ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಅಂತಿಮ ಟೆಸ್ಟ್‌ನಲ್ಲಿ ಗೆಲುವಿನ ವಿಶ್ವಾಸ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಅಡಿಲೇಡ್ (ಪಿಟಿಐ): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಈಗಾಗಲೇ ಕಳೆದುಕೊಂಡಿರುವ ಭಾರತ ತಂಡ ನಾಲ್ಕನೇ ಹಾಗೂ ಅಂತಿಮ ಪಂದ್ಯದಲ್ಲಿ ಗೆಲುವಿಗಾಗಿ ಶತಪ್ರಯತ್ನ ನಡೆಸಲಿದೆ. `ಕ್ಲೀನ್ ಸ್ವೀಪ್~ ಮುಖಭಂಗದಿಂದ ಪಾರಾಗುವುದು ಗುರಿ ಎಂದು ತಂಡದ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಹೇಳಿದ್ದಾರೆ.

ಉಭಯ ತಂಡಗಳ ನಡುವಿನ ನಾಲ್ಕನೇ ಪಂದ್ಯ ಮಂಗಳವಾರ ಆರಂಭವಾಗಲಿದೆ. ಆದರೆ ಇದಕ್ಕೆ ಹೆಚ್ಚಿನ ಮಹತ್ವವಿಲ್ಲ. ಏಕೆಂದರೆ ಆಸೀಸ್ ಈಗಾಗಲೇ 3-0 ರಲ್ಲಿ ಗೆಲುವಿನ ಮುನ್ನಡೆ ಸಾಧಿಸಿದೆ. ಮೈಕಲ್ ಕ್ಲಾರ್ಕ್ ಬಳಗ ನಾಲ್ಕನೇ ಟೆಸ್ಟ್‌ನಲ್ಲಿ ಗೆಲುವು ಪಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಮಹೇಂದ್ರ ಸಿಂಗ್ ದೋನಿ ಬಳಗದ ಮೇಲಿದೆ.

ಕಳೆದ ಕೆಲ ದಿನಗಳಿಂದ ಅಂಗಳದಿಂದ ದೂರವುಳಿದು ವಿಶ್ರಾಂತಿ ಪಡೆದಿದ್ದ ಭಾರತದ ಆಟಗಾರರು ಭಾನುವಾರ ಅಭ್ಯಾಸ ನಡೆಸಿದರು. ಆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಗಂಭೀರ್, `ತಂಡದ ಆಟಗಾರರಲ್ಲಿ ಉತ್ಸಾಹಕ್ಕೆ ಯಾವುದೇ ಕೊರತೆ ಇಲ್ಲ~ ಎಂದಿದ್ದಾರೆ. ಸತತ ಮೂರು ಸೋಲು ಎದುರಾದರೂ ಆಟಗಾರರು ಮನೋಸ್ಥೈರ್ಯ ಕಳೆದುಕೊಂಡಿಲ್ಲ ಎಂಬುದು ಅವರ ಹೇಳಿಕೆ.

`ಪ್ರತಿ ಟೆಸ್ಟ್ ಕೂಡಾ ವಿಶೇಷವಾದುದು. ಆದ್ದರಿಂದ ಹೊಸ ಉತ್ತೇಜನದೊಂದಿಗೆ ಕಣಕ್ಕಿಳಿಯುವುದು ಅಗತ್ಯ. ಉತ್ತೇಜನ ಇಲ್ಲದಿದ್ದಲ್ಲಿ ಕ್ರಿಕೆಟ್ ಆಡಲು ಸಾಧ್ಯವಿಲ್ಲ~ ಎಂದು ನುಡಿದರು.

`ಒಂದೆರಡು ಸರಣಿಗಳಲ್ಲಿ ತಂಡ ಕೆಟ್ಟ ಪ್ರದರ್ಶನ ತೋರಿದ ಕೂಡಲೇ ಹತಾಶೆಗೆ ಒಳಗಾಗಬೇಕಿಲ್ಲ. ಎರಡು ಸರಣಿಗಳಿಗೆ ಮುನ್ನ ನಮ್ಮದು ವಿಶ್ವದ ಶ್ರೇಷ್ಠ ತಂಡ ಎನಿಸಿಕೊಂಡಿತ್ತು. ಇದೀಗ ತಂಡ ಹಿನ್ನಡೆ ಅನುಭವಿಸಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಪ್ರತಿ ಆಟಗಾರರು ಒಬ್ಬರನ್ನೊಬ್ಬರು ಹುರಿದುಂಬಿಸಲು ಪ್ರಯತ್ನಿಸಬೇಕು~ ಎಂದು ತಿಳಿಸಿದರು.

`ಅಂತಿಮ ಟೆಸ್ಟ್‌ನಲ್ಲಿ ಭಾರತ ಗೆಲುವು ಸಾಧಿಸಬೇಕು. ಅದರ ಜೊತೆಗೆ ಸಚಿನ್ ತೆಂಡೂಲ್ಕರ್ ನೂರನೇ ಶತಕ ಗಳಿಸಬೇಕು. ದೇಶಕ್ಕಾಗಿಆಡುವ ಸಂದರ್ಭ ತಂಡದ ಜಯ ಮುಖ್ಯವಾದುದೇ ಹೊರತು ಆಟಗಾರರ ವೈಯಕ್ತಿಕ ಸಾಧನೆ ಅಲ್ಲ~ ಎಂದು ದೆಹಲಿಯ ಎಡಗೈ ಬ್ಯಾಟ್ಸ್‌ಮನ್ ಹೇಳಿದರು.

`ಈಗ 0-3 ರಲ್ಲಿ ಹಿನ್ನಡೆಯಲ್ಲಿದ್ದೇವೆ. ಇದು ಸಚಿನ್ ಶತಕ ಗಳಿಸಿಲ್ಲ ಎಂಬುದಕ್ಕಿಂತ ಹೆಚ್ಚಿನ ನಿರಾಸೆ ಉಂಟುಮಾಡಿರುವ ವಿಚಾರ. ಅಂತಿಮ ಟೆಸ್ಟ್‌ನಲ್ಲಿ ಸಚಿನ್ ಶತಕ ಗಳಿಸದಿದ್ದರೂ ಭಾರತ ಗೆಲ್ಲಬೇಕು. ಅದಕ್ಕೆ ಬದಲು ಸಚಿನ್ ಶತಕ ಗಳಿಸಿ ತಂಡ ಸೋಲು ಅನುಭವಿಸಿದರೆ ಅದರಲ್ಲಿ ಯಾವುದೇ ಅರ್ಥವಿಲ್ಲ~ ಎಂಬ ಅಭಿಪ್ರಾಯ ಗಂಭೀರ್ ಅವರದ್ದು.

ಆಸ್ಟ್ರೇಲಿಯಾದ ವೇಗದ ಬೌಲರ್‌ಗಳ ಪ್ರದರ್ಶನವನ್ನು ಶ್ಲಾಘಿಸಿದ ಅವರು, `ಆಸೀಸ್ ತಂಡದಲ್ಲಿರುವ ಬೌಲರ್‌ಗಳು ಅನನುಭವಿಗಳು. ಆದರೆ ಅವರು ನೀಡಿರುವ ಪ್ರದರ್ಶನ ಅದ್ಭುತ. ನಮ್ಮ ಮೇಲೆ ಪ್ರತಿ ಬಾರಿಯೂ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದಾರೆ~ ಎಂದರು.

`ಪಂದ್ಯದ ಮೊದಲ ಅವಧಿಯಲ್ಲಿ ಪಿಚ್     ಬೌಲಿಂಗ್‌ಗೆ ನೆರವು ನೀಡುವುದು ಸಹಜ. ಆದರೆ ಆಸೀಸ್ ಬೌಲರ್‌ಗಳು ಎರಡನೇ ಅವಧಿಯಲ್ಲೂ ನಮ್ಮ    ಬ್ಯಾಟ್ಸ್‌ಮನ್‌ಗಳ ಮೇಲೆ ಪ್ರಭುತ್ವ ಸಾಧಿಸಲು ಯಶಸ್ವಿಯಾದರು. ನಮಗೆ ಸುಲಭವಾಗಿ ರನ್ ಗಳಿಸುವ ಅವಕಾಶವನ್ನೇ ನೀಡಲಿಲ್ಲ~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT