ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ರಣಜಿ ಟೂರ್ನಿಯಲ್ಲಿ ಬದಲಾವಣೆಗೆ ಶಿಫಾರಸು

Last Updated 12 ಜೂನ್ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ದೇಶಿ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿ ಮಾದರಿಯಲ್ಲಿ ಸಮಗ್ರ ಬದಲಾವಣೆಗೆ ಮಾಜಿ ನಾಯಕ ಸೌರವ್ ಗಂಗೂಲಿ ನೇತೃತ್ವದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ತಾಂತ್ರಿಕ ಸಮಿತಿ ಶಿಫಾರಸು ಮಾಡಿದೆ.

ಈಗಿರುವ ಎಲೈಟ್ ಹಾಗೂ ಪ್ಲೇಟ್ ಡಿವಿಷನ್ ಮಾದರಿಗೆ ಬದಲಾಗಿ 27 ತಂಡಗಳ ಮೂರು ಗುಂಪು ಮಾಡಿ ಆಡಿಸಲು ತಾಂತ್ರಿಕ ಸಮಿತಿ ಸಲಹೆ ನೀಡಿದೆ. ಪ್ರತಿ ಗುಂಪಿನಲ್ಲಿ ಒಂಬತ್ತು ತಂಡಗಳು ಇರುತ್ತವೆ. ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳನ್ನೂ ಐದು ದಿನ ನಡೆಸಲು ಈ ಸಮಿತಿ ಸಲಹೆ ನೀಡಿದೆ. ಈ ಹಿಂದೆ ಫೈನಲ್ ಪಂದ್ಯವನ್ನು ಮಾತ್ರ ಐದು ದಿನ ನಡೆಸಲಾಗುತಿತ್ತು. ಆದರೆ ಬಿಸಿಸಿಐ ಕಾರ್ಯಕಾರಿ ಸಮಿತಿ ಈ ಎಲ್ಲಾ ಶಿಫಾರಸುಗಳಿಗೆ ಅನುಮೋದನೆ ನೀಡಬೇಕು.

`ರಣಜಿ ಮಾದರಿಯಲ್ಲಿ ನಾವು ಎರಡು ಮಹತ್ವದ ಬದಲಾವಣೆ ಮಾಡಲು ಶಿಫಾರಸು ಮಾಡಿದ್ದೇವೆ. ಎ, ಬಿ, ಸಿ ಎಂದು ಮೂರು ಗುಂಪು ಮಾಡಿ ಆಡಿಸಲಾಗುವುದು. ಲೀಗ್ ಹಂತದಲ್ಲಿ ಪ್ರತಿ ತಂಡಗಳು ತಲಾ ಎಂಟು ಪಂದ್ಯಗಳನ್ನು ಆಡಲಿವೆ. ಬಳಿಕ ಬಡ್ತಿ ಹಾಗೂ ಹಿಂಬಡ್ತಿ ಇರುತ್ತದೆ~ ಎಂದು ಮಂಗಳವಾರ ನಡೆದ ಸಭೆಯ ಬಳಿಕ ಸೌರವ್ ಗಂಗೂಲಿ ವಿವರಿಸಿದರು.

ಈ ಸಭೆಯು ಸುಮಾರು ಎರಡು ಗಂಟೆ ನಡೆಯಿತು. ಸಭೆಗೆ ಮಾಜಿ ನಾಯಕ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಅನಿಲ್ ಕುಂಬ್ಳೆ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಇಲ್ಲಿಯವರೆಗೆ ರಣಜಿ ಟೂರ್ನಿಯನ್ನು ಎರಡು ಮಾದರಿಯಲ್ಲಿ ಆಯೋಜಿಸಲಾಗುತಿತ್ತು.
 
ಪ್ರಮುಖ ತಂಡಗಳಿರುವ ಎಲೈಟ್ ಗುಂಪಿನಲ್ಲಿ 15 ತಂಡಗಳು ಹಾಗೂ ಪ್ಲೇಟ್ ಗುಂಪಿನಲ್ಲಿ 12 ತಂಡಗಳು ಇದ್ದವು. ಇದರಲ್ಲಿಯೇ ತಲಾ ಎರಡು ಗುಂಪುಗಳನ್ನು ಮಾಡಲಾಗುತಿತ್ತು. ಎಲೈಟ್ ಗುಂಪಿನಲ್ಲಿ ಪ್ರತಿ ತಂಡಕ್ಕೆ ಲೀಗ್ ಹಂತದಲ್ಲಿ ಐದು ಪಂದ್ಯಗಳು ಮಾತ್ರ ಇರುತ್ತಿದ್ದವು.

`ಈಗ ಮಾಡಲಾಗಿರುವ ಬದಲಾವಣೆ ಮತ್ತಷ್ಟು ಸ್ಪರ್ಧಾತ್ಮಕವಾಗಿರಲಿದೆ. ಜೊತೆಗೆ ಹೆಚ್ಚು ಪಂದ್ಯಗಳನ್ನು ಆಡಲು ಅವಕಾಶ ಸಿಗುತ್ತದೆ. ಆದರೆ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ~ ಎಂದು ದಾದಾ ಹೇಳಿದರು.

ಶಿಫಾರಸಿನ ಪ್ರಕಾರ `ಬಿ~ ಗುಂಪಿನಲ್ಲಿ ಮೊದಲ ಮೂರು ಸ್ಥಾನ ಪಡೆಯುವ ತಂಡಗಳು `ಎ~ ಗುಂಪಿಗೆ ಬಡ್ತಿ ಪಡೆಯಲಿವೆ. `ಎ~ನಲ್ಲಿ ಕೊನೆಯ ಸ್ಥಾನ ಪಡೆಯುವ ಮೂರು ತಂಡಗಳು `ಬಿ~ಗೆ ಹಿಂಬಡ್ತಿ ಪಡೆಯಲಿವೆ. `ಬಿ~ನಲ್ಲಿ ಕೊನೆಯ ಸ್ಥಾನ ಪಡೆಯುವ ಎರಡು ತಂಡಗಳು `ಸಿ~ ಗುಂಪಿಗೆ ಹಿಂಬಡ್ತಿ ಪಡೆಯಲಿವೆ.
 
ಹಾಗೇ, `ಸಿ~ನಲ್ಲಿ ಅಗ್ರಸ್ಥಾನ ಪಡೆಯುವ ಎರಡು ತಂಡಗಳು `ಬಿ~ಗೆ ಬಡ್ತಿ ಪಡೆಯಲಿವೆ. `ಎ~, `ಬಿ~ನಲ್ಲಿ ಅಗ್ರಸ್ಥಾನ ಪಡೆಯುವ ಮೂರು ತಂಡಗಳು ಹಾಗೂ `ಸಿ~ನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. ಹಾಗೇ, ಪಾಯಿಂಟ್ ಮಾದರಿಯಲ್ಲೂ ಕೆಲ ಬದಲಾವಣೆ ಮಾಡಲಾಗಿದೆ.

ದೇಶಿ ಏಕದಿನ ಟೂರ್ನಿ ಮಾದರಿಯಲ್ಲೂ ಕೆಲ ಬದಲಾವಣೆಗೆ ತಾಂತ್ರಿಕ ಸಮಿತಿ ಶಿಫಾರಸು ಮಾಡಿದೆ. ಗರಿಷ್ಠ 12 ಓವರ್ ಬೌಲ್ ಮಾಡಲು ಒಬ್ಬ ಬೌಲರ್‌ಗೆ ಅವಕಾಶ ನೀಡುವುದು, ಒಂದು ಓವರ್‌ನಲ್ಲಿ ಎರಡು ಬೌನ್ಸರ್ ಹಾಕಲು ಅವಕಾಶ ಇರಬೇಕು ಎಂದು ಅದು ಸಲಹೆ ಮಾಡಿದೆ.

ಎನ್.ಕೆ.ಪಿ.ಸಾಳ್ವೆ ಚಾಲೆಂಜರ್ಸ್ ಸರಣಿಯಲ್ಲೂ ಬದಲಾವಣೆಗೆ ಸಲಹೆ ನೀಡಿದೆ. ಈಗಿರುವ ನಾಲ್ಕು ತಂಡಗಳ ಜೊತೆಗೆ ವಿಜಯ ಹಜಾರೆ ಟ್ರೋಫಿ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಚಾಂಪಿಯನ್ ಆದ ತಂಡವನ್ನೂ ಸೇರಿಸಿಕೊಳ್ಳಬೇಕು ಹಾಗೂ ಬಿಸಿಸಿಐ ಸೀನಿಯರ್ ಆಯ್ಕೆ ಸಮಿತಿ ಸೂಚಿಸಿದ ಎರಡು ತಂಡಗಳಿಗೆ ಅವಕಾಶ ನೀಡಬೇಕು ಎಂದು ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT