ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಉಡುಗಿದ ಭಾರತದ ಉತ್ಸಾಹ, ಆಸ್ಟ್ರೇಲಿಯಾದ ವಿಜಯೋತ್ಸವ

Last Updated 28 ಜನವರಿ 2012, 19:30 IST
ಅಕ್ಷರ ಗಾತ್ರ

ಅಡಿಲೇಡ್: ಭಾರತದ ದುರಂತ ಕಥೆ ಸಂಪೂರ್ಣ ಸರಣಿ ಸೋಲಿನಲ್ಲಿ ಅಂತ್ಯ ಕಂಡಿದೆ. ವೈಫಲ್ಯದ ಹಾದಿಯಲ್ಲಿಯೇ ನಡೆದು ಕೊನೆಯಲ್ಲಿ ಮಾಡಿದ ಒಂದು ದೊಡ್ಡ ಸಾಧನೆ ಎಂದರೆ ಅಂತಿಮ ಟೆಸ್ಟ್ ಅನ್ನು ಐದನೇ ದಿನದ ಮೊದಲ ಅವಧಿಯ ಆಟದವರೆಗೆ ತಳ್ಳಿದ್ದು. ಅದರಿಂದಾದ ಪ್ರಯೋಜನವೇನು ಇಲ್ಲ. ಮತ್ತೊಂದು ಮುಖಭಂಗವೂ ತಪ್ಪಲಿಲ್ಲ.

`ಮುಜುಗರವಲ್ಲ~ ಎಂದು ಭಾರತ ತಂಡದವರು ಅಂದುಕೊಂಡರೂ ಸೋಲಿನ ಸಾಲುಗಳನ್ನು ಕಂಡ ಅಭಿಮಾನಿ ಬಳಗಕ್ಕಂತೂ ಹಾಗೆ ಅನಿಸಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿನ 0-4ರಲ್ಲಿನ ಅವಮಾನದಿಂದ ಆಗಿರುವ ಗಾಯ ಹಾಗೂ ನೋವು ಮರೆಯುವುದು ಸುಲಭವಲ್ಲ. ವಿದೇಶಿ ನೆಲದ ವೇಗದ ಅಂಗಳದಲ್ಲಿ ಭಾರತದವರು ಗೆಲ್ಲುವುದೇ ಇಲ್ಲವೆನ್ನುವಂಥ ಅಭಿಪ್ರಾಯ ಬಲವಾಗತೊಡಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ಸರಣಿಯಲ್ಲಿ ಅನುಭವಿಸಿದ ನಿರಾಸೆ ಆಸ್ಟ್ರೇಲಿಯಾದಲ್ಲಿಯೂ ಮರುಕಳಿಸಿದ್ದೇ ಇದಕ್ಕೆ ಕಾರಣ.

122 ರನ್‌ಗಳ ಅಂತರದಿಂದ ಆಸೀಸ್‌ಗೆ ಶರಣಾಗಿ ಸರಣಿಯಲ್ಲಿ ನೀರಸ ಆರಂಭ ಪಡೆದಿದ್ದ ಪ್ರವಾಸಿಗಳಿಗೆ ಆನಂತರ ಎರಡು ಇನಿಂಗ್ಸ್ ಸೋಲಿನ ಆಘಾತ. ಶನಿವಾರ ಕೊನೆಗೊಂಡ ನಾಲ್ಕನೇ ಟೆಸ್ಟ್‌ನಲ್ಲಿಯೂ ಸೋಲು ಮೊದಲೇ ನಿರ್ಧಾರವಾಗಿತ್ತು. ನಿರೀಕ್ಷೆ ಹುಸಿಯಾಗಲಿಲ್ಲ. ಆತಿಥೇಯ ಆಸ್ಟ್ರೇಲಿಯಾದವರು ಮತ್ತೊಮ್ಮೆ ಪ್ರಾಬಲ್ಯ ಮೆರೆದರು. 298 ರನ್‌ಗಳ ಜಯದೊಂದಿಗೆ ಸರಣಿ ವಿಜಯದ ಸಂಭ್ರಮವನ್ನೂ ಪಡೆದರು. ಕಾಂಗರೂಗಳ ನಾಡಿನ ಪಡೆಯವರು `ಬಾರ್ಡರ್-ಗಾವಸ್ಕರ್~ ಟ್ರೋಫಿಯನ್ನು ಎತ್ತಿ ಹಿಡಿದು ಸಂಭ್ರಮಿಸಿದರೆ; ಭಾರತದವರು ತಲೆ ಬಾಗಿಸಿಕೊಂಡು ನಿಂತರು.

ಕೊನೆಯ ಹಣಾಹಣಿಯಲ್ಲಿ ಆಸ್ಟ್ರೇಲಿಯಾದವರು ಐನೂರು ರನ್‌ಗಳ ಗೆಲುವಿನ ಗುರಿಯನ್ನು ಮುಂದಿಟ್ಟಾಗಲೇ ಭಾರತದ ಸೋಲು ಸ್ಪಷ್ಟವಾಗಿತ್ತು. ಶುಕ್ರವಾರದ ಆಟದಲ್ಲಿಯೇ ಆರು ವಿಕೆಟ್‌ಗಳನ್ನು ಕಳೆದುಕೊಂಡು ಶಾಸ್ತ್ರಕ್ಕೆ ಎನ್ನುವಂತೆ ಐದನೇ ದಿನ ವೀರೇಂದ್ರ ಸೆಹ್ವಾಗ್ ನಾಯಕತ್ವದ ತಂಡವು 166 ರನ್‌ಗಳಿಂದ ಮುಂದೆ ಸಾಗಿ ಬಾಕಿ ನಾಲ್ಕು ವಿಕೆಟ್ ಒಪ್ಪಿಸುವಷ್ಟರಲ್ಲಿ ಗಳಿಸಿದ್ದು 35 ರನ್ ಮಾತ್ರ. ಈ ಇನಿಂಗ್ಸ್‌ನಲ್ಲಿ ಒಟ್ಟು ಮೊತ್ತವನ್ನು 201 ರನ್ ಆಗಿಸಿಕೊಂಡಿದ್ದೇ ದೊಡ್ಡ ಸಾಹಸ.

ಇಶಾಂತ್ ಶರ್ಮ ದಿನದ ಮೂರನೇ ಓವರ್‌ನಲ್ಲಿಯೇ ನಿರ್ಗಮಿಸಿದರು. ಪುಟಿದೇಳುವ ಚೆಂಡನ್ನು ಬಿರುಸಿನಿಂದ ದಂಡಿಸುವ ಹುಮ್ಮಸ್ಸು ಹೊಂದಿದ್ದ ಇಶಾಂತ್ ಮೇಲೆ ರ‌್ಯಾನ್ ಹ್ಯಾರಿಸ್ ತಕ್ಕ ಎಸೆತವನ್ನೇ ಪ್ರಯೋಗಿಸಿದರು. ಈ ಓವರ್‌ನ ಮೊದಲ ಎಸೆತದಲ್ಲಿ ಕ್ರೀಸ್ ಬಿಟ್ಟು ಆಡಿದ್ದ ಅವರು ನಂತರದ ಎಸೆತದಲ್ಲಿಯೂ ಹಾಗೆ ಮಾಡಿದಾಗ ಯಡವಟ್ಟು. ವಿಕೆಟ್ ಹಿಂದೆ ಕ್ಯಾಚ್ ಕೊಟ್ಟು ಪೆಲಿವಿಯನ್ ಕಡೆಗೆ ಹೆಜ್ಜೆಯಿಟ್ಟರು ಇಶಾಂತ್.

ಭಾರತದ ಭವಿಷ್ಯದ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಆಗುತ್ತಾರೆಂದು ಮಾಜಿ ಕ್ರಿಕೆಟಿಗರಿಂದ ಬೆನ್ನು ತಟ್ಟಿಸಿಕೊಂಡಿದ್ದ ವೃದ್ಧಿಮಾನ್ ಸಹಾ ಚೆಂಡನ್ನು ಮಾತ್ರ ಬಲವಾಗಿ ತಟ್ಟುವ ಉತ್ಸಾಹ ತೋರಲಿಲ್ಲ. ಪಕ್ವ ಬ್ಯಾಟ್ಸ್‌ಮನ್ ಎನ್ನುವಂತೆ ಆತುರದಿಂದ ಮುನ್ನುಗ್ಗಿ ಆಡಲು ಯತ್ನಿಸಿದ ಅವರಿಗೆ ಪೀಟರ್ ಸಿಡ್ಲ್ ಎಸೆತದಲ್ಲಿ ಸಿಡಿಲು ಬಡಿದ ಅನುಭವ. ನೇರವಾಗಿ ತಳ್ಳುವ ಯತ್ನದಲ್ಲಿ ಎಡವಿದಾಗ ಅವರ ಬ್ಯಾಟ್ ಸವರಿದ ಚೆಂಡು ವಿಕೆಟ್ ಕೀಪರ್ ಬ್ರಾಡ್ ಹಡ್ಡಿನ್ ಕೈಗವಸಿನಲ್ಲಿ ಸುರಕ್ಷಿತ.

ಔಟಾಗದೆ ಉಳಿದ ರವಿಚಂದ್ರನ್ ಅಶ್ವಿನ್ ಕಷ್ಟವೆನಿಸುವ ಪರಿಸ್ಥಿತಿಯಲ್ಲಿಯೂ ಕ್ರೀಸ್ ಬಿಡುವುದಿಲ್ಲವೆಂದು ಪಟ್ಟು ಹಿಡಿದರು. ಅವರಿಗೆ ಜಹೀರ್ ಖಾನ್ ಒಂದಿಷ್ಟು ಹೊತ್ತು ಜೊತೆಯಾಗಿ ನಿಂತರು. ಆದರೂ ಹೆಚ್ಚು ಸಮಯ ಸವೆಸುವುದು ಮಾತ್ರ ಸಾಧ್ಯವಾಗಲಿಲ್ಲ. ಮೂರು ಬೌಂಡರಿ ಸಿಡಿಸಿದ್ದ ಜಹೀರ್, ಬೆನ್ ಹಿಲ್ಫೆನ್ಹಾಸ್ ದಾಳಿಯಲ್ಲಿ `ಶಾರ್ಟ್ ಕವರ್~ನಲ್ಲಿದ್ದ ವಾರ್ನರ್‌ಗೆ ಕ್ಯಾಚಿತ್ತರು.
 
ಅಲ್ಲಿಗೆ ಆಸ್ಟ್ರೇಲಿಯಾ ಗೆಲುವಿನಿಂದ ಒಂದೇ ವಿಕೆಟ್ ಅಂತರದಲ್ಲಿ ಬಂದು ನಿಂತಿತು. ಹೆಚ್ಚು ಹೊತ್ತೇನು ಕಾಯಬೇಕಾಗಲಿಲ್ಲ. ಸರದಿಯ ಕೊನೆಯ ಆಟಗಾರ ಉಮೇಶ್ ಯಾದವ್ ಕೂಡ ಆಫ್ ಸ್ಪಿನ್ನರ್ ನಥಾನ್ ಲಿಯಾನ್‌ಗೆ ಸುಲಭದ ತುತ್ತು. ಹಡ್ಡಿನ್ ಕೈಗೆ ಚೆಂಡನ್ನೊಪ್ಪಿಸಿದರು ಯಾದವ್. ಇದು ಲಿಯಾನ್‌ಗೆ ಈ ಇನಿಂಗ್ಸ್‌ನಲ್ಲಿ ಸಿಕ್ಕ ಸಿಕ್ಕ ನಾಲ್ಕನೇ ವಿಕೆಟ್.

ಸರಣಿ ವಿಶೇಷ:
* ಸರಣಿ ಶ್ರೇಷ್ಠ ಗೌರವ ಪಡೆದ ಮೈಕಲ್     ಕ್ಲಾರ್ಕ್ ನಾಲ್ಕು ಪಂದ್ಯಗಳ ಆರು ಇನಿಂಗ್ಸ್‌ಗಳಲ್ಲಿ ಗಳಿಸಿದ್ದು ಒಟ್ಟಾರೆ 626 ರನ್. ಸರಾಸರಿಯು 125.20 ಆಗಿದೆ. ಐನೂರಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದು ಕ್ಲಾರ್ಕ್ ಮತ್ತು ಪಾಂಟಿಂಗ್ (544).

* ಭಾರತದ ಪರ ಉತ್ತಮ ಸರಾಸರಿ ಹೊಂದಿದ್ದು ವಿರಾಟ್ ಕೊಹ್ಲಿ 37.50ರಂತೆ ಅವರು ಎಂಟು ಇನಿಂಗ್ಸ್‌ಗಳಲ್ಲಿ ಗಳಿಸಿದ್ದು ಒಟ್ಟು 300 ರನ್. ಸಚಿನ್ ತೆಂಡೂಲ್ಕರ್ (35.87ರಂತೆ 287 ರನ್) ನಂತರದ ಸ್ಥಾನದಲ್ಲಿದ್ದಾರೆ. ರನ್ ಸರಾಸರಿ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಹಾಗೂ ವಿ.ವಿ.ಎಸ್.ಲಕ್ಷ್ಮಣ್ ಕ್ರಮವಾಗಿ ಐದು ಹಾಗೂ ಎಂಟನೇ ಸ್ಥಾನದಲ್ಲಿದ್ದಾರೆ.

* ಬೌಲಿಂಗ್ ವಿಭಾಗದಲ್ಲಿ ವೇಗಿಗಳಾದ ಜಹೀರ್ ಖಾನ್ (15) ಹಾಗೂ ಉಮೇಶ್ ಯಾದವ್ (14) ಅವರು ಮಾತ್ರ ಯಶಸ್ವಿ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಡಿದ ಮೂರು ಪಂದ್ಯಗಳಲ್ಲಿ ಒಟ್ಟು ಒಂಬತ್ತು ವಿಕೆಟ್ ಪಡೆದರು.

* ಆಸ್ಟ್ರೇಲಿಯಾದ ಬೆನ್ ಹಿಲ್ಫೆನ್ಹಾಸ್ (27) ಹಾಗೂ ಪೀಟರ್ ಸಿಡ್ಲ್ (23) ಹೆಚ್ಚು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಮಾತ್ರ ಆಡಿದ್ದ ಜೇಮ್ಸ ಪ್ಯಾಟಿನ್ಸನ್ 23.36ರ ಸರಾಸರಿಯಲ್ಲಿ 11 ವಿಕೆಟ್ ಕಬಳಿಸಿದ್ದು ವಿಶೇಷ. ಆನಂತರ ಗಾಯದ ಕಾರಣ ಅವರು ಆಡಿರಲಿಲ್ಲ.

ಸ್ಕೋರ್ ವಿವರ:
ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್ 157 ಓವರುಗಳಲ್ಲಿ
7 ವಿಕೆಟ್‌ಗಳ ನಷ್ಟಕ್ಕೆ 604 ಡಿಕ್ಲೇರ್ಡ್‌
ಭಾರತ: ಮೊದಲ ಇನಿಂಗ್ಸ್ 95.1 ಓವರುಗಳಲ್ಲಿ 272
ಆಸ್ಟ್ರೇಲಿಯಾ: ಎರಡನೇ ಇನಿಂಗ್ಸ್ 46 ಓವರುಗಳಲ್ಲಿ
5 ವಿಕೆಟ್‌ಗಳ ನಷ್ಟಕ್ಕೆ 167 ಡಿಕ್ಲೇರ್ಡ್‌
ಭಾರತ: ಎರಡನೇ ಇನಿಂಗ್ಸ್ 69.4 ಓವರುಗಳಲ್ಲಿ 201
(ಶುಕ್ರವಾರದ ಆಟದಲ್ಲಿ: 56 ಓವರುಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 166)
ಇಶಾಂತ್ ಶರ್ಮ ಸಿ ಬ್ರಾಡ್ ಹಡ್ಡಿನ್ ಬಿ ರ‌್ಯಾನ್ ಹ್ಯಾರಿಸ್  02
ವೃದ್ಧಿಮಾನ್ ಸಹಾ  ಸಿ ಬ್ರಾಡ್ ಹಡ್ಡಿನ್ ಬಿ ಪೀಟರ್ ಸಿಡ್ಲ್  03
ರವಿಚಂದ್ರನ್ ಅಶ್ವಿನ್ ಔಟಾಗದೆ  15
ಜಹೀರ್ ಖಾನ್ ಸಿ ಡೇವಿಡ್ ವಾರ್ನರ್ ಬಿ ಬೆನ್ ಹಿಲ್ಫೆನ್ಹಾಸ್  15
ಉಮೇಶ್ ಯಾದವ್ ಸಿ ಬ್ರಾಡ್ ಹಡ್ಡಿನ್ ಬಿ ನಥಾನ್ ಲಿಯಾನ್  01
ಇತರೆ: (ಲೆಗ್‌ಬೈ-3, ವೈಡ್-2)  05
ವಿಕೆಟ್ ಪತನ: 1-14 (ಗೌತಮ್ ಗಂಭೀರ್; 4.3), 2-80 (ವೀರೇಂದ್ರ ಸೆಹ್ವಾಗ್; 19.1), 3-100 (ರಾಹುಲ್ ದ್ರಾವಿಡ್; 28.1), 4-110 (ಸಚಿನ್ ತೆಂಡೂಲ್ಕರ್; 31.4), 5-162 (ವಿ.ವಿ.ಎಸ್.ಲಕ್ಷ್ಮಣ್; 53.2), 6-166 (ವಿರಾಟ್ ಕೊಹ್ಲಿ; 54.6), 7-166 (ಇಶಾಂತ್ ಶರ್ಮ; 58.2), 8-170 (ವೃದ್ಧಿಮಾನ್ ಸಹಾ; 59.5), 9-193 (ಜಹೀರ್ ಖಾನ್; 66.2), 10-201 (ಉಮೇಶ್ ಯಾದವ್; 69.4).
ಬೌಲಿಂಗ್: ರ‌್ಯಾನ್ ಹ್ಯಾರಿಸ್ 19-5-41-3 (ವೈಡ್-1), ಬೆನ್ ಹಿಲ್ಫೆನ್ಹಾಸ್ 11-2-35-1 (ವೈಡ್-1), ಪೀಟರ್ ಸಿಡ್ಲ್ 14-5-47-1, ನಥಾನ್ ಲಿಯಾನ್ 21.4-4-63-4, ಮೈಕಲ್ ಹಸ್ಸಿ 2-0-3-0, ಮೈಕಲ್     ಕ್ಲಾರ್ಕ್ 2-0-9-0
ಫಲಿತಾಂಶ: ಆಸ್ಟ್ರೇಲಿಯಾಕ್ಕೆ 298 ರನ್‌ಗಳ ಅಂತರದ ಜಯ; 4-0ಯಲ್ಲಿ ಸರಣಿ ವಿಜಯ.
ಪಂದ್ಯ ಪುರುಷೋತ್ತಮ: ಪೀಟರ್ ಸಿಡ್ಲ್; ಸರಣಿ ಶ್ರೇಷ್ಠ: ಮೈಕಲ್ ಕ್ಲಾರ್ಕ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT