
 
ಅದರ ಕೆಲವು ಪ್ರಯೋಜನಗಳಲ್ಲಿ ಆತಂಕ, ಖಿನ್ನತೆ ಕಡಿಮೆ ಮಾಡಿ ಆಂಟಿ ಟ್ಯೂಮರ್ ಇಮ್ಯುನಿಟಿ ಅಂದರೆ ನೈಸರ್ಗಿಕ ರೋಗನಿರೋಧಕ ಜೀವಕೋಶಗಳ ಹೆಚ್ಚಳ, ಶಸ್ತ್ರಚಿಕಿತ್ಸೆ, ರೇಡಿಯೋಥೆರಪಿ, ಕಿಮೋ ಥೆರಪಿಯ ನಂತರದ ಅಡ್ಡ ಪರಿಣಾಮಗಳ ಪ್ರಮಾಣ ಕಡಿಮೆ, ಕಿಮೋಥೆರಪಿಯ ಸಂದರ್ಭದಲ್ಲಿ ಸಂಕಟ ಹಾಗೂ ವಾಂತಿ ಕಡಿಮೆಯಾಗುವುದು, ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆವಾಸದಲ್ಲಿ ಕಡಿತ, ಶಸ್ತ್ರಚಿಕಿತ್ಸೆಯ ನಂತರ ಗಾಯ ಮಾಯುವಿಕೆ ಸುಧಾರಣೆ ಮತ್ತು ಒಟ್ಟಾರೆ ಜೀವನದ ಗುಣಮಟ್ಟ ಹೆಚ್ಚಳವಾಗುತ್ತದೆ.

ಆದರೆ ಕ್ಯಾನ್ಸರ್ ರೋಗಿಗಳು ಸಂಕೀರ್ಣವಾದ ಆಸನಗಳನ್ನು ಅಭ್ಯಾಸ ಮಾಡುವಾಗ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಸೂಕ್ತ ಮಾರ್ಗದರ್ಶನ ಪಡೆಯುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT