ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಲಿಗ್ರಫಿ ಅಕ್ಷರ ವಿನ್ಯಾಸ ಕಲೆ

ಕೈಬರಹ - ಕೈಪಿಡಿ ಭಾಗ 19
Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನೀವು ಡಾರ್ವಿನ್‌ನ ವಿಕಾಸವಾದವನ್ನು ಒಪ್ಪಿ ಅಥವಾ ಬಿಡಿ. ಆದರೆ ಮನುಷ್ಯ ತನ್ನ ಬುದ್ಧಿಮತ್ತೆಯಲ್ಲಿ, ಕಾರ್ಯಕ್ಷಮತೆಯಲ್ಲಿ ಮತ್ತು ಹೊಸತನ್ನು ಕಂಡುಹಿಡಿಯುವ ವಿಷಯದಲ್ಲಿ ವಿಕಾಸ ಹೊಂದುತ್ತಿರುವುದನ್ನು ನೀವು ನಿರಾಕರಿಸಲಾರಿರಿ.

ಈ ವಿಕಾಸವು ಕೈಬರಹದ ವಿಷಯದಲ್ಲೂ ಅನ್ವಯಿಸುತ್ತದೆ. ಮಾನವನು ಮೊದಲು ಇತರ ಪ್ರಾಣಿಗಳಂತೆ ಕೇವಲ ಶಬ್ದವನ್ನಷ್ಟೇ ಹೊರಡಿಸುತ್ತಿದ್ದ. ಕ್ರಮೇಣ ಪದಗಳು ಮತ್ತು ಭಾಷೆಗಳು ರೂಪುಗೊಂಡವು. ಈ ಹಂತದಲ್ಲಿ ಅವನಿಗೆ ಬರೆಯುವುದು ತಿಳಿದೇ ಇರಲಿಲ್ಲ. ಆದ್ದರಿಂದಲೇ ಪ್ರಾಚೀನ ವೇದಗಳನ್ನು ಒಬ್ಬರಿಂದ ಒಬ್ಬರು ಕೇಳಿ ಪಠಣ ಮಾಡುತ್ತಿದ್ದರು ಎಂದು ನೀವು ಕೇಳಿಲ್ಲವೇ? ನಂತರ ಯಾವುದೋ ಹಂತದಲ್ಲಿ ವೇದಗಳನ್ನು ಲಿಪಿಬದ್ಧಗೊಳಿಸಲಾಯಿತು.

ಬರಬರುತ್ತಾ ಜಗತ್ತಿನ ಬೇರೆ ಬೇರೆ ಭಾಷೆಗಳಿಗೆ ಪ್ರತ್ಯೇಕವಾದ ಲಿಪಿಗಳು ರೂಪುಗೊಂಡವು. ಬರವಣಿಗೆ ರೂಢಿಗೆ ಬಂತು. ಲಿಪಿಗಳು ಸಿದ್ಧವಾದ ಮೇಲೆ ಅವುಗಳ ಸುಧಾರಣೆ ಬಗ್ಗೆಯೂ ಆಲೋಚನೆ ನಡೆಯಿತು. ಬರೆಯುವ ಅಕ್ಷರಗಳನ್ನು ಇನ್ನೂ ಸುಂದರವಾಗಿ ಮತ್ತು ಆಲಂಕಾರಿಕವಾಗಿ ಹೇಗೆ ಬರೆಯಬಹುದೆಂದು ಕಲಾತ್ಮಕ ಮನಸ್ಸಿನ ಕೆಲವರು ಯೋಚಿಸಿದರು. ಆಗ `ಕ್ಯಾಲಿಗ್ರಫಿ' ಅಥವಾ `ಅಕ್ಷರ ವಿನ್ಯಾಸ ಕಲೆ' ಅಸ್ತಿತ್ವಕ್ಕೆ ಬಂತು. ಕ್ಯಾಲಿಗ್ರಫಿ  ಎಂಬ ಪದವು ಯೂರೋಪಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಗ್ರೀಕ್ ಭಾಷೆಯದು. ಇದರ ಅರ್ಥವೇ `ಸುಂದರ ಕೈಬರಹ' ಎಂದು.

ಜಗತ್ತಿನ ಎಲ್ಲ ಭಾಷೆಗಳಲ್ಲೂ ಕೈಬರಹವನ್ನು ಇನ್ನಷ್ಟು ಅಲಂಕರಿಸುವ ಪ್ರಯತ್ನ ನಡೆಯಿತು. ಈ ವಿಷಯದಲ್ಲಿ ಕನ್ನಡವೂ ಹಿಂದೆ ಬೀಳಲಿಲ್ಲ. ಕನ್ನಡ ಲಿಪಿಗಂತೂ ಒಂದು ವಿಶೇಷವೇ ಇದೆ. ಕನ್ನಡದ ಅಕ್ಷರಗಳು ವೃತ್ತಗಳು ಹಾಗೂ ಅರ್ಧ ವೃತ್ತಗಳಿಂದ ಕೂಡಿ ಒಂದು ಬಳ್ಳಿಯಂತೆ ಸುತ್ತಿಕೊಂಡಿರುವುದರಿಂದ ಅವನ್ನು ಅತ್ಯಂತ ಆಲಂಕಾರಿಕವಾಗಿ ಬರೆಯಬಹುದು. ಕನ್ನಡ ಅಕ್ಷರಗಳು ಮುದ್ದಾಗಿ ಮುತ್ತು ಪೋಣಿಸಿದಂತೆ ಇರುತ್ತವೆ. ಅವುಗಳ ವಿನ್ಯಾಸವನ್ನೂ ಬಗೆಬಗೆಯಾಗಿ ಮಾಡಬಹುದು. ಮೇಲಿನ ಚಿತ್ರದಲ್ಲಿ ಕನ್ನಡ ಕ್ಯಾಲಿಗ್ರಫಿಯ ಕೆಲವು ಮಾದರಿಗಳನ್ನು  ನೀವು ನೋಡಬಹುದು. ಕನ್ನಡ ಅಕ್ಷರಗಳು ಪರಭಾಷೆಯ ಹಾಗೂ ವಿದೇಶದ ಹೆಸರಾಂತ ವ್ಯಕ್ತಿಗಳನ್ನೂ ಮೋಹ ಪರವಶರನ್ನಾಗಿ ಮಾಡಿವೆ.

ಈಗಂತೂ ಕನ್ನಡ ಅಕ್ಷರಗಳ ಹಲವು ಬಗೆಯ ಸುಂದರ ವಿನ್ಯಾಸಗಳನ್ನು ಕನ್ನಡ ಸಾಫ್ಟ್‌ವೇರ್ ತಜ್ಞರು `ನುಡಿ' ಮತ್ತು `ಬರಹ' ತಂತ್ರಾಂಶಗಳಲ್ಲಿ ಅಳವಡಿಸಿದ್ದಾರೆ. ಪತ್ರಿಕೆಗಳ ಪುರವಣಿಗಳಲ್ಲಿ, `ಸುಧಾ', `ತರಂಗ' ಮುಂತಾದ ವಾರಪತ್ರಿಕೆಗಳ ಶೀರ್ಷಿಕೆಗಳಲ್ಲಿ, ಲೇಖನಗಳ ತಲೆಬರಹಗಳಲ್ಲಿ ಇಂತಹ ವಿವಿಧ ವಿನ್ಯಾಸದ ಅಕ್ಷರಗಳನ್ನು ನೀವು ನೋಡಿರಬಹುದು. ಅದೇ ರೀತಿ ಮದುವೆಯ ಕರೆಯೋಲೆಗಳಲ್ಲಿ, ಗ್ರೀಟಿಂಗ್ಸ್ ಕಾರ್ಡ್‌ಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯ ಈ ರೀತಿಯ ವಿನ್ಯಾಸದ ಅಕ್ಷರಗಳನ್ನು ನೀವು ಗಮನಿಸಿರಬಹುದು. ಸಿನಿಮಾ ಪೋಸ್ಟರ್‌ಗಳಲ್ಲೂ ಇಂತಹ ಆಲಂಕಾರಿಕ ಅಕ್ಷರಗಳು ನಿಮ್ಮ ಮನಸೂರೆಗೊಂಡಿರಬಹುದು. ಸಭೆ, ಸಮಾರಂಭಗಳಲ್ಲಿ ಬ್ಯಾನರ್ ಬರೆಯುವಾಗ, ಅಂಗಡಿ, ಹೋಟೆಲ್ ಮುಂತಾದ ಸಂಸ್ಥೆಗಳ ಬೋರ್ಡ್ ಸಿದ್ಧಪಡಿಸಲು ಆಲಂಕಾರಿಕ ಅಕ್ಷರಗಳು ಮನಸೆಳೆಯುವಂತೆ ಇರಬೇಕಾದುದು ಅವಶ್ಯಕ.

ದೊಡ್ಡ ದೊಡ್ಡ ನಗರಗಳಲ್ಲಿರುವ ಜಾಹೀರಾತು ಸಂಸ್ಥೆಗಳಲ್ಲಿ ಮತ್ತು ಕೆಲವು ಪತ್ರಿಕೆಗಳಲ್ಲಿ ಅಕ್ಷರಗಳ ವಿನ್ಯಾಸಕ್ಕಾಗಿ ವೃತ್ತಿಪರ ಕ್ಯಾಲಿಗ್ರಾಫರ್‌ಗಳೇ ಇರುತ್ತಾರೆ. ನೆನಪಿರಲಿ, ಅಕ್ಷರ ವಿನ್ಯಾಸ ಕಲೆಯೇ ಬೇರೆ ಚಿತ್ರಕಲೆಯೇ ಬೇರೆ. ಚಿತ್ರಕಾರರೆಲ್ಲರೂ ಅಕ್ಷರ ವಿನ್ಯಾಸಕರೂ ಆಗಿರಲು ಸಾಧ್ಯವಿಲ್ಲ. ರಂಗೋಲಿ ಕಲೆಯು ಚಿತ್ರಕಲೆಗಿಂತ ಭಿನ್ನವಲ್ಲವೇ? ಅದೇ ರೀತಿ ಕ್ಯಾಲಿಗ್ರಫಿ.

ನಿಮಗೆ ಈ ಕ್ಷೇತ್ರದಲ್ಲಿ ಆಸಕ್ತಿ ಅಥವಾ ಪ್ರತಿಭೆ ಇದ್ದರೆ ನೀವೂ ಒಂದು ಕೈ ಪ್ರಯತ್ನಿಸಿ ನೋಡಬಹುದು. ನೀವೂ ಕ್ಯಾಲಿಗ್ರಾಫರ್ (ಅಕ್ಷರ ಬ್ರಹ್ಮ) ಆಗಬಹುದು. ನಿಮಗೆ ಗೊತ್ತೇ? ವಿಶ್ವವಿಖ್ಯಾತ `ಆ್ಯಪಲ್' ಜನಕ ಸ್ಟೀವ್ ಜಾಬ್ಸ್ ಕ್ಯಾಲಿಗ್ರಫಿ ತರಗತಿಗಳಿಗೆ ಹೋಗುತ್ತಿದ್ದ. ಕಾಲೇಜಿನಿಂದ ಡ್ರಾಪ್‌ಔಟ್ ಆದರೂ ಈ ತರಗತಿಗಳಿಗೆ ಹೋಗುತ್ತಿದ್ದರಿಂದ ಹೊಸ ಹೊಸ ಸಾಧ್ಯತೆಗಳ ಬಗ್ಗೆ ತನ್ನ ಮನಸ್ಸು ತೆರೆದುಕೊಂಡಿತು ಎಂದು ಅವನು ಹೇಳಿಕೊಂಡಿದ್ದಾನೆ. ಮ್ಯಾಕಿಂಟಾಷ್ ಕಂಪ್ಯೂಟರ್ ತಯಾರಿಸುವಾಗಂತೂ ನಿರ್ದಿಷ್ಟವಾಗಿ ಇದು ತನಗೆ ಉಪಯೋಗವಾಯಿತು ಎಂದಿದ್ದಾನೆ. ಮುಂದೆ `ವಿಂಡೋಸ್' ಇದನ್ನು ಕಾಪಿ ಮಾಡಿದುದು ಉಲ್ಲೇಖಾರ್ಹ.

ಒಂದು ಎಚ್ಚರಿಕೆಯ ಮಾತು. ಈಗ ಮಹಾನಗರಗಳ ಕೆಲವು ಶಾಲೆಗಳಲ್ಲಿ ಅಥವಾ ಕೇಂದ್ರಗಳಲ್ಲಿ ಕ್ಯಾಲಿಗ್ರಫಿ ತರಗತಿಗಳು ನಡೆಯುತ್ತವೆ. ಮೊದಲು ಸರಿಯಾಗಿ ಹಾಗೂ ಸುಂದರವಾಗಿ ಬರೆಯುವುದನ್ನು ಕಲಿತು ಮುಂದಿನ ಹಂತದಲ್ಲಿ ಆಲಂಕಾರಿಕವಾಗಿ ಕಲಿಯುವುದು ಒಳ್ಳೆಯದು. ಇಲ್ಲದಿದ್ದರೆ `ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಯಿತು' ಎಂಬಂತಾಗುತ್ತದೆ. ಆಲಂಕಾರಿಕವಾಗಿ ಬರೆಯಲು ವಿವಿಧ ಕ್ಯಾಲಿಗ್ರಫಿ ಪೆನ್‌ಗಳು ಸಿಗುತ್ತವೆ.

ಮುಂದಿನ ವಾರ: ಗ್ರಾಫಾಲಜಿ- ಕೈಬರಹ ವಿಶ್ಲೇಷಣಾ ಶಾಸ್ತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT