ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಇಂಗ್ಲೆಂಡ್‌ಗೆ ಮೊದಲ ಜಯ

Last Updated 26 ಜನವರಿ 2011, 18:30 IST
ಅಕ್ಷರ ಗಾತ್ರ

ಅಡಿಲೇಡ್ (ಎಪಿ): ಜೊನಾಥನ್ ಟ್ರಾಟ್ ಅವರ ಆಕರ್ಷಕ ಶತಕದ (102) ನೆರವಿನಿಂದ ಇಂಗ್ಲೆಂಡ್ ತಂಡದವರು ಬುಧವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 21 ರನ್‌ಗಳ ಗೆಲುವು ಪಡೆದರು.

ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 299 ರನ್‌ಗಳ ಬೃಹತ್ ಮೊತ್ತದ ಸವಾಲನ್ನು ಆಸ್ಟ್ರೇಲಿಯಾದ ಮುಂದಿರಿಸಿತು. ಇದಕ್ಕೆ ಪ್ರತ್ಯುತ್ತರ ನೀಡುವಲ್ಲಿ ಎಡವಿದ ಆಸೀಸ್ ಪಡೆ 50 ಒವರ್‌ಗಳಲ್ಲಿ ಏಳು ವಿಕೆಟ್‌ಗೆ 278 ರನ್ ಮಾತ್ರ ಗಳಿಸಿತು. ಈ ಗೆಲುವಿನೊಂದಿಗೆ ಏಳು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಮೊದಲ ಗೆಲುವನ್ನು ತನ್ನದಾಗಿಸಿಕೊಂಡಿತು. ಮಾತ್ರವಲ್ಲ ತನ್ನ ಹಿನ್ನಡೆಯನ್ನು 1-3ಕ್ಕೆ ತಗ್ಗಿಸಿತು.

ಮ್ಯಾಟ್ ಪ್ರಿಯರ್ ಹಾಗೂ ಜೊನಾಥನ್ ಟ್ರಾಟ್ ಜೋಡಿ ಎರಡನೇ ವಿಕೆಟ್‌ಗೆ ಪೇರಿಸಿದ 113 ರನ್‌ಗಳ ಉತ್ತಮ ಜೊತೆಯಾಟ ಇಂಗ್ಲೆಂಡ್ ತಂಡದ ಮೊತ್ತ 300 ಸನಿಹಕ್ಕೆ ತಂದು ನಿಲ್ಲಿಸಲು ನೆರವಾಯಿತು. ಪ್ರಿಯರ್ (67) ಅರ್ಧಶತಕ ಗಳಿಸಿ ಉತ್ತಮ ಮೊತ್ತ ಕಲೆ ಹಾಕುವಲ್ಲಿ ನೆರವಾದರು. ನಂತರ ಬಂದ ಬ್ಯಾಟ್ಸ್‌ಮನ್‌ಗಳು ಟ್ರಾಟ್‌ಗೆ ಬೆಂಬಲವಾಗಿ ನಿಂತರು. 126 ಎಸೆತೆಗಳನ್ನು ಎದುರಿಸಿದ ಟ್ರಾಟ್ ಆರು ಬೌಂಡರಿ ಸಿಡಿಸಿದರು. ಸ್ಟೀವನ್ ಸ್ಮಿತ್ (33ಕ್ಕೆ 3) ಹಾಗೂ ಡೇವಿಡ್ ಹಸ್ಸಿ (21ಕ್ಕೆ 4) ಅವರು ಆಸೀಸ್ ಪರ ಪ್ರಭಾವಿ ಎನಿಸಿದರು.

ಇಂಗ್ಲೆಂಡ್ ಪಡೆಯ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ ಸರಣಿ ಕೈವಶ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಉತ್ತಮ ಆರಂಭ ನೀಡಿದ ಶೇನ್ ವ್ಯಾಟ್ಸನ್ 72 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಂತೆ 64 ರನ್‌ಗಳನ್ನು ಪೇರಿಸಿದರು. ಇದು ಆಸ್ಟೇಲಿಯಾ ತಂಡದ ಪರ ದಾಖಲಾದ ಹೆಚ್ಚಿನ ವೈಯಕ್ತಿಕ ಮೊತ್ತವು ಹೌದು. 

ಒಂದು ಹಂತದಲ್ಲಿ ಸೋಲಿನ ದವಡೆಯಿಂದ ತಂಡವನ್ನು ಪಾರು ಮಾಡಲು ಕ್ಯಾಮರೊನ್ ವೈಟ್ (44) ಹಾಗೂ ಸ್ಟೀವನ್ ಸ್ಮಿತ್ (46) ನಡೆಸಿದ ಹೋರಾಟವು ವ್ಯರ್ಥವಾಯಿತು.

ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್ 50 ಒವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 299 (ಮ್ಯಾಟ್ ಪ್ರಿಯರ್ 67, ಜೊನಾಥನ್ ಟ್ರಾಟ್ 102, ಪಾಲ್ ಕಾಲಿಂಗ್‌ವುಡ್ 27, ಮೈಕಲ್ ಯಾರ್ಡ್ ಅಜೇಯ 39; ಬ್ರೆಟ್ ಲೀ 68ಕ್ಕೆ1, ಸ್ಟೀವನ್ ಸ್ಮಿತ್ 33ಕ್ಕೆ3, ಡೇವಿಡ್ ಹಸ್ಸಿ 21ಕ್ಕೆ4).

ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 278. (ಶೇನ್ ವ್ಯಾಟ್ಸನ್ 64, ಕ್ಯಾಮರೊನ್ ವೈಟ್ 44, ಸ್ಟೀವನ್ ಸ್ಮಿತ್ 46, ಬ್ರೆಟ್ ಲೀ ಅಜೇಯ 39; ಜೇಮ್ಸ್ ಆ್ಯಂಡರ್‌ಸನ್ 57ಕ್ಕೆ2, ಜೊನಾಥನ್ ಟ್ರಾಟ್ 31ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT