ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಬ್ರಾವೊ ಶತಕ; ಕೆರಿಬಿಯನ್ನರ ಅಟ್ಟಹಾಸ!

Last Updated 23 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಮುಂಬೈ: ದಣಿವಿಲ್ಲದ ಓಟ... ಚರ್ಚ್ ಗೇಟ್ ಸ್ಟೇಷನ್‌ನಿಂದ ಒಂದರ ಹಿಂದೊಂದು ಓಡುವ ಲೋಕಲ್ ಟ್ರೇನ್‌ಗಳ ಹಾಗೆ. ಹೌದು; ವೆಸ್ಟ್ ಇಂಡೀಸ್ ತಂಡದವರು ಆಡಿದ್ದೂ ಹೀಗೇ...! 181 ಓವರುಗಳು ಕಳೆದು ಹೋದವು. ಆದರೂ ಆಲ್‌ಔಟ್ ಆಗುವ ಮಾತೇ ಇಲ್ಲ. ಇನ್ನೊಂದು ವಿಕೆಟ್ ಬಾಕಿ ಎಂದು ಎರಡನೇ ದಿನದಾಟದ ಕೊನೆಗೂ `ಮಹಿ~ ಪಡೆಯ ಕಡೆಗೆ ಕೆಣಕುವ ನೋಟದಿಂದ ನಕ್ಕರು.

ದೊಡ್ಡ ಇನಿಂಗ್ಸ್ ಕಟ್ಟುವುದು ತಮಗೂ ಗೊತ್ತೆಂದು ಸಾರಿದರು ಕೆರಿಬಿಯನ್ನರು. ಸಹನೆ ಕಳೆದುಕೊಳ್ಳಲಿಲ್ಲ. ಮೊದಲ ಇನಿಂಗ್ಸ್ ಕೊನೆಗೊಳಿಸಲಿಲ್ಲ. ಲಯತಪ್ಪದೇ ಹಳಿಹಿಡಿದು ಓಡುವ ರೈಲಿನ ಹಾಗೆ ಮುಂದುವರಿಯಿತು ಪ್ರವಾಸಿಗಳ ರನ್ ಗಳಿಸುವ ಪ್ರವಾಸ.

ಡರೆನ್ ಬ್ರಾವೊ ಪೆವಿಲಿಯನ್ ಕಡೆಗೆ ಹೊರಟಾಗ ಖಾಲಿ ಇಲ್ಲದ ರೈಲು ಬೋಗಿಯಂತೆಯೇ ಭಾರಿ ಸಂಖ್ಯೆಯಲ್ಲಿ ರನ್‌ಗಳನ್ನು ಉಡಿಯಲ್ಲಿ ಕಟ್ಟಿಕೊಂಡಿದ್ದರು. ಅವರಷ್ಟೇ ಅಲ್ಲ; ಕ್ರಿಕ್ ಎಡ್ವರ್ಡ್ಸ್, ಕೀರನ್ ಪೊವೆಲ್ ಹಾಗೂ ಮರ್ಲಾನ್ ಸ್ಯಾಮುಯಲ್ಸ್ ಕೂಡ ವಿಂಡೀಸ್ ತಂಡವು ಭಾರತದ ಮುಂದೆ ದೊಡ್ಡ ಸವಾಲು ಇಡುವಂತೆ ಆಡಿದರು. ದಿನದ ಕೊನೆಯ ಅವಧಿಯ ಆಟದಲ್ಲಿ ವಿಕೆಟ್‌ಗಳ ಬರವನ್ನು ಆತಿಥೇಯರು ನೀಗಿಸಿಕೊಂಡರು. ಆದರೆ ಅಷ್ಟು ಹೊತ್ತಿಗಾಗಲೇ ಸಾಮಿ ಪಡೆಯು ಪೇರಿಸಿಟ್ಟ ಒಟ್ಟು ಮೊತ್ತ 575 ರನ್.

ಆಗಲೂ ಮುಗಿಯಲಿಲ್ಲ ವಿಂಡೀಸ್ ಅಟ್ಟಹಾಸ. ಇನ್ನೊಂದು ವಿಕೆಟ್ ಬಿಟ್ಟುಕೊಡುವುದಿಲ್ಲವೆಂದು ಪಟ್ಟು ಹಿಡಿದು ನಿಂತರು. ಆ ಒಂದು ವಿಕೆಟ್ ಇಂದೇ ಪಡೆಯುವ ಇಚ್ಛೆಯೂ ಭಾರತದವರಿಗೆ ಇರಲಿಲ್ಲ. ಕಾರಣ ಬುಧವಾರದ ಆಟದಲ್ಲಿ ಕೇವಲ 4 ಓವರುಗಳು ಬಾಕಿ ಇದ್ದವು.
 
ಇಂಥ ಪರಿಸ್ಥಿತಿಯಲ್ಲಿ ಇನಿಂಗ್ಸ್ ಆರಂಭಿಸಿ ಆಘಾತ ಅನುಭವಿಸಿದರೆ ಒತ್ತಡ ಹೆಚ್ಚೀತೆನ್ನುವ ಚಿಂತೆ ನಾಯಕ ದೋನಿಗೆ. ಆದ್ದರಿಂದಲೇ ಅವರು ಕೊನೆಯ ನಾಲ್ಕು ಓವರುಗಳನ್ನು ಸಾಧ್ಯವಾದಷ್ಟು ನಿಧಾನವಾಗಿ ಮುಗಿಸುವ `ವಿಳಂಬ ನೀತಿ~ ಅನುಸರಿಸಿದರು. ಆ ಕ್ಷಣದಲ್ಲಿ ಅವರು ಹಾಗೆ ಯೋಚನೆ ಮಾಡಿದ್ದನ್ನು ಮೆಚ್ಚಲೇಬೇಕು.

ಗುರುವಾರ ಬೆಳಿಗ್ಗೆ ವಿಂಡೀಸ್‌ನ ಪ್ರಥಮ ಇನಿಂಗ್ಸ್ ಶಾಸ್ತ್ರ ಮುಗಿಸಿ, ಅದಕ್ಕೆ ತಿರುಗೇಟು ನೀಡಲು ಮುಂದಾಗುವುದು ಮಹಿ ಆಲೋಚನೆ. ಅದಕ್ಕೆ ತಕ್ಕಂತೆಯೇ ಅವರು ಯೋಜನೆ ರೂಪಿಸಿದ್ದು. ನಿರೀಕ್ಷೆಯಂತೆ ಎರಡನೇ ದಿನದಾಟದ ಕೊನೆಯಲ್ಲಿ ಬ್ಯಾಟಿಂಗ್ ಆರಂಭಿಸುವಂಥ ಸ್ಥಿತಿ ಭಾರತಕ್ಕೆ ಎದುರಾಗಲಿಲ್ಲ.

ವಿಂಡೀಸ್ ಕೂಡ ಹಾಗೆ ಆಗುವುದಕ್ಕೆ ಅವಕಾಶ ನೀಡಲಿಲ್ಲ. ಇನ್ನೊಂದು ವಿಕೆಟ್ ಬಾಕಿ ಉಳಿಸಿಕೊಂಡಿತು. ಬಹುಶಃ ಮೂರನೇ ದಿನ ಅದು ಈಗಿನ ಮೊತ್ತಕ್ಕೇ ಡಿಕ್ಲೇರ್ ಮಾಡಿಕೊಂಡರೂ ಅಚ್ಚರಿ ಏನಲ್ಲ. ಪ್ರಜ್ಞಾವಂತ ನಾಯಕ ಡರೆನ್ ಸಾಮಿ ಹಾಗೆಯೇ ಮಾಡುತ್ತಾರೆನ್ನುವ ನಿರೀಕ್ಷೆಯೂ ಬಲವಾಗಿದೆ.

ತಮ್ಮ ತಂಡವು ಆತಿಥೇಯರ ಮುಂದಿಟ್ಟಿರುವ ರನ್ ಮೊತ್ತವು ಸುಲಭದ್ದಲ್ಲ ಎನ್ನುವುದು ಸಾಮಿಗೂ ಗೊತ್ತು. ಆದರೂ ಭಾರತವನ್ನು ಇದೇ ಮೊತ್ತದಲ್ಲಿ ಎರಡು ಬಾರಿ ಕಟ್ಟಿಹಾಕಲು ಸಾಧ್ಯವೇ? ಎಂದು ಯೋಚಿಸಬೇಕು. ಉತ್ತಮ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ದೋನಿ ಬಳಗವು ಈ ಮೊತ್ತವನ್ನು ಚುಕ್ತಾಮಾಡಿ, ಇನಿಂಗ್ಸ್ ಮುನ್ನಡೆ ಪಡೆಯುವ ಕಡೆಗೆ ನೋಡಬೇಕು.
 
ಎರಡು ದಿನ ಕ್ಷೇತ್ರ ರಕ್ಷಣೆ ಹಾಗೂ ಬೌಲಿಂಗ್ ಮಾಡಿ ದಣಿದಿರುವ ಭಾರತದವರು ನಿಶ್ಚಿಂತೆಯಿಂದ ನಿದ್ದೆಮಾಡಲಂತೂ ಸಾಧ್ಯವಿಲ್ಲ. ಏಕೆಂದರೆ ಸಂಪೂರ್ಣ ಟೆಸ್ಟ್ ಸರಣಿ ವಿಜಯದ ಕನಸು ನನಸಾಗಿಸಿಕೊಳ್ಳಲು ಭಾರಿ ಹೋರಾಟ ಮಾಡಲೇಬೇಕು.

ಪ್ರವಾಸಿ ತಂಡವೊಂದು ಇಷ್ಟೊಂದು ಸುರಕ್ಷಿತ ಎನ್ನುವಂಥ ಅನುಭವವನ್ನು ಭಾರತದಲ್ಲಿನ ಅಂಗಳದಲ್ಲಿ ಪಡೆದಿದ್ದು ಬಹಳ ವಿರಳ. ಭಯವಿಲ್ಲದೇ ಪ್ರಬಲ ಹೋರಾಟ ನಡೆಸುವ ಗುಣವನ್ನು ಹೊಂದಿರುವ ಕೆರಿಬಿಯನ್ನರು ಸದ್ಯಕ್ಕೆ ಕಡಲ ತೀರದ ತೆರೆಗಳು ತೇಲಿಸಿಕೊಂಡು ಬರುವ ತಿಳಿಗಾಳಿಗೆ ಮೈಯೊಡ್ಡಿದ್ದಾರೆ.

ಇದಕ್ಕೆ ಮೂಲ ಕಾರಣ ಡರೆನ್ ಬ್ರಾವೊ (166; 284 ಎಸೆತ, 17 ಬೌಂಡರಿ). ಅವರು ಎರಡು ಬೆಲೆಯುಳ್ಳ ಜೊತೆಯಾಟ ಬೆಳೆಸಿದರು. ಮೂರನೇ ವಿಕೆಟ್‌ನಲ್ಲಿ ಕ್ರಿಕ್ ಎಡ್ವರ್ಡ್ಸ್ (86; 165 ಎ., 13 ಬೌಂಡರಿ) ಜೊತೆ ಹಾಗೂ ನಾಲ್ಕನೇ ವಿಕೆಟ್‌ನಲ್ಲಿ ಕೀರನ್ ಪೊವೆಲ್ (81; 149 ಎ., 9 ಬೌಂಡರಿ) ಅವರೊಂದಿಗೆ ಕ್ರಮವಾಗಿ 164 ಹಾಗೂ 160 ರನ್‌ಗಳನ್ನು ಕಲೆಹಾಕಿದರು.

ವರುಣ್ ಆ್ಯರೊನ್ ಬೌಲಿಂಗ್‌ನಲ್ಲಿ ದಿನದಾಟವನ್ನು ಅಬ್ಬರದಿಂದ ಆರಂಭಿಸಿದ್ದ ಬ್ರಾವೊ ಅದೇ ಬೌಲರ್ ಎಸೆತದಲ್ಲಿ ತಡಬಡಾಯಿಸಿ ವಿಕೆಟ್ ಕೀಪರ್ ದೋನಿಗೆ ಕ್ಯಾಚಿತ್ತಿದ್ದು ವಿಶೇಷ. ಪದಾರ್ಪಣೆ ಪಂದ್ಯದಲ್ಲಿ ದೊಡ್ಡ ವಿಕೆಟ್ ಪಡೆದ ಸಂಭ್ರಮ ಭಾರತದ ಯುವ ಮಧ್ಯಮ ವೇಗಿಯದ್ದು.

ಕಾರ್ಲ್‌ಟನ್ ಬಾ ಹಾಗೂ ಡರೆನ್ ಸಾಮಿ ಕ್ರೀಸ್‌ನಲ್ಲಿ ಗಟ್ಟಿಯಾಗದಂತೆ ಮಾಡಿದ್ದು ಕೂಡ ಇದೇ ಬೌಲರ್. ಮರ್ಲಾನ್ ಸ್ಯಾಮುಯಲ್ಸ್ (61; 103 ಎ., 9 ಬೌಂಡರಿ) ಅರ್ಧ ಶತಕದ ಗಡಿದಾಟಿ ಮುನ್ನುಗ್ಗಿದ್ದಾಗ ವಿಕೆಟ್ ಪಡೆದು ಹಿಗ್ಗಿದ್ದು ರವಿಚಂದ್ರನ್ ಅಶ್ವಿನ್.
 
ಮೊದಲ ದಿನದಾಟದಲ್ಲಿ ಎರಡು ವಿಕೆಟ್‌ಗಳನ್ನು ಪಡೆದಿದ್ದ ಅವರಿಗೆ ಈ ಇನಿಂಗ್ಸ್‌ನಲ್ಲಿ ಒಟ್ಟು ನಾಲ್ಕು ವಿಕೆಟ್‌ಗಳ ಸಂತಸ. ಪ್ರಗ್ಯಾನ್ ಓಜಾ ಸ್ಪಿನ್ ಮೋಡಿ ಮಾತ್ರ ಹೆಚ್ಚು ಪ್ರಯೋಜನಕ್ಕೆ ಬರಲಿಲ್ಲ. ಆದರೆ ಅವರು ಪೊವೆಲ್‌ಗೆ ಪೆವಿಲಿಯನ್ ದಾರಿ ತೋರಿಸಿದ್ದು ತಂಡಕ್ಕೆ ಪ್ರಯೋಜನಕಾರಿ.

ಮೊದಲ ಆರು ಕ್ರಮಾಂಕದಲ್ಲಿ ಆಡಿದ ವಿಂಡೀಸ್ ಬ್ಯಾಟ್ಸ್ ಮನ್‌ಗಳು ಐವತ್ತು ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಗಳಿಸಿದ್ದು ವಿಶೇಷ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂಥದೊಂದು ಘಟನೆ ನಡೆದಿದ್ದು ಐದನೇ ಬಾರಿ. ವೆಸ್ಟ್ ಇಂಡೀಸ್ ತಂಡದ ಪರವಾಗಿ ಮೇಲಿನ ಕ್ರಮಾಂಕದ ಆರು ಆಟಗಾರರು ಒಂದೇ ಇನಿಂಗ್ಸ್‌ನಲ್ಲಿ ಐವತ್ತರ ಗಡಿ ಮುಟ್ಟಿದ್ದು ಹಾಗೂ ದಾಟಿದ್ದು ಇದೇ ಮೊಟ್ಟ ಮೊದಲು.

ಸ್ಕೋರ್ ವಿವರ

ವೆಸ್ಟ್ ಇಂಡೀಸ್: ಪ್ರಥಮ ಇನಿಂಗ್ಸ್ 181 ಓವರುಗಳಲ್ಲಿ
9 ವಿಕೆಟ್ ನಷ್ಟಕ್ಕೆ 575
(ಮಂಗಳವಾರದ ಆಟದಲ್ಲಿ: 91 ಓವರುಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 267)
ಕ್ರಿಕ್ ಎಡ್ವರ್ಡ್ಸ್ ಸಿ ಮಹೇಂದ್ರ ಸಿಂಗ್ ದೋನಿ ಬಿ ಇಶಾಂತ್ ಶರ್ಮ  86
ಡರೆನ್ ಬ್ರಾವೊ ಸಿ ಮಹೇಂದ್ರ ಸಿಂಗ್ ದೋನಿ ಬಿ ವರುಣ್ ಆ್ಯರೊನ್  166
ಕೀರನ್ ಪೊವೆಲ್ ಸಿ ಮಹೇಂದ್ರ ಸಿಂಗ್ ದೋನಿ ಬಿ ಪ್ರಗ್ಯಾನ್ ಓಜಾ  81
ಮರ್ಲಾನ್ ಸ್ಯಾಮುಯಲ್ಸ್ ಸಿ  ದ್ರಾವಿಡ್ ಬಿ ರವಿಚಂದ್ರನ್ ಅಶ್ವಿನ್  61
ಕಾರ್ಲ್‌ಟನ್ ಬಾ ಬಿ ವರುಣ್ ಆ್ಯರೊನ್  04
ಡರೆನ್ ಸಾಮಿ ಸಿ ಮಹೇಂದ್ರ ಸಿಂಗ್ ದೋನಿ ಬಿ ವರುಣ್ ಆ್ಯರೊನ್  03
ರವಿ ರಾಂಪಾಲ್ ಸಿ ವಿರಾಟ್ ಕೊಹ್ಲಿ ಬಿ ರವಿಚಂದ್ರನ್ ಅಶ್ವಿನ್  10
ಫಿಡೆಲ್ ಎಡ್ವರ್ಡ್ಸ್ ಬ್ಯಾಟಿಂಗ್  07
ದೇವೇಂದ್ರ ಬಿಶೋ ಬ್ಯಾಟಿಂಗ್  02
ಇತರೆ: (ಬೈ-8, ಲೆಗ್‌ಬೈ-15, ನೋಬಾಲ್-2)  25
ವಿಕೆಟ್ ಪತನ: 1-137 (ಆ್ಯಡ್ರಿನ್ ಭರತ್; 52.5), 2-150 (ಕ್ರೇಗ್ ಬ್ರಾಥ್‌ವೈಟ್; 58.6), 3-314 (ಕ್ರಿಕ್ ಎಡ್ವರ್ಡ್ಸ್; 103.5), 4-474 (ಕೀರನ್ ಪೊವೆಲ್; 150.1), 5-518 (ಡರೆನ್ ಬ್ರಾವೊ; 163.6), 6-524 (ಕಾರ್ಲ್‌ಟನ್ ಬಾ; 165.5), 7-540 (ಡರೆನ್ ಸಾಮಿ; 169.4), 8-563 (ರವಿ ರಾಂಪಾಲ್; 174.1), 9-566 (ಮರ್ಲಾನ್ ಸ್ಯಾಮುಯಲ್ಸ್; 176.6).
ಬೌಲಿಂಗ್: ಇಶಾಂತ್ ಶರ್ಮ 30-9-72-1 (ನೋಬಾಲ್-1), ವರುಣ್ ಆ್ಯರೊನ್ 28-4-106-3, ಪ್ರಗ್ಯಾನ್ ಓಜಾ 48-10-126-1, ರವಿಚಂದ್ರನ್ ಅಶ್ವಿನ್ 51-6-154-4, ವೀರೇಂದ್ರ ಸೆಹ್ವಾಗ್ 16-1-61-0 (ನೋಬಾಲ್-1), ವಿರಾಟ್ ಕೊಹ್ಲಿ 2-0-9-0, ಸಚಿನ್ ತೆಂಡೂಲ್ಕರ್ 6-0-24-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT