ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಮೋಹದ ಬೆನ್ನಟ್ಟಿ...

ನನ್ನ ಕಥೆ: ಕರಣಾ ಜೈನ್
Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಭವಿತವ್ಯದಲ್ಲಿ ನಾವು ಏನಾಗಿ ರೂಪುಗೊಳ್ಳುತ್ತೇವೆ ಎನ್ನುವುದು ನಮ್ಮ ಸುತ್ತಮುತ್ತಲಿನ ವಾತಾವರಣವೇ ನಿರ್ಧರಿಸುತ್ತದೆ ಎನ್ನುವ ಮಾತಿದೆ. ಇದು ಯಾರ ವಿಷಯದಲ್ಲಿ ಹೇಗೋ ಏನೋ? ಆದರೆ, ನನ್ನ ವಿಷಯದಲ್ಲಿ ಮಾತ್ರ ಸತ್ಯವಾಗಿದೆ. ನನ್ನ ಬದುಕೇ ಇದಕ್ಕೆ ಸಾಕ್ಷಿ.

ಮಹಿಳಾ ಕ್ರಿಕೆಟ್‌ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತೇನೆ. 44 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುತ್ತೇನೆ ಎಂದು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆದರೆ, ಪಟ್ಟ ಪ್ರಯತ್ನಕ್ಕಂತೂ ನಿರಾಸೆಯಾಗಲಿಲ್ಲ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸುವ ಮೊದಮೊದಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹಗಲಿರುಳು ಎನ್ನದೇ ನೆಟ್ಸ್‌ನಲ್ಲಿ ಕಳೆದ ಸಮಯಕ್ಕೆ ಲೆಕ್ಕವೇ ಇಲ್ಲ. ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕೆನ್ನುವ ಒಂದೇ ಒಂದು ಕನಸು ನನ್ನನ್ನು ಸಮಯದ ಪರಿವೆಯಿಲ್ಲದೇ ದುಡಿಸಿಬಿಟ್ಟಿತು. ಸಾಕಷ್ಟು ಹೈರಾಣ ಮಾಡಿತು. ಆದರೆ, ನಾನಾಗ ಸಾಗಿ ಬಂದ ದಾರಿಯನ್ನು ಹಿಂತಿರುಗಿ ನೋಡಿದಾಗ, ನಿರೀಕ್ಷೆಗಳ ಹಾದಿಯಲ್ಲಿ ಭರವಸೆಯ ಬುತ್ತಿ ಹೊತ್ತು ಇಷ್ಟು ದೂರ ನಡೆದು ಬಂದಿದ್ದು ನಾನೇನಾ ಎನ್ನುವ ಅಚ್ಚರಿ ಕಾಡಿದೆ. ಆದರೆ, ಪಟ್ಟ ಕಷ್ಟಕ್ಕೆ ತಕ್ಕ ಫಲ ಸಿಕ್ಕಿದೆ. ಇದು ಖುಷಿ ನೀಡಿದೆ.

ಇದಕ್ಕೂ ಮುನ್ನ ಕ್ರಿಕೆಟ್‌ ಬಗ್ಗೆ ನನ್ನಲ್ಲಿ ಮೂಡಿದ ಪ್ರೀತಿಗೆ ಕಾರಣ ಮತ್ತು ಕಾರಣರಾದವರ ಬಗ್ಗೆ ಹೇಳುತ್ತೇನೆ. ಅಪ್ಪ, ಅಮ್ಮ ಹಾಗೂ ಅಣ್ಣ ಎಲ್ಲರೂ ಕ್ರೀಡಾಪಟುಗಳೇ. ಆದ್ದರಿಂದ ಸಹಜವಾಗಿ ನಾನೂ ಕ್ರೀಡೆಯತ್ತಲೇ ಆಸಕ್ತಿ ಬೆಳೆಸಿಕೊಂಡೆ. ಬೆಳೆಸಿಕೊಂಡೆ ಎನ್ನುವುಕ್ಕಿಂತ, ಸುತ್ತಮುತ್ತಲಿನ ವಾತಾವರಣ ನನ್ನನ್ನು ಕ್ರೀಡಾಪಟುವನ್ನಾಗಿ ರೂಪಿಸಿತು. ಅಪ್ಪ ವಿಜಯ ಕುಮಾರ್ ವೇಟ್‌ ಲಿಫ್ಟರ್‌ ಆಗಿದ್ದವರು. ಅಮ್ಮ ಲಕ್ಷ್ಮಿ ಬಾಲ್‌ ಬ್ಯಾಡ್ಮಿಂಟನ್‌ ಆಟಗಾರ್ತಿ. ಅಣ್ಣ ಕೌಶಿಕ್‌ ಕ್ರಿಕೆಟ್‌ ಆಟಗಾರ. ಹೀಗೆ ನನ್ನ ಸುತ್ತಲಿನ ವಾತಾವರಣ ಪೂರ್ಣವಾಗಿ ಕ್ರೀಡೆಯಿಂದಲೇ ತುಂಬಿತ್ತು. ಆದ್ದರಿಂದ ನಾನು ಇದೇ ರಂಗದಲ್ಲಿ ಸಾಧನೆ ಮಾಡಲು ಆಸೆ ಪಟ್ಟೆ. ಕನಸು ಕಟ್ಟಿಕೊಂಡೆ. ಗುರಿ ಇಟ್ಟುಕೊಂಡೆ.

ಇದಕ್ಕೆಲ್ಲಾ ಪೂರಕ ಎನ್ನುವಂತೆ ಅಣ್ಣನ ಜೊತೆ ಗಲ್ಲಿಗಳಲ್ಲಿ ಕ್ರಿಕೆಟ್‌ ಆಡುತ್ತಿದ್ದೆ. ಅಣ್ಣ ವಲಯವಾರು ಟೂರ್ನಿಗಳಲ್ಲಿ ಆಡಿದ ಅನುಭವ ಹೊಂದಿದ್ದ. ಇದರಿಂದ ನನಗೂ ಸಹಾಯವಾಯಿತು. ಆಟದ ಕೌಶಲಗಳನ್ನು ಬೇಗನೇ ಕಲಿಯಲು ಅನುಕೂಲವಾಯಿತು. ಗಲ್ಲಿಗಳಲ್ಲಿ ಹುಡುಗರ ಜೊತೆಗೆ ಹೆಚ್ಚಾಗಿ ಆಡುತ್ತಿದ್ದೆ. ಬಾಲ್ಯದಲ್ಲಿದ್ದ ಈ ಕ್ರಿಕೆಟ್‌ ಪ್ರೀತಿ ಇಂದಿಗೂ ನನ್ನ ಮನದಲ್ಲಿ ಹಸಿರಾಗಿದೆ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಇರಲಿ, ಬಿಡಲಿ. ಮುಂದೊಂದು ದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದರೂ, ಆಟದ ಮೇಲಿನ ಪ್ರೀತಿ ಹಾಗೂ ಗೌರವ  ಎಂದಿಗೂ ಕಡಿಮೆಯಾಗುವುದಿಲ್ಲ.

ಕ್ರಿಕೆಟ್‌ ಎನ್ನುವ ಮೂರುವರೆ ಅಕ್ಷರ ನನ್ನ ಬದುಕಿಗೆ ಸಾಕಷ್ಟು ಅರ್ಥ ತಂದುಕೊಟ್ಟಿದೆ. ಹೆಸರು, ಸಾಧನೆ, ಕೀರ್ತಿ, ಸನ್ಮಾನ, ಬಹುಮಾನಗಳನ್ನು ಪಡೆಯಲು ಕಾರಣವಾಗಿದೆ. ನಿಜವಾದ ಅರ್ಥದಲ್ಲಿ ಹೇಳುವುದಾದರೆ, ನನ್ನ ಬದುಕು ರೂಪಿಸಿದ್ದೇ ಕ್ರಿಕೆಟ್‌.
ಆಟದ ಮೇಲಿನ ಪ್ರೀತಿ ಎಂದಿಗೂ ಬತ್ತುವುದಿಲ್ಲ. ರಾಷ್ಟ್ರೀಯ ತಂಡದಲ್ಲಿ ಇರದಿದ್ದಾಗಲೂ ಪ್ರತಿದಿನವೂ ತಪ್ಪದೇ ಅಭ್ಯಾಸ ನಡೆಸುತ್ತೇನೆ. ಫಿಟ್‌ನೆಸ್‌ ಕಾಪಾಡಿಕೊಳ್ಳಲು ಪ್ರಾಮುಖ್ಯತೆ ಕೊಡುತ್ತೇನೆ.

ಎಲ್ಲರೂ ಬ್ಯಾಟ್ಸ್‌ಮನ್‌ಗಳು ಆಗಬಹುದು, ಬೌಲರ್‌ಗಳೂ ಆಗಬಹುದು. ಆದರೆ, ಎಲ್ಲರೂ ವಿಕೆಟ್‌ ಕೀಪರ್‌ ಆಗಲು ಸಾಧ್ಯವಿಲ್ಲ. ನಾನೂ ಸಹ ವಿಕೆಟ್‌ ಕೀಪರ್‌ ಆಗಿದ್ದೂ ಆಕಸ್ಮಿಕವೇ.

ಭಾರತ ಕ್ರಿಕೆಟ್‌ ತಂಡದ ಮಾಜಿ ವಿಕೆಟ್‌ ಕೀಪರ್ ಸೈಯದ್ ಕಿರ್ಮಾನಿ ಅವರ ಅಕಾಡೆಮಿಯಲ್ಲಿ ಮೊದಲು ತರಬೇತಿ ಪಡೆಯುತ್ತಿದ್ದೆ. ಆದ್ದರಿಂದ ಅಲ್ಲಿ ಕೀಪಿಂಗ್‌ಗೆ ಸಂಬಂಧಿಸಿದಂತೆ ಹೆಚ್ಚು ವಿಷಯಗಳನ್ನು ತಿಳಿದುಕೊಂಡೆ. ಕ್ರಮೇಣ ನನ್ನ ಆಸಕ್ತಿ ಕೂಡಾ ವಿಕೆಟ್‌ ಕೀಪರ್‌ ಆಗುವತ್ತ ಹರಿಯಿತು. ತಂಡದಲ್ಲಿ ವಿಕೆಟ್‌ ಕೀಪರ್‌ಗಳ ಪಾತ್ರ ಬಹುಮುಖ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ತಂಡದಲ್ಲಿ ಬೇಗನೇ ಸ್ಥಾನ ಪಡೆಯಲು ಇದು ಸಹಾಯಕವಾಗಬಹುದು ಎನ್ನುವ ಆಸೆ ನನ್ನದಾಗಿತ್ತು. 2004ರಲ್ಲಿ ಮೊದಲ ಸಲ ಭಾರತ ಏಕದಿನ ತಂಡದಲ್ಲಿ ಸ್ಥಾನ ಗಳಿಸಿದಾಗ ಆ ಸಂಭ್ರಮ ಮರೆಯಲಾಗದು.

ಮೊದಲ ಪಂದ್ಯ, ಮೊದಲು ಕ್ಯಾಚ್‌ ಪಡೆದಿದ್ದು, ಮೊದಲ ಶತಕ ಹೀಗೆ ಎಲ್ಲವೂ ಪ್ರಥಮಗಳ ಸಂಭ್ರಮ ನೀಡುವ ಖುಷಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದೇ ರೀತಿ ಲಖನೌನಲ್ಲಿ  ನಡೆದ ವೆಸ್ಟ್‌ ಇಂಡೀಸ್‌ ಎದುರಿನ ಏಕದಿನ ಪಂದ್ಯ ನನ್ನ ಪಾಲಿಗೆ ಅವಿಸ್ಮರಣೀಯ. ಮೊದಲ ಪಂದ್ಯದಲ್ಲಿಯೇ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದು ಅರ್ಧ ಶತಕ ಗಳಿಸಿದ್ದೆ. ಆ ಸವಿ ನೆನಪನ್ನು ಹೇಗೆ ಮರೆಯಲಿ.

ಒಂಬತ್ತು ವರ್ಷಗಳ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಇಂತಹ ಅನೇಕ ನೆನಪುಗಳಿವೆ. ಅದೇ ರೀತಿ ಮರೆಯಲಾಗದ ಇನ್ನೊಂದು ಸಂದರ್ಭ 2005ರ ಡಿಸೆಂಬರ್‌. ಕೋಲ್ಕತ್ತದ ಈಡನ್‌ ಗಾರ್ಡನ್‌ನಲ್ಲಿ ನಡೆದ ಪಂದ್ಯ. ಇಂಗ್ಲೆಂಡ್‌ ಎದುರು ನಡೆದ ಈ ಪಂದ್ಯದಲ್ಲಿ ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ್ದೆ. ಅಂದು ನಾನು ಸಂಭ್ರಮ ಪಟ್ಟ ರೀತಿ ಯಾವತ್ತಿಗೂ ಮರೆಯಲಾರೆ.

ಬದುಕಿನಲ್ಲಿ ಹಾದು ಹೋಗುವ ಸಿಹಿ ಕಹಿ ನೆನಪುಗಳಂತೆ ಕ್ರಿಕೆಟ್‌ ಜೀವನದಲ್ಲಿ ಮರೆಯಲಾಗದ ಕಹಿ ನೆನಪುಗಳೂ ಇವೆ. ಆದು 2005ರ ಏಕದಿನ ವಿಶ್ವಕಪ್‌. ಸಾಕಷ್ಟು ಹೋರಾಟ ನಡೆಸಿ, ಫೈನಲ್‌ ಪ್ರವೇಶಿಸಿದ್ದೆವು. ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ, ಸೆಂಚೂರಿಯನ್‌ನ ಸೂಪರ್ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ನಾವು ಆಸ್ಟ್ರೇಲಿಯಾದ ಎದುರು ಸೋಲು ಕಂಡಿದ್ದೆವು. ಅಂದು ನಮ್ಮ ತಂಡವನ್ನು ಕಾಡಿದ್ದ ನಿರಾಸೆ ನೆನಪಿಸಿಕೊಂಡರೆ, ಇಂದಿಗೂ ಬೇಸರವಾಗುತ್ತದೆ.

ನಾಲ್ಕು ಟೆಸ್ಟ್‌ ಪಂದ್ಯಗಳನ್ನು ಮಾತ್ರ ಆಡಿದ್ದರೂ, ಇವತ್ತಿಗೂ ಟೆಸ್ಟ್‌ ಮಾದರಿಯೇ ನನಗಿಷ್ಟ. ಕ್ರಿಕೆಟ್ ಬದುಕಿನ ಯಾತ್ರೆಯಲ್ಲಿ ನಾನು ಪಡೆದಷ್ಟು ಅನುಭವವನ್ನು ನನ್ನ ಅಮ್ಮ ಕೂಡಾ ಪಡೆದಿದ್ದಾರೆ. ಏಕೆಂದರೆ, ಎಲ್ಲಿಯೇ ಟೂರ್ನಿಯನ್ನಾಡಲು ಹೋಗಲಿ, ನನ್ನ ಜೊತೆಗಿದ್ದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಅಮ್ಮನ ಬೆಂಬಲದಷ್ಟೇ ಅಪ್ಪನ ಬಲವೂ ನನ್ನ ಬೆನ್ನಿಗಿತ್ತು. ತಂಡದಲ್ಲಿ ಸ್ಥಾನ ಕಳೆದುಕೊಂಡಾಗ, ಪ್ರತಿಸ್ಪರ್ಧಿಗಳು ಟೀಕೆ ಮಾಡಿದ್ದೂ, ಸವಾಲಿಗೆ ಪ್ರತಿ ಸವಾಲೂ ಎಸೆದಿದ್ದು ಎಲ್ಲವೂ ಬದುಕಿನಲ್ಲಿ ಆಗಿ ಹೋಗಿದೆ. ಇದೆಲ್ಲವೂ ಯಾವುದೇ ವೃತ್ತಿ ಬದುಕಿನಲ್ಲಾದರೂ ಸಾಮಾನ್ಯ. ಆದರೆ, ಸೋಲುಗಳು ನನ್ನನ್ನು ಹೆಚ್ಚು ಕುಗ್ಗಿಸಿಲ್ಲ. ನಿರಾಸೆ  ಹಾಗೂ ಗೆಲುವು ಎರಡನ್ನೂ ಸಮನಾಗಿಯೇ ಸ್ವೀಕರಿಸಿದ್ದೇನೆ. ಇದು ಅಪ್ಪ – ಅಮ್ಮ ಹೇಳಿಕೊಟ್ಟ ಪಾಠ.

ಪ್ರತಿ ಹೆಣ್ಣುಮಕ್ಕಳಿಗೂ ಏನಾದರೂ ಸಾಧಿಸಬೇಕು ಎನ್ನುವ ತುಡಿತ, ಕನಸು ಇದ್ದೇ ಇರುತ್ತದೆ. ಅದಕ್ಕೆ ಪಾಲಕರು ಅವಕಾಶ ಮಾಡಿಕೊಡಬೇಕು. ಸೇತುವೆಯಾಗಬೇಕು. ಮಹಿಳಾ ಕ್ರಿಕೆಟ್‌ ಇನ್ನಷ್ಟು ಪ್ರಗತಿ ಸಾಧಿಸಬೇಕು. ಹೆಚ್ಚು ಪಂದ್ಯಗಳನ್ನು ಆಯೋಜಿಸಬೇಕು. ಇದರಿಂದ ಮಹಿಳಾ ಕ್ರಿಕೆಟ್‌ ಎತ್ತರಕ್ಕೇರಲು ಸಾಧ್ಯವಾಗುತ್ತದೆ. ಉನ್ನತ ಸಾಧನೆ ಮಾಡಬೇಕು ಎನ್ನುವ ಕನಸು ಕಂಡಾಗ ನನಗಾಗ ಇನ್ನು ಚಿಕ್ಕ ವಯಸ್ಸಿತ್ತು. ಈಗ ನನಗೆ ತೃಪ್ತಿ ನೀಡುವಷ್ಟು ಸಾಧನೆ ಸಾಧ್ಯವಾದ ಮೇಲೂ, ನನಗಿಂತಲೂ ಉತ್ತಮ ಸಾಧನೆ ಮಾಡಲು ನನಗಿಂತ ಚಿಕ್ಕವರಿಗೆ ಸಾಧ್ಯವಿದೆ ಎಂದೆನಿಸುತ್ತದೆ.

ಒಳ್ಳೆಯ ಸಾಧನೆ ಮಾಡಬೇಕು. ಎಲ್ಲರಿಂದಲೂ ಭೇಷ್‌ ಎನಿಸಿಕೊಳ್ಳಬೇಕು, ಬಹುಮಾನ, ಸನ್ಮಾನ ಪಡೆಯಬೇಕು ಎನ್ನುವ ಅಪೂರ್ವ ಕನಸು ಕಟ್ಟಿಕೊಂಡ ನನಗಿಂತ ಚಿಕ್ಕವರ ಕನಸು ಈಡೇರಲಿ. ಅವರ ಸಂಭ್ರಮದಲ್ಲಿ ನಾನೂ ಭಾಗಿಯಾಗುತ್ತೇನೆ. ಏಕೆಂದರೆ, ನಾನು ಸಾಕಷ್ಟು ಕನಸು ಹೊತ್ತು ಮೊದಲ ಸಲ ಕ್ರಿಕೆಟ್‌ ಅಂಗಳಕ್ಕೆ ಕಾಲಿಟ್ಟಾಗ ಸಿಕ್ಕ ಬೆಂಬಲ ನನ್ನ ಮನದಲ್ಲಿ ಇನ್ನೂ ಹಸಿರಾಗಿದೆ. ನನ್ನಂತೆಯೇ ನನ್ನ ಸಹೋದರಿಯರು ದೊಡ್ಡ ಸಾಧನೆ ತಮ್ಮದಾಗಿಸಿಕೊಳ್ಳಲಿ. ಅವರ ಖುಷಿಗೆ ನಾನೂ ಸಂಭ್ರಮಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT