ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಜಮಾನಾದಲ್ಲಿ `ದೇಸಿ' ಕ್ರೀಡೆಗಳ ಝಲಕ್

Last Updated 21 ಏಪ್ರಿಲ್ 2013, 8:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎಲ್ಲ ಕಡೆ ಐಪಿಎಲ್ ಜ್ವರ. ವಿರಾಟ್ ಕೊಹ್ಲಿ ವೀರಾಟ್ಟಹಾಸ, ಧೋನಿಯ ಹೆಲಿಕ್ಯಾಪ್ಟರ್ ಶಾಟ್, ಅಮಿತ್ ಮಿಶ್ರಾ ಹ್ಯಾಟ್ರಿಕ್, ಮೋರ್ನೆ ಮಾರ್ಕೆಲ್ ವೇಗದ ಎಸೆತದ್ದೇ ಮಾತು. ಆದರೆ ನಗರದ ಬಿವಿಬಿ ಕಾಲೇಜು ಮೈದಾನದಲ್ಲಿ ಶನಿವಾರ ಸೂರ್ಯ ನೆತ್ತಿಗೇರುತ್ತಿದ್ದಂತೆ ದೇಸಿ ಆಟಗಳದ್ದೇ ವೈಭವ.

ಕೆಎಲ್‌ಇ ಸೊಸೈಟಿಯ ವ್ಯವಸ್ಥಾ ಪನಾ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ ಉತ್ತರ ಕರ್ನಾಟಕದ ವ್ಯವಸ್ಥಾ ಪನಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಸಾಂಪ್ರದಾಯಿಕ ಕ್ರೀಡಾ ಸ್ಪರ್ಧೆ `ಕುಡೋಸ್-13'ರಲ್ಲಿ ಪಾಲ್ಗೊಂಡಿದ್ದ 12 ಕಾಲೇಜುಗಳ 144 ಮಂದಿ ವಿದ್ಯಾರ್ಥಿಗಳು ಸುಸಜ್ಜಿತ ತರಗತಿ ಕೊಠಡಿಗಳಿಂದ ಹೊರಗೆ ಬಂದು ಬಿರುಬಿಸಿಲಿನಲ್ಲಿ `ಹಳ್ಳಿ ಆಟ'ಗಳ ಮಜಾ ಅನುಭವಿಸಿದರು.

ಉದ್ಘಾಟನಾ ಸಮಾರಂಭ ಮುಗಿಸಿ ವಿದ್ಯಾರ್ಥಿಗಳು ಮೈದಾನಕ್ಕೆ ಇಳಿದಾಗ ಬಿಸಿಲು ಪ್ರಖರವಾಗಿತ್ತು. ಕ್ರಿಕೆಟ್ ಮೈದಾನದ ಮಧ್ಯದಲ್ಲಿ ಮೊದಲು ನಡೆದದ್ದು ಲಗೋರಿ ಆಟ. ಟೆನಿಸ್ ಚೆಂಡನ್ನು ಲಗೋರಿಗೆ ಗುರಿ ಇಟ್ಟು ಹೊಡೆದ ಸ್ಪರ್ಧಾಳುಗಳು ಎದುರಾಳಿ ಆಟಗಾರರಿಂದ ತಪ್ಪಿಸಿಕೊಳ್ಳುವಲ್ಲಿ ಚಾಕಚಕ್ಯತೆ ಮೆರೆದರು. ಪ್ರತಿಸ್ಪರ್ಧಿಗಳು ಚೆಂಡು `ಕ್ಯಾಚ್' ಮಾಡುವುದರಲ್ಲಿ, ಲಗೋರಿ ಬೀಳಿಸಿದವರನ್ನು ಗುರಿ ಇಟ್ಟು ಹೊಡೆಯುವುದರಲ್ಲಿ ಯಶಸ್ವಿಯಾಗಿ ಕೇಕೆ ಹಾಕಿದರು.

ಇಲ್ಲಿ ತುರುಸಿನ ಸ್ಪರ್ಧೆ ನಡೆಯು ತ್ತಿದ್ದಾಗಲೇ ದೂರದ ಕಬಡ್ಡಿ ಅಂಗಣ ದಲ್ಲಿ ಜೀವ ತುಂಬಿತ್ತು. ಚುರುಕಿನ ರೈಡ್ ಹಾಗೂ ಸಾಹಸದ ಕ್ಯಾಚಿಂಗ್‌ಗೆ ಮನಸೋತ ಸಹಪಾಠಿಗಳನ್ನು ಒಳ ಗೊಂಡ ಪ್ರೇಕ್ಷಕರು ನಿರಂತರ ಚಪ್ಪಾ ಳೆಯ ಮೂಲಕ ಆಟಗಾರರನ್ನು ಹುರಿ ದುಂಬಿಸಿದರು. ಅಷ್ಟರಲ್ಲಿ ಇನ್ನೊಂದು ಬದಿಯಲ್ಲಿ ಖೋ-ಖೋ ಆಟದ ಅಂಗಣದಲ್ಲಿ ಆಟಗಾರರು ಸಜ್ಜಾ ಗಿದ್ದರು. ವೇಗ ಹಾಗೂ ತಂತ್ರಗಾರಿಕೆಯ ಈ ಆಟ ಪ್ರೇಕ್ಷಕರಲ್ಲಿ ಹುರುಪು ತುಂಬಿತು.

ಇದರ ಬೆನ್ನಲ್ಲೇ ಕುಂಟೆ ಬಿಲ್ಲೆ, ಹಗ್ಗ-ಜಗ್ಗಾಟ, ಚಿನ್ನಿದಾಂಡು, ಪಗಡೆ... ಹೀಗೆ ನಾನಾ ಬಗೆಯ ಗ್ರಾಮೀಣ ಕ್ರೀಡೆಗಳು ನಡೆದವು. ಬುಡಕಟ್ಟು ಜನರ ಹಾಡು-ಕುಣಿತವನ್ನು ಒಳಗೊಂಡ `ಅಗಮ್ಯ' ಎಂಬ ಸಾಂಸ್ಕೃತಿಕ ಸ್ಪರ್ಧೆ ಯಲ್ಲೂ ಭಾಗವಹಿಸುವುದು ಕಡ್ಡಾಯ ವಾಗಿತ್ತು. ಹೀಗಾಗಿ ವೇದಿಕೆಯಲ್ಲಿ ಸಂಜೆ ಕಲಾಸೌರಭ ಮನೆ ಮಾಡಿತ್ತು.

ಉದ್ಘಾಟನೆ
ಲಗೋರಿ ಆಡುವ ಮೂಲಕ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯಿ) ಕೋಚ್ ಈಶ್ವರ ಅಗಡಿ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಐಎಂಎಸ್‌ಆರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಗಡಿ, ಎಲ್ಲ ಗಡಿಗಳನ್ನೂ ಮೀರಿ ಬಾಂಧವ್ಯ ಬೆಸೆಯಲು ಕ್ರೀಡೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

`ಇಂದಿನ ಯುವ ಪೀಳಿಗೆ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ. ಪಾಲ ಕರು ಮಕ್ಕಳನ್ನು ಆಟದ ಮೈದಾನದ ಕಡೆಗೆ ಕಳುಹಿಸುತ್ತಿಲ್ಲ. ಹೀಗಾಗಿ ಕ್ರೀಡಾ ಚಟುವಟಿಕೆಗಳು ಕುಂಠಿತವಾಗುತ್ತಿವೆ. ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ' ಎಂದು ಅವರು ಹೇಳಿದರು.

`ಆಟದ ಮೈದಾನಗಳಲ್ಲಿ ಇಂದು ಹೆಚ್ಚಾಗಿ ಮಧ್ಯವಯಸ್ಸಿನವರು ಹಾಗೂ ಮುದುಕರನ್ನು ಕಾಣುತ್ತಿದ್ದೇವೆ. ಅವರಲ್ಲಿ ಬಹುತೇಕರು ರಕ್ತದೊತ್ತಡ, ಮಧುಮೇಹ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿರುವವರು. ವೈದ್ಯರು ಹೇಳಿದ ನಂತರವಷ್ಟೇ ಆಟದ ಮೈದಾನದತ್ತ ಕಾಲಿಡುವ ಪ್ರವೃತ್ತಿ ನಿಲ್ಲಬೇಕು' ಎಂದು ಅವರು ಸಲಹೆ ನೀಡಿದರು.

ಕರ್ನಾಟಕ ವಿವಿ ಕೌಸಳಿ ವ್ಯವಸ್ಥಾಪನ ಅಧ್ಯಯನ ಸಂಸ್ಥೆಯ ಡಾ. ಎಂ.ಎಸ್. ಸುಭಾಷ್, ಎಲ್ಲ ಸಾಂಪ್ರದಾಯಿಕ ಕ್ರೀಡೆಗಳಲ್ಲೂ ರೋಮಾಂಚಕ ಅನುಭವದ ಅಂಶಗಳಿವೆ. ಈ ಆಟಗಳಲ್ಲಿ `ನಮ್ಮತನ' ಅಡಗಿದೆ. ಅವುಗಳ ಬಗ್ಗೆ ಆಸಕ್ತಿ ಉಳಿಸಿಕೊಳ್ಳಲು ಯುವ ಜನಾಂಗವನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಹೇಳಿದರು.

`ಕಲೆ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಅರ್ಪಣಾ ಮನೋಭಾವದಿಂದ ತೊಡಗಿಸಿಕೊಂಡರೆ ಸಂಪಾದನೆಯ ದಾರಿಯೂ ಆಗುತ್ತದೆ. ಕೇವಲ ಪದವಿಗಳನ್ನು ಪಡೆದರೆ ಮಾತ್ರ ಲಕ್ಷಗಟ್ಟಲೆ ಗಳಿಸಲು ಸಾಧ್ಯ ಎಂಬ ಭ್ರಮೆ ಇಲ್ಲದಾಗಬೇಕು' ಎಂದು ಅವರು ಹೇಳಿದರು.
ಐಎಂಎಸ್‌ಆರ್ ನಿರ್ದೇಶಕ ಡಾ.ಪಿ.ಬಿ.ರೂಡಗಿ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಗಳ ಸಂಯೋಜಕ ಪ್ರೊ. ನಿತಿನ್ ಧೋಪೇಶ್ವರ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT