ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಭಾರತ ಪುಟಿದೆದ್ದು ನಿಲ್ಲಲಿದೆ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಪರ್ತ್ (ಪಿಟಿಐ): ಸತತ ಎರಡು ಟೆಸ್ಟ್‌ಗಳಲ್ಲಿ ಸೋಲು ಎದುರಾಗಿರುವ ಕಾರಣ ಭಾರತ ತಂಡದ ಆಟಗಾರರು ಆತ್ಮವಿಶ್ವಾಸ ಕಳೆದುಕೊಂಡಿದ್ದು, ಅತಿಯಾದ ಒತ್ತಡದಲ್ಲಿದ್ದಾರೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಭಾರತಕ್ಕೆ ಗೆಲುವು ಕಷ್ಟ ಎಂಬುದು ಹೆಚ್ಚಿನವರ ಲೆಕ್ಕಾಚಾರ.

ಆದರೆ ಆಸ್ಟ್ರೇಲಿಯಾ ತಂಡದ ಹಿರಿಯ ಬ್ಯಾಟ್ಸ್‌ಮನ್ ಮೈಕ್ ಹಸ್ಸಿ ಭಿನ್ನ ಅಭಿಪ್ರಾಯ ಹೊಂದಿದ್ದಾರೆ. ಮಹೇಂದ್ರ ಸಿಂಗ್ ದೋನಿ ಬಳಗ ಪುಟಿದೆದ್ದು ನಿಲ್ಲುವ ಸಾಧ್ಯತೆಯಿದೆ ಎಂಬುದು ಅವರ ಹೇಳಿಕೆ. `ಮೂರನೇ ಟೆಸ್ಟ್ ಗೆದ್ದು 3-0 ಅಂತರದ ಮುನ್ನಡೆ ಪಡೆಯುವುದು ನಮ್ಮ ಗುರಿ. ಸರಣಿ ಕ್ಲೀನ್‌ಸ್ವೀಪ್ ಬಗ್ಗೆ ಈಗ ಏನನ್ನೂ ಹೇಳಲಾಗದು. 3-0ರಲ್ಲಿ ಗೆಲುವು ಲಭಿಸಿದರೂ ಅದು ಉತ್ತಮ ಸಾಧನೆ. ಏಕೆಂದರೆ ಭಾರತ ಅನುಭವಿ ಆಟಗಾರರನ್ನು ಹೊಂದಿರುವ ತಂಡ. ಈ ಸರಣಿಯಲ್ಲಿ ಅವರಿಂದ ಮರುಹೋರಾಟ ನಿರೀಕ್ಷಿಸುತ್ತಿದ್ದೇನೆ~ ಎಂದು ನುಡಿದಿದ್ದಾರೆ.

`ಮೂರನೇ ಟೆಸ್ಟ್ ನಡೆಯುವ   ಪರ್ತ್ ಕ್ರೀಡಾಂಗಣದ ಪಿಚ್ ವೇಗ ಮತ್ತು ಬೌನ್ಸ್‌ಗೆ ನೆರವು ನೀಡಲಿದೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯ. ಭಾರತಕ್ಕೆ ಇದು ಹೊಸ ಅನುಭವ ನೀಡಲಿದೆ.

ಆದರೂ ಭಾರತ ತಂಡವನ್ನು ನಂಬಲು ಸಾಧ್ಯವಿಲ್ಲ. ಏಕೆಂದರೆ ಈ ಹಿಂದೆ ಪರ್ತ್‌ನಲ್ಲಿ ಆಡಿದ್ದ ಸಂದರ್ಭ ಅವರು ಶ್ರೇಷ್ಠ ಪ್ರದರ್ಶನ ನೀಡಿದ್ದರು. ಇಲ್ಲಿನ ಪರಿಸ್ಥಿತಿಗೆ ಬಹಳ ಬೇಗನೇ ಹೊಂದಿಕೊಳ್ಳುವ ಸಾಮರ್ಥ್ಯ ಆ ತಂಡಕ್ಕಿದೆ~ ಎಂದಿದ್ದಾರೆ.

2007-08 ರಲ್ಲಿ ನಡೆದಿದ್ದ ಸರಣಿಯ ವೇಳೆ ಭಾರತ ಪರ್ತ್ ಟೆಸ್ಟ್‌ನಲ್ಲಿ ಗೆಲುವು ಪಡೆದಿತ್ತು. ಭಾರತದ ಆಟಗಾರರ ದೃಢ ನಿಶ್ಚಯದಿಂದ ಜಯ ದೊರೆತಿತ್ತು ಎಂದು ಹಸ್ಸಿ ತಿಳಿಸಿದ್ದಾರೆ.

`ಆ ಪಂದ್ಯ ನನಗೆ ಚೆನ್ನಾಗಿ ನೆನಪಿದೆ. ಸಿಡ್ನಿಯಲ್ಲಿ ನಡೆದ ಟೆಸ್ಟ್ ವಿವಾದಕ್ಕೆ ಕಾರಣವಾಗಿತ್ತು. ವಿವಾದ ತಣ್ಣಗಾಗುವ ಮುನ್ನ ಉಭಯ ತಂಡಗಳು ಪರ್ತ್‌ನಲ್ಲಿ ಎದುರಾಗಿದ್ದವು. ಗೆಲುವು ಪಡೆಯಬೇಕೆಂಬ ದೃಢಸಂಕಲ್ಪದೊಂದಿಗೆಯೇ ಭಾರತದ ಆಟಗಾರರು ಪರ್ತ್‌ಗೆ ಆಗಮಿಸಿದ್ದರು~ ಎಂದು ನುಡಿದಿದ್ದಾರೆ.

`ಅಂಗಳದ ಹೊರಗೆ ನಡೆದ ಘಟನೆಗಳು ನಮ್ಮ ಪ್ರದರ್ಶನದ ಮೇಲೂ ಪರಿಣಾಮ ಬೀರಿತು. ಅದಕ್ಕಿಂತ ಮುಖ್ಯವಾಗಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿತು ಎನ್ನಬಹುದು. ಇಶಾಂತ್ ಶರ್ಮ ಎಂಬ ಬೌಲರ್‌ನ ಉದಯಕ್ಕೆ ಆ ಟೆಸ್ಟ್ ಸಾಕ್ಷಿಯಾಯಿತು. ಅವರು ಅದ್ಭುತ ರೀತಿಯಲ್ಲಿ ಬೌಲಿಂಗ್ ಮಾಡಿದರು~ ಎಂದು ಹಸ್ಸಿ ನೆನಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT