ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚನೆ

ಸರ್ಕಾರಿ ಭೂಮಿ, ರುದ್ರಭೂಮಿ ಒತ್ತುವರಿ
Last Updated 23 ಜುಲೈ 2013, 11:17 IST
ಅಕ್ಷರ ಗಾತ್ರ

ಯಾದಗಿರಿ:  ಸರ್ಕಾರಿ ಜಮೀನು ಹಾಗೂ ರುದ್ರಭೂಮಿಗಳನ್ನು ಒತ್ತುವರಿ ಮಾಡಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ, ತಹಸೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಮತ್ತು ರುದ್ರಭೂಮಿ ಒತ್ತುವರಿ ಮಾಡಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳಬೇಕು. ಇಂತಹ ಒತ್ತುವರಿ ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಉಪ ಆಯುಕ್ತರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಹೇಳಿದರು.

ಅರಣ್ಯ ಭೂಮಿ ಒತ್ತುವರಿ ಬಗ್ಗೆಯೂ ಹೆಚ್ಚಿನ ನಿಗಾ ವಹಿಸಬೇಕು. ನ್ಯಾಯಾಲಯ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಇತ್ಯರ್ಥಕ್ಕಾಗಿ ಅನುಪಾಲನೆ ಮಾಡಲು ವ್ಯಕ್ತಿಯೊಬ್ಬರನ್ನು ನ್ಯಾಯಾಲಯ ಅಧಿಕಾರಿಯಾಗಿ ನೇಮಿಸಿಕೊಳ್ಳುವಂತೆ ತಹಸೀಲ್ದಾರರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ ಇಲಾಖೆ ಮತ್ತು ಜಿಲ್ಲಾಸ್ಪತ್ರೆಗೆ ಸಂಬಂಧಿಸಿದ ನ್ಯಾಯಾಲಯ ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಸಕಾಲ ಯೋಜನೆಗೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅರ್ಜಿಗಳಿಗೆ ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಥವಾ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳು ತಿಳಿಸುವ ಮೂಲಕ ಸಕಾಲ ಯೋಜನೆಯಡಿ ಬರುವ ಅರ್ಜಿಗಳನ್ನು ಸಕಾಲಕ್ಕೆ ಇತ್ಯರ್ಥ ಪಡಿಸಲು ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಬಿಪಿಎಲ್ ರೈತ ಫಲಾನುಭವಿಗಳಿಗೆ ನೀಡಬಹುದಾದ ಇನ್‌ಪುಟ್ ಸಬ್ಸಿಡಿ ಹಣ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಈವರೆಗೆ ಇಂತಹ ಹಣ ಸಂದಾಯ ಮಾಡಿರುವ ಬಗ್ಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸೂಕ್ತ ಪರಿಶೀಲನೆ ನಡೆಸಿ ವರದಿ ನೀಡಬೇಕು.

ಕಂದಾಯ ಇಲಾಖೆ ಅಧಿಕಾರಿಗಳು ಸಾಮಾಜಿಕ ಭದ್ರತಾ ಯೋಜನೆ, ಅಂತ್ಯಸಂಸ್ಕಾರ, ವಿಧವಾ ವೇತನ, ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನಗಳನ್ನು ಸಕಾಲಕ್ಕೆ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಅರ್ಹ ಅಂಗವಿಕಲರಿಗೆ ಪ್ರಮಾಣ ಪತ್ರ ಪರಿಶೀಲಿಸಿ ನೀಡುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಬಿಸಿಯೂಟದ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳಿಗೆ ಬಿಸಿಯೂಟ ನೀಡುವ ಮುಂಚೆ ಆಯಾ ಶಾಲೆಯ ಶಿಕ್ಷಕರು, ಮುಖ್ಯೋಪಾಧ್ಯಾಯರು ಮತ್ತು ಅಡುಗೆ ಮಾಡುವವರು ಕಡ್ಡಾಯವಾಗಿ ಆಹಾರವನ್ನು ಸೇವಿಸಿ, ಪರೀಕ್ಷಿಸಬೇಕು.

ಗುಣಮಟ್ಟದ ಆಹಾರ ನೀಡುತ್ತಿರುವ ಮತ್ತು ನಿರ್ವಹಣೆಯ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರತಿ ವಾರ ವರದಿ ನೀಡಬೇಕು ಎಂದು ತಿಳಿಸಿದರು. ಬಾಕಿ ಉಳಿದಿರುವ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಜಹೀರಾ ನಸೀಮ್, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT