ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಏಕದಿನ ಸರಣಿಯಲ್ಲಿ ಭಾರತಕ್ಕೆ 2-0 ಮುನ್ನಡೆ

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

ಪೋರ್ಟ್ ಆಫ್ ಸ್ಪೇನ್, ಟ್ರಿನಿಡ್ಯಾಡ್ (ಪಿಟಿಐ): ಮೊದಲು ಶಿಸ್ತುಬದ್ಧ ಬೌಲಿಂಗ್, ಬಳಿಕ ವಿರಾಟ್ ಕೊಹ್ಲಿ ಅವರ ಪ್ರಬುದ್ಧ ಬ್ಯಾಟಿಂಗ್. ವೆಸ್ಟ್‌ಇಂಡೀಸ್ ತಂಡವನ್ನು ಅವರದ್ದೇ ನೆಲದಲ್ಲಿ ಮತ್ತೊಮ್ಮೆ ಸದೆಬಡಿಯಲು ಭಾರತಕ್ಕೆ ಇವಿಷ್ಟು ಸಾಕಾದವು.

ಹಾಗಾಗಿ ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ವಿಂಡೀಸ್ ವಿರುದ್ಧ ಭಾರತಕ್ಕೆ ಏಳು ವಿಕೆಟ್ ಗೆಲುವು ದೊರೆಯಿತು. ಮಳೆ ಅಡ್ಡಿಯಾದ ಕಾರಣ ಡಕ್ವರ್ಥ್ ಲೂಯಿಸ್ ಪದ್ಧತಿಗೆ ಮೊರೆ ಹೋಗಲಾಯಿತು.

ಇದರಿಂದಾಗಿ ಭಾರತ ತಂಡಕ್ಕೆ 37 ಓವರ್‌ಗಳಲ್ಲಿ 183 ರನ್ ಗಳಿಸುವ ಪರಿಷ್ಕೃತ ಗುರಿ ನೀಡಲಾಯಿತು. ಈ ಗುರಿಯನ್ನು ಸುರೇಶ್ ರೈನಾ ಸಾರಥ್ಯದ ತಂಡ 20 ಎಸೆತಗಳು ಬಾಕಿ ಇರುವಂತೆಯೇ ಕೇವಲ ಮೂರು ವಿಕೆಟ್ ಕಳೆದುಕೊಂಡು ತಲುಪಿತು. ಆ ಕಾರಣ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಪ್ರವಾಸಿಗರಿಗೆ 2-0 ಮುನ್ನಡೆ ಲಭಿಸಿದೆ.

ಮೊದಲು ಬ್ಯಾಟ್ ಮಾಡಿದ್ದ ಕೆರಿಬಿಯನ್ ನಾಡಿನ ತಂಡದವರು 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240 ರನ್ ಪೇರಿಸಿದ್ದರು. ಇದಕ್ಕೆ ಕಾರಣ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ (31ಕ್ಕೆ4) ಹಾಗೂ ವೇಗಿ ಮುನಾಫ್ ಪಟೇಲ್ (35ಕ್ಕೆ3) ಅವರ ಪ್ರಭಾವಿ ಬೌಲಿಂಗ್ ದಾಳಿ.

ಅವರ ಈ ಪ್ರಯತ್ನಕ್ಕೆ ತಕ್ಕ ಸಾಥ್ ನೀಡಿದ್ದು ಪಾರ್ಥಿವ್ ಪಟೇಲ್ (56) ಹಾಗೂ ವಿರಾಟ್ ಕೊಹ್ಲಿ (81). ಇವರಿಬ್ಬರ ಜೊತೆಯಾಟ ಭಾರತದ ಗೆಲುವಿನ ದಾರಿಗೆ ಭದ್ರ ಅಡಿಪಾಯ ಹಾಕಿಕೊಟ್ಟಿತು.

ಅಷ್ಟೇನು ಸವಾಲಿನದ್ದಲ್ಲದ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭವೇನು ದೊರೆಯಲಿಲ್ಲ. ಇದಕ್ಕೆ ಕಾರಣ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಕೇವಲ ಮೂರು ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಆ ವಿಕೆಟ್ ಪಡೆದ ರವಿ ರಾಮ್‌ಪಾಲ್ ಅಪಾಯಕಾರಿಯಾಗುವ ಸೂಚನೆ ನೀಡಿದರು.

ಆದರೆ ಆ ಅಪಾಯದ ಸೂಚನೆಯನ್ನು ದೂರ ಮಾಡಿದ್ದು ವಿಕೆಟ್ ಕೀಪರ್ ಪಾರ್ಥಿವ್ ಹಾಗೂ ಕೊಹ್ಲಿ.ಇವರಿಬ್ಬರು ಎರಡನೇ ವಿಕೆಟ್‌ಗೆ 120 ರನ್‌ಗಳನ್ನು ಪೋಣಿಸಿದರು. ಇದಕ್ಕೆ ಅವರು ತೆಗೆದುಕೊಂಡ ಎಸೆತ 144. ಇದು ಗೆಲುವಿನ ಮಹಲ್ ಕಟ್ಟಲು ನೆರವಾಯಿತು.

22 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದ್ದಾಗ ಮಳೆ ಸುರಿಯಿತು. ಇದರಿಂದ 85 ನಿಮಿಷಗಳ ಆಟ ವ್ಯರ್ಥವಾಯಿತು. ಹಾಗಾಗಿ ಭಾರತಕ್ಕೆ ಪರಿಷ್ಕೃತ ಗುರಿ ನೀಡಲಾಯಿತು. ಆಗ ಭಾರತ 90 ಎಸೆತಗಳಲ್ಲಿ 83 ರನ್ ಗಳಿಸಬೇಕಾಗಿತ್ತು.

ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಎರಡು ಸಾವಿರ ರನ್‌ಗಳ ಗೆರೆ ದಾಟಿದರು. ಇದಕ್ಕೆ ತೆಗೆದುಕೊಂಡ ಪಂದ್ಯಗಳು ಕೇವಲ 53. ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರ ಎನಿಸಿದರು. ಈ ಮೊದಲು ನವಜೋತ್ ಸಿಂಗ್ ಸಿಧು ಹಾಗೂ ಸೌರವ್ ಗಂಗೂಲಿ ಕೇವಲ 52 ಪಂದ್ಯಗಳಿಂದ ಈ ಸಾಧನೆ ಮಾಡಿದ್ದರು.
103 ಎಸೆತಗಳನ್ನು ಎದುರಿಸಿದ ವಿರಾಟ್ ಒಂದು ಸಿಕ್ಸರ್ ಹಾಗೂ ಆರು ಬೌಂಡರಿ ಗಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಪಾರ್ಥಿವ್ ಎರಡು ಸಿಕ್ಸರ್ ಹಾಗೂ ಎರಡು ಬೌಂಡರಿ ಎತ್ತಿದರು. ನಾಯಕ ರೈನಾ ಕೇವಲ 19 ಎಸೆತಗಳಲ್ಲಿ 26 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಡೆರೆನ್ ಸ್ಯಾಮಿ ಹೊರತುಪಡಿಸಿ ವಿಂಡೀಸ್‌ನ ಉಳಿದೆಲ್ಲಾ ಬೌಲರ್‌ಗಳು ದುಬಾರಿಯಾದರು.

ಸ್ಕೋರು ವಿವರ
ವೆಸ್ಟ್‌ಇಂಡೀಸ್ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240
ಭಾರತ 33.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 183

ಪಾರ್ಥಿವ್ ಪಟೇಲ್ ಸಿ ಕಾರ್ಲ್‌ಟನ್ ಬಾಗ್ ಬಿ ಆ್ಯಂಟನಿ ಮಾರ್ಟಿನ್  56
ಶಿಖರ್ ಧವನ್ ಸಿ ಕಿರನ್ ಪೊಲಾರ್ಡ್ ಬಿ ರವಿ ರಾಮ್‌ಪಾಲ್  03
ವಿರಾಟ್ ಕೊಹ್ಲಿ ಸಿ ಕಿರನ್ ಪೊಲಾರ್ಡ್ ಬಿ ದೇವೇಂದ್ರ ಬಿಶೂ  81
ಸುರೇಶ್ ರೈನಾ ಔಟಾಗದೆ  26
ರೋಹಿತ್ ಶರ್ಮ ಔಟಾಗದೆ  07
ಇತರೆ (ವೈಡ್-8, ನೋಬಾಲ್-2)  10
ವಿಕೆಟ್ ಪತನ: 1-8 (ಧವನ್; 2.1); 2-128 (ಪಾರ್ಥಿವ್; 26.1); 3-173 (ವಿರಾಟ್; 30.6).
ಬೌಲಿಂಗ್: ರವಿ ರಾಮ್‌ಪಾಲ್ 6.4-0-32-1 (ವೈಡ್-2), ಡೆರೆನ್ ಸಮಿ 10-1-38-0, ಡ್ವೇನ್ ಬ್ರಾವೊ 3-0-20-0 (ವೈಡ್-1), ದೇವೇಂದ್ರ ಬಿಶೂ 7-0-37-1 (ನೋಬಾಲ್-2), ಆ್ಯಂಟನಿ ಮಾರ್ಟಿನ್ 4-0-29-1, ಕಿರನ್ ಪೊಲಾರ್ಡ್ 3-0-27-0 (ವೈಡ್-1).
ಫಲಿತಾಂಶ: ಡಕ್ವರ್ಥ್ ಲೂಯಿಸ್ ಪದ್ಧತಿ ಅನ್ವಯ ಭಾರತಕ್ಕೆ 7 ವಿಕೆಟ್ ಜಯ ಹಾಗೂ ಸರಣಿಯಲ್ಲಿ 2-0 ಮುನ್ನಡೆ. ಪಂದ್ಯ ಶ್ರೇಷ್ಠ: ವಿರಾಟ್ ಕೊಹ್ಲಿ. ಮೂರನೇ ಏಕದಿನ ಪಂದ್ಯ: ಜೂನ್: 11 (ಆ್ಯಂಟಿಗುವಾ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT