ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಹಬ್ಬ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕ್ರಿಕೆಟ್‌ಪ್ರಿಯರನ್ನು ಮೋಡಿ ಮಾಡುವ ಚುಟುಕು ಆಟದ ಮೋಜು ಆರಂಭಕ್ಕೆ ಇನ್ನು ಒಂದೇ ಒಂದು ದಿನ  ಬಾಕಿ. 16 ದಿನ ನಡೆಯುವ ಈ ಹಬ್ಬಕ್ಕೆ ಶುಕ್ರವಾರ ಮುನ್ನುಡಿ.
ಉದ್ಯಾನ ನಗರಿಯ ಕ್ರೀಡಾ ಪ್ರೇಮಿಗಳ ಕಣ್ಣುಗಳಲ್ಲಿ ಸಾವಿರ ಸಾವಿರ ಕನಸು.

ತಮ್ಮ ನೆಚ್ಚಿನ ತಂಡಕ್ಕೆ ಬೆಂಬಲ ನೀಡುವ ಹುರುಪು. ನಿನ್ನ ಆರ್ಭಟದಲ್ಲಿ ನಮ್ಮ ಅಭಿಮಾನ ಕೊಚ್ಚಿ ಹೋಗದಿರಲಿ ಎಂದು ಮಳೆರಾಯನಲ್ಲಿ ವಿನಮ್ರವಾಗಿ ಬೇಡಿಕೊಳ್ಳುವ ತವಕ. ಇದಕ್ಕೆಲ್ಲಾ ಕಾರಣ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದ ಸಂಭ್ರಮ ಒಂದೆಡೆಯಾದರೆ, ಅಕ್ಟೋಬರ್ ಮೊದಲ ವಾರದಲ್ಲಿನ ದಸರಾ ಹಬ್ಬ ನಿತ್ಯದ ಉತ್ಸಾಹ ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ.

ಇದಕ್ಕೆಲ್ಲಾ ಪೂರಕ ಎನ್ನುವಂತೆ ಈ ಹಬ್ಬಗಳ ಅಬ್ಬರದಲ್ಲಿ ಚುಟುಕು ಕ್ರಿಕೆಟ್‌ನ ಹಬ್ಬವೂ ಅಭಿಮಾನಿಗಳ ಕ್ರೇಜು ಹಾಗೂ ಮೋಜು ಹೆಚ್ಚಿಸಿದೆ. ಈ ಎಲ್ಲಾ ಕಾರಣದಿಂದಲೇ `ಕಾಡಬೇಡ ವರುಣ ರಾಯ~ ಎಂದು ಮೊರೆಯಿಡುತ್ತಿದ್ದಾರೆ, ಮಣ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಚಾಂಪಿಯನ್ಸ್ ಟೂರ್ನಿಯ ಪ್ರಧಾನ ಹಂತದ ಪಂದ್ಯಗಳು ಶುಕ್ರವಾರ ಆರಂಭಗೊಳ್ಳಲಿವೆ. ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ವಾರಿಯರ್ಸ್ ತಂಡಗಳ ನಡುವೆ ರಾತ್ರಿ 8 ಗಂಟೆಗೆ ಶುರು.

ಕೋಲ್ಕತ್ತದಲ್ಲಿ ಭಾರಿ ಮಳೆ ಸುರಿದ ಕಾರಣ ಅಲ್ಲಿ ನಡೆಯಬೇಕಿದ್ದ ಒಂದು ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವರ್ಗವಾಗಿದೆ. ಇದು ಇಲ್ಲಿನ ಅಭಿಮಾನಿಗಳಿಗೆ ಸಂತಸ ಹೆಚ್ಚಾಗಲು ಕಾರಣ.

ಮಂಗಳವಾರ ಜನ್ಮದಿನ ಆಚರಿಸಿಕೊಂಡ ಆರ್‌ಸಿಬಿ ತಂಡದ ಆಟಗಾರ `ಬರ್ತ್ ಡೇ ಬಾಯ್~ ಕ್ರೀಸ್ ಗೇಲ್ ಈ ಪಂದ್ಯವನ್ನು ಅತ್ಯಂತ ಉತ್ಸುಕತೆಯಿಂದ ಎದುರು ನೋಡುತ್ತಿದ್ದಾರೆ.

`ನಾನು ಜನಿಸಿದ ನನ್ನ ದೇಶಕ್ಕಿಂತ ಬೆಂಗಳೂರಿನಲ್ಲಿಯೇ ನನಗೆ ಹೆಚ್ಚು ಅಭಿಮಾನಿಗಳಿದ್ದಾರೆ~ ಎಂದು ಈ ಆಟಗಾರ ಹೇಳಿರುವುದರಿಂದ ಇಲ್ಲಿನ ಕ್ರೀಡಾ ಪ್ರೇಮಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಚಾಂಪಿಯನ್ಸ್ ಲೀಗ್‌ನ ಚೊಚ್ಚಲ ಪಂದ್ಯವಾದ ಕಾರಣ ಟಿಕೆಟ್ ಖರೀದಿಸಲು ಜನ ಮುಗಿ ಬಿದ್ದಿದ್ದಾರೆ. ಅದರಲ್ಲೂ ಈ ಸಲದ ಐಪಿಎಲ್‌ನಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ ಗೇಲ್ ಬ್ಯಾಟಿಂಗ್ ಮೋಡಿಯನ್ನು ಎದುರು ನೋಡುತ್ತಿದ್ದಾರೆ.

ಪುಟ್ಟ ಪುಟ್ಟ ಬಾಲಕರು ತಮ್ಮ ನೆಚ್ಚಿನ ತಂಡದ ಆಟಗಾರರ ಭಾವಚಿತ್ರ ಹಿಡಿದು ಆಟಗಾರರಿಗೆ ಹುರುಪು ತುಂಬಲು ಸಜ್ಜುಗೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಟೀ ಶರ್ಟ್ ಖರೀದಿಯಲ್ಲಿ ತಲ್ಲೆನರಾಗಿದ್ದಾರೆ.

ಹಾಗೆಯೇ ಅಕ್ಟೋಬರ್ ಮೊದಲ ವಾರದಿಂದ ಶಾಲೆಗಳಿಗೆ ರಜೆ. ಇದು ಚುಟುಕು ಆಟಕ್ಕೆ ಹೆಚ್ಚು ಹುಮ್ಮಸ್ಸು, ವೀಕ್ಷಕರನ್ನು ತಂದು ಕೊಡಲಿದೆ.

ಆದರೆ ನಗರದಲ್ಲಿ ಹೇಳದೇ ಕೇಳದೆ ಬರುತ್ತಿರುವ, ಸುರಿಯತ್ತಿರುವ ಮಳೆ ಅಲ್ಪ ಕಾಲ ವಿಶ್ರಾಂತಿ ನೀಡುವುದರ ಮೇಲೆ ಎಲ್ಲ ಸಂಭ್ರಮ ಅವಲಂಬಿಸಿದೆ. ವರುಣ ಕೃಪೆದೋರಿದರೆ ಚುಟುಕು ಆಟದ ಬ್ಯಾಟಿಂಗ್ ಅಬ್ಬರ, ಬೌಲಿಂಗ್ ದರ್ಬಾರ್‌ಗೆ ಎಣೆಯೇ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT