ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಭಾರತಕ್ಕೆ ಸತತ ಗೆಲುವಿನ ಓಟದ ಕನಸು

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾವನ್ನು ಮಣಿಸಿದ ಭಾರತ ತಂಡಕ್ಕೆ ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ ಗೆಲುವಿನ ಓಟ ಮುಂದುವರಿಸುವ ಕನಸು.

ಸರಣಿಯ ಆರಂಭದಲ್ಲಿ ಕಾಂಗರೂಗಳ ಎದುರು ನಿರಾಸೆ ಹೊಂದಿದರೂ ಪುಟಿದೆದ್ದು ನಿಂತಿರುವ `ಮಹಿ~ ಪಡೆಯ ಗಮನ ಫೈನಲ್ ಕಡೆಗಿದೆ. ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುವ ವಿಶ್ವಾಸಕ್ಕೂ ಕೊರತೆ ಇಲ್ಲ. ಶ್ರೀಲಂಕಾ ವಿರುದ್ಧ ಗೆದ್ದು ಯಶಸ್ಸಿನ ಹಳಿ ಹಿಡಿದ ಭಾರತವು ಆಸ್ಟ್ರೇಲಿಯಾ ಎದುರು ಭಾನುವಾರ ನಾಲ್ಕು ವಿಕೆಟ್‌ಗಳ ಅಂತರದಿಂದ ಜಯಿಸಿದ್ದು ರೋಚಕ.

ಇದೇ ಉತ್ಸಾಹವನ್ನು ಕಾಯ್ದುಕೊಂಡು ಮುನ್ನುಗ್ಗಬೇಕು. ಅದೇ ನಾಯಕ ಮಹೇಂದ್ರ ಸಿಂಗ್ ದೋನಿ ಆಶಯ. ಮಂಗಳವಾರ ಅಡಿಲೇಡ್ ಓವಲ್‌ನಲ್ಲಿ ನಡೆಯುವ ಪಂದ್ಯದಲ್ಲಿ ಸಿಂಹಳೀಯರನ್ನು ಮತ್ತೊಮ್ಮೆ ಮಣಿಸುವುದು ಗುರಿ. ಲಂಕಾ ಎದುರು ನಿರಾಸೆಯಾಗದಂತೆ ಎಚ್ಚರ ವಹಿಸಿದರೆ, ಈ ಸರಣಿಯಲ್ಲಿ ಫೈನಲ್‌ನಲ್ಲಿ ಕಾಣಿಸಿಕೊಳ್ಳಲು ಸಾಧ್ಯ. ಅದೇ ಲೆಕ್ಕಾಚಾರದೊಂದಿಗೆ ಮಾಹೇಲ ಜಯವರ್ಧನೆ ನೇತೃತ್ವದ ತಂಡವನ್ನು ಮತ್ತೊಮ್ಮೆ ಸೋಲಿನ ಪ್ರಪಾತಕ್ಕೆ ದೂಡಲು ಸಜ್ಜಾಗಿದೆ ಭಾರತ.

ಸತತ ಎರಡು ಸೋಲಿನಿಂದ ಒತ್ತಡದಲ್ಲಿ ಸಿಲುಕಿದೆ ಶ್ರೀಲಂಕಾ. ಇದರ ಪ್ರಯೋಜನ ಪಡೆದು ಮಾಹೇಲ ಬಳಗದ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸುವುದು ದೋನಿ ಉದ್ದೇಶ. ಲಂಕಾ ತೀರ ಕಳಪೆ ಆಟವನ್ನೇನು ಆಡಿಲ್ಲದಿದ್ದರೂ, ಅದು ಯಶಸ್ಸಿನ ಹಾದಿ ಹಿಡಿಯಲು ಮಾತ್ರ ಸಾಧ್ಯವಾಗುತ್ತಿಲ್ಲ.

ಬೌಲಿಂಗ್ ವಿಭಾಗದಲ್ಲಿ ಲಯ ಕಂಡುಕೊಳ್ಳಲು ಈ ತಂಡದ ಬೌಲರ್‌ಗಳು ಪರದಾಡಿದ್ದಾರೆ. ಬ್ಯಾಟಿಂಗ್ ಸ್ವಲ್ಪ ಸಮಾಧಾನಕರವಾದರೂ ದೊಡ್ಡ ಮೊತ್ತ ಪೇರಿಸುವ ಹಾಗೂ ಗುರಿಯನ್ನು ಮುಟ್ಟುವ ಶಕ್ತಿ ತೋರಿಲ್ಲ. ಜಯ ಸಾಧ್ಯ ಎನಿಸುವಂತಿದ್ದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿಯೂ ಮುಗ್ಗರಿಸಿದ್ದು ಆಘಾತಕಾರಿ.

ಒತ್ತಡವನ್ನು ಸರಿಯಾಗಿ ನಿಭಾಯಿಸಿ ವಿಕೆಟ್‌ಗಳನ್ನು ಕಾಯ್ದುಕೊಂಡು ರನ್‌ಗಳನ್ನು ಹೆಚ್ಚಿಸಿಕೊಳ್ಳುವುದು ಶ್ರೀಲಂಕಾಕ್ಕೆ ಸುಲಭ ಎನಿಸಿಲ್ಲ. ಭಾರತವೂ ಈ ಮುನ್ನ ಇಂಥದೇ ಸಂಕಷ್ಟ ಎದುರಿಸಿತ್ತು. ಆದರೆ ಈಗ ಸಮಸ್ಯೆಯ ಸುಳಿಯಿಂದ ಹೊರಬಂದು ಕಷ್ಟಗಳನ್ನು ಮೀರಿ ನಿಂತಿದೆ.
 
ಅದೇ ರೀತಿಯಲ್ಲಿ ಜಯವರ್ಧನೆ ಕೂಡ ತಮ್ಮ ತಂಡವನ್ನು ಕೊರತೆಗಳಿಂದ ಮುಕ್ತಗೊಳಿಸುವಂಥ ಪಂದ್ಯ ಯೋಜನೆ ರೂಪಿಸಿಕೊಳ್ಳಬೇಕು. ಗೆಲುವಿನ ಸಮೀಪದಲ್ಲಿ ಇದ್ದಾಗ ಪ್ರಬಲ ಹೋರಾಟ ನಡೆಸದಿರುವ ಕಾರಣ ಆದ ನಿರಾಸೆ ಸಿಂಹಳೀಯರಿಗೆ ಸಹನೀಯ ಎನಿಸಿಲ್ಲ.

ಭಾರತದವರು ಮಾತ್ರ ಈಗ ಸ್ವಲ್ಪ ನಿರಾಳವಾಗಿದ್ದಾರೆ. ಎರಡು ಗೆಲುವಿನಿಂದ ಎಂಟು ಪಾಯಿಂಟುಗಳನ್ನು ಸಂಗ್ರಹಿಸಿದೆ. ಸತತ ಮೂರನೇ ವಿಜಯದೊಂದಿಗೆ ಪಾಯಿಂಟುಗಳ ಪಟ್ಟಿಯಲ್ಲಿ ಮೊದಲ ಎರಡರಲ್ಲಿ ಒಂದು ಸ್ಥಾನದಲ್ಲಿ ಗಟ್ಟಿಯಾಗುವ ಭರವಸೆಯನ್ನೂ ಹೊಂದಿದೆ. ಸಚಿನ್ ತೆಂಡೂಲ್ಕರ್ ಅವರಂಥ ಅನುಭವಿ ಆಟಗಾರರಿಗೆ ವಿರಾಮ ನೀಡಿದರೂ, ಯುವ ಪಡೆಯೊಂದಿಗೆ ಗೆಲ್ಲುವ ವಿಶ್ವಾಸವೂ ಕಾಣಿಸಿದೆ.

ಸರದಿ ಪ್ರಕಾರ ವಿಶ್ರಾಂತಿ ಎನ್ನುವ ತತ್ವವನ್ನು ಅನುಸರಿಸಿ `ಲಿಟಲ್ ಚಾಂಪಿಯನ್~ಗೆ ಒಂದು ಪಂದ್ಯದ ಮಟ್ಟಿಗೆ ಬಿಡುವು ನೀಡಿದ ತಂಡದ ನಿರ್ಣಯಕ್ಕೆ ಆಕ್ಷೇಪ ವ್ಯಕ್ತವಾಗಿದ್ದರೂ, ಪಂದ್ಯದಲ್ಲಿನ ಫಲಿತಾಂಶ ಸಕಾರಾತ್ಮಕವಾಗಿದ್ದರಿಂದ ಟೀಕಾಕಾರರ ಸದ್ದು ಸ್ವಲ್ಪ ಕಡಿಮೆಯಾಗಿದೆ. ಸರದಿಯಂತೆ ವಿಶ್ರಾಂತಿ ನಿಯಮವನ್ನು ಮಂಗಳವಾರದ ಪಂದ್ಯದಲ್ಲಿಯೂ ಪಾಲಿಸುವ ಸ್ಪಷ್ಟ ಸಂಕೇತವನ್ನು ತಂಡದ ಆಡಳಿತ ನೀಡಿದೆ.

ಆದರೆ ಯಾರಿಗೆ ವಿರಾಮ ಎನ್ನುವುದು ಮಾತ್ರ ಖಚಿತವಾಗಿಲ್ಲ. ಸುರೇಶ್ ರೈನಾ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಸರದಿಯಲ್ಲಿದ್ದಾರೆ. ಆದ್ದರಿಂದ ಈ ಮೂವರಲ್ಲಿ ಒಬ್ಬರು ಹನ್ನೊಂದರ ಪಟ್ಟಿಯಿಂದ ಹೊರಗೆ ಉಳಿಯುವ ಸಾಧ್ಯತೆ ಇದೆ.

ತಂಡಗಳು
ಶ್ರೀಲಂಕಾ:
ಮಾಹೇಲ ಜಯವರ್ಧನೆ (ನಾಯಕ), ಆ್ಯಂಜೆಲೊ ಮ್ಯಾಥ್ಯೂಸ್, ಕುಮಾರ ಸಂಗಕ್ಕಾರ, ತಿಲಕರತ್ನೆ ದಿಲ್ಶಾನ್, ಫರ್ವೇಜ್ ಮಹಾರೂಫ್, ಲಸಿತ್ ಮಾಲಿಂಗ, ದಿನೇಶ್ ಚಂಡಿಮಾಲ, ತಿಸ್ಸಾರ ಪೆರೆರಾ, ಸಚಿತ್ರ ಸೇನನಾಯಕೆ, ಲಾಹಿರು ತಿರುಮನ್ನೆ, ಉಪುಲ್ ತರಂಗ, ಚನಕ ವೆಲೆಗೆಡೆರಾ, ಧಮಿಕಾ ಪ್ರಸಾದ್, ತಿಲಾನ್ ಸಮರವೀರ, ರಂಗನ ಹೆರಾತ್ ಮತ್ತು ನುವಾನ್ ಕುಲಶೇಖರ.

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ಉಮೇಶ್ ಯಾದವ್, ರಾಹುಲ್ ಶರ್ಮ, ಪ್ರವೀಣ್ ಕುಮಾರ್, ಆರ್.ವಿನಯ್ ಕುಮಾರ್, ರವಿಚಂದ್ರನ್ ಅಶ್ವಿನ್, ಜಹೀರ್ ಖಾನ್, ಮನೋಜ್ ತಿವಾರಿ ಮತ್ತು ಇರ್ಫಾನ್ ಪಠಾಣ್.
ಅಂಪೈರ್‌ಗಳು: ನೈಜಿಲ್ ಲಾಂಗ್ (ಇಂಗ್ಲೆಂಡ್) ಮತ್ತು ಸೈಮನ್ ಡಗ್ಲಸ್ ಫ್ರೈ (ಆಸ್ಟ್ರೇಲಿಯಾ); ಮೂರನೇ ಅಂಪೈರ್: ಬ್ರೂಸ್ ಆಕ್ಸೆನ್‌ಫೋರ್ಡ್ (ಆಸ್ಟ್ರೇಲಿಯಾ).
ಮ್ಯಾಚ್ ರೆಫರಿ: ಆ್ಯಂಡಿ ಪೈಕ್ರಾಫ್ಟ್ (ಜಿಂಬಾಬ್ವೆ).
ಪಂದ್ಯ ಆರಂಭ (ಭಾರತೀಯ ಕಾಲಮಾನ): ಬೆಳಿಗ್ಗೆ 8.50ಕ್ಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT