ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಪ್ರೀತಿಗೆ ಮತ್ತೆ ಲಾಠಿ ಪೆಟ್ಟು

Last Updated 24 ಫೆಬ್ರುವರಿ 2011, 18:10 IST
ಅಕ್ಷರ ಗಾತ್ರ

ಬೆಂಗಳೂರು: ಜನಸಾಮಾನ್ಯರ ಕ್ರಿಕೆಟ್ ಪ್ರೀತಿಗೆ ಉದ್ಯಾನನಗರಿಯಲ್ಲಿ ಮತ್ತೊಮ್ಮೆ ‘ಲಾಠಿ ಪೆಟ್ಟು’ ಬಿದ್ದಿದೆ. ಇನ್ನೆಷ್ಟು ಬಾರಿ ಇಂಥ ಏಟು? ಪರಿಹಾರವೇ ಇಲ್ಲವೇ? ಎನ್ನುವ ಸವಾಲು ಭೂತಾಕಾರವಾಗಿ ಬೆಳೆದು ನಿಂತಿದೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೆಬ್ರುವರಿ 27ರಂದು ನಡೆಯಲಿರುವ ಇಂಗ್ಲೆಂಡ್ ಹಾಗೂ ಭಾರತ ತಂಡಗಳ ನಡುವಣ ವಿಶ್ವಕಪ್ ಕ್ರಿಕೆಟ್‌ನ ‘ಬಿ’ ಗುಂಪಿನ ಲೀಗ್ ಪಂದ್ಯದ ಟಿಕೆಟ್ ಮಾರಾಟದ ಸಂದರ್ಭದಲ್ಲಿ ಬೆತ್ತದ ಬೀಸಿನಲ್ಲಿ ಕ್ರಿಕೆಟ್ ಪ್ರೇಮಿಗಳು ತತ್ತರಿಸಿದರು. ಇಂಥ ಘಟನೆ ನಡೆದಿದ್ದು ಇದು ಮೊದಲೇನಲ್ಲ. ದೇಶದಲ್ಲಿನ ಅನೇಕ ಕ್ರಿಕೆಟ್ ಕೇಂದ್ರಗಳಲ್ಲಿ ದೊಡ್ಡ ಅಂತರರಾಷ್ಟ್ರೀಯ ಪಂದ್ಯ ನಡೆದಾಗ ಹೀಗೆ ಟಿಕೆಟ್‌ಗಾಗಿ ಜನರು ಪರದಾಡಿದ್ದಾರೆ.

ಲಭ್ಯ ಟಿಕೆಟ್‌ಗಳ ಸಂಖ್ಯೆಯ ಹತ್ತು ಹದಿನೈದು ಪಟ್ಟು ಬೇಡಿಕೆಯಿಂದಾಗಿ ಇಂಥ ಪರಿಸ್ಥಿತಿ ಆಗಾಗ ನಿರ್ಮಾಣವಾಗಿದೆ. ಆದರೆ ಟಿಕೆಟ್ ಮಾರಾಟದಲ್ಲಿ ಸರಿಯಾದ ವ್ಯವಸ್ಥೆಯೊಂದು ಇದ್ದರೆ ಸಾಲಿನಲ್ಲಿ ಅತಿಯಾಗಿ ಜನರು ನಿಲ್ಲುವುದು ಹಾಗು ನೂಕುನುಗ್ಗಲಿನಂಥ ಘಟನೆಗಳು ನಡೆಯುವುದನ್ನು ತಪ್ಪಿಸಬಹುದು. ಆದರೆ ಸೂಕ್ತ ವ್ಯವಸ್ಥೆಯನ್ನು ಪಂದ್ಯವನ್ನು ಸಂಘಟಿಸುವ ಕ್ರಿಕೆಟ್ ಸಂಸ್ಥೆಗಳು ಮಾಡುವುದಿಲ್ಲ. ಕೊನೆಯಲ್ಲಿ ಅಸಮಾಧಾನದಿಂದ ಗದ್ದಲ ಮಾಡಿದ ಜನರು ಪೆಟ್ಟು ತಿಂದು ಗಾಯಗೊಳ್ಳುತ್ತಾರೆ. ಆಗ ದೂರುವುದು ಮಾತ್ರ ಪೊಲೀಸರು ಲಾಠಿ ಪ್ರಹಾರ ಮಾಡಿದ್ದನ್ನು.ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹೀಗೆ ಮಾಡಲೇಬೇಕಾಗುತ್ತದೆ. ಇಂಥ ಅವಘಡವನ್ನು ತಪ್ಪಿಸುವ ಹೊಣೆ ಹೊರಬೇಕಾಗಿರುವುದು ಪಂದ್ಯ ಆಯೋಜಿಸುವ ಜವಾಬ್ದಾರಿ ಹೊತ್ತ ಕ್ರಿಕೆಟ್ ಸಂಸ್ಥೆ. ಮುಖ್ಯವಾಗಿ ಟಿಕೆಟ್ ಮಾರಾಟ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಬೇಕು. ಜೊತೆಗೆ ಕ್ರಿಕೆಟ್ ಆಸಕ್ತರಿಗೆ ಟಿಕೆಟ್ ನೀಡುವ ವ್ಯವಸ್ಥೆಯನ್ನು ಬದಲಿಸುವುದು ತುರ್ತು ಅಗತ್ಯವಾಗಿದೆ.

ಟಿಕೆಟ್ ಮಾರಾಟವು ‘ಲಾಟರಿ ವ್ಯವಸ್ಥೆ’ಯಲ್ಲಿ ನಡೆಯಬೇಕು ಎನ್ನುವ ಸಲಹೆಯನ್ನು ಈ ಹಿಂದೆಯೇ ಅನೇಕ ಹಿರಿಯ ಕ್ರಿಕೆಟಿಗರು ನೀಡಿದ್ದಾರೆ. ಅದನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗಣನೆಗೆ ತೆಗೆದುಕೊಂಡಿಲ್ಲ. ಗುರುವಾರ ಇಲ್ಲಿ ನಡೆದಂಥ ಘಟನೆಗಳು ಮತ್ತೆ ಮತ್ತೆ ಸಂಭವಿಸಿದ್ದರೂ ಆ ಬಗ್ಗೆ ಯೋಚನೆ ಮಾಡುವ ಗೊಡವೆಗೆ ಹೋಗಿಲ್ಲ ಕ್ರಿಕೆಟ್ ಆಡಳಿತ. ಲಾಟರಿ ವ್ಯವಸ್ಥೆಯಲ್ಲಿ ಟಿಕೆಟ್ ನೀಡುವುದರಿಂದ ಗೊಂದಲ ಕಡಿಮೆ ಆಗುತ್ತದೆ. ಜೊತೆಗೆ ಜನರು ಅನಗತ್ಯವಾಗಿ ಸಾಲಿನಲ್ಲಿ ಕಾಯುವುದೂ ತಪ್ಪುತ್ತದೆ. ಮೊದಲು ಬಂದವರಿಗೆ ಆದ್ಯತೆ ಎನ್ನುವ ರೀತಿಯ ಈಗಿನ ವ್ಯವಸ್ಥೆಯು ಖಂಡಿತವಾಗಿ ಮತ್ತೆ ಅವಘಡಗಳಿಗೆ ಅವಕಾಶ ನೀಡುತ್ತದೆ ಎನ್ನುವುದು ಸ್ಪಷ್ಟ.

ಲಾಟರಿ ವ್ಯವಸ್ಥೆಯಲ್ಲಿ ಟಿಕೆಟ್: ಒಂದು ಕ್ರೀಡಾಂಗಣದಲ್ಲಿನ ಆಸನಗಳ ವ್ಯವಸ್ತೆ ನಲ್ವತ್ತು ಸಾವಿರ ಇದ್ದರೆ, ಟಿಕೆಟ್‌ಗಳ ಬೇಡಿಕೆ ಎರಡು ಮೂರು ಲಕ್ಷದವರೆಗೂ ಇರುತ್ತದೆ. ಆಗ ಎಲ್ಲರಿಗೂ ಪಂದ್ಯವನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಮಾಡಿಕೊಡುವುದು ಸಾಧ್ಯವಿಲ್ಲ. ಹಾಗೆಂದು ಸಾಮಾನ್ಯ ಜನರು ಸಾಲುಗಳಲ್ಲಿ ನಿಂತು, ಹೊಡೆದಾಡಿ, ಲಾಠಿ ಏಟು ತಿಂದು ಟಿಕೆಟ್ ಕೊಂಡುಕೊಳ್ಳುವಂಥ ವಾತಾವರಣಕ್ಕೆ ಅವಕಾಶ ನೀಡುವ ‘ಫಸ್ಟ್ ಕಮ್ ಫಸ್ಟ್ ಸರ್ವ್’ ತತ್ವವೂ ಸೂಕ್ತ ಎನಿಸದು.

ಈಗಿರುವ ವ್ಯವಸ್ಥೆಯಲ್ಲಿ ಇನ್ನೂ ಒಂದು ಲೋಪವಿದೆ. ಸಾಲುಗಳಲ್ಲಿ ನಿಂತವರಲ್ಲಿ ಅನೇಕರು ಕೊಂಡ ಟಿಕೆಟ್‌ಗಳನ್ನು ‘ಬ್ಲ್ಯಾಕ್’ನಲ್ಲಿ ಮಾರುವ ಉದ್ದೇಶ ಹೊಂದಿದವರೂ ಆಗಿರುತ್ತಾರೆ. ಹೀಗೆ ಆಗುವುದನ್ನು ತಪ್ಪಿಸುವುದಕ್ಕೂ ಲಾಟರಿ ವ್ಯವಸ್ಥೆಯು ಸೂಕ್ತ ಎನಿಸುತ್ತದೆ.

ಲಾಟರಿ ವ್ಯವಸ್ಥೆಯು ಪಂದ್ಯದ ಆತಿಥ್ಯದ ಹೊಣೆ ಹೊತ್ತ ಸಂಸ್ಥೆಗಳಿಗೆ ಸ್ವಲ್ಪ ಶ್ರಮದ ಕೆಲಸ ಎನಿಸಬಹುದು. ಏಕೆಂದರೆ ಪಂದ್ಯ ನಿಗದಿಯಾದ ಕೆಲವೇ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರಕಟಣೆಯೊಂದನ್ನು ನೀಡಿ, ಪಂದ್ಯ ನೋಡಲು ಆಸಕ್ತರಾದವರು ಆನ್‌ಲೈನ್ ಇಲ್ಲವೆ, ನಗರದ ಕೆಲವು ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಂಡು ನಂಬರ್‌ಗಳಿರುವ ಟೋಕನ್ ಪಡೆಯುವಂತೆ ಸೂಚಿಸಬೇಕು. ಟೋಕನ್‌ಗಳನ್ನು ಕ್ರಿಕೆಟ್ ಸಂಸ್ಥೆಯೇ ಗುಪ್ತ ಸಂಕೇತಗಳ ಸುರಕ್ಷತೆ ಯೊಂದಿಗೆ ಮುದ್ರಿಸಿರಬೇಕು.

ಆನಂತರ ನಿಗದಿ ಮಾಡಿದ ಗಡುವಿನೊಳಗೆ ನೋಂದಣಿ ಮಾಡಿಕೊಂಡು ಟೋಕನ್ ಪಡೆದವರನ್ನು ಲಾಟರಿ ಮೂಲಕ ಆಯ್ಕೆ ಮಾಡುವುದು. ಹೀಗೆ ಮಾಡುವಾಗ ಕ್ರೀಡಾಂಗಣದಲ್ಲಿ ಲಭ್ಯವಿರುವ ಆಸನಗಳು ಹಾಗೂ ಸಾರ್ವಜನಿಕರಿಗೆ ಲಭ್ಯವಿರುವ ಟಿಕೆಟ್‌ಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಲಾಟರಿಯಲ್ಲಿ ಟಿಕೆಟ್ ಪಡೆಯಲು ಆಯ್ಕೆಯಾದವರ ಪಟ್ಟಿಯನ್ನು ನಿಗದಿತ ಕೌಂಟರ್‌ಗಳ ಮುಂದೆ ಮುಂಚಿತವಾಗಿಯೇ ಪ್ರಕಟಿಸಿ, ಅವರಿಗೆ ಮಾತ್ರ ಟಿಕೆಟ್ ಸಿಗುವಂತೆ ಕ್ರಮ ಕೈಗೊಳ್ಳಬೇಕು. ಆಗ ಕಾಳ ಸಂತೆಕೋರರು ಸಾಲಿನಲ್ಲಿ ನಿಂತು ಭಾರಿ ಸಂಖ್ಯೆಯಲ್ಲಿ ಟಿಕೆಟ್ ಕೊಂಡುಕೊಳ್ಳುವ ಅಪಾಯವನ್ನೂ ತಪ್ಪಿಸಬಹುದು.

ಪಾರದರ್ಶಕತೆ: ಲಾಟರಿ ವ್ಯವಸ್ಥೆ ಶ್ರಮದಾಯಕ ಎಂದು ಈಗಿರುವ ವ್ಯವಸ್ಥೆಯನ್ನೇ ಮುಂದುವರಿಸುವುದಾದರೆ ಟಿಕೆಟ್ ಮಾರಾಟದಲ್ಲಿ ಪಾರದರ್ಶಕತೆ ತರಬೇಕು. ಕ್ರಿಕೆಟ್ ಸಂಸ್ಥೆಯು ತನ್ನ ಸದಸ್ಯರಿಗೆ, ಪ್ರಾಯೋಜಕರಿಗೆ, ಅಧಿಕಾರಿಗಳಿಗೆ ಮೀಸಲಾದ ಟಿಕೆಟ್‌ಗಳನ್ನು ಹೊರತುಪಡಿಸಿ ಸಾಮಾನ್ಯ ಪ್ರೇಕ್ಷಕರಿಗೆ ಲಭ್ಯವಿರುವ ಟಿಕೆಟ್‌ಗಳ ಸಂಖ್ಯೆಯನ್ನು ಮೊದಲೇ ಬಹಿರಂಗಪಡಿಸಬೇಕು. ಹೀಗೆ ಮಾಡಿದಲ್ಲಿ ಜನರು ಕೂಡ ಮೊದಲು ಸಾಲಿನಲ್ಲಿ ನಿಂತರವ ಸಂಖ್ಯೆಯನ್ನು ಅಂದಾಜು ಮಾಡಿಕೊಂಡು ತಮಗೆ ಟಿಕೆಟ್ ಸಿಗಬಹುದು ಅಥವಾ ಇಲ್ಲವೆಂದು ನಿರ್ಧರಿಸಿಕೊಳ್ಳುತ್ತಾರೆ.

ಭಾರತ-ಇಂಗ್ಲೆಂಡ್ ನಡುವಣ ಪಂದ್ಯದ ಆರು ಸಾವಿರ ಟಿಕೆಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಹೇಳಿಕೊಂಡಿದೆ. ಆದರೆ ವಾಸ್ತವದಲ್ಲಿ ಕೌಂಟರ್‌ಗಳಲ್ಲಿ ಮಾರಾಟವಾಗಿದ್ದು ಸುಮಾರು ಸಾವಿರ ಟಿಕೆಟ್ ಮಾತ್ರ. ಟಿಕೆಟ್‌ಗಾಗಿ ಕಾಯ್ದಿದ್ದವರ ಸಂಖ್ಯೆ ಸುಮಾರು ಮೂವತ್ತು ಸಾವಿರ. ಕೆಎಸ್‌ಸಿಎ ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಅವರು ಆರು ಸಾವಿರ ಟಿಕೆಟ್‌ಗಳನ್ನು ಜನರಿಗೆ ನೀಡಲಾಯಿತು ಎಂದು ಹೇಳಿದ ಮಾತನ್ನು ಸತ್ಯವೆಂದು ನಂಬಿದರೂ, ಟಿಕೆಟ್ ಸಿಗದೇ ನಿರಾಸೆಗೊಂಡವರ ಸಂಖ್ಯೆ ಅಪಾರ. ಮೊದಲೇ ಆರು ಸಾವಿರ ಟಿಕೆಟ್ ಇರುವುದು ಎಂದು ಕೆಎಸ್‌ಸಿಎ ಪ್ರಕಟಿಸಿದ್ದರೆ ಇಷ್ಟೊಂದು ಜನರು ಒಟ್ಟಿಗೆ ಕೌಂಟರ್‌ಗಳ ಕಡೆಗೆ ಖಂಡಿತ ನುಗ್ಗುತ್ತಿರಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT