ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಉತ್ಸಾಹಕ್ಕೆ ತಾರೆಗಳ ಹೊಳಪು

Last Updated 2 ಫೆಬ್ರುವರಿ 2011, 18:40 IST
ಅಕ್ಷರ ಗಾತ್ರ

ಬೆಂಗಳೂರು: ತಣ್ಣನೆಯ ಗಾಳಿಗೆ ಅಲುಗಿದ ಅರಳಿ ಮರದ ಎಲೆಗಳೂ ‘ಭಾರತ ತಂಡವೇ ಚಾಂಪಿಯನ್ ಆಗಲಿ’ ಎಂದು ಹಾರೈಸಿದಂಥ ಕ್ಷಣ. ಹಾಗಿತ್ತು ಬುಲ್ ಟೆಂಪಲ್ ಪಕ್ಕದ ದೊಡ್ಡ ಗಣಪತಿ ದೇವಸ್ಥಾನದಲ್ಲಿನ ವಾತಾವರಣ. ಎಲ್ಲರ ಎದೆಯಲ್ಲಿ ಕ್ರಿಕೆಟ್ ತನನ...!

ಚೆಂದದ ನಟಿ ಪೂಜಾ ಗಾಂಧಿ ಅವರು ಮಂದಹಾಸದ ಮೊಗದೊಂದಿಗೆ ಬೃಹತ್ ಬ್ಯಾಟ್ ಮೇಲೆ ಹಸ್ತಾಕ್ಷರ ಮಾಡಿ ‘ಮಹೇಂದ್ರ ಸಿಂಗ್ ದೋನಿ ಇಷ್ಟ’ ಎಂದು ಹೇಳಿ ಫೋನು ರಿಂಗಣಿಸಿದ ಹಾಗೆ ನಕ್ಕಾಗ ಅಭಿಮಾನಿಗಳ ಮನದಲ್ಲಿಯೂ ಹರ್ಷದ ಅಲೆ.

ನಾಮುಂದು-ತಾಮುಂದು ಎಂದುಕೊಂಡು ‘ಟೀಮ್ ಇಂಟಿಯಾ’ಕ್ಕೆ ಶುಭಕೋರುವ ಬೃಹತ್ ಬ್ಯಾಟ್ ಹೊತ್ತು ನಿಂತಿದ್ದ ರಥವನ್ನು ನೂರಾರು ಜನರು ಏರಿದರು. ಗೆಲ್ಲಿರಿ, ಚಾಂಪಿಯನ್ನರಾಗಿ, ಯಶಸ್ಸು ಸಿಗಲಿ... ಹೀಗೆ ಬಗೆಬಗೆಯ ಸಂದೇಶಗಳ ಜೊತೆಗೆ ತಮ್ಮ ಹಸ್ತಾಕ್ಷರವನ್ನೂ ಬರೆದಿಟ್ಟು ನಲಿದರು. ಇಂಥದೊಂದು ಸಂಭ್ರಮದ ಹೊಳೆಯು ‘ಮಹಿ’ ಪಡೆಯ ಕಡೆಗೆ ಹರಿಯುವಂತೆ ಮಾಡಿದ್ದು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗ.

‘ಬನ್ನಿ ನಮ್ಮೊಂದಿಗೆ ಭಾರತ ಕ್ರಿಕೆಟ್ ತಂಡದ ವಿಜಯಕ್ಕೆ ಹಾರೈಸಿ’ ಎಂದು ಭಾರತ ತಂಡದ ಅಭಿಮಾನಿ ಬಳಗವನ್ನು ಕೈಬೀಸಿ ಕರೆದಾಗ ದೊಡ್ಡ ಪ್ರವಾಹವೇ ಹರಿದು ಬಂತು.
ಸಿನಿಮಾ, ಟೆಲಿವಿಷನ್, ಉದ್ಯಮ, ರಾಜಕೀಯ, ಐಟಿ ಕ್ಷೇತ್ರದಲ್ಲಿ ಖ್ಯಾತಿ ಪಡೆದವರು ತೋರಿದ ‘ಕ್ರಿಕೆಟ್ ಉತ್ಸಾಹ’ ನೋಡುವುದೇ ಸೊಬಗು ಎನಿಸಿತು.

ಬುಧವಾರ ಬೆಳಿಗ್ಗೆ ಹಸ್ತಾಕ್ಷರ ಸಂಗ್ರಹದ ರಥವು ಯಾತ್ರೆ ಆರಂಭಿಸಿ ನಗರದ ಹಲವೆಡೆ ಸಾಗಿತು. ಮೊದಲ ದಿನ ಬುಲ್ ಟೆಂಪಲ್, ಗಾಂಧಿ ಬಜಾರ್, ನೆಟ್ಟಕಲ್ಲಪ್ಪ ವೃತ್ತ, ಎನ್.ಆರ್.ಕಾಲೋನಿ, ಆರ್.ಟಿ.ನಗರ, ಬನಶಂಕರಿ 2ನೇ ಹಂತ, ಪದ್ಮನಾಭನಗರ, ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಔಟ್, ಉತ್ತರಹಳ್ಳಿ, ಕತ್ರಿಗುಪ್ಪೆ, ಹೊಸಕೇರೆಹಳ್ಳಿ ಕ್ರಾಸ್, ಬ್ಯಾಂಕ್ ಕಾಲೋನಿ, ಶ್ರೀನಿವಾಸನಗರ, ಶ್ರೀನಗರ ಪ್ರದೇಶದಲ್ಲಿ ಸಾವಿರಾರು ಕ್ರಿಕೆಟ್ ಪ್ರೇಮಿಗಳಿಂದ ಹಸ್ತಾಕ್ಷರ ಸಂಗ್ರಹಿಸಲಾಯಿತು.

ಕ್ರಿಕೆಟಿಗ ಸುನಿಲ್ ಜೋಶಿ, ಸಿನಿಮಾ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟರಾದ ಉಪೇಂದ್ರ, ರಮೇಶ್, ಸಾಯಿ ಗೋಲ್ಡ್ ಪ್ಯಾಲೇಸ್‌ನ ಮಾಲೀಕರಾದ ಸರವಣ ಸೇರಿದಂತೆ ಅನೇಕ ಗಣ್ಯರು ಬೃಹತ್ ಬ್ಯಾಟ್ ಮೇಲೆ ಶುಭ ಹಾರೈಕೆಯ ಸಂದೇಶ ಬರೆಯುವ ಮೂಲಕ ತಮ್ಮ ಕ್ರಿಕೆಟ್ ಪ್ರೀತಿಯನ್ನು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT