ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಕರ್ನಾಟಕದ ವೇಗಿ ಮಿಥುನ್‌ಗೆ ಸ್ಥಾನ

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ ಹಾಗೂ ಉತ್ತರ ಪ್ರದೇಶದ ವೇಗಿ ಪ್ರವೀಣ್ ಕುಮಾರ್ ಅವರು ವೆಸ್ಟ್‌ಇಂಡೀಸ್ ವಿರುದ್ಧದ ಮುಂಬರುವ ಟೆಸ್ಟ್ ಕ್ರಿಕೆಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಜಹೀರ್ ಖಾನ್ ಹಾಗೂ ಎಸ್.ಶ್ರೀಶಾಂತ್ ಗಾಯದ ಕಾರಣ ತಂಡದಿಂದ ಹಿಂದೆ ಸರಿದಿದ್ದರಿಂದ ಮಿಥುನ್ ಹಾಗೂ ಪ್ರವೀಣ್‌ಗೆ ಸ್ಥಾನ ಲಭಿಸಿದೆ.

ಈ ಮೊದಲು ಪ್ರಕಟಿಸಿದ್ದ 16 ಮಂದಿ ಆಟಗಾರರ ತಂಡದಲ್ಲಿ ಜಹೀರ್ ಹಾಗೂ ಶ್ರೀಶಾಂತ್ ಸ್ಥಾನ ಪಡೆದಿದ್ದರು. ಆದರೆ ಜಹೀರ್ ಬಲ ಮೊಣಕಾಲು ನೋವಿಗೆ ಒಳಗಾಗಿದ್ದಾರೆ. ಶ್ರೀಶಾಂತ್ ಬಲ ಮೊಣಕೈ ನೋವಿನಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರ ಬದಲಿಗೆ ಮಿಥುನ್ ಹಾಗೂ ಪ್ರವೀಣ್‌ಗೆ ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ ಸ್ಥಾನ ನೀಡಿದೆ.

ಆದರೆ ಇವರಿಬ್ಬರ ಅಲಭ್ಯತೆಯಿಂದ ಭಾರತ ಟೆಸ್ಟ್ ತಂಡ ಮತ್ತಷ್ಟು ದುರ್ಬಲವಾಗಿದೆ. ಕಾರಣ ಈ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಹಾಗೂ ಯುವರಾಜ್ ಸಿಂಗ್ ಕೂಡ ಆಡುತ್ತಿಲ್ಲ.

ಟೆಸ್ಟ್ ಸರಣಿಯ ಮೊದಲ ಪಂದ್ಯ ಜಮೈಕಾದ ಕಿಂಗ್‌ಸ್ಟನ್‌ನಲ್ಲಿ ಜೂನ್ 20ರಂದು ಆರಂಭವಾಗಲಿದೆ. ಎರಡನೇ ಟೆಸ್ಟ್ ಬ್ರಿಜ್‌ಟೌನ್‌ನಲ್ಲಿ ಜೂ.28ರಿಂದ ಜುಲೈ2ರವರೆಗೆ ನಡೆಯಲಿದೆ. ಮೂರನೇ ಹಾಗೂ ಅಂತಿಮ ಟೆಸ್ಟ್ ಡೊಮಿನಿಕಾದಲ್ಲಿ ಜು.6ರಿಂದ 10ರವರೆಗೆ ಜರುಗಲಿದೆ.

ವಿಂಡೀಸ್ ಪ್ರವಾಸದ ಬಳಿಕ ಭಾರತ ತಂಡ ಇಂಗ್ಲೆಂಡ್‌ಗೆ ತೆರಳಲಿದೆ. ಈ ಸರಣಿಗೆ ಜಹೀರ್ ಹಾಗೂ ಶ್ರೀಶಾಂತ್ ಲಭ್ಯರಾಗುವ ನಿರೀಕ್ಷೆ ಇದೆ. ಈ ಇಬ್ಬರೂ ಆಟಗಾರರು ಐಪಿಎಲ್‌ನಲ್ಲಿ ಬಹುತೇಕ ಪಂದ್ಯಗಳನ್ನು ಆಡಿದ್ದರು. ಆದರೆ ಈಗ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ.

ಮಿಥುನ್ ಈಗಾಗಲೇ ಮೂರು  ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಆರು ವಿಕೆಟ್ ಪಡೆದಿದ್ದಾರೆ. ಪ್ರವೀಣ್ ಇನ್ನೂ ಟೆಸ್ಟ್ ಆಡಿಲ್ಲ.

ಟೆಸ್ಟ್ ಸರಣಿಗೆ ಪರಿಷ್ಕೃತ ಭಾರತ ತಂಡ: ಮಹೇಂದ್ರ ಸಿಂಗ್ ದೋನಿ (ನಾಯಕ), ವಿ.ವಿ.ಎಸ್.ಲಕ್ಷ್ಮಣ್ (ಉಪ ನಾಯಕ), ಮುರಳಿ ವಿಜಯ್, ಅಭಿನವ್ ಮುಕುಂದ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಎಸ್.ಬದರೀನಾಥ್, ಹರಭಜನ್ ಸಿಂಗ್, ಇಶಾಂತ್ ಶರ್ಮ, ಪ್ರವೀಣ್ ಕುಮಾರ್, ಅಮಿತ್ ಮಿಶ್ರಾ, ಪ್ರಗ್ಯಾನ್ ಓಜಾ, ಅಭಿಮನ್ಯು ಮಿಥುನ್, ಮುನಾಫ್ ಪಟೇಲ್, ಸುರೇಶ್ ರೈನಾ ಹಾಗೂ ಪಾರ್ಥೀವ್ ಪಟೇಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT