ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಆಟಗಾರನ ಖಾಸಗಿ ಜೀವನ ಗೌರವಿಸಿ- ಬಿಸಿಸಿಐ ಮನವಿ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಯುವರಾಜ್ ಸಿಂಗ್ ಚಿಕಿತ್ಸೆಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂಬ ಭರವಸೆಯನ್ನು ಕ್ರೀಡಾ ಸಚಿವ ಅಜಯ್ ಮಾಕನ್ ನೀಡಿದ್ದಾರೆ.
`ಯುವರಾಜ್ ಶೀಘ್ರ ಗುಣಮುಖರಾಗಲಿ. ಅವರಿಗೆ ಯಾವ ರೀತಿಯಲ್ಲಿ ನೆರವು ನೀಡಲು ಸಾಧ್ಯ ಎಂಬುದನ್ನು ತಿಳಿದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸರ್ಕಾರ ಅವರಿಗೆ ಸಹಾಯ ಮಾಡಲಿದೆ~ ಎಂದು ಮಾಕನ್ `ಟ್ವಿಟರ್~ನಲ್ಲಿ ಬರೆದಿದ್ದಾರೆ.


ವಿಶ್ವಕಪ್ ಟೂರ್ನಿಯ `ಹೀರೊ~ ಎನಿಸಿದ್ದ ಯುವರಾಜ್ ಇದೀಗ ಬಾಸ್ಟನ್‌ನ ಕ್ಯಾನ್ಸರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಜನವರಿ 26 ರಂದು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದರು.

ನೆರವಿನ ಭರವಸೆ ನೀಡಿದ ಪಿಸಿಎ: ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಕೂಡಾ ಯುವರಾಜ್‌ಗೆ ಪೂರ್ಣ ರೀತಿಯ ನೆರವಿನ ಭರವಸೆ ನೀಡಿದೆ. `ಪಿಸಿಎ ಮತ್ತು ಬಿಸಿಸಿಐ ಯುವರಾಜ್‌ಗೆ ನೆರವಾಗಲಿದೆ. ಅವರು ಶ್ರೇಷ್ಠ ಆಟಗಾರ. ಕಠಿಣ ಪರಿಸ್ಥಿತಿಯಲ್ಲಿ ನಾವು ಅವರ ಜೊತೆ ಇದ್ದೇವೆ~ ಎಂದು ಪಿಸಿಎ ಕಾರ್ಯದರ್ಶಿ ಎಂ.ಪಿ. ಪಾಂಡೋವ್ ಸೋಮವಾರ ನುಡಿದರು.

ಯುವರಾಜ್ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಪಿಸಿಎ ಮತ್ತು ಬಿಸಿಸಿಐ ಮಾತುಕತೆ ನಡೆಸಿದೆ. ಚಿಕಿತ್ಸೆಯ ವೆಚ್ಚ ಭರಿಸಲಿದ್ದೇವೆ ಎಂದರು. ಅವರ ಕುಟುಂಬದ ಸದಸ್ಯರ ಜೊತೆ ಪಿಸಿಎ ಸಂಪರ್ಕ ಇಟ್ಟುಕೊಂಡಿದೆಯೇ ಎಂಬ ಪ್ರಶ್ನೆಗೆ ಪಾಂಡೋವ್, `ನಾವು ಈಗಾಗಲೇ ಅವರ ತಾಯಿ ಶಬ್ನಮ್ ಸಿಂಗ್‌ಗೆ ಇ-ಮೇಲ್ ಕಳುಹಿಸಿದ್ದೇವೆ~ ಎಂದರು.

ಖಾಸಗಿ ಜೀವನ ಗೌರವಿಸಿ: ಯುವರಾಜ್ ಖಾಸಗಿ ಜೀವನವನ್ನು ಗೌರವಿಸುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಧ್ಯಮಗಳಲ್ಲಿ ಕೇಳಿಕೊಂಡಿದೆ. `ಯುವರಾಜ್ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಬೇಗನೇ ಗುಣಮುಖರಾಗಲಿ ಎಂಬುದು ಬಿಸಿಸಿಐ ಹಾರೈಕೆ~ ಎಂದು ಮಂಡಳಿಯ ಕಾರ್ಯದರ್ಶಿ ಸಂಜಯ್ ಜಗದಾಳೆ ತಿಳಿಸಿದರು.

`ಬಿಸಿಸಿಐ ಯುವರಾಜ್ ಕುಟುಂಬ ಸದಸ್ಯರ ಜೊತೆ ಸಂಪರ್ಕದಲ್ಲಿದೆ. ಕಳೆದ ಕೆಲ ದಿನಗಳಿಂದ ಅವರು ಮಾಧ್ಯಮಗಳಿಂದ ಸಾಕಷ್ಟು ಪ್ರಶ್ನೆಗಳನ್ನು ಕೇಳಬೇಕಾಗಿ ಬಂದಿದೆ~  ಎಂದರು. `ಯುವರಾಜ್ ಹಾಗೂ ಕುಟುಂಬ ಈಗ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ಈ ಕಾರಣ ಅವರ ಖಾಸಗಿ ಜೀವನ ಗೌರವಿಸುವಂತೆ ಮಾಧ್ಯಮಗಳಲ್ಲಿ ಕೇಳಿಕೊಳ್ಳುತ್ತೇವೆ. ಕ್ರಿಕೆಟಿಗನ ಆರೋಗ್ಯದ ಕುರಿತ ಬೆಳವಣಿಗೆಗಳನ್ನು ಮಂಡಳಿ ಎಲ್ಲರಿಗೂ ನೀಡುತ್ತದೆ~ ಎಂದು ಜಗದಾಳೆ ಹೇಳಿದರು.

ತನ್ನ ಆಕ್ರಮಣಕಾರಿ ಆಟದಿಂದ ಭಾರತ ತಂಡದಲ್ಲಿ ವಿಶೇಷ ಸ್ಥಾನ ಪಡೆದಿದ್ದ ಯುವರಾಜ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಸುದ್ದಿ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ತಮ್ಮ ನೆಚ್ಚಿನ ಆಟಗಾರ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ದೇಶದ ವಿವಿಧ ಭಾಗಗಳಲ್ಲಿ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

ಗೆಡ್ಡೆ ಶ್ವಾಸಕೋಶದ ಹೊರಭಾಗದಲ್ಲಿದೆ: ಕ್ಯಾನ್ಸರ್ ಗೆಡ್ಡೆ ಯುವರಾಜ್ ಸಿಂಗ್ ಶ್ವಾಸಕೋಶದ ಒಳಗೆ ಇಲ್ಲ ಎಂದು ಅವರಿಗೆ ಈ ಮೊದಲು ಚಿಕಿತ್ಸೆ ನೀಡಿದ್ದ ವೈದ್ಯರಾದ ನಿಕೇಶ್ ರೋಹ್ಟಗಿ ನುಡಿದಿದ್ದಾರೆ. `ಗೆಡ್ಡೆ ಎಡ ಮತ್ತು ಬಲ ಶ್ವಾಸಕೋಶಗಳ ನಡುವೆ ಬೆಳೆದಿದೆ~ ಎಂದು ಹೇಳಿದ್ದಾರೆ. ಅವರಿಗೆ ಚಿಕಿತ್ಸೆ ನೀಡಿದ್ದ ಇನ್ನೊಬ್ಬ ವೈದ್ಯರಾದ ಪವನ್ ದೀಪ್ ಕೊಹ್ಲಿ, `ಯುವರಾಜ್ ಎದೆಯ ಭಾಗದಲ್ಲಿ ಗೆಡ್ಡೆ ಬೆಳೆಯುತ್ತಿದೆ ಎಂಬುದನ್ನು ಕಳೆದ ಮೇ- ಜೂನ್ ತಿಂಗಳಲ್ಲೇ ಕುಟುಂಬ ಸದಸ್ಯರಿಗೆ ತಿಳಿಸಿದ್ದೆ~ ಎಂದಿದ್ದಾರೆ. ಮಾತ್ರವಲ್ಲ ವಿಶ್ವದ ಪ್ರಮುಖ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT