ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಲೆಂಡರ್ ಸುಬ್ರಹ್ಮಣ್ಯ!

Last Updated 3 ಜುಲೈ 2012, 19:30 IST
ಅಕ್ಷರ ಗಾತ್ರ

`ಮುಂದಿನ ನೂರಾ ಎಪ್ಪತ್ತೇಳನೇ ವರ್ಷ ಅಂದರೆ, 2199ನೇ ಇಸವಿಯ ನವೆಂಬರ್ 25ನೇ ತಾರೀಕು ಗುರುವಾರ ಬರುತ್ತದೆ~ ಎಂದರು, ಕದಿರೇನಹಳ್ಳಿಯ ಸುಬ್ರಹ್ಮಣ್ಯ.ಅಷ್ಟು ಕರಾರುವಾಕ್ಕಾಗಿ ಹೇಗೆ ಹೇಳ್ತೀರಿ ಎಂದು ಕೇಳಿದ್ರೆ, `177 ಏನು 5000 ವರ್ಷದ ಕ್ಯಾಲೆಂಡರ್‌ನಲ್ಲಿ ಯಾವ ತಿಂಗಳ ಯಾವ ತಾರೀಖು ಯಾವ ದಿನ ಬರುತ್ತದೆ ಎಂದು ಹೇಳಬಲ್ಲೆ~ ಎಂದು ಮತ್ತೊಮ್ಮೆ ಅವಾಕ್ಕಾಗಿಸಿದರು.

ಅಷ್ಟು ದೊಡ್ಡ ಪ್ರಮಾಣದಲ್ಲಿ ಕ್ಯಾಲೆಂಡರ್‌ಗಳನ್ನು ಬಾಯಿಪಾಠ ಮಾಡಲಂತೂ ಸಾಧ್ಯವಿಲ್ಲದ ಮಾತು. ಹಾಗಿದ್ದರೆ ಏನು ಲಾಜಿಕ್ಕು ಅಂತ ಪ್ರಶ್ನಿಸಿದ್ರೆ `ಬಿಳಿ ಹಾಳೆ ಕೊಡಿ, ಮಾಡಿ ತೋರಿಸುತ್ತೇನೆ~ ಅಂತ ಪ್ರಾತ್ಯಕ್ಷಿಕೆಗೆ ಸಿದ್ಧರಾಗುತ್ತಾರೆ.

ಹೌದು, ಸುಬ್ರಹ್ಮಣ್ಯ ಅವರು ಸರ್ಚ್ ಎಂಜಿನ್ ಮಾದರಿಯಲ್ಲಿ ಮತ್ತದೇ ವೇಗದಲ್ಲಿ ಹಳೆಯ ಮತ್ತು ಭವಿಷ್ಯದ ಕ್ಯಾಲೆಂಡರ್‌ಗಳ ದಿನ (ವಾರ)ಗಳನ್ನು ಕ್ಷಣಮಾತ್ರದಲ್ಲಿ ಹೇಳುವುದರ ಹಿಂದಿರುವುದು ಅವರದ್ದೇ ಆದ ಸಿದ್ಧ ಸೂತ್ರದ ಗುಟ್ಟು. ಅಂದರೆ ಸಾಮಾನ್ಯ ವರ್ಷದ ತಿಂಗಳಿಗೆ ಒಂದು, ಅಧಿಕ (ಲೀಪ್) ವರ್ಷದ ತಿಂಗಳಿಗೆ ಇನ್ನೊಂದು ಕೋಡ್ ಸಂಖ್ಯೆಯನ್ನು ಅವರು ಗೊತ್ತುಮಾಡಿಕೊಂಡಿದ್ದಾರೆ.

ಉದಾಹರಣೆಗೆ, 1900ರಿಂದ 1999ರ ವರೆಗೂ ಇರುವ ಲೀಪ್ ವರ್ಷಗಳಿಗೆ (1904, 1908, 1912 ಇತ್ಯಾದಿ) ಜನವರಿಗೆ 8, ಫೆಬ್ರುವರಿಗೆ ಸೊನ್ನೆ ಹಾಗೂ 3 ಕೋಡ್ ಸಂಖ್ಯೆ. 2000ದಿಂದ 2099ರವರೆಗೂ ಬರುವ ಅಧಿಕ ವರ್ಷಗಳಿಗೆ (2004, 2008, 2012...)

ಜನವರಿಗೆ 6, ಫೆಬ್ರುವರಿಗೆ 9 ಕೋಡ್ ಸಂಖ್ಯೆ (ಸಾಮಾನ್ಯ ವರ್ಷದ  ಜನವರಿ ಹಾಗೂ ಫೆಬ್ರುವರಿಗೆ ಕೋಡ್ ಸಂಖ್ಯೆ 7 ಹಾಗೂ 10). ಮಾರ್ಚ್‌ಗೆ 3, ಏಪ್ರಿಲ್‌ಗೆ 6, ಮೇಗೆ 8, ಜೂನ್ 4, ಜುಲೈ 6, ಆಗಸ್ಟ್ 9, ಸೆಪ್ಟೆಂಬರ್ 5, ಅಕ್ಟೋಬರ್ 0, ನವೆಂಬರ್ 3 ಹಾಗೂ ಡಿಸೆಂಬರ್‌ಗೆ 5 ಕೋಡ್‌ಸಂಖ್ಯೆಯಂತೆ.

ಇದೇ ರೀತಿಯಲ್ಲಿ ಭಾನುವಾರ 1, ಸೋಮವಾರ 2, ಮುಂದೆ ಶುಕ್ರವಾರದವರೆಗೂ ಕ್ರಮಸಂಖ್ಯೆಯಂತೆ 3,4,5,6, ಶನಿವಾರಕ್ಕೆ ಸೊನ್ನೆ ಕೋಡ್ ಸಂಖ್ಯೆ ಎಂದು ಅವರು ವಿವರಿಸುತ್ತಾರೆ.

`ಇಲ್ಲಿ ನೋಡಿ... 2012 ಅಧಿಕ ವರ್ಷ. ಈ 2012ರಲ್ಲಿ 12ನ್ನು ಅಧಿಕ ವರ್ಷದ ಕೋಡ್ 4ರಿಂದ ಭಾಗಿಸಿದಾಗ ಶೇಷ 3. ಈ 3ನ್ನು ಅದೇ 12ಕ್ಕೆ ಕೂಡಿಸಿದರೆ 15. ಜೂನ್ 16ರಂದು ಯಾವ ವಾರ ಎಂಬುದು ನಿಮ್ಮ ಪ್ರಶ್ನೆಯಾದರೆ, ಈ 15 ಮತ್ತು 16ನ್ನು ಕೂಡಿಸಿಕೊಳ್ಳಿ. ಉತ್ತರ 31ಕ್ಕೆ ಜೂನ್ ಕೋಡ್ 4ನ್ನು ಸೇರಿಸಿದಾಗ ಸಿಕ್ಕಿದ 35ನ್ನು 7 (ವಾರಕೆ ಏಳೇ ಏಳು ದಿನ!)ರಿಂದ ಭಾಗಿಸಿದಾಗ ಬರುವ ಶೇಷ ಸೊನ್ನೆ. ಅಂದರೆ ಶನಿವಾರ!~ ಎಂದು ಬಿಡಿಸುತ್ತಾರೆ.

ಹೀಗೆ, ಕೋಡ್ ಸಂಖ್ಯೆಗಳ ಆಧಾರದಲ್ಲಿ ಮುಂದಿನ 5,000 ವರ್ಷಗಳ ದಿನಾಂಕ, ವಾರಗಳನ್ನು ಅರೆಕ್ಷಣದಲ್ಲಿ ಹೇಳುವ ಸುಬ್ರಹ್ಮಣ್ಯ ಅವರಿಗೆ ಇಂತಹುದೊಂದು ಆಕರ್ಷಣೆ ಬೆಳೆಸಿದ್ದು ಅವರ ತಂದೆ.

ವೃತ್ತಿಯಲ್ಲಿ ಜ್ಯೋತಿಷಿಯಾಗಿದ್ದ ಅವರು 25 ವರ್ಷದ ಹಿಂದೆಯೇ ಸಾವಿರ ವರ್ಷಗಳ ವಾರ, ದಿನಾಂಕಗಳನ್ನು ಸ್ಮರಣಶಕ್ತಿಯಿಂದಲೇ ಥಟ್ ಅಂತ ಹೇಳುತ್ತಿದ್ದರಂತೆ. ಅದರಿಂದ ಪ್ರೇರಣೆಗೊಂಡ ಮಗ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮದೇ ಸಿದ್ಧಸೂತ್ರವನ್ನು ಕಂಡುಹಿಡಿದಿದ್ದಾರೆ. ಅವರ ಸಂಪರ್ಕ ಸಂಖ್ಯೆ:  91416 22079.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT