ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಗಾಯಗೊಂಡ ರೋಹಿತ್ ಬದಲಿಗೆ ಮನೋಜ್ ತಿವಾರಿ...

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಚೆಸ್ಟರ್ ಲೀ ಸ್ಟ್ರೀಟ್ (ಪಿಟಿಐ): ವಿವಾದಾತ್ಮಕ ಅಂಪೈರ್ ಪುನರ್ ಪರಿಶೀಲನೆ ಪದ್ಧತಿ (ಯುಡಿಆರ್‌ಎಸ್) ಬಗ್ಗೆ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿಆರ್‌ಎಸ್‌ನ ಖಚಿತತೆಯನ್ನು ಅವರು ಪ್ರಶ್ನಿಸಿದ್ದಾರೆ.

ಶನಿವಾರ ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ವಿವಾದಾತ್ಮಕ ತೀರ್ಪಿಗೆ ಔಟ್ ಆಗಿದ್ದರು. ಚೆಂಡು ಬ್ಯಾಟ್‌ಗೆ ತಾಗಿರುವುದನ್ನು ಪತ್ತೆ ಹಚ್ಚಲು ಡಿಆರ್‌ಎಸ್ ಹಾಕ್ ಸ್ಪಾಟ್ ತಂತ್ರಜ್ಞಾನಕ್ಕೆ ಸಾಧ್ಯವಾಗಿರಲಿಲ್ಲ. ಆದರೂ ದ್ರಾವಿಡ್ ಔಟೆಂದು ಮೂರನೇ ಅಂಪೈರ್ ಮರಾಯಸ್ ಎರಾಸ್ಮಾಸ್ ತೀರ್ಪು ನೀಡಿದ್ದು ಎಲ್ಲರನ್ನೂ ಅಚ್ಚರಿಯಲ್ಲಿ ಮುಳುಗಿಸಿತ್ತು.

`ದ್ರಾವಿಡ್ ಅವರಿಗೆ ಯಾವ ಆಧಾರದ ಮೇಲೆ ಔಟ್ ನೀಡಲಾಯಿತು ಎಂಬುದು ನನಗೆ ಗೊತ್ತಾಗುತ್ತಿಲ್ಲ~ ಎಂದು ದೋನಿ ನುಡಿದಿದ್ದಾರೆ.`ತೀರ್ಪು ನೀಡುವವರು ಸ್ನಿಕೊಮೀಟರ್ ಬಳಸಿದ್ದಾರೆಯೇ? ಈ ಸರಣಿಯಲ್ಲಿ ಸ್ನಿಕೊಮೀಟರ್ ಬಳಸಲು ಅನುಮತಿ ಇದೆಯೇ? ಅಥವಾ ಮೂರನೇ ಅಂಪೈರ್ ಔಟ್ ನೀಡಿದರಾ? ಗೊತ್ತಿಲ್ಲ. ನಾನೇ ಈ ಬಗ್ಗೆ ಗೊಂದಲಕ್ಕೆ ಒಳಗಾಗಿದ್ದೇನೆ. ಡಿಆರ್‌ಎಸ್ ಬಗ್ಗೆ ಅನುಮಾನಗಳು ಇವೆ.

ಇಂತಹ ಅನುಮಾನಗಳು ಇದ್ದಾಗ ಬ್ಯಾಟ್ಸ್ ಮನ್ ಪರ ಏಕೆ ತೀರ್ಪು ನೀಡುವುದಿಲ್ಲ~ ಎಂದು ಅವರು ಪ್ರಶ್ನಿಸಿದ್ದಾರೆ. `ಔಟ್ ಆಗಿಲ್ಲ ಎಂದು ದ್ರಾವಿಡ್ ಕೂಡ ನನ್ನ ಬಳಿ ತಿಳಿಸಿದರು. ಚೆಂಡು ಅವರ ಬ್ಯಾಟ್‌ಗೆ ತಾಗಿರಲಿಲ್ಲ. ಫೀಲ್ಡ್ ಅಂಪೈರ್ ಕೂಡ ಔಟ್ ಇಲ್ಲ ಎಂದು ತೀರ್ಪು ನೀಡಿದ್ದರು~ ಎಂದು ದೋನಿ ನುಡಿದಿದ್ದಾರೆ.

ಸ್ಟುವರ್ಟ್ ಬ್ರಾಡ್ ಎಸೆತದಲ್ಲಿ ಚೆಂಡು ದ್ರಾವಿಡ್ ಅವರ ಬ್ಯಾಟ್ ಸನಿಹ ಹಾದು ವಿಕೆಟ್ ಕೀಪರ್ ಕ್ರೇಗ್ ಕೀಸ್‌ವೆಟರ್ ಕೈ ಸೇರಿತ್ತು. ಆಗ ಕ್ಯಾಚ್ ಔಟ್‌ಗಾಗಿ ಇಂಗ್ಲೆಂಡ್ ಆಟಗಾರರು ಮಾಡಿದ ಮನವಿಗೆ ಫೀಲ್ಡ್ ಅಂಪೈರ್ ಬಿಲಿ ಡಾಕ್ಟ್ರೋವ್ ಔಟ್ ನೀಡಲಿಲ್ಲ. ಆದರೆ ಆತಿಥೇಯ ತಂಡದವರು ಡಿಆರ್‌ಎಸ್ ಮೊರೆ ಹೋಗಿದ್ದರು.   ಡಿಆರ್‌ಎಸ್‌ನಲ್ಲಿ ಕೆಲ ದೋಷ ಇರುವುದನ್ನು ಐಸಿಸಿ ಕೂಡ ಒಪ್ಪಿಕೊಂಡಿದೆ.  

ಮುಂಬೈ ವರದಿ (ಪಿಟಿಐ): ಮೊದಲ ಏಕದಿನ ಪಂದ್ಯದ ವೇಳೆ ಗಾಯಗೊಂಡ ರೋಹಿತ್ ಶರ್ಮ ಬದಲಿಗೆ ಪಶ್ಚಿಮ ಬಂಗಾಳದ ಮನೋಜ್ ತಿವಾರಿ ಸ್ಥಾನ ಪಡೆದಿದ್ದಾರೆ. ವೇಗಿ ಬ್ರಾಡ್ ಎಸೆತದಲ್ಲಿ ರೋಹಿತ್ ಬಲಗೈ ತೋರು ಬೆರಳಿಗೆ ಗಾಯಮಾಡಿಕೊಂಡಿದ್ದರು ಹಾಗಾಗಿ ಅವರು ಈ ಸರಣಿಯ ಉಳಿದ ಪಂದ್ಯಗಳಿಗೆ ಲಭ್ಯರಾಗುವುದಿಲ್ಲ.

ಈಗಾಗಲೇ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಜಹೀರ್ ಖಾನ್ ಹಾಗೂ ಇಶಾಂತ್ ಶರ್ಮ ಅವರು ಗಾಯದ ಕಾರಣ ಅಲಭ್ಯರಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಕೂಡ ಕಾಲ್ಬೆರಳು ನೋವಿಗೆ ಒಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT