ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಕಪ್ಪು ಚಿರತೆ ಸೆರೆ

Last Updated 10 ಜುಲೈ 2012, 19:30 IST
ಅಕ್ಷರ ಗಾತ್ರ

ಧಾರವಾಡ: `ವೈಲ್ಡ್ ಲೈಫ್ ಕನ್ಸರ್ವೇಷನ್ ಸೊಸೈಟಿ~ಯು (ಡಬ್ಲುಸಿಎಸ್) ರಾಜ್ಯ ಅರಣ್ಯ ಇಲಾಖೆ ಹಾಗೂ `ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ~ದ ಸಹಯೋಗದಲ್ಲಿ ಹುಲಿಗಳ ಅಧ್ಯಯನಕ್ಕಾಗಿ ಅಣಸಿ-ದಾಂಡೇಲಿ ರಾಷ್ಟ್ರೀಯ ಅಭಯಾರಣ್ಯದಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಕಪ್ಪು ಚಿರತೆ ಸೆರೆಯಾಗಿದೆ.

ದಟ್ಟ ಅರಣ್ಯದಲ್ಲಿ ಕಂಡು ಬರುವ  ಕಪ್ಪು ಚಿರತೆಗಳು ದಾಂಡೇಲಿಯ ಒಟ್ಟು ಚಿರತೆಗಳಲ್ಲಿ ಶೇ 40ರಷ್ಟು ಇರಬಹುದು ಎಂದು ವನ್ಯಜೀವಿ ತಜ್ಞರು ಅಂದಾಜು ಮಾಡಿದ್ದಾರೆ. ನಿತ್ಯ ಹರಿದ್ವರ್ಣ ಕಾಡುಗಳು ಇರುವಲ್ಲಿ ಇಂಥ ಚಿರತೆಗಳು ಹೆಚ್ಚಿರುತ್ತವೆ. ಚರ್ಮದಲ್ಲಿ `ಮೆಲನಿನ್~ ವರ್ಣ ಸಂಕರದಿಂದಾಗಿ ಚಿರತೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಹುಲಿಗಳಲ್ಲಿ ಮೆಲನಿನ್ ವರ್ಣ ಸಂಕರವಾದರೆ ಅದು ಬಿಳಿ ಬಣ್ಣಕ್ಕೆ ತಿರುಗುತ್ತದೆ.

`ಎರಡು ದಶಕಗಳಿಂದ ಮಲೆನಾಡು, ಮೈಸೂರು ಭಾಗದಲ್ಲಿ ಕ್ಯಾಮೆರಾ ಟ್ರ್ಯಾಪ್ ಪ್ರಕ್ರಿಯೆ ನಡೆದಿದ್ದು, ಬಂಡೀಪುರ, ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಿಗಿಂತ ದಾಂಡೇಲಿ ರಾಷ್ಟ್ರೀಯ ಉದ್ಯಾನ ಹೆಚ್ಚು ದಟ್ಟ ಅರಣ್ಯ ಪ್ರದೇಶ ಹೊಂದಿದೆ. ಮಲೇಷ್ಯಾದಲ್ಲಿಯೂ `ಡಬ್ಲುಸಿಎಸ್~ ನಡೆಸಿದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸಿಕ್ಕ ಎಲ್ಲವೂ ಕಪ್ಪು ಚಿರತೆಗಳಾಗಿದ್ದವು. ಅಲ್ಲಿಯೂ ದಟ್ಟ ಅರಣ್ಯ ಇರುವುದೇ ಇದಕ್ಕೆ ಕಾರಣ` ಎಂದು ಸಂಸ್ಥೆಯ ನಿರ್ದೇಶಕ ಡಾ.ಉಲ್ಲಾಸ ಕಾರಂತ ಸ್ಮರಿಸುತ್ತಾರೆ.

2008ರ ಏ. 24ರಂದು ಬಂಡೀಪುರ ಬಳಿಯ ಚಿಪ್ಪನಹಳ್ಳಿ ರಸ್ತೆಗೆ ತಾಗಿಕೊಂಡಿರುವ ಅರಣ್ಯದಲ್ಲಿ ಕಪ್ಪು ಚಿರತೆ ಕ್ಯಾಮೆರಾಗೆ ಸೆರೆ ಸಿಕ್ಕಿತ್ತು. 2010ರ  ಫೆ. 7 ರಂದು ಶಿವಮೊಗ್ಗ ಜಿಲ್ಲೆಯ ಭದ್ರಾ ಅಭಯಾರಣ್ಯ, 2009ರ ಫೆಬ್ರುವರಿಯಲ್ಲಿ ಕಾವಲಪುರ ರಸ್ತೆಯಲ್ಲಿಯೂ ಕಪ್ಪು ಚಿರತೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

`ದಾಂಡೇಲಿ ಅಭಯಾರಣ್ಯದಲ್ಲಿ ಕ್ಯಾಮೆರಾ ಟ್ರ್ಯಾಪ್ ಆರಂಭಿಸಿದ 3 ವರ್ಷಗಳಲ್ಲೇ ಸುಮಾರು 100ರಷ್ಟು ಕಪ್ಪು ಚಿರತೆಗಳು ಸೆರೆಯಾಗುವ ಮೂಲಕ ಅತ್ಯಧಿಕ ಚಿರತೆಗಳು ಇರುವ ಬಗ್ಗೆ ದಾಖಲೆ ಸಿಕ್ಕಂತಾಗಿದೆ. ಇವುಗಳ ಜೀವನದ ಬಗೆಗಿನ ಅಧ್ಯಯನ ನಡೆಯುತ್ತಿದ್ದು, ಈ ಚಿರತೆಗಳು `ಪ್ಯಾಂಥೆರಾ ಪಾರ್ಡಸ್~ ಕುಟುಂಬಕ್ಕೆ ಸೇರಿವೆ. ಮೇ 22ರಂದು ಮತ್ತೊಂದು ಕಪ್ಪು ಚಿರತೆ ಸೆರೆಯಾಗಿದೆ` ಎಂದು ಡಬ್ಲುಸಿಎಸ್‌ನ ಸಂರಕ್ಷಣಾ ವಿಜ್ಞಾನ ವಿಭಾಗದ ಜಂಟಿ ನಿರ್ದೇಶಕ ಡಾ.ಸಾಂಬಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

ಕಪ್ಪು ಚಿರತೆಗಳ ಹೆಚ್ಚುವಿಕೆಗೆ ಕಾರಣವನ್ನು ಹಂಚಿಕೊಂಡ ಧಾರವಾಡದ ಅರಣ್ಯ ಸಂಶೋಧನಾ ಸಂಸ್ಥೆಯ ನಿರ್ದೇಶಕ ಮನೋಜ್‌ಕುಮಾರ್, `ಬ್ರಿಟಿಷರ ಕಾಲದಲ್ಲಿ ಬೇಟೆಗಾರರಿಗೆ ಒಂದು ಚಿರತೆಯನ್ನು ಬೇಟೆಯಾಡಿದರೆ ರೂ 12, ಹುಲಿ ಬೇಟೆಯಾಡಿದರೆ ರೂ 24 ಬಕ್ಷೀಸು ನೀಡಲಾಗುತ್ತಿತ್ತು. ಸ್ವಾತಂತ್ರ್ಯಾನಂತರ ವನ್ಯಜೀವಿ ಸಂರಕ್ಷಣಾ ಕಾನೂನುಗಳು ಬಲವಾದುದರಿಂದ ಇವುಗಳ ಬೇಟೆ ನಿಂತು ಹೋಯಿತು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT