ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ವಿಂಡೀಸ್ ವಿರುದ್ಧ ನಾಳೆಯಿಂದ ಮೊದಲ ಟೆಸ್ಟ್ ಪಂದ್ಯ...

Last Updated 18 ಜೂನ್ 2011, 19:30 IST
ಅಕ್ಷರ ಗಾತ್ರ

ಕಿಂಗ್‌ಸ್ಟನ್, ಜಮೈಕ (ಪಿಟಿಐ): ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿ ಆರಂಭವಾಗುವ ಮುನ್ನವೇ ಭಾರತ ತಂಡ ಆತಂಕದ ಸುಳಿಯಲ್ಲಿ ಸಿಲುಕಿದೆ. ಗಾಯದಿಂದ ಬಳಲುತ್ತಿರುವ ವೇಗದ ಬೌಲರ್ ಮುನಾಫ್ ಪಟೇಲ್ ಅವರು ಮೊದಲ ಟೆಸ್ಟ್‌ನಲ್ಲಿ ಆಡುವುದು ಅನುಮಾನ.

ಭಾರತ ಮತ್ತು ವಿಂಡೀಸ್ ತಂಡಗಳ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ಇಲ್ಲಿನ ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾಗಲಿದೆ. ಶುಕ್ರವಾರ ಭಾರತ ತಂಡದ ಆಟಗಾರರು ಕಠಿಣ ತಾಲೀಮು ನಡೆಸಿದರು. ಆದರೆ ಮುನಾಫ್ ಮಾತ್ರ ವಿಶ್ರಾಂತಿ ಬಯಸಿದರು.

ಟೆಸ್ಟ್ ತಂಡವನ್ನು ಸೇರಿಕೊಂಡ ಮಹೇಂದ್ರ ಸಿಂಗ್ ದೋನಿ, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರು ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅದರ ಮೊದಲ ಹೆಜ್ಜೆಯಾಗಿ ಶುಕ್ರವಾರ ಪೂರ್ಣ ಅವಧಿಯ ಅಭ್ಯಾಸದಲ್ಲಿ ಪಾಲ್ಗೊಂಡರು.

ಮುನಾಫ್ ಅಭ್ಯಾಸ ನಡೆಸದಿರಲು ಏನು ಕಾರಣ ಎಂಬುದನ್ನು ಕೋಚ್ ಡಂಕನ್ ಫ್ಲೆಚರ್ ಬಹಿರಂಗಪಡಿಸಿಲ್ಲ. ಅಂತಿಮ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಅವರು ಕಳೆದ ಎರಡು ಅಭ್ಯಾಸ ಅವಧಿಗಳಲ್ಲಿ ಪಾಲ್ಗೊಳ್ಳಲಿಲ್ಲ. `ಮುನಾಫ್ ಮೊದಲ ಟೆಸ್ಟ್‌ಗೆ ಆಯ್ಕೆಗೆ ಲಭ್ಯರಿರುವರು~ ಎಂದಷ್ಟೇ ಫ್ಲೆಚರ್ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ಕೊನೆಗೊಂಡ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ವೇಳೆ ಮುನಾಫ್ ಪ್ರಭಾವಿ ಪ್ರದರ್ಶನ ನೀಡಿದ್ದರು. ಮಾತ್ರವಲ್ಲ ವಿಂಡೀಸ್ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಎಂಟು ವಿಕೆಟ್ ತಮ್ಮದಾಗಿಸಿಕೊಂಡಿದ್ದರು. ಆದರೆ ಗುಜರಾತ್‌ನ ಈ ವೇಗಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಒಂದೂ ಟೆಸ್ಟ್ ಆಡಿಲ್ಲ. ಸೋಮವಾರದ ವೇಳೆಗೆ ಅವರು ದೈಹಿಕ ಸಾಮರ್ಥ್ಯ ಮರಳಿ ಪಡೆಯದಿದ್ದರೆ, ಪ್ರವೀಣ್ ಕುಮಾರ್ ಅಂತಿಮ ಇಲೆವೆನ್‌ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬಹುದು.

ಈಗಲೂ ನರ್ವಸ್ ಆಗುವೆ (ಐಎಎನ್‌ಎಸ್ ವರದಿ): `ಗೋಡೆ~ ಖ್ಯಾತಿಯ ರಾಹುಲ್ ದ್ರಾವಿಡ್ ಅವರು ಕಳೆದ 15 ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. ಆದರೆ ಪ್ರತಿಯೊಂದು ಪಂದ್ಯದ ಆರಂಭಕ್ಕೆ ಮುನ್ನ ಈಗಲೂ ನರ್ವಸ್ ಆಗುತ್ತೇನೆ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

150 ಟೆಸ್ಟ್ ಪಂದ್ಯಗಳನ್ನಾಡಿರುವ ಕರ್ನಾಟಕದ ಈ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಜೊತೆ ಈಗಲೂ ಭಾರತ ತಂಡದ ಬ್ಯಾಟಿಂಗ್‌ನ ಆಧಾರ ಸ್ತಂಭ ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT