ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ದೋನಿ ಬಳಗದ ವಿಜಯದುಂದುಭಿ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹೈದರಾಬಾದ್: ಮಹೇಂದ್ರಸಿಂಗ್ ದೋನಿ ಬ್ಯಾಟಿನಿಂದ ಹೊರಹೊಮ್ಮಿದ `ಹೆಲಿಕಾಪ್ಟರ್ ಶಾಟ್~ಗಳು ಶುಕ್ರವಾರ ಉಪ್ಪಳದ ರಾಜೀವಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತದ ಮೊಟ್ಟಮೊದಲ ವಿಜಯದ ಸಂದೇಶ ಹೊತ್ತು ಹಾರಿದವು. 

ಇಂಗ್ಲೆಂಡ್ ವಿರುದ್ಧದ ಐದು ಏಕದಿನ ಕ್ರಿಕೆಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 126 ರನ್ನುಗಳ ಭರ್ಜರಿ ಗೆಲುವು ದಾಖಲಿಸಿತು. ಆ ಮೂಲಕ ಕಳೆದ ತಿಂಗಳು ಇಂಗ್ಲೆಂಡ್‌ನಲ್ಲಿ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವ ಕಾರ್ಯಕ್ಕೆ ಶುಭಾರಂಭ ದೊರಕಿತು.

ಶುಕ್ರವಾರ ಉಭಯ ತಂಡಗಳ ನಾಯಕರಿಬ್ಬರೂ ಅರ್ಧಶತಕ ಗಳಿಸಿದರು. ಆದರೆ ದೋನಿ ಗೆದ್ದರು. ಕುಕ್ ಸೋತರು. `ಚಾರ್‌ಮಿನಾರ್ ನಗರಿ~ಯ ಈ ಗೆಲುವು ದೋನಿ ಪಾಲಿಗೆ ಸುಲಭದ ತುತ್ತಾಗಿರಲಿಲ್ಲ.  ತಂಡದ ಪ್ರಮುಖ ಆಟಗಾರರಿಲ್ಲದೇ ಯುವಪಡೆಯನ್ನು ನೆಚ್ಚಿಕೊಂಡು ಕಣಕ್ಕಿಳಿದಿದ್ದರು. ಬ್ಯಾಟಿಂಗ್‌ನಲ್ಲಿ ಅವರು ಸ್ವಲ್ಪ ಮೈಮರೆತಿದ್ದರೂ ಸೋಲಿನ ಅಪಾಯ ಕಾದಿತ್ತು.

ಚುರುಗುಡುತ್ತಿದ್ದ ಮಧ್ಯಾಹ್ನದ ಬಿಸಿಲಿನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆತಿಥೇಯರ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಮೂವತ್ತು ಓವರ್‌ಗಳಲ್ಲಿ 123 ರನ್ನುಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ತಂಡ ಮುಂದಿನ 20 ಓವರ್‌ಗಳಲ್ಲಿ 177 ರನ್ನುಗಳು ಹರಿದು ಬರಲು ಕಾರಣವಾಗಿದ್ದು ದೋನಿ ಮತ್ತು ಸುರೇಶ್ ರೈನಾ.

ಅತ್ಯಂತ ಕಡಿಮೆ ಮೊತ್ತಕ್ಕೆ ಇನಿಂಗ್ಸ್ ಮುಗಿಸುವ ಭೀತಿಯಲ್ಲಿದ್ದ ಆತಿಥೇಯ ತಂಡಕ್ಕೆ ಜೀವ ತುಂಬಿದ್ದು ನಾಯಕ ಮಹೇಂದ್ರ ಸಿಂಗ್ ದೋನಿ (ಅಜೇಯ 87; 70ಎಸೆತ, 10ಬೌಂಡರಿ, 1ಸಿಕ್ಸರ್, 104ನಿಮಿಷಗಳು) ಭರ್ಜರಿ ಬ್ಯಾಟಿಂಗ್ ಮತ್ತು ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ (61; 55ಎಸೆತ, 5ಬೌಂಡರಿ, 2 ಸಿಕ್ಸರ್) ದಿಟ್ಟತನದ ಅರ್ಧಶತಕ.
 
ಇವರಿಬ್ಬರ ಭರ್ಜರಿ  ಪ್ರದರ್ಶನದಿಂದ ನೆರವಿನಿಂದ ಇಂಗ್ಲೆಂಡ್ ತಂಡಕ್ಕೆ 300 ರನ್ನುಗಳ ಗುರಿಯನ್ನು ನೀಡಲು ಸಾಧ್ಯವಾಯಿತು. ಇದರಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಬೌಲರ್‌ಗಳು ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳಿಗೆ ನೀರು ಕುಡಿಸಲು ಸಾಧ್ಯವಾಯಿತು.

ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಕಳೆದ ಏಪ್ರಿಲ್‌ನಲ್ಲಿ ನಡೆದ  ವಿಶ್ವಕಪ್ ಫೈನಲ್‌ನಲ್ಲಿ ತೋರಿದ ಪ್ರದರ್ಶನದ ಪುನರಾವರ್ತನೆಯಂತೆ ಆಡಿದ ದೋನಿ, ಎಲ್ಲ ಬೌಲರ್‌ಗಳನ್ನೂ ದಂಡಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು.
 
ಕೊನೆಯ ಹತ್ತು ಓವರ್‌ಗಳಲ್ಲಿ 91ರನ್ನುಗಳು ಹರಿದುಬಂದಿದ್ದು ಅವರ ಹೆಲಿಕಾಪ್ಟರ್ ಶಾಟ್‌ಗಳಿಂದ.  ಸುರೇಶ್ ರೈನಾ ಜೊತೆಗೆ ಐದನೇ ವಿಕೆಟ್‌ಗೆ 72, ರವೀಂದ್ರ ಜಡೇಜಾ ಜೊತೆಗೆ ಆರನೇ ವಿಕೆಟ್‌ಗೆ 65 ರನ್ನುಗಳನ್ನು ಸೂರೆ ಮಾಡಿದರು. ಸ್ವಿಂಗ್ ದಾಳಿ ಮಾಡುವ ಮೂಲಕ ಬ್ಯಾಟ್ಸ್ ಮನ್ನರನ್ನು ವಿಚಲಿತಗೊಳಿಸುವ ಯತ್ನದಲ್ಲಿ ಇಂಗ್ಲೆಂಡ್‌ನ ಮುವರೂ ಮಧ್ಯಮ ವೇಗಿಗಳು 18 ವೈಡ್ ಬಾಲ್‌ಗಳ ಕಾಣಿಕೆ ನೀಡಿದರು.
 
ಆದರೆ ಭಾರತದ ಬೌಲರ್‌ಗಳು ನೀಡಿದ್ದು ಕೇವಲ 3 ರನ್ನುಗಳನ್ನು ಮಾತ್ರ.  ಪ್ರಮುಖ ಆಟಗಾರರಿಲ್ಲದ ಪಂದ್ಯ ನೋಡಲು ಪ್ರೇಕ್ಷಕರು ಆಸಕ್ತಿ ತೋರದೇ ಇದ್ದಿದ್ದರಿಂದ ಆರಂಭದಲ್ಲಿ ಬಹಳಷ್ಟು ಕುರ್ಚಿಗಳು ಖಾಲಿ ಇದ್ದವು. ದೋನಿ ಮತ್ತು ರೈನಾ ಬ್ಯಾಟಿಂಗ್ ರಂಗೇರಿದಂತೆ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಯಿತು.

ಜಡೇಜಾ-ಅಶ್ವಿನ್ ಸ್ಪಿನ್‌ಮಂತ್ರ: ಪೈಪೋಟಿಗೆ ಬಿದ್ದಂತೆ ವಿಕೆಟ್ ಕಬಳಿಸಿದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಮತ್ತು ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಕುಕ್ ಬಳಗವನ್ನು ಕೇವಲ 160 ನಿಮಿಷಗಳಲ್ಲಿ ಆಲೌಟ್ ಮಾಡಲು ಕಾರಣರಾದರು. ಇನಿಂಗ್ಸ್‌ನ ಮೂರನೇ ಓವರಿನಲ್ಲಿ ಪ್ರವೀಣಕುಮಾರ್ ಕ್ರೇಗ್ ಕೀಸ್ವೆಟರ್ ವಿಕೆಟ್ ಪಡೆಯುವ ಮೂಲಕ ಆಪಾಯದ ಮುನ್ಸೂಚನೆ ನೀಡಿದ್ದರು.

ತಂಡದ ಮೊತ್ತ 40 ಆಗುವಷ್ಟರಲ್ಲಿ ಚುರುಕಿನ ಫೀಲ್ಡಿಂಗ್ ಪ್ರದರ್ಶಿಸಿದ ಅಶ್ವಿನ್ ಕೆವಿನ್ ಪೀಟರ್ಸನ್ ಅವರನ್ನು ರನೌಟ್ ಮಾಡಿದರು. ನಂತರ ನಾಯಕ ಅಲಿಸ್ಟರ್ ಕುಕ್ (60; 63ಎಸೆತ, 7ಬೌಂಡರಿ) ಜೊತೆ ಸೇರಿದ ಜೋನಾಥನ್ ಟ್ರಾಟ್ ಉತ್ತಮ ಜೊತೆಯಾಟ ಬೆಳೆಸತೊಡಗಿದರು.

ಆರನೇ ಬೌಲರ್ ಆಗಿ ಬಂದ ಸೌರಾಷ್ಟ್ರದ ಹುಡುಗ ರವೀಂದ್ರ ಜಡೇಜಾ ಕುಕ್ ಅವರ ವಿಕೆಟ್ ಕಬಳಿಸುವ ಮೂಲಕ ಪ್ರವಾಸಿ ತಂಡದ ಪತನ ಆರಂಭವಾಯಿತು. ಡೀಪ್ ಮಿಡ್‌ವಿಕೆಟ್‌ನಲ್ಲಿ ಆರ್. ವಿನಯಕುಮಾರ್ ಹಿಡಿದ ಉತ್ತಮ ಕ್ಯಾಚಿಗೆ ಕುಕ್ ಪೆವಿಲಿಯನ್‌ಗೆ ಮರಳಿದರು. ನಂತರ ಒಂದು ಬದಿಯಿಂದ ಅಶ್ವಿನ್ ಮತ್ತೊಂದು ಕಡೆಯಿಂದ ಜಡೇಜಾ ವಿಕೆಟ್ ಬೇಟೆಯಾಡಿದರು. ಇವರಿಗೆ ಮಧ್ಯಮವೇಗಿ ಉಮೇಶ್ ಯಾದವ್ ಉತ್ತಮ ಸಾಥ್ ನೀಡಿದರು.    

ಆತಂಕದ ಕ್ಷಣಗಳು: ಇನಿಂಗ್ಸ್ ಆರಂಭಿಸಿದ ಪಾರ್ಥಿವ್ ಪಟೇಲ್,  ಟಿಮ್ ಬ್ರೆಸ್ನನ್ ಮತ್ತು ಸ್ಟಿವ್ ಫಿನ್ ದಾಳಿಯನ್ನು ದಿಟ್ಟವಾಗಿ ಎದುರಿಸುವ ಯತ್ನ ಮಾಡಿದರು.ಆದರೆ ಪಾರ್ಥಿವ್‌ಗೆ ಅದೃಷ್ಟ ಜೊತೆಗಿರಲಿಲ್ಲ.  ಪಂದ್ಯದ ನಾಲ್ಕನೇ ಓವರಿನಲ್ಲಿ ಫಿನ್ ಎಸೆತವನ್ನು  ರಹಾನೆ ಸ್ಟ್ರೇಟ್‌ಡ್ರೈವ್ ಮಾಡಿದರು. ವೇಗದಿಂದ ಸಾಗಿದ ಚೆಂಡು ನಾನ್‌ಸ್ಟ್ರೈಕರ್ ಸ್ಟಂಪ್‌ಗಳಿಗೆ ಅಪ್ಪಳಿಸುವ ಮುನ್ನ ಬೌಲರ್ ಬೆರಳನ್ನು ಸವರಿ ಹೋಗಿತ್ತು.
 
ಪಾರ್ಥಿವ್ ಕ್ರೀಸ್‌ನಿಂದ ಹೊರಗಿದ್ದರು. ಮೂರನೇ ಅಂಪೈರ್ ನಿರ್ಣಯ ಕೊಡುವ ಮುನ್ನವೇ ಪಾರ್ಥಿವ್ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.  ಇನ್ನೊಂದು ತುದಿಯಲ್ಲಿ ಅಜಿಂಕ್ಯ ರಹಾನೆ ಕಷ್ಟಪಟ್ಟು ಆಡುತ್ತಿದ್ದರು. ಒಂದು ಜೀವದಾನ ಲಭಿಸಿದರೂ ಅವರು ಮಿಂಚಲಿಲ್ಲ. 

ನಂತರ ಬಂದ `ಬರ್ತಡೆ ಬಾಯ್~ ಗೌತಮ್ ಗಂಭೀರ್ (32; 33ಎಸೆತ, 4ಬೌಂಡರಿ) ಸ್ಕೋರ್ ಬೋರ್ಡ್ ಅನ್ನು ಚುರುಕುಗೊಳಿಸಲು ಯತ್ನಿಸಿದರು. ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದ ಅಜಿಂಕ್ಯ ರಹಾನೆ ಗ್ರೆಮ್ ಸ್ವ್ಯಾನ್ ಮೊದಲ ಓವರಿನಲ್ಲಿಯೇ ವಿಕೆಟ್ ಒಪ್ಪಿಸಿದರು.
 
ನಂತರ ವೀರಾಟ್ ಕೋಹ್ಲಿಯೊಂದಿಗೆ ಸೇರಿದ ಗಂಭೀರ್ ವಿಕೆಟ್ ಪತನ ತಡೆಯಲು ಮುಂದಾದರು. ಇಬ್ಬರೂ 3ನೇ ವಿಕೆಟ್ ಜೊತೆಯಾಟದಲ್ಲಿ 27 ರನ್ ಸೇರಿಸಿದ್ದಾಗ ಡೆನ್‌ಬ್ಯಾಚ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದ ಗೌತಮ್ ಮರಳಿದರು.

ಕೊಹ್ಲಿ ಜೊತೆಗೂಡಿದ ಸುರೇಶ್ ರೈನಾ ದಿಟ್ಟತನದಿಂದ ಬೌಲಿಂಗ್ ಎದುರಿಸಿದರು. ಕೂದಲೆಳೆಯ ಅಂತರದಲ್ಲಿ ರನೌಟ್ ಕಂಟಕದಿಂದ ಪಾರಾದ ಅವರು  ತಂಡದ ಮೊತ್ತ ಹಿಗ್ಗಿಸಲು ಆರಂಭಿಸಿದರು. ಆದರೆ ಕೋಹ್ಲಿ ಸಮಿತ್ ಪಟೇಲ್ ಬೌಲಿಂಗ್‌ನಲ್ಲಿ ಪಿಟರ್ಸನ್‌ಗೆ ಕ್ಯಾಚ್ ನೀಡಿದರು. ನಂತರ ಬಂದ ದೋನಿ ಕುಕ್ ಬಳಗದ ಯೋಜನೆಗಳನ್ನು ಛಿದ್ರಗೊಳಿಸಿಬಿಟ್ಟರು.
 
ಭರ್ಜರಿ ಬೌಂಡರಿ ಮತ್ತು ಸಿಕ್ಸರ್ ಮೂಲಕ ಅರ್ಧಶತಕ ಪೂರೈಸಿದ ರೈನಾಗೆ ದೋನಿ ಸಾಥ್ ನೀಡುತ್ತಿದ್ದರು. ತಂಡದ ಮೊತ್ತ 195 ಆಗಿದ್ದಾಗ ದೊಡ್ಡ ಹೊಡೆತದ ಯತ್ನದಲ್ಲಿ ಬೈಸ್ಟೋಗೆ ಕ್ಯಾಚಿತ್ತು ಹೊರನಡೆದರು. ನಂತರ ಏನಿದ್ದರೂ ದೋನಿ ಧಮಾಕಾ.

ಆಲ್‌ರೌಂಡರ್ ರವೀಂದ್ರ ಜಡೇಜಾ ಕೂಡ ಬಿರುಸಿನ ಆಟಕ್ಕಿಳಿದು, ಯುವಿ ಮತ್ತು ಯೂಸುಫ್ ಪಠಾಣ್ ಗೈರು ಹಾಜರಿಯನ್ನು ನೀಗಿಸಿದರು. 49ನೇ ಓವರಿನಲ್ಲಿ ಹೆಲಿಕಾಪ್ಟರ್ ಶಾಟ್‌ಗಳ ಮೂಲಕ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿ ಸಿಡಿಸಿದ ದೋನಿ ದಾಳಿಯಿಂದ ದೃತಿಗೆಟ್ಟ ಕುಕ್, ಒಂದು ಹಂತದಲ್ಲಿ ನಾನ್‌ಸ್ಟ್ರೈಕರ್ ಪ್ರವೀಣಕುಮಾರ್ ಜೊತೆಗೆ ಮಾತಿನ ಚಕಮಕಿಗೆ ಇಳಿಯುವಷ್ಟರ ಮಟ್ಟಿಗೆ ವಾತಾವರಣ ಕಾವೇರಿತ್ತು.

ಸ್ಕೋರು ವಿವರ:
ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 300
ಪಾರ್ಥಿವ್ ಪಟೇಲ್ ರನೌಟ್/ಫಿನ್  09
ಅಜಿಂಕ್ಯ ರಹಾನೆ ಸ್ಟಂಪ್ಡ್ ಕೀಸ್‌ವೆಟ್ಟರ್ ಬಿ ಸ್ವಾನ್  15
ಗೌತಮ್ ಗಂಭೀರ್ ಎಲ್‌ಬಿಡಬ್ಲ್ಯು ಡೆನ್‌ಬ್ಯಾಚ್  32
ವಿರಾಟ್ ಕೋಹ್ಲಿ ಸಿ ಪೀಟರ್ಸನ್ ಬಿ ಪಟೇಲ್  37
ಸುರೇಶ್ ರೈನಾ ಸಿ ಬೈಸ್ಟೋ ಬಿ ಫಿನ್  61
ಮಹೇಂದ್ರಸಿಂಗ್ ದೋನಿ ಔಟಾಗದೇ  87
ರವೀಂದ್ರ ಜಡೇಜಾ ರನೌಟ್/ಬ್ರಿಸ್ನನ್  27
ಆರ್. ಅಶ್ವಿನ್ ರನೌಟ್/ಫಿನ್  08
ಪ್ರವೀಣಕುಮಾರ್ ಔಟಾಗದೆ  01
ಇತರೆ: (ವೈಡ್ 18, ನೋಬಾಲ್ 1, ಲೆಗ್‌ಬೈ 4)  23
ವಿಕೆಟ್ ಪತನ: 1-17 (ಪಟೇಲ್ 3.5), 2-52 (ರಹಾನೆ 11.4), 3-79 (ಗಂಭೀರ್ 17.5), 4-123(ಕೋಹ್ಲಿ 28.5), 5-195, (ರೈನಾ 38.5), 6- 260, (ಜಡೇಜಾ 45.6), 7-282 (ಅಶ್ವಿನ್ 48.2).
ಬೌಲಿಂಗ್: ಟಿಮ್ ಬ್ರೆಸ್ನನ್ 10-0-66-0 (ವೈಡ್ 5), ಸ್ಟೀವ್ ಫಿನ್ 9-0-67-1 (ನೋಬಾಲ್ 1, ವೈಡ್ 3), ಜೇಡ್ ಡೆನ್‌ಬ್ಯಾಚ್ 10-0-58-1 (ವೈಡ್ 10), ಗ್ರೆಮ್ ಸ್ವ್ಯಾನ್ 10-1-35-1, ಸಮಿತ್ ಪಟೇಲ್ 8-0-49-1, ರವಿ ಬೋಪಾರಾ 3-0-21-0
ಪವರ್ ಪ್ಲೇ: 1) 10 ಓವರುಗಳಲ್ಲಿ 1 ವಿಕೆಟ್‌ಗೆ 47, 2)  5 ಓವರುಗಳಲ್ಲಿ 2 ವಿಕೆಟ್ 20 (17-21ನೇ ಓವರ್: ಬೌಲಿಂಗ್), 3)  5 ಓವರುಗಳಲ್ಲಿ 2 ವಿಕೆಟ್ 59 (36-40 ಓವರ್: ಬ್ಯಾಟಿಂಗ್). 
ಇಂಗ್ಲೆಂಡ್ 36.1 ಓವರುಗಳಲ್ಲಿ 174
ಅಲಿಸ್ಟರ್ ಕುಕ್ ಸಿ ವಿನಯಕುಮಾರ್ ಬಿ ಜಡೇಜಾ  60
ಕ್ರೇಗ್ ಕೀಸ್ವೆಟರ್ ಸಿ ದೋನಿ ಬಿ ಪ್ರವೀಣಕುಮಾರ್  07
ಕೆವಿನ್ ಪೀಟರ್ಸನ್ ರನೌಟ್/ಅಶ್ವಿನ್  19
ಜೋನಾಥನ್ ಟ್ರಾಟ್ ಬಿ ಜಡೇಜಾ  26
ರವಿ ಬೋಪಾರಾ ಸಿ ಮತ್ತು ಬಿ ಅಶ್ವಿನ್  08
ಜೋನಾಥನ್ ಬ್ರೈಸ್ಟೊ ಸಿ ಮತ್ತು ಬಿ ಜಡೇಜಾ  03
ಸಮಿತ್ ಪಟೇಲ್ ಬಿ ಯಾದವ್  16
ಟಿಮ್ ಬ್ರೆಸ್ನನ್ ಸ್ಟಂಪ್ಡ್ ದೋನಿ ಬಿ ಅಶ್ವಿನ್  04
ಗ್ರೆಮ್ ಸ್ವಾನ್ ಬಿ ಯಾದವ್  08
ಸ್ಟೀವ್ ಫಿನ್ ಔಟಾಗದೇ  18
ಜೇಡ್ ಡೆನ್‌ಬ್ಯಾಚ್ ಬಿ ಅಶ್ವಿನ್  02
ಇತರೆ:  (ವೈಡ್ 3)  03
ವಿಕೆಟ್ ಪತನ: 1-7 (ಕೀಸ್ವೆಟರ್ 2.1), 2-40 (ಪೀಟರ್ಸನ್ 9.1), 3-111(ಕುಕ್ 22.4), 4-120 (ಟ್ರಾಟ್ 24.4), 5-124 (ಬೋಪಾರಾ 25.6), 6-126 (26.4 ಬ್ರೈಸ್ಟೋ), 7-134 (ಬ್ರೆಸ್ನನ್ 29.1), 8-148 (ಸ್ವಾನ್ 31.4), 9-163 (ಪಟೇಲ್ 33.5), 10-174 (ಡೆನ್‌ಬ್ಯಾಚ್ 36.1).
ಬೌಲಿಂಗ್: ಪ್ರವೀಣಕುಮಾರ್ 8-1-38-1 (ವೈಡ್ 1), ಆರ್. ವಿನಯಕುಮಾರ್ 5-0-24-0, ವಿರಾಟ್ ಕೋಹ್ಲಿ 3-0-11-0, ಉಮೇಶ್ ಯಾದವ್ 5-0-32-2 (ವೈಡ್ 1), ಆರ್. ಅಶ್ವಿನ್ 8.1-0-35-3 (ವೈಡ್ 1), ರವೀಂದ್ರ ಜಡೇಜಾ 7-0-34-3
ಫಲಿತಾಂಶ: ಭಾರತಕ್ಕೆ 126 ರನ್ ಜಯ.
ಪಂದ್ಯಶ್ರೇಷ್ಠ: ಮಹೇಂದ್ರಸಿಂಗ್ ದೋನಿ
ಮುಂದಿನ ಪಂದ್ಯ: 17 ಅಕ್ಟೋಬರ್ 2011
ಸ್ಥಳ: ಫಿರೋಜ್‌ಶಾ ಕೋಟ್ಲಾಮೈದಾನ ನವದೆಹಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT