ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಯೊಜೆನಿಕ್‌ ಯಶಸ್ಸು

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹಿರಿಮೆ
Last Updated 5 ಜನವರಿ 2014, 20:00 IST
ಅಕ್ಷರ ಗಾತ್ರ

ಶ್ರೀಹರಿಕೋಟಾ (ಆಂಧ್ರಪ್ರದೇಶ) (ಪಿಟಿಐ):  ಸಂಪೂರ್ಣ ಸ್ವದೇಶಿ ನಿರ್ಮಿತ ಕ್ರಯೊಜೆನಿಕ್‌ ಎಂಜಿನ್‌ ಬಳಸಿದ ಜಿಎಸ್‌ಎಲ್‌ವಿ  ಡಿ5 ಉಪಗ್ರಹ ವಾಹಕವನ್ನು ಭಾನುವಾರ ಯಶಸ್ವಿ­ಯಾಗಿ ಉಡಾವಣೆ ಮಾಡುವ ಮೂಲಕ ಭಾರತವು ಜಾಗತಿಕ ಬಾಹ್ಯಾ­ಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲಿ­ಗಲ್ಲು ಸ್ಥಾಪಿಸಿತು.

ಇಲ್ಲಿಯ ಸತೀಶ್‌ ಧವನ್‌ ಬಾಹ್ಯಾ­ಕಾಶ ಕೇಂದ್ರದಿಂದ  ಭಾನುವಾರ ಸಂಜೆ 4.18 ಗಂಟೆಗೆ  ಜಿಸ್ಯಾಟ್‌ 14 ಸಂವ­ಹನ ಉಪಗ್ರಹ ಹೊತ್ತ ಜಿಎಸ್‌ಎಲ್‌­ವಿಡಿ5  ರಾಕೆಟ್‌, ದಟ್ಟ ಬೆಂಕಿ ಮತ್ತು ಹೊಗೆ ಉಗುಳುತ್ತ ಮೋಡಗಳನ್ನು ಭೇದಿಸಿಕೊಂಡು ನಭಕ್ಕೆ ಚಿಮ್ಮು ತ್ತಿದ್ದಂತೆ, ಇತ್ತ ನಿಯಂತ್ರಣ ಕೇಂದ್ರದಲ್ಲಿ ನೆರೆದಿದ್ದ ವಿಜ್ಞಾನಿಗಳ ಹರ್ಷ  ಮುಗಿಲು ಮುಟ್ಟಿತು.

ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿ ಪಡಿಸಿದ  ಜಿಎಸ್‌ಎಲ್‌­ವಿಡಿ5, ಉಡಾ­ವಣೆಗೊಂಡ 17.13 ನಿಮಿಷ­ದಲ್ಲಿ 1,982 ಕೆ.ಜಿ. ತೂಕದ ಜಿಸ್ಯಾಟ್‌ 14 ಸಂವಹನ ಉಪಗ್ರಹ­ವನ್ನು ಭೂಸ್ಥಿರ ಕಕ್ಷೆಗೆ ಸೇರಿಸಲು ಯಶಸ್ವಿಯಾಯಿತು.

ಈ ಮೂಲಕ  ಭಾರತ ಕೂಡ ಅಮೆರಿಕ, ರಷ್ಯಾ, ಜಪಾನ್‌, ಚೀನಾ ಮತ್ತು ಫ್ರಾನ್ಸ್‌ ಪ್ರತಿಷ್ಠಿತ ರಾಷ್ಟ್ರಗಳ ಗುಂಪಿಗೆ  ಸೇರ್ಪಡೆಯಾಯಿತು.

ಜಿಎಸ್‌ಎಲ್‌ವಿ ರಾಕೆಟ್‌ ಉಡಾವಣೆ ಗೆ 2001ರ ನಂತರ ನಡೆದ  ಒಟ್ಟು ಏಳು ಯತ್ನಗಳ ಪೈಕಿ ನಾಲ್ಕು  ಮಾತ್ರ ಯಶ ಕಂಡಿದ್ದವು.    ಹೀಗಾಗಿ ಸ್ವದೇಶಿ  ನಿರ್ಮಿತ ಕ್ರಯೊಜೆನಿಕ್‌ ಎಂಜಿನ್‌ ಬಳಸಿ ಅಭಿವೃದ್ಧಿಪಡಿಸಲಾದ ಜಿಎಸ್‌ಎಲ್‌ವಿ  ಉಡಾವಣೆ ಇಸ್ರೊಗೆ ಭಾರಿ ಸವಾಲು ಮತ್ತು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.

ಒಟ್ಟು ₨365 ಕೋಟಿ ವೆಚ್ಚದ ಯೋಜನೆ ಎರಡು ಮುಖ್ಯ ಉದ್ದೇಶ ಹೊಂದಿತ್ತು. ಸಂವಹನ ಉಪಗ್ರಹ ಜಿಸ್ಯಾಟ್‌–14   ಕಕ್ಷೆಗೆ ಸೇರಿಸುವುದು ಮತ್ತು ಜಿಎಸ್‌ಎಲ್‌ವಿಡಿ –5 ರಾಕೆಟ್‌ನಲ್ಲಿ ಬಳಸಿ­ಕೊಳ್ಳಲಾದ ಸ್ವದೇಶಿ ತಂತ್ರಜ್ಞಾನದ ಕ್ರಯೊಜೆನಿಕ್‌ ಎಂಜಿನ್‌ನ ಸಾಮರ್ಥ್ಯ ಮತ್ತು ದಕ್ಷತೆಯನ್ನು  ಪರೀಕ್ಷೆಗೆ ಒಡ್ಡುವುದು. ಆಗಸ್ಟ್‌ 19ಕ್ಕೆ ಉಪಗ್ರಹ ವಾಹಕ ಉಡಾವಣೆಗೆ ಮಾಡಿಕೊಂಡಿದ್ದ ಸಿದ್ಧತೆ ಕೊನೆಯ ಗಳಿಗೆಯಲ್ಲಿ  ಕೈಬಿಡಲಾಗಿತ್ತು. ರಾಕೆಟ್‌ನ ಇಂಧನ ಟ್ಯಾಂಕ್‌ ಸೋರಿಕೆಯಿಂದಾಗಿ ಉಡಾವಣೆ ಏಕಾಏಕಿ ಮುಂದೂಡಲಾಗಿತ್ತು.

ಇಂಧನ ಸೋರಿಕೆ ದುರಸ್ತಿ ಜತೆಗೆ ಕ್ರಯೊಜೆನಿಕ್‌ ಯಂತ್ರದ  ಮೇಲು ಹಂತವನ್ನೂ ಎರಡನೇ ಬಾರಿ ಪರೀಕ್ಷೆಗೆ ಒಳಪಡಿಸಿ ಸಾಮರ್ಥ್ಯವನ್ನು ದೃಢಪಡಿಸಿ­ಕೊಂಡ  ನಂತರ  ಉಡಾವಣೆಗೆ ಹೊಸ ವರ್ಷದ ಈ ದಿನವನ್ನು ಆಯ್ಕೆ ಮಾಡಲಾಗಿತ್ತು.

ಇಸ್ರೊದ ಪ್ರತಿಷ್ಠಿತ ಭೂಸ್ಥಿರ ಉಪಗ್ರಹ ವಾಹಕ (ಜಿಎಸ್‌ಎಲ್‌ವಿ) ಸರಣಿಯಲ್ಲಿ ಇದು ಎಂಟನೇ ರಾಕೆಟ್ ಆಗಿದ್ದು, ಅದು ಹೊತ್ತೊಯ್ದ ‘ಜಿಸ್ಯಾಟ್‌ 14’ ಭಾರತದ 23ನೇ ಸಂವಹನ ಉಪಗ್ರಹವಾಗಿದೆ.  

2001, 2003, 2004 ಮತ್ತು 07ರಲ್ಲಿ ಜಿಎಸ್‌ಎಲ್‌ವಿ ನೆರವಿನಿಂದ ಜಿಸ್ಯಾಟ್‌ ಉಪಗ್ರಹಗಳನ್ನು ಯಶಸ್ವಿ­ಯಾಗಿ ಉಡಾವಣೆ ಮಾಡಲಾಗಿತ್ತು.

2010ರಲ್ಲಿ ಎರಡು ಜಿಎಸ್‌ಎಲ್‌ವಿ ರಾಕೆಟ್‌ ವಿಫಲವಾದ ನಾಲ್ಕು ವರ್ಷಗಳ ಬಳಿಕ ಈ ಯಶಸ್ಸು ದೊರೆತಿರುವುದು ಇಸ್ರೊ ವಿಜ್ಞಾನಿಗಳಲ್ಲಿಯ ಆತ್ಮವಿಶ್ವಾಸ­ ಇಮ್ಮಡಿಗೊಳಿಸಿದೆ. ಜೊತೆಗೆ ಭಾರತದ ಬಾಹ್ಯಾಕಾಶ ತಂತ್ರಜ್ಞಾನದ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸಿದೆ.

ಈ ಉಪಗ್ರಹದ 12 ಸಂವಹನ ಟ್ರಾನ್ಸ್‌ಪಾಂಡರ್‌ಗಳು ಸಿ ಮತ್ತು ಕೆ ಬ್ಯಾಂಡ್‌ ಟ್ರಾನ್ಸ್‌ಸ್ಪಾಂಡರ್‌ ಜೊತೆಗೆ ಇನ್ಸಾಟ್‌ ಮತ್ತು ಜಿಸ್ಯಾಟ್‌ ಸಾಮರ್ಥ್ಯ ಹೆಚ್ಚಿಸಲಿದ್ದು ಸಂವಹನ ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳ ಬಾಗಿಲನ್ನು ತೆರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಇದಕ್ಕೂ ಮೊದಲು ಜಿಎಸ್‌ಎಲ್‌ವಿ ಉಪಗ್ರಹ ವಾಹಕಗಳಲ್ಲಿ ರಷ್ಯ ನಿರ್ಮಿತ ಕ್ರಯೊಜೆನಿಕ್‌ ಎಂಜಿನ್‌ಗಳನ್ನು ಬಳಸಿಕೊಳ್ಳ­ಲಾಗಿತ್ತು. ಈ ಬಾರಿ ಸಂಪೂರ್ಣ ಸ್ವದೇಶಿ ತಂತ್ರಜ್ಞಾನ ಬಳಸಿ ಅಭಿವೃದ್ಧಿ ಪಡಿಸಿದ ಎಂಜಿನ್‌ ಬಳಸಲಾಗಿದೆ.

ಸಂತಸದ ಕ್ಷಣ: ರಾಧಾಕೃಷ್ಣನ್‌
‘ಜಿಎಸ್‌ಎಲ್‌ವಿ ಡಿ5 ಯಶಸ್ವಿ ಉಡಾವಣೆಯಿಂದ ಅತೀವ ಸಂತಸ­ವಾಗಿದೆ. ಇಸ್ರೊ ತಂಡ ಮತ್ತೊಮ್ಮೆ ದೇಶ ಹೆಮ್ಮೆ ಪಡುವಂತಹ  ಸಾಧನೆ ಮಾಡಿ­ತೋರಿಸಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ’ ಎಂದು ಇಸ್ರೊ ಅಧ್ಯಕ್ಷ ಕೆ. ರಾಧಾಕೃಷ್ಣನ್‌ ಶ್ರೀಹರಿಕೋಟಾದಲ್ಲಿ ಹೇಳಿದ್ದಾರೆ.

ಇನ್ನಷ್ಟು ಸುದ್ದಿ:
ಕ್ರಯೊಜೆನಿಕ್‌ ಅಭಿವೃದ್ಧಿ: ಬಾನೆತ್ತರದ ಸಾಧನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT