ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಮ್ಯಾಟ್ ಪ್ರಯರ್‌ಗೆ ಐಸಿಸಿ ಛೀಮಾರಿ

Last Updated 8 ಜೂನ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಐಎಎನ್‌ಎಸ್): ಶ್ರೀಲಂಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ವೇಳೆ ಔಟಾಗಿ ಪೆವಿಲಿಯನ್‌ಗೆ ಮರಳುವ ಸಂದರ್ಭ ಕಿಟಕಿಯ ಗಾಜನ್ನು ಒಡೆದುಹಾಕಿದ್ದ ಇಂಗ್ಲೆಂಡ್ ತಂಡದ ಆಟಗಾರ ಮ್ಯಾಟ್ ಪ್ರಯರ್‌ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಛೀಮಾರಿ ಹಾಕಿದೆ.

ಲಾರ್ಡ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ಕೊನೆಗೊಂಡ ಪಂದ್ಯದಲ್ಲಿ  ರನೌಟ್ ಆಗಿ ಪೆವಿಲಿಯನ್‌ಗೆ ಮರಳುವ ಸಂದರ್ಭ ಪ್ರಯರ್ ತಮ್ಮ ಬ್ಯಾಟ್‌ನಿಂದ ಕಿಟಕಿಯ ಗಾಜನ್ನು ಒಡೆದುಹಾಕಿದ್ದರು. ಈ ವೇಳೆ ಸ್ಥಳದಲ್ಲಿದ್ದ ಮಹಿಳೆಯೊಬ್ಬಳ ಕಾಲಿಗೆ ಗಾಯವಾಗಿತ್ತು. ದಿನದಾಟದ ಬಳಿಕ ಪ್ರಯರ್ ಅವರು ಆ ಮಹಿಳೆಯ ಕ್ಷಮೆಯಾಚಿಸಿದ್ದರು.

`ಪ್ರಯರ್ ಐಸಿಸಿ ನೀತಿ ಸಂಹಿತೆಯ 2.1.2 ನಿಯಮ ಉಲ್ಲಂಘಿಸಿದ್ದಾರೆ~ ಎಂದು ಐಸಿಸಿಯ ಹೇಳಿಕೆ ತಿಳಿಸಿದೆ. ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಅವರು ಇಂಗ್ಲೆಂಡ್‌ನ ಆಟಗಾರನಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಅವರು ದಂಡ ಅಥವಾ ನಿಷೇಧ ಶಿಕ್ಷೆಯಿಂದ ಪಾರಾಗಿದ್ದಾರೆ.

`ಈ ಘಟನೆ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಎಂಬುದು ಮ್ಯಾಟ್ ಅವರಿಗೆ ತಿಳಿದಿದೆ. ಭವಿಷ್ಯದಲ್ಲಿ ಅವರು ಇನ್ನಷ್ಟು ಎಚ್ಚರಿಕೆ ವಹಿಸಬೇಕು. ಅವರು ಉದ್ದೇಶಪೂರ್ವಕವಾಗಿ ಗಾಜನ್ನು ಒಡೆದುಹಾಕಿಲ್ಲ ಎಂಬುದು ಸ್ಪಷ್ಟವಾಗಿದೆ~ ಎಂದು ಶ್ರೀನಾಥ್ ತಿಳಿಸಿದ್ದಾರೆ.

ಪ್ರಯರ್ ಕ್ಷಮೆಯಾಚಿಸುವ ವೇಳೆ ಇಂಗ್ಲೆಂಡ್ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಕೂಡಾ ಈ ವೇಳೆ ಜೊತೆಗಿದ್ದರು. `ಇದು ದುರದೃಷ್ಟಕರ ಘಟನೆ. ಈ ಘಟನೆ ಆಕಸ್ಮಿಕವಾಗಿ ನಡೆದಿದೆ. ಮ್ಯಾಟ್ ಅವರು ಉದ್ದೇಶಪೂರ್ವಕವಾಗಿ ಗಾಜನ್ನು ಒಡೆದು ಹಾಕಿಲ್ಲ~ ಎಂದು ಸ್ಟ್ರಾಸ್ ತಿಳಿಸಿದ್ದಾರೆ.

`ಅವರು ಬ್ಯಾಟ್‌ನ್ನು ಕೆಳಗಿಡುತ್ತಿದ್ದ ವೇಳೆ ಅದು ಕಿಟಕಿಯ ಗಾಜಿಗೆ ತಾಗಿದೆ. ಅದರ ಸಮೀಪ ಕೆಲವು ಪ್ರೇಕ್ಷಕರಿದ್ದರು. ಗಾಜಿನ ಚೂರು ಅವರ ಮೇಲೆ ಬೀಳುವ ಸಾಧ್ಯತೆಯಿತ್ತು. ಪ್ರಯರ್ ಘಟನೆಯ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಇಂತಹ ಘಟನೆ ಮರುಕಳಿಸುವುದಿಲ್ಲ ಎಂಬ ವಿಶ್ವಾಸ ನನ್ನದು~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT