ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಮಿನಲ್ ಹಿನ್ನೆಲೆ ವ್ಯಕ್ತಿಗಳಿಗೆ ಸರ್ಕಾರಿ ಕೆಲಸ ಬೇಡ: ಸುಪ್ರೀಂ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರ್ಕಾರಿ ಸೇವೆಗಳಿಗೆ ನೇಮಕ ಮಾಡಿಕೊಳ್ಳುವಾಗ ಕ್ರಿಮಿನಲ್ ಅಪರಾಧ ನಡೆಸಿರುವ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳನ್ನು ಪರಿಗಣಿಸಬಾರದು ಎಂದು ಹೇಳಿರುವ ಸುಪ್ರೀಂಕೋರ್ಟ್, ವ್ಯಕ್ತಿಯು ಆರೋಪಗಳಿಂದ ಮುಕ್ತಗೊಂಡ ಬಳಿಕವಷ್ಟೇ ಪರಿಗಣಿಸಬೇಕು ಎಂದಿದೆ.

ಪಶ್ಚಿಮ ಬಂಗಾಳದ ಎಸ್.ಕೆ ನಜ್ರುಲ್ ಇಸ್ಲಾಂ ಎಂಬುವವರನ್ನು ಕಾನ್‌ಸ್ಟೆಬಲ್ ಆಗಿ ನೇಮಕ ಮಾಡಿರುವುದನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.

`ಕಾನ್‌ಸ್ಟೆಬಲ್‌ಗಳನ್ನು ನೇಮಕ ಮಾಡಿಕೊಳ್ಳುವಾಗ, ಯಾವುದೇ ವ್ಯಕ್ತಿಯ ಪೂರ್ವಚರಿತ್ರೆಗಳನ್ನು ಅವಲೋಕಿಸಿ ಆ ಹುದ್ದೆಗೆ ಸರಿ ಹೊಂದುತ್ತಾನೆಯೇ ಎಂಬುದನ್ನು ಪರಿಶೀಲಿಸುವ ಜವಬ್ದಾರಿ ಆಡಳಿತದ ಮೇಲಿದೆ. ಆತ ಎದುರಿಸುತ್ತಿರುವ ಕ್ರಿಮಿನಲ್ ಆರೋಪಗಳಿಂದ ಸಂಪೂರ್ಣವಾಗಿ ಮುಕ್ತವಾಗುವವರೆಗೆ ಆ ವ್ಯಕ್ತಿ ಕಾನ್‌ಸ್ಟೆಬಲ್ ಹುದ್ದೆಗೆ ಅರ್ಹನಲ್ಲ~ ಎಂದು ಸುಪ್ರೀಂಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಆರ್.ವಿ. ರವೀಂದ್ರನ್ ಮತ್ತು ಎ.ಕೆ.ಪಟ್ನಾಯಕ್ ಅವರೊನ್ನಳಗೊಂಡ ನ್ಯಾಯಪೀಠ ಈ ತೀರ್ಪು ನೀಡಿದೆ.

ಇಸ್ಲಾಂ ಅವರು ಕ್ರಿಮಿನಲ್ ಅಪರಾಧ ಪ್ರಕರಣದ ಆರೋಪಗಳನ್ನು ಎದುರಿಸುತ್ತಿದ್ದರೂ, ಅವರನ್ನು ಕಾನ್‌ಸ್ಟೆಬಲ್ ಆಗಿ ನೇಮಕ ಮಾಡುವಂತೆ ಪಶ್ಚಿಮ ಬಂಗಾಳ ಹೈಕೋರ್ಟ್ ಆದೇಶಿಸಿತ್ತು.

ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಈಗ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರದ ಮನವಿಯನ್ನು ಎತ್ತಿ ಹಿಡಿದಿದೆ.

ಇಸ್ಲಾಂ ಅವರನ್ನು 2007ರಲ್ಲಿ ಕಾನ್‌ಸ್ಟೆಬಲ್ ಆಗಿ ನೇಮಕ ಮಾಡಲಾಗಿತ್ತು. ಆದರೆ ಪರಿಶೀಲನೆ ವೇಳೆ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಹಲವು ಕ್ರಿಮಿನಲ್ ಆರೋಪಗಳಿರುವುದು ಮತ್ತು ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವುದು ತಿಳಿದು ಬಂತು. ತಕ್ಷಣ ಸರ್ಕಾರ ಅವರನ್ನು ಕೆಲಸದಿಂದ ವಜಾ ಮಾಡಿತ್ತು.

ಸರ್ಕಾರದ ನಿರ್ಧಾರ ಪ್ರಶ್ನಿಸಿ ಇಸ್ಲಾಂ ಆಡಳಿತಾತ್ಮಕ ನ್ಯಾಯಮಂಡಳಿಯ ಮೊರೆ ಹೋಗಿದ್ದರು. ಆದರೆ ನ್ಯಾಯಮಂಡಳಿ ಇಸ್ಲಾಂ ಅರ್ಜಿಯನ್ನು ವಜಾ ಮಾಡಿತ್ತು. ನಂತರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT