ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಮೇನಹಳ್ಳಿ ಜಾನುವಾರು ಜಾತ್ರೆ ಆರಂಭ

Last Updated 20 ಜನವರಿ 2011, 9:40 IST
ಅಕ್ಷರ ಗಾತ್ರ

ಕೊರಟಗೆರೆ: ತಾಲ್ಲೂಕಿನ ಇತಿಹಾಸ ಪ್ರಸಿದ್ದ ಕ್ಯಾಮೇನಹಳ್ಳಿಯ ಆಂಜನೇಯ ಸ್ವಾಮಿ ಜಾನುವಾರಗಳ ಜಾತ್ರೆ ರಥೋತ್ಸವಕ್ಕೆ ಇನ್ನೂ 20 ದಿನ ಇರುವಾಗಲೇ ಪ್ರಾರಂಭಗೊಂಡಿದ್ದು, ಜಿಲ್ಲೆ ಸೇರಿದಂತೆ ವಿವಿಧೆಡೆಗಳಿಂದ ಜಾನುವಾರುಗಳು ಜಾತ್ರೆಗೆ ಬಂದು ಸೇರಿವೆ.ತಾಲ್ಲೂಕಿನ ಹಾಗೂ ಜಿಲ್ಲೆಯಲ್ಲಿಯೇ ವಿಶೇಷ ಎನಿಸಿರುವ ಎದುರು ಮುಖದ ಆಂಜನೇಯ ಸ್ವಾಮಿ ಇಲ್ಲಿನ ಆಕರ್ಷಣೆ. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿಯಲ್ಲಿ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಜಾನುವಾರುಗಳ ಜಾತ್ರೆ ನಡೆಯುತ್ತದೆ.

ಪುರಾತನ ದೇವಾಲಯ ಆಂಜನೇಯಸ್ವಾಮಿ ರಥೋತ್ಸವ ಫೆ. 10ರಂದು ನಡೆಯಲಿದ್ದು, ರಥೋತ್ಸವಕ್ಕೆ 20 ದಿನಗಳ ಮುಂಚಿತವಾಗಿಯೇ ಈ ಬಾರಿ ಜಾನುವಾರುಗಳ ಜಾತ್ರೆ ಸೇರಿಕೊಂಡಿದೆ. ಜಾತ್ರೆಯಲ್ಲಿ ದೇಶಿ ತಳಿ ಸೇರಿದಂತೆ ವಿವಿಧ ತಳಿಯ ಜಾನುವಾರು ಪ್ರತಿ ವರ್ಷ ಮಾರಾಟವಾಗುತ್ತವೆ. ಈ ಜಾನುವಾರು ಜಾತ್ರೆ ಜಿಲ್ಲೆಯಲ್ಲಿಯೇ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದು, ಇಲ್ಲಿ ಮಾರಾಟವಾಗುವ ದನಗಳಿಗೆ ಉತ್ತರ ಕರ್ನಾಟಕದಲ್ಲಿ ಬೇಡಿಕೆ ಇದೆ.

ಬಳ್ಳಾರಿ, ದಾವಣಗೆರೆ, ದಾರವಾಡ, ಶಿವಮೊಗ್ಗ, ಬಿಜಾಪುರ, ಗುಲ್ಬರ್ಗಾ ಜಿಲ್ಲೆಗಳಿಂದ ವ್ಯಾಪರಸ್ಥರು ದನಗಳನ್ನು ಕೊಂಡುಕೊಳ್ಳಲು ಜಾತ್ರೆಗೆ ಬರುತ್ತಾರೆ. ಈ ಬಾರಿ ಜೋಡಿ ಎತ್ತಿನ ಬೆಲೆ ಕನಿಷ್ಠ ರೂ. 25 ಸಾವಿರದಿಂದ ಪ್ರಾರಂಭಗೊಂಡು ರೂ. 2.5 ಲಕ್ಷ ಹಾಗೂ ರೂ 3 ಲಕ್ಷವರೆಗೆ ಜಾತ್ರೆಯಲ್ಲಿ ಮಾರಡಲ್ಪಡುತ್ತಿವೆ.

ನೀರಿಗೆ ಹಾಹಾಕಾರ: ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಯಲ್ಲಿ ಸಾವಿರಾರು ದನಗಳು ಹಾಗೂ ಜನ ಸೇರಿದ್ದು, ಕುಡಿಯುವ ನೀರಿಗೆ ಆಹಾಕಾರ ಉಂಟಾಗಿದೆ. ತಾಲ್ಲೂಕು ಆಡಳಿತ ಜಾತ್ರೆಗೆ ಬರುವವರಿಗೆ ನೀರಿನ ವ್ಯವಸ್ಥೆಯನ್ನು ಸೂಕ್ತ ಪ್ರಮಾಣದಲ್ಲಿ ಮಾಡಿಲ್ಲ ಎನ್ನುವುದು ನಾಗರಿಕರ ದೂರಾಗಿದೆ. ಜಾತ್ರೆ ಪ್ರಾರಮಭವಾಗಿ 3-4 ದಿನ ಕಳೆದ ನಂತರ ಈಗ ನೀರು ಹಾಗೂ ಬೀದಿ ದೀಪಗಳ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಜಾತ್ರೆಯಲ್ಲಿ ನೀರಿಗಾಗಿ ವ್ಯವಸ್ಥೆ ಕೈಗೊಂಡಿದ್ದರೂ ವಿದ್ಯುತ್ ಅಭಾವದಿಂದ ದನಕರುಗಳು ಸೇರಿದಂತೆ ನಾಗರಿಕರಿಗೆ ನೀರಿನ ಹಾಹಾಕಾರ ಉಂಟಾಗಿದೆ.

ಶಿಥಿಲಾವಸ್ಥೆಯಲ್ಲಿರುವ ರಥ: ಕ್ಯಾಮೇನಹಳ್ಳಿ ಜಾತ್ರೆಯ ರಥೋತ್ಸವಕ್ಕೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಕಿಕ್ಕಿರಿದು ಬರುತ್ತಾರೆ. ಅದರಲ್ಲಿಯೂ ಈ ಭಾಗದಲ್ಲಿ ಈ ಜಾತ್ರೆ ಅತಿ ಹೆಚ್ಚು ಜನಪ್ರಸಿದ್ದತೆಯನ್ನು ಹೊಂದಿ ಬೆಂಗಳೂರು ಹಾಗೂ ತುಮಕೂರು ಜಿಲ್ಲೆಗಳಿಂದ ಅತಿ ಹೆಚ್ಚು ಜನ ಈ ರಥೋತ್ಸವಕ್ಕೆ ಪ್ರತಿ ವರ್ಷ ಬರುವುದು ವಾಡಿಕೆ. 

  ಈ ದೇವಾಲಯ ಪುರಾತನವಾದುದಾಗಿದ್ದು, ಮುಜುರಾಯಿ ಇಲಾಖೆಗೆ ಸೇರಲ್ಪಟ್ಟಿದೆ. ರತೋತೋತ್ಸವಕ್ಕೆ ಬಳಸಲಾಗುವ ತೇರು (ರಥ) ಸಂಪುರ್ಣ ಶಿಥಿಲಗೊಂಡಿದ್ದು, ರಥೋತ್ಸವಕ್ಕೆ ಇನ್ನೇನು ಕೆಲವೆ ದಿನಗಳು ಬಾಕಿ ಇದ್ದರೂ ಸಹ ಶಿಥಿಲ ಗೊಂಡಿರುವ ರಥವನ್ನು ಮುಜುರಾಯಿ ಇಲಾಖೆ ಹಾಗು ದೇವಸ್ಥಾನ ಆಡಳಿತ ಮಂಡಳಿ ದುರಸ್ತಿ ಮಾಡಿಸಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ರಥ ಎಷ್ಟರ ಮಟ್ಟಿಗೆ ಹಾಳಾಗಿದೆ ಎಂದರೆ ರಥಕ್ಕೆ ಬಳಸಲಾಗಿರುವ ಕಡ್ಡಿಗಳು ಸಂಪೂರ್ಣ ಹಾಳಾಗಿ ಕೆಲವು ಕಡೆಗಳಲ್ಲಿ ಹಾಳಾಗಿರುವ ಕಟ್ಟಿಗೆಗೆ ಮತ್ತೊಂದು ಕಟ್ಟಿಗೆಯನ್ನು ಮಳೆ ಹೊಡೆಯುವ ಮೂಲಕ ತೇಪೆ ಹಾಕಲಾಗಿದೆ. ಕೆಲವೆಡೆ ರಥಕ್ಕೆ ಬಳಸಲಾಗಿರುವ ಕಡ್ಡಿ ಮುರಿದು ಕೋತು ಬಿದ್ದಿವೆ. ಇಂತಹ ದುಸ್ಥಿತಿಯಲ್ಲಿರು ರಥವನ್ನೇ ಫೆ. 10ರಂದು ನಡೆಯಲಿರುವ ರಥೋತ್ಸವಕ್ಕೆ ಬಳಸಲಾಗುತ್ತಿದ್ದು, ರಥ ಚಲಿಸುವಾಗ ಯಾವಾಗ ಬೇಕಾದರೂ ಮುರಿದು ಬೀಳುವ ಸಾಧ್ಯತೆಗಳು ಹೆಚ್ಚಾಗಿದ್ದು, ಅಪಾಯವಾಗುವ ಮುನ್ನ ಎಚ್ಚರ ಒಳಿತು. ಆದರೂ ಸಂಬಂಧಿಸಿದ ಮುಜುರಾಯಿ ಇಲಾಖೆ ಈ ಬಗ್ಗೆ ಗಮನ ಹರಿಸಿಲ್ಲ ಎನ್ನುವುದು ಸ್ಥಳೀಯ ಭಕ್ತಾದಿಗಳ ದೂರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT