ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಕ್ಲಾರ್ಕ್ ತ್ರಿಶತಕ; ಭಾರತಕ್ಕೆ ಆಪತ್ತು

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ಸಿಡ್ನಿ (ರಾಯಿಟರ್ಸ್/ಪಿಟಿಐ): ನಾಯಕ ಮೈಕರ್ಲ್ ಕ್ಲಾರ್ಕ್ ಅಜೇಯ 329 ರನ್ ಗಳಿಸಿದ್ದಕ್ಕಿಂತ ಅವರು ಡಿಕ್ಲೇರ್ ಮಾಡಿಕೊಂಡ ನಿರ್ಧಾರಕ್ಕೆ ಈಗ ಅದ್ಭುತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿಜಕ್ಕೂ ಇದೊಂದು ಮನಮೆಚ್ಚುವಂಥ ತೀರ್ಮಾನ.

ಪರಿಣಾಮ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈಗ ಆಸ್ಟ್ರೇಲಿಯಾದ ಗೆಲುವಿನ ಸಾಧ್ಯತೆಯೇ ಹೆಚ್ಚಿದೆ. ಏನಾದರೂ ಪವಾಡ ನಡೆದರೆ ಮಾತ್ರ ಪಂದ್ಯ ಡ್ರಾ ಆಗಬಹುದು ಅಥವಾ ಭಾರತವೇ ಗೆಲ್ಲಬಹುದು. ಆದರೆ ಕ್ಲಾರ್ಕ್ ಅವರ ಈ ಐತಿಹಾಸಿಕ ಸಾಧನೆ ಹಾಗೂ ತಂಡದ ಹಿತದ ದೃಷ್ಟಿಯಲ್ಲಿ ಅವರು ತೆಗೆದುಕೊಂಡ ನಿರ್ಧಾರ ಮಾತ್ರ ಸ್ಮರಣೀಯ.

ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡವೀಗ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ ಮೂರನೇ ದಿನದಾಟದ ಅಂತ್ಯಕ್ಕೆ 41 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 114 ರನ್ ಗಳಿಸಿದೆ. ಇನ್ನೂ ಎರಡು ದಿನಗಳ ಆಟ ಬಾಕಿ ಉಳಿದಿದ್ದು ಸವಾಲಿನ ಹಾದಿ ಎದುರಿದೆ. ಆತಿಥೇಯರ ಮೊದಲ ಇನಿಂಗ್ಸ್ ಮೊತ್ತ ದಾಟಲು ಇನ್ನೂ 355 ರನ್ ಗಳಿಸಬೇಕಾಗಿದೆ.

ಆದರೆ ಆಸ್ಟ್ರೇಲಿಯಾದ ಆಟದ ಪರಿ ಮಾತ್ರ ಅದ್ಭುತ. ಗುರುವಾರ ಕೂಡ ಭಾರತದ ಬೌಲರ್‌ಗಳನ್ನು ಚೆಂಡಾಡಿದ ಈ ತಂಡದವರು ತಮ್ಮ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 659 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡರು. ಈ ಮೂಲಕ 468 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದರು.

ನಾಯಕ ದೋನಿ ತಮ್ಮ ಬೌಲರ್‌ಗಳನ್ನು ಪದೇಪದೇ ಬದಲಾಯಿಸುತ್ತಾ ಅದೆಷ್ಟು ಪ್ರಯತ್ನಿಸಿದರೂ ಕ್ಲಾರ್ಕ್ ವಿಕೆಟ್ ಪಡೆಯಲು ಸಾಧ್ಯವೇ ಆಗಲಿಲ್ಲ. ಮೈಕಲ್ ಹಸ್ಸಿ ಜೊತೆಗೂಡಿದ ಅವರು ಸರಾಗವಾಗಿ ರನ್ ಕಲೆಹಾಕುತ್ತಾ ಹೋದರು. ಮುರಿಯದ ಐದನೇ ವಿಕೆಟ್‌ಗೆ 334 ರನ್ ಸೇರಿಸಿದರು.

ಇದರ ಪೂರ್ಣ ಗೌರವ ಸಲ್ಲಬೇಕಾಗಿದ್ದು ಕ್ಲಾರ್ಕ್ (ಅಜೇಯ 329; 609 ನಿಮಿಷ, 468 ಎಸೆತ, 39 ಬೌಂ, 1 ಸಿ.) ಅವರಿಗೆ. ಇದು ಟೆಸ್ಟ್‌ನಲ್ಲಿ ದಾಖಲಾದ 25ನೇ ತ್ರಿಶತಕ. 100ನೇ ಟೆಸ್ಟ್ ಪಂದ್ಯದ ಸಂಭ್ರಮದಲ್ಲಿರುವ ಸಿಡ್ನಿ ಕ್ರೀಡಾಂಗಣದಲ್ಲಿ ಈ ಸಾಧನೆ ಮೂಡಿಬಂದಿದ್ದು ವಿಶೇಷ. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ತ್ರಿಶತಕ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ಕೂಡ. ಈ ಮೊದಲು 1934ರಲ್ಲಿ ಡಾನ್ ಬ್ರಾಡ್ಮನ್ ಮಾತ್ರ ಈ ಸಾಧನೆ ಮಾಡಿದ್ದರು.

ಅದೆಲ್ಲಕ್ಕಿಂತ ಮಿಗಿಲಾಗಿ ಕ್ಲಾರ್ಕ್‌ಗೆ ವಿಂಡೀಸ್‌ನ ಬ್ರಯಾನ್ ಲಾರಾ (ಅಜೇಯ 400) ಅವರ ವಿಶ್ವದಾಖಲೆಯನ್ನು ಅಳಿಸಿ ಹಾಕುವ ಅವಕಾಶವಿತ್ತು. ಅಷ್ಟೇ ಏಕೆ? ತಮ್ಮ ದೇಶದ ದಾಖಲೆ ಎನಿಸಿರುವ ಮ್ಯಾಥ್ಯು ಹೇಡನ್ (380) ಅವರನ್ನೂ ಹಿಂದಿಕ್ಕಬಹುದಿತ್ತು. ಆದರೆ ತಂಡದ ಹಿತಕ್ಕೆ ಮಹತ್ವ ನೀಡಿದ ಅವರು ನಿಸ್ವಾರ್ಥ ಮನೋಭಾವ ತೋರಿದರು.

ಇಶಾಂತ್ ಶರ್ಮ ಅವರ ಎಸೆತವನ್ನು ಬೌಂಡರಿಗಟ್ಟಿದ ಅವರು ತ್ರಿಶತಕದ ಸಂಭ್ರಮ ಸವಿದರು. ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರೆಲ್ಲಾ ಎದ್ದು ನಿಂತು ಕ್ಲಾರ್ಕ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಅವರಿಗೆ ಅತ್ಯುತ್ತಮ ಜೊತೆಯಾಟ ನೀಡಿದ್ದು ಹಸ್ಸಿ (ಅಜೇಯ 150; 306 ನಿ, 253 ಎಸೆತ, 16  ಬೌ, 1 ಸಿ.). ಇದು ಅವರ ಪಾಲಿನ 16ನೇ ಶತಕ ಕೂಡ.

ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡದ್ದು ಮಾತ್ರ ಅದೇ ಕಥೆ, ಅದೇ ವ್ಯಥೆ.  ಸೆಹ್ವಾಗ್ ಅವರ ಬೇಜವಾಬ್ದಾರಿ ಹೊಡೆತ ಆರಂಭಿಕ ಆಘಾತಕ್ಕೆ ಕಾರಣವಾಯಿತು. ದ್ರಾವಿಡ್ ಸತತ ನಾಲ್ಕನೇ ಬಾರಿ ಈ ಸರಣಿಯಲ್ಲಿ ಬೌಲ್ಡ್ ಆದರು. ಕಳೆದ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಆರು ಬಾರಿ ಈ ರೀತಿ ಔಟ್ ಆಗಿದ್ದಾರೆ.

ಹಿಲ್ಫೆನ್ಹಾಸ್ ಅವರ ಎಸೆತವನ್ನು ಆಫ್ ಸೈಡ್‌ನತ್ತ ಡ್ರೈವ್ ಮಾಡಲು ಯತ್ನಿಸಿದಾಗ ಬ್ಯಾಟ್ ಹಾಗೂ ಪ್ಯಾಡ್ ನಡುವೆ ನುಸುಳಿದ ಚೆಂಡು ವಿಕೆಟ್‌ಗೆ ಅಪ್ಪಳಿಸಿತು. ಈ ಲೋಪ ತಿದ್ದಿಕೊಳ್ಳಲು ಅಭ್ಯಾಸದ ವೇಳೆ ದ್ರಾವಿಡ್ ತುಂಬಾ ಪ್ರಯತ್ನಿಸಿದ್ದರು. ಆದರೆ ಮತ್ತೆ ಅದೇ ರೀತಿಯ ತಪ್ಪು ಎಸಗಿದರು.

ಅದೃಷ್ಟವೆಂದರೆ ಗಂಭೀರ್ ಕೊನೆಗೂ ಫಾರ್ಮ್ ಕಂಡರು. ಆದರೆ ಸಚಿನ್ (ಬ್ಯಾಟಿಂಗ್ 8; 42 ಎಸೆತ) ಹಾಗೂ ಗಂಭೀರ್ (ಬ್ಯಾಟಿಂಗ್ 68; 124 ಎಸೆತ) ಸತತ ಎಂಟು ಓವರ್ ಮೇಡನ್‌ಗೆ ಕಾರಣರಾದರು. ಗಂಭೀರ್ ಒಂದು ಜೀವದಾನ ಕೂಡ ಪಡೆದರು.

ಸ್ಲೋರ್ ವಿವರ:  
ಭಾರತ ಮೊದಲ ಇನಿಂಗ್ಸ್ 59.3 ಓವರ್‌ಗಳಲ್ಲಿ 191
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 163 ಓವರ್‌ಗಳಲ್ಲಿ
4 ವಿಕೆಟ್ ನಷ್ಟಕ್ಕೆ 659 ಡಿಕ್ಲೇರ್ಡ್‌
(ಬುಧವಾರದ ಅಂತ್ಯಕ್ಕೆ 116 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 482)
ಮೈಕಲ್ ಕ್ಲಾರ್ಕ್ ಔಟಾಗದೆ  329
ಮೈಕ್ ಹಸ್ಸಿ ಔಟಾಗದೆ  150
ಇತರೆ: (ಬೈ-2, ಲೆಗ್‌ಬೈ-13, ವೈಡ್-4, ನೋಬಾಲ್-3)  22
ವಿಕೆಟ್ ಪತನ: 1-8 (ವಾರ್ನರ್; 0.6); 2-8 (ಮಾರ್ಷ್; 2.1); 3-37 (ಕೋವನ್; 8.5); 4-325 (ಪಾಂಟಿಂಗ್; 83.4)
ಬೌಲಿಂಗ್: ಜಹೀರ್ ಖಾನ್ 31-4-122-3, ಉಮೇಶ್ ಯಾದವ್ 24-2-123-0 (ವೈಡ್-2), ಇಶಾಂತ್ ಶರ್ಮ 33-2-144-1 (ನೋಬಾಲ್-1, ವೈಡ್-1), ಆರ್.ಅಶ್ವಿನ್ 44-5-157-0 (ವೈಡ್-1), ವೀರೇಂದ್ರ ಸೆಹ್ವಾಗ್ 23-1-75-0 (ನೋಬಾಲ್-2), ವಿರಾಟ್ ಕೊಹ್ಲಿ 8-0-23-0
ಭಾರತ ಎರಡನೇ ಇನಿಂಗ್ಸ್ 41 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 114
ಗೌತಮ್ ಗಂಭೀರ್ ಬ್ಯಾಟಿಂಗ್  68
ವೀರೇಂದ್ರ ಸೆಹ್ವಾಗ್ ಸಿ ಡೇವಿಡ್ ವಾರ್ನರ್ ಬಿ ಬೆನ್ ಹಿಲ್ಫೆನ್ಹಾಸ್  04
ರಾಹುಲ್ ದ್ರಾವಿಡ್ ಬಿ ಬೆನ್ ಹಿಲ್ಫೆನ್ಹಾಸ್  29
ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್  08
ಇತರೆ: (ಲೆಗ್‌ಬೈ-3, ವೈಡ್-1, ನೋಬಾಲ್-1)  05
ವಿಕೆಟ್ ಪತನ: 1-18 (ಸೆಹ್ವಾಗ್; 3.3); 2-100 (ದ್ರಾವಿಡ್; 26.3)
ಬೌಲಿಂಗ್: ಜೇಮ್ಸ ಪ್ಯಾಟಿನ್‌ಸನ್ 12-1-40-0 (ನೋಬಾಲ್-1, ವೈಡ್-1), ಬೆನ್ ಹಿಲ್ಫೆನ್ಹಾಸ್ 16-6-37-2, ಪೀಟರ್ ಸಿಡ್ಲ್ 11-7-23-0, ನೇಥನ್ ಲಿಯೋನ್ 2-0-11-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT