ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಇಷ್ಟ, ಸಿನಿಮಾ ಕಷ್ಟ...!

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

`ಕ್ರಿಕೆಟ್ ಅಂದರೆ ಇಷ್ಟ; ಆದರೆ ಸಿನಿಮಾ ಮಾತ್ರ ಬಹಳ ಕಷ್ಟ~... ಹೀಗೆಂದು ಹೇಳಿದ್ದು ನಟ, ನಿರ್ಮಾಪಕ ಕಿಚ್ಚ ಸುದೀಪ್. ಇವರು ಸೆಲೆಬ್ರಿಟಿಗಳ ಕ್ರಿಕೆಟ್ ಲೀಗ್‌ನಲ್ಲಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ.

ಮೊದಲ ಸೆಲೆಬ್ರೆಟಿ ಕ್ರಿಕೆಟ್ ಲೀಗ್‌ನಲ್ಲಿ ಅವರ ತಂಡ ಸತತ ಎರಡು ಪಂದ್ಯಗಳಲ್ಲಿ ಜಯಗಳಿಸಿ ಲೀಗ್ ಹಂತಕ್ಕೆ ತಲುಪಿದೆ. ಈ  ಹಿನ್ನೆಲೆಯಲ್ಲಿ ಖುಷಿ, ಅನುಭವ ಹಂಚಿಕೊಳ್ಳಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರಿಗೆ `ನೀವು ಸಿನಿಮಾನೂ ಮಾಡಿದ್ದೀರಿ; ಕ್ರಿಕೆಟ್ ಕೂಡ ಆಡಿದ್ದೀರಿ. ಈ ಎರಡರಲ್ಲಿ ಯಾವುದು ಸುಲಭ~ ಎಂಬ ಪ್ರಶ್ನೆ ಎದುರಾದಾಗ ಪ್ರತಿಕ್ರಿಯಿಸಿದ್ದು ಹೀಗೆ.

`ನಾನು ಅನೇಕ ಸಿನಿಮಾದಲ್ಲಿ ನಟಿಸಿದ್ದೇನೆ. ಸಿನಿಮಾ ನಿರ್ಮಿಸಿದ್ದೇನೆ. ಆದರೆ ಯಾವುದೇ ಸಿನಿಮಾ ಯಾಕೆ ಸೋಲುತ್ತದೆ, ಯಾಕೆ ಯಶಸ್ವಿಯಾಗುತ್ತದೆ ಎಂಬುದು ನನಗಂತೂ ಇದುವರೆಗೂ ಗೊತ್ತಾಗಿಲ್ಲ~. ಇದು ಅವರು ಕೊಟ್ಟ ಕಾರಣ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ದಿನ ಸುನೀಲ್ ಶೆಟ್ಟಿ ನಾಯಕತ್ವದ ಮುಂಬೈ ಹೀರೋಸ್ ವಿರುದ್ಧ ನಡೆದ ಪಂದ್ಯದಲ್ಲಿ ಹಾಗೂ ಚೆನ್ನೈನಲ್ಲಿ ನಡೆದ ಕಾಲಿವುಡ್ ಜತೆಗಿನ ಪಂದ್ಯದಲ್ಲಿ ಕರ್ನಾಟಕ ತಂಡ ಜಯಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಇನ್ನೇನು ಎರಡು ಪಂದ್ಯಗಳು ಬಾಕಿ ಉಳಿದಿದ್ದು, ಫೈನಲ್ ಹಾದಿ ಸುಗಮವಾಗಿದೆ.
`ಸಿನಿಮಾ ಮಂದಿಯ ಕ್ರಿಕೆಟನ್ನು ಅಭಿಮಾನಿಗಳು, ಕ್ರೀಡಾಸಕ್ತರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಅಳುಕು ನಮ್ಮಲ್ಲಿ ಮೂಡಿತ್ತು.
 
ಜತೆಗೆ ಸಹಸ್ರಾರು ಕಂಗಳ ನಿರೀಕ್ಷೆ ಬೇರೆ. ಹಾಗಾಗಿ ನಮ್ಮ ನೆಲದಲ್ಲಿ ಭಯದಿಂದಲೇ ಆಡಿದೆವು. ಆದರೆ ಪ್ರೇಕ್ಷಕರು ಉತ್ತಮ ಪ್ರೋತ್ಸಾಹ ನೀಡಿದ್ದಾರೆ. ಉದ್ಯಮದ ಮಂದಿಯೂ ಬೆನ್ನು ತಟ್ಟಿದ್ದಾರೆ. ಅದಕ್ಕಾಗಿ ಅವರಿಗೆಲ್ಲ ಕೃತಜ್ಞತೆ~ ಎನ್ನುವಾಗ ಅವರು ಭಾವುಕರಾಗಿದ್ದರು.

 `ಸಿನಿಮಾದಲ್ಲಿ ಹೀರೋ ಆಗದವರೂ ಚೆನ್ನಾಗಿ ಆಡಿದರೆ ಕ್ರಿಕೆಟ್ ಕ್ಷೇತ್ರದಲ್ಲಿ ಹೀರೋ ಆಗಬಹುದು. ನಮ್ಮ ಹುಡುಗರಂತೂ ಹಗಲು ರಾತ್ರಿ ಎನ್ನದೇ ಅಭ್ಯಾಸ ಮಾಡಿ ಆಟವಾಡಿದ್ದಾರೆ. ಹಾಗಾಗಿ ಎರಡು ಪಂದ್ಯಗಳಲ್ಲಿ ಜಯಗಳಿಸಲು ಸಾಧ್ಯವಾಯಿತು~ ಎಂದರು.

ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಡಿದ ಅನುಭವ ಈಗ ಉಪಯೋಗಕ್ಕೆ ಬಂದಿದ್ದು, ನಾಯಕನಾಗಿ ತಂಡವನ್ನು ಮುನ್ನಡೆಸುವ ಸವಾಲೂ ಇತ್ತು ಎಂದು ಆ ಒತ್ತಡವನ್ನು ನೆನಪು ಮಾಡಿಕೊಂಡರು. ಎರಡೂ ಪಂದ್ಯದ ಜಯದಲ್ಲಿ ಪಾಲುದಾರರಾದ ಸಹ ಆಟಗಾರರು, ತಂಡದ ವೈದ್ಯ, ಕೋಚ್ ಸಹಾಯವನ್ನು ಸ್ಮರಿಸಲು ಮರೆಯಲಿಲ್ಲ.

ಕ್ರಿಕೆಟ್ ಮತ್ತು ಸಿನಿಮಾ ಕ್ಷೇತ್ರಗಳೆರಡರ ಮಧ್ಯೆ ಆಯ್ಕೆ ವಿಷಯ ಬಂದಾಗ ಸಿನಿಮಾ ಕ್ಷೇತ್ರವೇ ನೆಚ್ಚಿನ ಕ್ಷೇತ್ರ ಎನ್ನುವುದನ್ನು ಮರೆಯಲಿಲ್ಲ. ಅಶೋಕ್ ಖೇಣಿ ಮಾಲೀಕತ್ವದ ತಂಡ ಲೀಗ್ ಹಂತಕ್ಕೆ ತಲುಪಿದ್ದು, ಜೂನ್12ರಂದು ಹೈದರಾಬಾದ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಒಟ್ಟಾರೆ ಮೇಕಪ್ ಮಾಡಿಕೊಂಡು ಸ್ಕ್ರೀನ್ ಮೇಲೆ ಹೀರೋ  ಆಗುವ ನಟರು, ಮೈದಾನದಲ್ಲಿ ಬೆವರು ಸುರಿಸಿ ರಿಯಲ್ ಹೀರೋಗಳಾಗಲು ಹೊರಟಿದ್ದಾರೆ. ಫೈನಲ್ಸ್‌ನಲ್ಲೂ ಗೆಲ್ಲುವ ಉಮೇದಿನಲ್ಲಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT