ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಲೆಂಡರ್ ಸುಂದರಿಯರು

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅರ್ಚನಾ ಉಡುಪ ಅವರ ದನಿಯಲ್ಲಿ ಹಾಡು ಕೇಳಿಸಿಕೊಳ್ಳುತ್ತಿದ್ದವರು ಗುಂಪುಗೂಡುತ್ತಿದ್ದ ಕಡೆ ತಮ್ಮ ಕಣ್ಣು ಹೊರಳಿಸುತ್ತಿದ್ದರೆಂದರೆ ಅಲ್ಲೊಬ್ಬ ತಾರೆ ಪ್ರತ್ಯಕ್ಷವಾದರು ಎಂದೇ ಅರ್ಥ.

ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ (ಕೆಎಸ್‌ಐಸಿ) ಶತಮಾನೋತ್ಸವದ ಸವಿನೆನಪಿಗಾಗಿ ಹನ್ನೆರಡು ನಟಿಯರನ್ನು ಕಲೆಹಾಕಿ ಕ್ಯಾಲೆಂಡರ್ ಸಿದ್ಧಪಡಿಸಲಾಗಿತ್ತು.

ಅದನ್ನು ಬಿಡುಗಡೆಗೊಳಿಸುವ ಸಮಾರಂಭಕ್ಕೆ ಕ್ಯಾಲೆಂಡರ್‌ನಿಂದ ಇಳಿದುಬಂದಂತೆ ನಿಂತಿದ್ದರು ಆ ಚೆಲುವೆಯರು. ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಸುಮಲತಾ ಅಂಬರೀಷ್, ತಾರಾ, ಪ್ರಮೀಳಾ ಜೋಷಾಯ್, ಮೀನಾ, ರಕ್ಷಿತಾ, ಸೌಂದರ್ಯ, ಸಂಚಿತಾ ಶೆಟ್ಟಿ, ಮೇಘನಾ ರಾಜ್ ಜೊತೆ ರೂಪದರ್ಶಿಗಳಾದ ಸುಪ್ರಿಯಾ, ಮೇಘನಾ ವೇದಿಕೆಯಲ್ಲಿದ್ದ ತಮ್ಮ ತಮ್ಮ ಭಾವಚಿತ್ರಗಳನ್ನು ಕಂಡು ಪುಳಕಿತಭಾವದಲ್ಲಿದ್ದರು. ಮೈಸೂರು ರೇಷ್ಮೆಯುಟ್ಟು ಕ್ಯಾಲೆಂಡರ್‌ನಲ್ಲಿ ಕಂಗೊಳಿಸಿದ್ದ ನಟಿಯರಲ್ಲಿ ಕೆಲವರು ಸಲ್ವಾರ್ ಕಮೀಜ್ ತೊಟ್ಟು ಬಂದಿದ್ದು ಸಂಘಟಕರಿಗೆ ಬೇಸರ ತರಿಸಿತ್ತು.

ಮೊದಲಿಗೆ ಮೈಸೂರು ರೇಷ್ಮೆ ಸೀರೆಯ ಗುಣಗಾನ ಮಾಡಲು ಆರಂಭಿಸಿದ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಕ್ಯಾಲೆಂಡರ್ ಬಿಡುಗಡೆ ಎಂಬುದು ಶತಮಾನೋತ್ಸವ ಆಚರಣೆಯ ಮೊದಲ ಹಂತವಷ್ಟೇ ಎಂದರು. ನಂತರ 1912ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರೇಷ್ಮೆ ಸೀರೆಗಳ ನೇಯ್ಗೆಗೆ ಚಾಲನೆ ನೀಡಿದ್ದರು ಎಂದು ನೆನಪಿಸಿಕೊಂಡು, ಕ್ಯಾಲೆಂಡರ್ ರೂಪಿಸಲು ನಟಿಯರು ನೀಡಿದ ಸಹಕಾರಕ್ಕೆ ವಂದಿಸಿದರು.

ಹೂಗಳಿಂದ ಮುಚ್ಚಿಟ್ಟ ಕ್ಯಾಲೆಂಡರ್‌ಗಳನ್ನು ಹೊರತೆಗೆದು ರೇಷ್ಮೆ ಸಚಿವ ಬಚ್ಚೇಗೌಡ, ಅಬಕಾರಿ ಸಚಿವ ರೇಣುಕಾಚಾರ್ಯ, ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್ ಅನಾವರಣಗೊಳಿಸಿದರು. ನಂತರ ಮಾತನಾಡಿದ ಬಚ್ಚೇಗೌಡರು, `ನಮ್ಮ ಕನ್ನಡ ನಟಿಯರು ಯಾರಿಗೂ ಕಡಿಮೆ ಇಲ್ಲ. ಜಯಮಾಲಾ ಅವರ ಮಗಳು ತುಂಬಾ ಸುಂದರವಾಗಿದ್ದಾರೆ. ರಕ್ಷಿತಾ ದಪ್ಪ ಆಗಿಬಿಟ್ಟಿದ್ದಾರೆ. ಶಿಲ್ಪಾ ಶೆಟ್ಟಿ, ಅಲ್ಲಲ್ಲ ಸಂಚಿತಾ ಶೆಟ್ಟಿ ಕೂಡ ಚೆನ್ನಾಗಿದ್ದಾರೆ~ ಎಂದು ನಟಿಯರ ಗುಣಗಾನ ಮಾಡಿದರು.

ಸಚಿವರ ಭಾಷಣಗಳೆಲ್ಲಾ ಮುಗಿದು ನಟಿಯರ ಕೈಗೆ ಮೈಕ್ ಬಂತು. ಭಾರತಿ ವಿಷ್ಣುವರ್ಧನ್, ತಾವು ಕ್ಯಾಲೆಂಡರ್ ರೂಪದರ್ಶಿಯಾಗಲು ತಮ್ಮ ಯಜಮಾನರ ಅಭಿಮಾನಿ ಹಾಗೂ ಸಿನಿಮಾ ನಿರ್ಮಾಪಕ ವಿಜಯ್‌ಕುಮಾರ್ ಕೆಎಸ್‌ಐಸಿಯ ಅಧ್ಯಕ್ಷರಾಗಿದ್ದರಿಂದ ಸಾಧ್ಯವಾಯಿತು ಎಂದರು.

ಸುಮಲತಾ ಮೈಸೂರು ರೇಷ್ಮೆ ಸೀರೆಯಂಥ ಸೀರೆಯೇ ಇಲ್ಲ ಎಂದು ಹೊಗಳಿದರು. `ಮೈಗೆ ಅಪ್ಪುವ ಮತ್ತು ಒಪ್ಪುವ ಸೀರೆ ಮೈಸೂರು ರೇಷ್ಮೆ~ ಎಂದವರು ತಾರಾ. ಇನ್ನು ಪ್ರಮೀಳಾ ಜೋಷಾಯ್, ರಕ್ಷಿತಾ, ಮೇಘನಾ ರಾಜ್ ಅವರ ಮಾತುಗಳು ಕೂಡ ಸೀರೆಯ ಹೊಗಳಿಕೆಗೆ ಮೀಸಲಾಯಿತು. ಅಂತೂಇಂತೂ ಅಷ್ಟೂ ನಟಿಯರನ್ನು ಭಾವಚಿತ್ರದಲ್ಲೂ ಮಿಂಚುವಂತೆ ಮಾಡಿದ್ದರಿಂದ ಸಮಾರಂಭವೂ ಕಳೆಕಟ್ಟಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT