ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಗೆಲುವಿಗಾಗಿ ಭಾರತ ಕಾತರ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸೌಥ್ಯಾಂಪ್ಟನ್: ಗೆಲುವು ಬೇಕು. ಭಾರತ ತಂಡದ ಆಶಯವಿದು. ಆದರೆ ಗಾಯಾಳುಗಳ ಪಟ್ಟಿ ಬೆಳೆದಿದೆ. ಅದೇ ಕಷ್ಟಕೋಟಲೆ. ಹೊರಬರುವುದೇ ದೊಡ್ಡ ಸಾಹಸ. ಸವಾಲುಗಳ ಮೀರಿ `ಮಹಿ~ ಬಳಗ ಗೆಲುವಿನ ನಗೆ ಬೀರಿದರೆ ಕೋಟಿ ಕೋಟಿ ಬೆಂಬಲಿಗರ ಸಮಾಧಾನ.

ಶನಿವಾರದ ಪಂದ್ಯವು ಮಳೆಗೆ ಆಹುತಿಯಾದ ನಂತರ ಐದು ಪಂದ್ಯಗಳ ಸರಣಿಯಲ್ಲಿ ಬಾಕಿ ಉಳಿದಿರುವುದು ನಾಲ್ಕು ಮಾತ್ರ. ಅದರಲ್ಲಿ ಸರಣಿ ವಿಜಯಿಗಳ ನಿರ್ಧಾರ ಆಗಬೇಕು. ಆದ್ದರಿಂದ ಮೂರು ಪಂದ್ಯಗಳನ್ನಾದರೂ ಗೆಲ್ಲುವುದು ಭಾರತದ ಗುರಿ ಆಗಬೇಕು. ರದ್ದಾದ ಮೊದಲ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಪಡೆಯು ಸ್ವಲ್ಪ ಮಟ್ಟಿಗೆ ಆಶಾದಾಯಕ ಆಟವಾಡಿದೆ.

ಪ್ರಮುಖರ ಅನುಪಸ್ಥಿತಿಯನ್ನು ನೀಗಿಸಿಕೊಳ್ಳುವ ಪ್ರಯತ್ನವನ್ನೂ ಮಾಡಿದೆ. ಆದರೂ ಆತಿಥೇಯ ಇಂಗ್ಲೆಂಡ್ ತಂಡವನ್ನು ಒತ್ತಡದಲ್ಲಿ ಇಡುವಂಥ ಮಟ್ಟವನ್ನು ಮುಟ್ಟುವ ಸಂಕೇತವನ್ನು ಭಾರತ ನೀಡಿಲ್ಲ. ಆದ್ದರಿಂದ ಈಗಲೂ ಆತಂಕ ಕಾಡುತ್ತಿದೆ. ಮಂಗಳವಾರ ನಡೆಯುವ ಪಂದ್ಯದಲ್ಲಿ ಹೊಸ ಚೈತನ್ಯ ಕಾಣಿಸಬೇಕು.

ಮುಖ್ಯವಾಗಿ ಭಾರತ ತಂಡವು ಯುವ ಆಟಗಾರರ ಬಲದೊಂದಿಗೆ ಹೋರಾಡಬೇಕು. ಗಾಯಾಳುಗಳ ಪಟ್ಟಿ ಮತ್ತಷ್ಟು ಉದ್ದವಾಗಿರುವದು ಒಂದು ರೀತಿಯಲ್ಲಿ ಯುವಕರಿಗೆ ಅವಕಾಶದ ಬಾಗಿಲು ತೆರೆದಿದೆ.

ಗಾಯಗೊಂಡಿರುವ ಸಚಿನ್ ತೆಂಡೂಲ್ಕರ್ ಸಂಪೂರ್ಣ ಸರಣಿಗೆ ಲಭ್ಯವಾಗುತ್ತಿಲ್ಲ. ಅವರ ಬದಲಿಗೆ ಎಸ್.ಬದರೀನಾಥ್ ಕೊನೆಯ ಮೂರು ಪಂದ್ಯಗಳಲ್ಲಿ ತಂಡದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಸಚಿನ್‌ಗೆ ನಾಲ್ಕು ವಾರಗಳ ವಿಶ್ರಾಂತಿ ಅಗತ್ಯವೆಂದು ವೈದ್ಯರು ಸಲಹೆ ಮಾಡಿದ್ದಾರೆ.

ಪ್ರವಾಸಿ ತಂಡದ ಗಾಯಾಳುಗಳ ಪಟ್ಟಿಗೆ ಈಗ ಇನ್ನೊಂದು ಹೆಸರು ಕೂಡ ಸೇರಿಕೊಂಡಿದೆ. ರೋಹಿತ್ ಶರ್ಮ ಅವರ ತೋರು ಬೆರಳಿಗೆ ಗಾಯವಾಗಿದೆ. ಆದ್ದರಿಂದ ಅವರ ಬದಲಿಗೆ ಮನೋಜ್ ತಿವಾರಿ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಮನೋಜ್‌ಗೆ ಇಲ್ಲಿ   ನಡೆಯುವ ಹಗಲು-ರಾತ್ರಿ ಪಂದ್ಯದಲ್ಲಿ ಹನ್ನೊಂದರ ಪಟ್ಟಿಯಲ್ಲಿ ಸ್ಥಾನ ಸಿಗುವುದು ಅನುಮಾನ.

ಈಗ ಕೋಚ್ ಡಂಕನ್ ಫ್ಲೆಚರ್ ಬ್ಯಾಟಿಂಗ್ ಕ್ರಮಾಂಕವನ್ನು ಹೊಂದಿಸುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪಾರ್ಥಿವ್ ಪಟೇಲ್ ಹಾಗೂ ಅಜಿಂಕ್ಯಾ ರಹಾನೆ ಅವರಿಗೆ ಇನಿಂಗ್ಸ್ ಆರಂಭಿಸುವ ಅವಕಾಶ ಸಿಗುವ ಸಾಧ್ಯತೆಯೇ ಹೆಚ್ಚು. ಇಂಗ್ಲೆಂಡ್ ವೇಗಿಗಳನ್ನು ದಂಡಿಸಿ ಹೊಸ ಚೆಂಡು ಹೊಳಪು ಕಳೆದುಕೊಳ್ಳುವವರೆಗೆ ಕ್ರೀಸ್‌ನಲ್ಲಿ ನಿಲ್ಲುವಂಥ ಶಕ್ತಿ ತಮಗಿದೆ ಎನ್ನುವು ವಿಶ್ವಾಸವನ್ನು ಇವರಿಬ್ಬರೂ ಮೂಡಿಸಿದ್ದಾರೆ.

ಕರ್ನಾಟಕದ ವೇಗಿ ಆರ್.ವಿನಯ್ ಕುಮಾರ್ ಅವರನ್ನು ಬೌಲಿಂಗ್ ವಿಭಾಗದಲ್ಲಿ ಪ್ರಭಾವಿಯೆಂದು ಅಂಗಳಕ್ಕೆ ಕಳುಹಿಸುವುದು ಖಚಿತ. ಪ್ರವೀಣ್ ಕುಮಾರ್ ಜೊತೆಗೆ ಹೊಸ ಚೆಂಡು ಹಂಚಿಕೊಳ್ಳುವ ಅವಕಾಶ ಅವರದ್ದಾಗಲಿದೆ. ಮೊದಲ ಪಂದ್ಯದಲ್ಲಿ ಸಿಕ್ಕ ಅಲ್ಪ ಅವಕಾಶದಲ್ಲಿ ವಿನಯ್ ಕುಮಾರ್ ಎದುರಾಳಿ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ಬ್ಯಾಟ್ ಬೀಸದಂತೆ ತಡೆದಿದ್ದಾರೆ. ಪ್ರವೀಣ್ ಅಂತೂ ಎರಡು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಆದ್ದರಿಂದ ಕೋಚ್ ಸ್ವಲ್ಪ ಮಟ್ಟಿಗೆ ನಿರಾಳ.

ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಿಂಚಿದ್ದ ರವೀಂದ್ರ ಜಡೇಜಾ ಅವರನ್ನು ಕೂಡ ಪ್ರಯೋಗಿಸುವ ಸಾಧ್ಯತೆಯಿದೆ. ಏನೇ ಮಾಡಿದರೂ ಹೆಚ್ಚು ರನ್ ಗಳಿಸುವಂಥ ಬ್ಯಾಟಿಂಗ್ ಕ್ರಮಾಂಕ ರೂಪಿಸುವುದೇ ದೊಡ್ಡ ಸವಾಲು. ಕೊಹ್ಲಿ, ರೈನಾ, ನಾಯಕ ದೋನಿ ಹಾಗೂ ರಾಹುಲ್ ದ್ರಾವಿಡ್ ಮೇಲೆ ನಿರೀಕ್ಷೆಯ ಹೊರೆ ಹೆಚ್ಚು.

ತಂಡಗಳು
ಇಂಗ್ಲೆಂಡ್: ಆಲಿಸ್ಟರ್ ಕುಕ್ (ನಾಯಕ), ಜೇಮ್ಸ ಆ್ಯಂಡರ್ಸನ್, ಇಯಾನ್ ಬೆಲ್, ರವಿ ಬೋಪರಾ, ಟಿಮ್ ಬ್ರೆಸ್ನನ್, ಸ್ಟುವರ್ಟ್ ಬ್ರಾಡ್, ಜೇಡ್ ಡೆರ್ನ್‌ಬಾಕ್, ಸ್ಟೀವನ್ ಫಿನ್, ಕ್ರೇಗ್ ಕೀಸ್ವೆಟರ್, ಎಯೊನ್ ಮಾರ್ಗನ್, ಸಮಿತ್ ಪಟೇಲ್, ಬೆನ್ ಸ್ಟೋಕ್ಸ್, ಗ್ರೇಮ್ ಸ್ವಾನ್ ಮತ್ತು ಜೋನಾಥನ್ ಟ್ರಾಟ್.

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಅಜಿಂಕ್ಯಾ ರಹಾನೆ, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಮನೋಜ್ ತಿವಾರಿ, ಸುರೇಶ್ ರೈನಾ, ಪ್ರವೀಣ್ ಕುಮಾರ್, ಮುನಾಫ್ ಪಟೇಲ್, ಆರ್.ಪಿ.ಸಿಂಗ್, ಆರ್.ವಿನಯ್ ಕುಮಾರ್, ಆರ್. ಅಶ್ವಿನ್, ಅಮಿತ್ ಮಿಶ್ರಾ, ಪಾರ್ಥಿವ್ ಪಟೇಲ್, ರವೀಂದ್ರ ಜಡೇಜಾ ಮತ್ತು ವರುಣ್ ಆ್ಯರನ್.

ಪಂದ್ಯ ಆರಂಭ (ಭಾರತೀಯ ಕಾಲಮಾನ): ಸಂಜೆ 6.30ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT