ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕ್ಯಾಮೆರಾ, ಕಂಪ್ಯೂಟರ್ ನೋಡಿ. ಎಲ್ಲವೂ ಇದೆ..'

ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಲ್ಲಿ ವಿವರ
Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಜನವಾಡ (ಬೀದರ್): `ಗುರುದೇವರ ಎದುರು, ನೀವು ದೇಹ ತ್ಯಜಿಸಿದ ಬಳಿಕ ನಾವೂ ದೇಹ ತ್ಯಜಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದೆವು. ಅದಕ್ಕಾಗಿ ಕಟ್ಟಿಗೆಯ ಪ್ರಬಂಧ ಮಾಡಿಸಿದ್ದರು. ನಮ್ಮ ಪ್ರತಿಜ್ಞೆ ಪೂರ್ಣ ಮಾಡಿದ್ದೇವೆ. ಸ್ವ ಇಚ್ಛೆಯಿಂದಲೇ ನಮ್ಮ ಸ್ವಧಾಮವಾದ ಕೈಲಾಸಕ್ಕೆ ಹೋಗುತ್ತಿದ್ದೇವೆ'.

-ತಾಲ್ಲೂಕಿನ ಗಣೇಶ್ವರ ಅವಧೂತರ ಮಠದಲ್ಲಿ ಮೂವರು ಸಾಧಕರು ಅಗ್ನಿಪ್ರವೇಶ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟಿದ್ದ ಪತ್ರದಲ್ಲಿ ಕಂಡುಬಂದ ಸಾಲುಗಳಿವು. ಎರಡು ಪತ್ರಗಳು ಸಿಕ್ಕಿದ್ದು, ಒಂದರಲ್ಲಿ ಅರ್ಧಭಾಗ ಡಿಟಿಪಿಯಲ್ಲಿ ಮುದ್ರಿಸಿದ್ದರೆ, ಉಳಿದಂತೆ ಹಸ್ತಾಕ್ಷರಗಳಿವೆ.

ಹಿರಿಯ ಸ್ವಾಮೀಜಿ ವಾಸವಿದ್ದ, ಅವರ ಶವ ಪತ್ತೆಯಾಗಿದ್ದ ಗರ್ಭಗುಡಿಯ ಬಾಗಿಲಿಗೆ ಈ ಪತ್ರಗಳನ್ನು ಸ್ಟಿಕರ್ ಮೂಲಕ ಅಂಟಿಸಲಾಗಿತ್ತು.

`ಮಠದ ಸೋನಿ ಕ್ಯಾಮೆರಾ, ಒಳಗೆ ತಟ್ಟೆಯ ಹಿಂದುಗಡೆ ಇದೆ. ಅದನ್ನು ಓಪನ್ ಮಾಡಿ ನೋಡಿರಿ. ಮಠದ ಎಲ್ಲಾ ಸಾಮಾನುಗಳು, ಕೀಲಿಗಳನ್ನು ಮಹಾದೇವನಿಗೆ ಒಪ್ಪಿಸಲಾಗಿದೆ. ಅದರ ವಿಡಿಯೊ ಅನ್ನು ಕ್ಯಾಮೆರಾದಲ್ಲಿ ನೋಡಿರಿ ಅಥವಾ ಮಠದ ಕಂಪ್ಯೂಟರ್‌ನಲ್ಲಿ ನೋಡಿರಿ' ಎಂದು ಬರೆಯಲಾಗಿದೆ.

ಈ ಪತ್ರಕ್ಕೆ ಈರರೆಡ್ಡಿ ಸ್ವಾಮಿ, ಶ್ರೀ ಜಗನ್ನಾಥ ಸ್ವಾಮೀಜಿ ಮತ್ತು ಪ್ರಣವ್ ಸ್ವಾಮೀಜಿ ಎಂದು ಸಹಿ ಹಾಕಿದ್ದಾರೆ.
`ಸರ್ವೆಜನಃ ಸುಖಿನೋ ಭವಃ..  ಓಂ ಭಗವತೇ..' ಎಂದು ಶುರುವಾಗುವ ಇನ್ನೊಂದು ಪತ್ರದಲ್ಲಿ, `ಪರಮ ಪೂಜ್ಯ ಗುರುಗಳೇ ನಮಗೆ ತಂದೆ, ತಾಯಿ, ಬಂಧು ಬಳಗ, ದೇವಾಧಿದೇವತೆಗಳೂ ಆಗಿದ್ದರು. ನಿಮ್ಮನ್ನು ಅಗಲಿ ನಾವು ಇರಲಾರೆವು ಎಂದಾಗ, `ಈ ಅಶಾಶ್ವತ ಜಗತ್ತಿನಲ್ಲಿ ಈ ಕಲಿಯ ಪ್ರಭಾವಿತ ಜನರಲ್ಲಿ ಇರುವುದಿಲ್ಲ ಎಂದರೆ, ನನ್ನ ಧಾಮಕ್ಕೆ ಬನ್ನಿರಿ' ಎಂದು ಹೇಳಿದರು. ಹೇಗೆ ಎಂದು ಕೇಳಿದಾಗ, `ಒಬ್ಬರಿಂದ ಕಟ್ಟಿಗೆ ತರಿಸಿ ಅಗ್ನಿದೇವನ ಮುಖಾಂತರ ಬನ್ನಿರಿ' ಎಂದು ಹೇಳಿದರು. ಗುರುದೇವರ ವಿರಹದ ಬಾಧೆ ತಾಳುತ್ತಾ, ಗುರುದೇವರನ್ನು ಕಳೆದುಕೊಂಡೆವಲ್ಲಾ ಎಂಬ ವಿರಹ ಸಹಿಸಲಸಾಧ್ಯವಾಗಿ ಈಗ ಅವರ ಪಾದದಲ್ಲಿ ಒಂದಾಗಿದ್ದೇವೆ' ಎಂದು ಬರೆಯಲಾಗಿದೆ.

`ಸ್ವಇಚ್ಛೆಯಿಂದಲೇ ನಮ್ಮ ಸ್ವಧಾಮವಾದ ಕೈಲಾಸಕ್ಕೆ ಹೋಗಿದ್ದೇವೆ. ನಮಗೆ ಯಾರೂ ಬಂಧು, ಬಳಗ ಇಲ್ಲ. ಆ ದೇವನೇ ನಮಗೆ ಎಲ್ಲವೂ. ಈ ವಿಷಯದಲ್ಲಿ ಯಾರಿಗೂ ತೊಂದರೆಗಳನ್ನು ಕೊಡಬೇಡಿ. ಇಂದು ಸಾವಿನ ಮೂಲಕ ಗುರುಗಳಿಗೆ ನೀಡಿದ ಪ್ರತಿಜ್ಞೆ ಪೂರ್ಣ ಮಾಡಿದ್ದೇವೆ. ಬದುಕಿದೊಡೆ ಭಗವಂತನ ನಿಜ ರೂಪವನ್ನೇ ಕಾಣುವೆ. ಇಲ್ಲವೇ ದೇಹವನ್ನು ಅಗ್ನಿಗೆ ಹಾಕಿ ಬೂದಿ ಮಾಡುವೆ..' ಎಂದು ಬರೆಯಲಾಗಿದೆ. ಈ ಪತ್ರಕ್ಕೆ ಜಗನ್ನಾಥ ಸ್ವಾಮೀಜಿ ಮತ್ತು ಪ್ರಣವ್ ಸ್ವಾಮೀಜಿ ಸಹಿ ಹಾಕಿದ್ದಾರೆ.
ಇದರಿಂದಾಗಿ ಈಗ ದುರಂತದ ನಂತರ ಎಲ್ಲರ ದೃಷ್ಟಿ ಉಲ್ಲೇಖಿತ ಕ್ಯಾಮೆರಾ, ಕಂಪ್ಯೂಟರ್‌ನತ್ತ ಹೊರಳಿದೆ.

ಮಠದ ಅಂಗಳದಲ್ಲಿ ಕೇಳಿದ್ದು...
ಯುಗಾದಿ ಬಳಿಕ ಮಠ ಬಿಟ್ಟುಹೋಗುತ್ತೇವೆ ಎಂದಿದ್ದರು
ಆತ್ಮಾಹುತಿಯ ಯಾವುದೇ ಸೂಚನೆ ಸಿಕ್ಕಿರಲಿಲ್ಲ. ಎರಡು ದಿನ ಸಾಮಾನ್ಯವಾಗಿಯೇ ಇದ್ದರು. ಯುಗಾದಿ ದಿನ ನಡೆಯುವ ಜಾತ್ರೆಯ ಬಳಿಕ ಮಠವನ್ನು ಬಿಟ್ಟು ಹೋಗಲು ಈ ಮೂವರು ನಿರ್ಧರಿಸಿದ್ದರು. ಇದನ್ನು ನನಗೆ ಹೇಳಿದ್ದರು. ಆದರೆ, ಹೀಗೆ ಮಾಡಿಕೊಳ್ಳುತ್ತಾರೆ ಎಂದು ಅನಿಸಿರಲಿಲ್ಲ.
-ಮಹಾದೇವ ಸ್ವಾಮೀಜಿ, ಚೌಳಿ ಮಠದ ಸಾಧಕ.

ಪ್ರಕರಣ ದಾಖಲಾಗಿದೆ, ತನಿಖೆ ಆಗುತ್ತದೆ
ಮಠದ ಸಾಧಕರಾದ ಸುಭಾಷ್ ಸ್ವಾಮೀಜಿ ಅವರು ನೀಡಿರುವ ದೂರಿನ ಮೇರೆಗೆ ಯುಡಿಆರ್ (ಅಸಹಜ ಸಾವು) ಪ್ರಕರಣವನ್ನು ಜನವಾಡ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ತನಿಖೆ ನಡೆಯಲಿದೆ.
-ಆನಂದ ಕಬ್ಬೂರು, ಸರ್ಕಲ್ ಇನ್‌ಸ್ಪೆಕ್ಟರ್, ಬೀದರ್ ಗ್ರಾಮೀಣ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT