ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ತಮಿಳುನಾಡು ಎದುರು ಮುಗ್ಗರಿಸಿದ ಕರ್ನಾಟಕ

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಒತ್ತಡದ ಸಂದರ್ಭದಲ್ಲೂ ಆಕರ್ಷಕ ಶತಕ ಗಳಿಸಿದ ದಿನೇಶ್ ಕಾರ್ತಿಕ್ (137) ಬ್ಯಾಟಿಂಗ್ ವೈಭವದ ನೆರವಿನಿಂದ ತಮಿಳುನಾಡು ತಂಡ ಕೆ.ಎಸ್. ಸುಬ್ಬಯ್ಯ ಪಿಳ್ಳೈ ಟ್ರೋಫಿ ದಕ್ಷಿಣ ವಲಯ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ     ಕರ್ನಾಟಕದ ವಿರುದ್ಧ 62 ರನ್‌ಗಳ ಜಯ ಸಾಧಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಮೊದಲು ಬ್ಯಾಟ್ ಮಾಡಿದ ತಮಿಳುನಾಡು 50 ಓವರ್‌ಗಳಲ್ಲಿ 7 ವಿಕೆಟ್‌ಗೆ 270 ರನ್ ಪೇರಿಸಿದರೆ, ಆತಿಥೇಯ ತಂಡ 47.3 ಓವರ್‌ಗಳಲ್ಲಿ 208 ರನ್‌ಗಳಿಗೆ ಆಲೌಟಾಯಿತು.
ಈ ಗೆಲುವಿನ ಮೂಲಕ ತಮಿಳುನಾಡು (9) ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರೆ, ಕರ್ನಾಟಕ (8 ಪಾಯಿಂಟ್) ಮೂರನೇ ಸ್ಥಾನಕ್ಕೆ ಕುಸಿತ ಕಂಡಿತು.

ಕರ್ನಾಟಕ 217 ರನ್‌ಗಳ ಒಳಗೆ ಆಲೌಟಾದ ಕಾರಣ ಒಂದು ಪಾಯಿಂಟ್ ಕಳೆದುಕೊಂಡು ಎದುರಾಳಿ ತಂಡಕ್ಕೆ ಬೋನಸ್ ಪಾಯಿಂಟ್ ನೀಡಿತು. ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆದಿರುವ ಹೈದರಾಬಾದ್ (13) ಅಗ್ರಸ್ಥಾನದಲ್ಲಿದೆ.

ತಮಿಳುನಾಡು ತಂಡದ ಗೆಲುವಿನ ಶ್ರೇಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕಾರ್ತಿಕ್‌ಗೆ ಸಲ್ಲಬೇಕು. ಲಕ್ಷ್ಮೀಪತಿ ಬಾಲಾಜಿ ಬಳಗ 14ನೇ ಓವರ್‌ನಲ್ಲಿ 4 ವಿಕೆಟ್‌ಗೆ 45 ರನ್ ಗಳಿಸಿ ಸಂಕಷ್ಟ ಅನುಭವಿಸಿತ್ತು. ಈ ಹಂತದಲ್ಲಿ ಕಾರ್ತಿಕ್ ತಂಡದ ನೆರವಿಗೆ ನಿಂತರು. 132 ಎಸೆತಗಳನ್ನು ಎದುರಿಸಿದ ಅವರು 18 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಮೂಲಕ ಕರ್ನಾಟಕದ ಬೌಲರ್‌ಗಳ ಮೇಲೆ ಪ್ರಭುತ್ವ ಸಾಧಿಸಿದರು.

ಕಾರ್ತಿಕ್ ಅವರು ಆರ್. ಪ್ರಸನ್ನ (46) ಜೊತೆ ಐದನೇ ವಿಕೆಟ್‌ಗೆ 119 ಹಾಗೂ ಎಸ್. ಸುರೇಶ್ ಕುಮಾರ್ (17) ಜೊತೆ ಆರನೇ ವಿಕೆಟ್‌ಗೆ 71 ರನ್ ಸೇರಿಸಿದ ಕಾರಣ ತಮಿಳುನಾಡು ಉತ್ತಮ ಮೊತ್ತ ಪೇರಿಸಿತು.

ಸವಾಲಿನ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ನಾಯಕ ರಾಬಿನ್ ಉತ್ತಪ್ಪ (35, 28 ಎಸೆತ, 5 ಬೌಂ, 1 ಸಿಕ್ಸರ್)  ಬಿರುಸಿನ ಆರಂಭ ನೀಡಿದರು. ಆದರೆ ಅವರು ಔಟಾಗುವುದರೊಂದಿಗೆ ತಮಿಳುನಾಡು ಬೌಲರ್‌ಗಳು ಹಿಡಿತ ಸಾಧಿಸಿದರು. ಸುನಿಲ್ ರಾಜು (46, 71 ಎಸೆತ, 4 ಬೌಂ) ಕರ್ನಾಟಕದ ಪರ `ಟಾಪ್ ಸ್ಕೋರರ್~ ಎನಿಸಿದರು.

ಸಂಕ್ಷಿಪ್ತ ಸ್ಕೋರ್: ತಮಿಳುನಾಡು: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 270 (ದಿನೇಶ್ ಕಾರ್ತಿಕ್ 137, ಆರ್. ಪ್ರಸನ್ನ 46, ಸುರೇಶ್ ಕುಮಾರ್ 17, ಲಕ್ಷ್ಮೀಪತಿ ಬಾಲಾಜಿ ಔಟಾಗದೆ 28, ಅಭಿಮನ್ಯು ಮಿಥುನ್ 48ಕ್ಕೆ 3, ರೋನಿತ್ ಮೋರೆ 40ಕ್ಕೆ 1, ರಾಜೂ ಭಟ್ಕಳ್ 53ಕ್ಕೆ 1).

ಕರ್ನಾಟಕ: 47.3 ಓವರ್‌ಗಳಲ್ಲಿ 208 (ರಾಬಿನ್ ಉತ್ತಪ್ಪ 35, ಗಣೇಶ್ ಸತೀಶ್ 19, ಅಮಿತ್ ವರ್ಮಾ 27, ಸುನಿಲ್ ರಾಜು 46, ಅಭಿಮನ್ಯು ಮಿಥುನ್ 22, ಲಕ್ಷ್ಮೀಪತಿ ಬಾಲಾಜಿ 49ಕ್ಕೆ 3, ರಾಜಮಣಿ ಜೇಸುರಾಜ್ 27ಕ್ಕೆ 2, ಸುರೇಶ್ ಕುಮಾರ್ 28ಕ್ಕೆ 2). ಫಲಿತಾಂಶ: ತಮಿಳುನಾಡಿಗೆ 62 ರನ್ ಗೆಲುವು

ಪಾಯಿಂಟ್: ತಮಿಳುನಾಡು: 5, ಕರ್ನಾಟಕ: -1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT