ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಸಿಂಹಳೀಯರಿಗೆ ಆಸೀಸ್ ತಿರುಗೇಟು?

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹೊಬರ್ಟ್: ಪುಟಿದೆದ್ದು ನಿಂತಿರುವ ಶ್ರೀಲಂಕಾ ಗೆಲುವಿನ ಹಾದಿಯಲ್ಲಿ ನಡೆಯುವ ಉತ್ಸಾಹ ಹೊಂದಿದೆ. ಅದಕ್ಕೆ ಅಡ್ಡಗಾಲು ಹಾಕುವುದು ಆತಿಥೇಯ ಆಸ್ಟ್ರೇಲಿಯಾದ ಹುನ್ನಾರ.

ಸಿಡ್ನಿಯಲ್ಲಿ ಕಳೆದ ವಾರ ನಡೆದ ಪಂದ್ಯದಲ್ಲಿ ಬೋನಸ್ ಪಾಯಿಂಟ್‌ನೊಂದಿಗೆ ಗೆಲುವಿನ ಮುತ್ತು ಕಿತ್ತುಕೊಂಡ ಲಂಕಾಕ್ಕೆ ತಿರುಗೇಟು ನೀಡುವುದು ಆಸೀಸ್ ಪಡೆಯ ಗುರಿ. ಆದರೆ ಸತತ ಎರಡು ಪಂದ್ಯ ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿರುವ ಸಿಂಹಳೀಯರು ಸುಲಭದ ತುತ್ತಂತೂ ಅಲ್ಲ.

ತ್ರಿಕೋನ ಕ್ರಿಕೆಟ್ ಸರಣಿಯ ಐದನೇ ಪಂದ್ಯದಲ್ಲಿ ಭಾರತದ ಎದುರು `ಟೈ~ಗೆ ತೃಪ್ತಿಪಟ್ಟು ಪಾಯಿಂಟುಗಳ ಖಾತೆ ತೆರೆದ ಮಾಹೇಲ ಜಯವರ್ಧನೆ ನೇತೃತ್ವದ ತಂಡಕ್ಕೆ ಆನಂತರ ಸೋಲು ಕಾಡಿಲ್ಲ. ಆತಿಥೇಯರನ್ನು ಎಂಟು ವಿಕೆಟ್‌ಗಳ ಅಂತರದಿಂದ ಮಣಿಸಿ, ಮಹೇಂದ್ರ ಸಿಂಗ್ ದೋನಿ ಬಳಗದವರನ್ನು 51 ರನ್‌ಗಳಿಂದ ಸೋಲಿಸಿ ಫೈನಲ್ ಕನಸನ್ನು ಬಲವಾಗಿಸಿಕೊಂಡಿದೆ. ತನ್ನ ಕೊನೆಯ ಮೂರು ಪಂದ್ಯಗಳಲ್ಲಿ ಎರಡನ್ನಂತೂ ಗೆಲ್ಲುವುದು ಅದರ ದಿಟ್ಟ ನಿರ್ಧಾರ.

ಶುಕ್ರವಾರ ಇಲ್ಲಿನ ಬೆಲೆರೀವ್ ಓವಲ್‌ನಲ್ಲಿ ನಡೆಯುವ ಹಣಾಹಣಿಯಲ್ಲಿ ಆಸ್ಟ್ರೇಲಿಯಾಕ್ಕೆ ಮತ್ತೊಂದು ಪೆಟ್ಟು ನೀಡಲು ಲಂಕಾ ಸಜ್ಜಾಗಿದೆ. ಬ್ಯಾಟಿಂಗ್ ಬಲವನ್ನು ಇನ್ನಷ್ಟು ಹಿಗ್ಗಿಸುವ ಆಶಯದೊಂದಿಗೆ ಈ ತಂಡದವರು ಶಿಸ್ತಿನಿಂದ ನೆಟ್ಸ್‌ನಲ್ಲಿ ತಾಲೀಮು ಮಾಡಿದ್ದಾರೆ.

ತಮ್ಮ ಬೌಲರ್‌ಗಳು ಕೂಡ ನಿರಾಸೆ ಮಾಡುವುದಿಲ್ಲ ಎನ್ನುವ ಭರವಸೆ ಹೊಂದಿರುವ ಜಯವರ್ಧನೆ ಅವರು ವೇಗಕ್ಕೆ ಒತ್ತು ನೀಡಲು ಚಿಂತನೆ ನಡೆಸಿರುವುದು ಸಹಜ. ಚೆಂಡು ಪುಟಿದೇಳುವಂಥ ಗುಣದ ಅಂಗಳದಲ್ಲಿ ಎದುರಾಳಿಗಳಿಗೆ ಕಡಿವಾಣ ಹಾಕಲು ವೇಗದ ದಾಳಿಯೇ ಸೂಕ್ತ. ಆದರೂ ಕಳೆದ ಎರಡು ಪಂದ್ಯಗಳಲ್ಲಿದ್ದ ಸಂಯೋಜನೆಯಲ್ಲಿ ಹೆಚ್ಚಿನ ವ್ಯತ್ಯಾಸ ಆಗುವ ಸಾಧ್ಯತೆಯಂತೂ ಕಡಿಮೆ.

ಆಸ್ಟ್ರೇಲಿಯಾ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಂತೂ ಖಚಿತ. ರಿಕಿ ಪಾಂಟಿಂಗ್ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ತೆರವಾಗಿರುವ ಸ್ಥಾನವನ್ನು ತುಂಬಬೇಕು. ಅದಕ್ಕೆ ಕೆಲವು ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಗಾಯದ ಕಾರಣ ನಾಯಕ    ಕ್ಲಾರ್ಕ್ ಕಳೆದ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಆಗಲೇ ತಂಡದ ಪ್ರದರ್ಶನ ಮಟ್ಟವೂ ಕುಸಿತ ಕಂಡಿತು. ಈಗ ಮತ್ತೆ ಅವರು ಹಿಂದಿರುಗಿದ್ದಾರೆ. ತಂಡವು ಮತ್ತೆ ಜಯದ ಹಾದಿ ಹಿಡಿಯಂತೆ ಮಾಡುವುದು ಅವರ ಹೊಣೆ.

ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಕೂಡ ಹಿಂದಿರುಗಿದ್ದು ಆಸ್ಟ್ರೇಲಿಯಾ ಪಾಳಯದಲ್ಲಿ ಮತ್ತೆ ಚೈತನ್ಯ ಮೂಡಿಸಿದೆ.
ಆದರೂ ಕ್ಲಾರ್ಕ್ ನಾಯಕತ್ವದ ತಂಡಕ್ಕೆ ಸಿಂಹಳೀಯರ ಬ್ಯಾಟಿಂಗ್ ಶಕ್ತಿಯ ಬಗ್ಗೆ ಭಯವಿದೆ. ತಮ್ಮ ಬೌಲರ್‌ಗಳ ಮೇಲೆ ಹೆಚ್ಚಿನ ಹೊರೆ ಬೀಳದ ರೀತಿಯಲ್ಲಿ ಇನಿಂಗ್ಸ್ ಕಟ್ಟುವ ಛಲ ಹೊಂದಿರುವ ಬ್ಯಾಟ್ಸ್‌ಮನ್‌ಗಳಿರುವ ಲಂಕಾ ಖಂಡಿತ ಅಪಾಯಕಾರಿ. ಟೂರ್ನಿಯ ಆರಂಭದಲ್ಲಿ ಶ್ರೀಲಂಕಾ ತಂಡವನ್ನು ಲಘುವಾಗಿ ಪರಿಗಣಿಸಲಾಗಿತ್ತು. ಆದರೆ ಈಗ ಅದೇ ಫೈನಲ್‌ನಲ್ಲಿ ಸ್ಥಾನ ಖಚಿತ ಮಾಡಿಕೊಳ್ಳುವ ನೆಚ್ಚಿನ ತಂಡವಾಗಿದೆ. ಭಾರತದವರು ಲೀಗ್ ಪಾಯಿಂಟುಗಳ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದಾರೆ.

ಜಯವರ್ಧನೆ ತಮ್ಮ ತಂಡವು ಆಸ್ಟ್ರೇಲಿಯಾವನ್ನೂ ಲೀಗ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಳ್ಳುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಆದ್ದರಿಂದಲೇ ಅವರು ಬಾಕಿ ಮೂರರಲ್ಲಿ ಮೂರೂ ಪಂದ್ಯಗಳನ್ನು ಜಯಿಸುವುದ ಗುರಿ ಎಂದು ದಿಟ್ಟತನದಿಂದ ಹೇಳಿದ್ದಾರೆ.

ಪಂದ್ಯ ಆರಂಭ (ಭಾರತೀಯ ಕಾಲಮಾನ): ಬೆಳಿಗ್ಗೆ 8.50ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT