ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಮಿನಲ್‌ಗಳ ಮರ್ಜಿಯಲ್ಲಿ ಉತ್ತರ ಪ್ರದೇಶ ಆರೋಗ್ಯ ಸೇವೆ!

Last Updated 1 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕಳೆದ ವರ್ಷದ ಅಕ್ಟೋಬರ್‌ನ ಒಂದು ದಿನ ಲಖನೌ ಆರೋಗ್ಯ ಇಲಾಖೆಯ ಹಿರಿಯ ವೈದ್ಯಾಧಿಕಾರಿಯೊಬ್ಬರು ಬೆಳಗಿನ ವಾಯುವಿಹಾರ ನಡೆಸುತ್ತಿದ್ದರು. ಮುಂದೇನು ಅನಾಹುತ ಕಾದಿದೆ ಎಂಬ ಕಲ್ಪನೆಯೂ ಅವರಿಗಿರಲಿಲ್ಲ. ಆ ಸಮಯದಲ್ಲಿ ಬೈಕ್ ಮೇಲೆ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಅವರನ್ನು ಕೊಂದರು.

ಇದಾಗಿ ಸುಮಾರು ಆರು ತಿಂಗಳು ಕಳೆದಿರಬಹುದು. ಅವರ ಜಾಗಕ್ಕೆ ನೇಮಕಗೊಂಡಿದ್ದ ಹಿರಿಯ ಹೃದ್ರೋಗ ತಜ್ಞರೊಬ್ಬರನ್ನು ಇದೇ ರೀತಿ ಗುಂಡಿಕ್ಕಿ ಕೊಲ್ಲಲಾಯಿತು. ಅವರಿಬ್ಬರ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಸರ್ಕಾರಿ ವೈದ್ಯರೊಬ್ಬರನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿತ್ತು. ಅಲ್ಲಿಯೇ ಒಂದು ದಿನ ರಕ್ತದ ಮಡುವಿ ನಲ್ಲಿ ಅವರ ಶವ ಪತ್ತೆಯಾಯಿತು. ಮೈತುಂಬ ಆಳವಾದ ಇರಿತದ ಗಾಯಗಳಿದ್ದವು.

ಇದು ನಡೆದದ್ದು ದೇಶದಲ್ಲಿಯೇ ಅತ್ಯಧಿಕ ಜನಸಂಖ್ಯೆಯ, ಅತಿ ಹೆಚ್ಚು ಬಡವರಿರುವ ರಾಜ್ಯ ಉತ್ತರ ಪ್ರದೇಶದಲ್ಲಿ. ಸತ್ತ ಮೂವರಲ್ಲೂ ಒಂದು ಅಂಶ ಸಮಾನವಾಗಿತ್ತು. ಇವರೆಲ್ಲ ಆಯಾ ಸಮಯದಲ್ಲಿ, ರಾಜ್ಯದ ಕಡುಬಡ ಕುಟುಂಬಗಳ ಆರೋಗ್ಯ ಸುಧಾರಣೆಗೆ ಕೇಂದ್ರ ಸರ್ಕಾರ ನೀಡಿದ್ದ ಹತ್ತು ಸಾವಿರ ಕೋಟಿ ರೂಪಾಯಿಯ ವೆಚ್ಚದ ಕಾರ್ಯಕ್ರಮದ ಲಖನೌ ನಗರ ವಿಭಾಗದ ಉಸ್ತುವಾರಿ ಹೊತ್ತಿದ್ದವರು.

ರಾಜ್ಯದ ಕೆಲ ಅಧಿಕಾರಿಗಳು ಹೇಳುವಂತೆ `ಈ ಸಾಲು ಸಾಲು ಕೊಲೆಗೆ ಕಾರಣ ಯೋಜನೆ ಜಾರಿಗೆ ಸುಲಭವಾಗಿ ಹರಿದು ಬರುತ್ತಿರುವ ಅನುದಾನ, ಉಸ್ತುವಾರಿ ಮೇಲೆ ದಿವ್ಯ ನಿರ್ಲಕ್ಷ ಮತ್ತು ಲಂಚಗುಳಿತನಕ್ಕೆ ಕುಖ್ಯಾತಿ ಪಡೆದ ರಾಜಕೀಯ ನಾಯಕತ್ವ~. ಜೈಲಿನಲ್ಲಿ ನಿಗೂಢವಾಗಿ ಕೊಲೆಯಾದ ವೈದ್ಯನ ಸಂಬಂಧಿಗಳ ಪ್ರಕಾರ, ಆತ ಈ ಹಗರಣದಲ್ಲಿ ಒಳಗೊಂಡವರ ಹೆಸರು ಬಹಿರಂಗ ಮಾಡುವವರಿದ್ದರಂತೆ.

ಇಷ್ಟೆಲ್ಲ ಅನಾಹುತಗಳ ನಂತರ ಕೇಂದ್ರ ಸರ್ಕಾರ ಎಚ್ಚೆತ್ತು ಕೊಂಡು ತನಿಖೆಗೆ ಆದೇಶಿಸಿತು. `ಕ್ರಿಮಿನಲ್‌ಗಳೇ ಹೆಚ್ಚಿರುವ ಸರ್ಕಾರವೊಂದಕ್ಕೆ ದೊಡ್ಡ ಮೊತ್ತದ ಹಣ ನೀಡಿದರೆ ಇಂತಹ ಹಿಂಸಾತ್ಮಕ ಅಪರಾಧಗಳು ನಡೆಯುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ~ ಎಂದು ವ್ಯಾಖ್ಯಾನಿಸುತ್ತಾರೆ ಹೆಸರಾಂತ ನ್ಯಾಯವಾದಿ ಕಾಮಿನಿ ಜೈಸ್ವಾಲ್. ಆಕೆ ಇಂತಹ ಅನೇಕ ಹಣ ಲೂಟಿ ಪ್ರಕರಣಗಳ ತಡೆಗೆ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರು.

ಭ್ರಷ್ಟಾಚಾರ ವಿರೋಧಿಸಿ ಅಣ್ಣಾ ಹಜಾರೆ ಅವರು ಈಚೆಗೆ ನಡೆಸಿದ ಹೋರಾಟವನ್ನು ಭಾರತದ ಮಧ್ಯಮ ವರ್ಗ ಅಭೂತಪೂರ್ವ ಎನ್ನುವಂತೆ ಬೆಂಬಲಿಸಿತ್ತು. ನಿತ್ಯದ ಬದುಕಿನಲ್ಲಿ ಪ್ರತಿ ಹೆಜ್ಜೆಯಲ್ಲೂ ನಿಷ್ಕ್ರಿಯ, ಅದಕ್ಷ ಮತ್ತು ಅಷ್ಟೇ ಲಂಚಬಡುಕ ಸರ್ಕಾರಿ ನೌಕರಶಾಹಿಯ ಕೈ ಬೆಚ್ಚಗೆ ಮಾಡಿ ಮಾಡಿ ಈ ವರ್ಗ ರೋಸಿಹೋಗಿದೆ. ಉಳಿದ ರಾಜ್ಯಗಳ ಪರಿಸ್ಥಿತಿಯೇ ಹೀಗಿರುವಾಗ ಕಡು ಭ್ರಷ್ಟ ಉತ್ತರ ಪ್ರದೇಶದ ಬಗ್ಗೆ ಹೇಳುವುದೇನಿದೆ? ಅಲ್ಲಿನ ಆರೋಗ್ಯ ಯೋಜನೆಯಲ್ಲಿ ನಡೆಯುತ್ತಿರುವ ಲೂಟಿ, ವೈದ್ಯರ ಜೀವವನ್ನು ಮಾತ್ರವಲ್ಲ ಬಡ ರೋಗಿಗಳ ಪ್ರಾಣವನ್ನೂ ಕಬಳಿಸುತ್ತಿದೆ.

ಯಾವುದೇ ಮಾನದಂಡದಿಂದ ನೋಡಿದರೂ ದೇಶದ ಅತ್ಯಂತ ಭ್ರಷ್ಟಾತಿಭ್ರಷ್ಟ ರಾಜ್ಯಗಳಲ್ಲಿ ಪ್ರಮುಖವಾಗಿ ನಿಲ್ಲುತ್ತದೆ ಉತ್ತರ ಪ್ರದೇಶ. ಅಲ್ಲಿನ ಜನಾರೋಗ್ಯದ ಅಂಕಿಅಂಶಗಳೂ ಅಷ್ಟೇ ಆತಂಕಕಾರಿ. ನವಜಾತ ಶಿಶುಗಳು ಮತ್ತು ಮಕ್ಕಳ ಸಾವಿನ ಸಂಖ್ಯೆ, ಅಪೌಷ್ಟಿಕತೆಯಲ್ಲಿ ಅದನ್ನು ಆಫ್ರಿಕದ ಅನೇಕ ಬಡ ದೇಶಗಳ ಜತೆ ಸೇರಿಸಬಹುದು.
ಉತ್ತರ ಪ್ರದೇಶ ಏನಾದರೂ ಸ್ವತಂತ್ರ ದೇಶವಾಗಿದ್ದರೆ ಜನಸಂಖ್ಯೆ (20 ಕೋಟಿ ಜನ) ದೃಷ್ಟಿಯಲ್ಲಿ ಅದಕ್ಕೆ ವಿಶ್ವದಲ್ಲಿ ಐದನೇ ಸ್ಥಾನ ಸಿಗುತ್ತಿತ್ತು. ಇದು ಭೌಗೋಳಿಕವಾಗಿ ಉತ್ತರ ಪ್ರದೇಶದ 35 ಪಟ್ಟು ದೊಡ್ಡದಿರುವ ಬ್ರೆಜಿಲ್‌ಗಿಂತ ಒಂದು ಸ್ಥಾನ ಮೇಲೆ.

ಕೇಂದ್ರದ ಯೋಜನೆ
ಗ್ರಾಮೀಣ ಪ್ರದೇಶದಲ್ಲಿ ಸಹಸ್ರಾರು ಹೊಸ ಆಸ್ಪತೆಗಳ ಸ್ಥಾಪನೆ, ಲಕ್ಷಾಂತರ  ಸಿಬ್ಬಂದಿ ನೇಮಕದ ಮೂಲಕ ಗ್ರಾಮಸ್ಥರಿಗೆ ಆರೋಗ್ಯ ಸೇವೆ ತಲುಪಿಸಲು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ 2005ರಲ್ಲಿ `ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್~ಗೆ ಚಾಲನೆ ನೀಡಿತ್ತು. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಇಂಥ ಯೋಜನೆ ಅನುಷ್ಠಾನದ ಹೊಣೆ ಆಯಾ ರಾಜ್ಯಕ್ಕೆ ಸೇರಿದ್ದು. ಹೀಗಾಗಿ ಇದರ ಜವಾಬ್ದಾರಿ ಉತ್ತರ ಪ್ರದೇಶದಲ್ಲಿ ಮಾಯಾವತಿ ಸರ್ಕಾರದ ಹೆಗಲಿಗೇರಿತು. ಆದರೆ ಉತ್ತರ ಪ್ರದೇಶ ಒತ್ತಟ್ಟಿಗೆ ಇರಲಿ, ಬೇರೆ ಎಷ್ಟೋ ರಾಜ್ಯಗಳಿಗೂ ಇಂತಹ ಬೃಹತ್ ಯೋಜನೆಯ ಪರಿಣಾಮಕಾರಿ ಜಾರಿ ಸಾಮರ್ಥ್ಯ ಇಲ್ಲ. ಹೀಗಿರುವಾಗ ಅನುದಾನದ ಬಹುಪಾಲು ಸದ್ವಿನಿಯೋಗ ಆಗಲೇ ಇಲ್ಲ. ಸರಿಯಾದ ನಿಗಾ ವ್ಯವಸ್ಥೆ ಮಾಡದೇ ಕೇಂದ್ರ ಸರ್ಕಾರ ಉತ್ತರ ಪ್ರದೇಶಕ್ಕೆ ಕೊಟ್ಟ ಹಣವೂ ದೊಡ್ಡದಾಗಿಯೇ ಸೋರಿದ್ದು ಸ್ವಾಭಾವಿಕ.

ಆದಾಗ್ಯೂ ಅನೇಕ ರಾಜ್ಯಗಳು ಯೋಜನೆಯನ್ನು ಸಮರ್ಥವಾಗಿ ಜಾರಿಗೆ ತಂದಿವೆ. `ಪ್ರತಿ ರಾಜ್ಯದಲ್ಲೂ ಒಂಬುಡ್ಸ್‌ಮನ್ ವ್ಯವಸ್ಥೆ ಬಂದರೆ ಸರ್ಕಾರಿ ಹಣದ ದುರುಪಯೋಗ, ಲೂಟಿಗೆ ಅಂಕುಶ ಹಾಕಬಹುದು, ಭ್ರಷ್ಟಾಚಾರ ಬಯಲಿಗೆ ಎಳೆಯುವವರಿಗೆ ರಕ್ಷಣೆ ನೀಡಬಹುದು~ ಎಂಬ ಅಣ್ಣಾ ಹಜಾರೆ ಆಗ್ರಹ ಕಾರ್ಯರೂಪಕ್ಕೆ ಬರಬೇಕು ಎಂದು ಅವರ ಬೆಂಬಲಿಗರು ವಾದಿಸುತ್ತಾರೆ.

ಉತ್ತರ ಪ್ರದೇಶದಲ್ಲಿ ಗ್ರಾಮೀಣ ಆರೋಗ್ಯ ಯೋಜನೆಯ ನೂರಾರು ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆಯನ್ನು ಸ್ಪರ್ಧಾತ್ಮಕ ಹರಾಜಿಲ್ಲದೆ ಮನಬಂದಂತೆ ಕೊಡಲಾಗಿದೆ, ಕೆಲಸ ಪೂರ್ಣಗೊಳಿಸುವ ಮೊದಲೇ ಗುತ್ತಿಗೆದಾರರಿಗೆ ಹಣ ಪಾವತಿಯಾಗಿದೆ ಎಂದು ಕೇಂದ್ರದ ತನಿಖಾ ತಂಡ ಪತ್ತೆ ಹಚ್ಚಿದೆ. ಇದೆಲ್ಲದರ ಪರಿಣಾಮ ಎಂದರೆ ಅಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅಗತ್ಯ ಉಪಕರಣಗಳಿಲ್ಲದೆ ಬಳಲುತ್ತಿವೆ. ಹೀಗಾಗಿಯೇ ತನಿಖಾ ವರದಿ ಬಹಿರಂಗಕ್ಕೆ ಸರ್ಕಾರ ಹಿಂದೇಟು ಹೊಡೆಯುತ್ತಿದೆ.

ಆರೋಗ್ಯ ಕೇಂದ್ರಗಳಿಗೆ ಸರ್ಕಾರದ ಹಣ ತಲುಪುವುದೇ ಇಲ್ಲ. `ಎಷ್ಟೋ ಸಲ ಕೈ ತೊಳೆಯುವ ಸಾಬೂನು ಕೂಡ ಇರುವುದಿಲ್ಲ. ಆದರೂ ಅವರು ಹಣ ಕೊಳ್ಳೆಹೊಡೆಯುತ್ತಿದ್ದಾರೆ~ ಎಂದು ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರ ಗ್ಯಾಂಗ್‌ಗಳತ್ತ ದೂರುತ್ತಾರೆ ಇಂಥ ಕೇಂದ್ರವೊಂದರಲ್ಲಿನ ಅಧಿಕಾರಿ ಪಿ.ಎನ್. ತಿವಾರಿ. ಅವರ ಆಸ್ಪತ್ರೆಯಲ್ಲಿ ದಿನಕ್ಕೆ ಅರ್ಧ ಡಜನ್ ಹೆರಿಗೆಯಾಗುತ್ತವೆ. ಆದರೆ ನೀರೇ ಇಲ್ಲ. ಏಕೆಂದರೆ  ತೊಟ್ಟಿ ಒಡೆದು ಯಾವುದೋ ಕಾಲವಾಗಿದೆ. ಅಂಬುಲೆನ್ಸ್ ತುಕ್ಕು ಹಿಡಿಯುತ್ತ ಮೂಲೆ ಸೇರಿದೆ. ಬರೀ 1500 ರೂಪಾಯಿ ಖರ್ಚು ಮಾಡಿದರೆ ಅದು ದುರಸ್ತಿಯಾಗುತ್ತದೆ. ಆದರೆ ಅಷ್ಟು ಚಿಕ್ಕ ಮೊತ್ತವೂ ಬಂದಿಲ್ಲ.

ಅಷ್ಟೇ ಏಕೆ. ಮಕ್ಕಳಲ್ಲಿ ಅತಿಸಾರ ತಡೆಯುವ ಒಆರ್‌ಎಸ್ ಪೊಟ್ಟಣಗಳ ದಾಸ್ತಾನು ಖಾಲಿಯಾಗಿ ಎಷ್ಟೋ ಕಾಲವಾಗಿದೆ. ಜನರೇಟರ್ ಇಂಧನಕ್ಕೆ ಹಣ ಇಲ್ಲ. ಹೀಗಾಗಿ ಫ್ರಿಜ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಲಸಿಕೆಗಳನ್ನು ಫ್ರಿಜ್‌ಗಳಲ್ಲಿ ಸಂಗ್ರಹಿಸಿಡುವುದೇ ಸಮಸ್ಯೆಯಾಗಿದೆ.

`ಸಮರ್ಪಕ ಮೇಲ್ವಿಚಾರಣೆ ಇಲ್ಲದೆ ಅಪಾರ ಮೊತ್ತ ಬಿಡುಗಡೆ ಮಾಡುತ್ತಿರುವುದೇ ವೈದ್ಯರ ಸರಣಿ ಹತ್ಯೆಗಳಿಗೆ ಕಾರಣ. ಹಣ ಜಾಸ್ತಿ ಇರುವುದರಿಂದಲೇ ಅಪರಾಧಗಳೂ ಜಾಸ್ತಿಯಾಗಿವೆ~ ಎಂದು ತಿವಾರಿ ಬೇಸರದಿಂದ ಹೇಳುತ್ತಾರೆ. ಇವರಿಗೆ ಇಲಾಖೆಯಲ್ಲಿ 30 ವರ್ಷಗಳ ಅನುಭವ ಇದೆ.

ಕಳೆದ ಅಕ್ಟೋಬರ್‌ನಲ್ಲಿ ಲಖನೌದಲ್ಲಿ ಮೊದಲಿಗೆ ಕೊಲೆ ಯಾದವರು ಸ್ಥಳೀಯ ಅರೋಗ್ಯ ಯೋಜನೆ ಅನುಷ್ಠಾನದ ಮುಖ್ಯ ವೈದ್ಯಾಧಿಕಾರಿ ಡಾ. ವಿನೋದ್‌ಕುಮಾರ್ ಆರ್ಯ. ಅದನ್ನು `ನಿಗೂಢ~ ಎಂದು ತಿಪ್ಪೆಸಾರಿಸಲಾಯಿತು. ಮೃದು ಸ್ವಭಾವದ ಸರ್ಕಾರಿ ವೈದ್ಯನನ್ನು ಯಾರು ಏಕೆ ಕೊಲ್ಲುತ್ತಾರೆ ಎಂಬ ಬಗ್ಗೆ ಆಳ ತನಿಖೆಯೇ ನಡೆಯಲಿಲ್ಲ.

ಕೇಂದ್ರದ ಕೋಟಿಗಟ್ಟಲೆ ಅನುದಾನದ ನಿಯಂತ್ರಣ ಹೊಂದಿದ ಈ ಹುದ್ದೆಯನ್ನು ರಾಜ್ಯ ಸರ್ಕಾರ ತಕ್ಷಣ ಭರ್ತಿ ಮಾಡಲಿಲ್ಲ. ನಂತರ ಅಳೆದೂ ತೂಗಿ ಅತ್ಯಂತ ಕಿರಿಯ ಶ್ರೇಣಿ ಅಧಿಕಾರಿ ಡಾ. ವೈ.ಎಸ್. ಸಚನ್ (ಈತ ರಾಜಕಾರಣಿಗಳಿಗೆ ತೀರಾ ನಿಕಟವಾದವರು ಮತ್ತು ಲಖನಾ ಆರೋಗ್ಯ ವಿಭಾಗದಲ್ಲಿ ಬಹುಕಾಲದಿಂದ ಬೇರು ಬಿಟ್ಟಿದ್ದವರು) ಅವರನ್ನು ಹಂಗಾಮಿಯಾಗಿ ತಂದು ಕೂರಿಸಿತು. ಕೊನೆಗೆ ಫೆಬ್ರುವರಿಯಲ್ಲಿ ಡಾ. ಬಿ.ಪಿ. ಸಿಂಗ್ ನೇಮಕಗೊಂಡರು. ಸಂಬಂಧಿಗಳ ಪ್ರಕಾರ `ಅವರು ಭಾರಿ ಒತ್ತಡಕ್ಕೆ ಮಣಿದು ಮಾರ್ಚ್ ನಲ್ಲಿ ಒಲ್ಲದ ಮನಸ್ಸಿನಿಂದಲೇ ಈ ಹುದ್ದೆ ವಹಿಸಿಕೊಂಡರು. ಇಲ್ಲಿ ಸಾಕಾಗಿ ಹೋಗಿದೆ. ಸಿಕ್ಕಾಪಟ್ಟೆ ಭ್ರಷ್ಟಾಚಾರ ಇದೆ ಎಂದು ಆಗಾಗ ಹೇಳುತ್ತಿದ್ದರಂತೆ~.

ಯೋಜನೆಯಲ್ಲಿನ ಅಕ್ರಮಗಳ ಬಗ್ಗೆ ಸಿಂಗ್ ಬರೆದಿಡುತ್ತಿದ್ದರು. ಬೋಗಸ್ ಬಿಲ್ ಪಾವತಿಗೆ ಸಹಿ ಹಾಕುವಂತೆ ಅವರ ಮೇಲೆ ಒತ್ತಡ ಬರುತ್ತಿತ್ತು. ಅದರಿಂದ ಖಿನ್ನರಾಗಿದ್ದರು ಎಂದು ನೆನಪಿಸಿ ಕೊಳ್ಳುತ್ತಾರೆ ಅವರ ಸೋದರ ಸಂಬಂಧಿ, ಹೈಕೋರ್ಟ್ ವಕೀಲ ಪ್ರತಾಪ್ ಸಿಂಗ್.

ಏ 2ರಂದು ಇಬ್ಬರು ಬಂದೂಕುಧಾರಿಗಳಿಂದ ಸಿಂಗ್ ಕೊಲೆಯಾದರು. ಆರ್ಯ ಅವರನ್ನು ಕೊಲೆ ಮಾಡಿದ ಪಿಸ್ತೂಲನ್ನೇ ಸಿಂಗ್ ಹತ್ಯೆಗೂ ಬಳಸಲಾಗಿದೆ ಎಂದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂತು. ಈ ಎರಡೂ ಹತ್ಯೆಯಲ್ಲಿ ಡಾ. ಸಚನ್ ಕೈವಾಡದ ಅನುಮಾನ ಮೂಡಿತ್ತು. ಈತ ಮಾಯಾವತಿಗೆ ಪರಮಾಪ್ತರಾದ ಮತ್ತು ಆರೋಗ್ಯ ಯೋಜನೆಗಳ ಅನುದಾನದ ಮೇಲೆ ನೇರ ನಿಯಂತ್ರಣ ಹೊಂದಿರುವ ಸಚಿವ ಬಾಬುಸಿಂಗ್ ಖುಷವಾವಾ ಅವರಿಗೆ ತುಂಬಾ ಬೇಕಾದವರು.

ಹತ್ಯೆ ಹಿನ್ನೆಲೆಯಲ್ಲಿ ಸಚನ್ ಅವರನ್ನು ಬಂಧಿಸಲಾಯಿತು. ಆದರೆ ಪ್ರಭಾವಿಗಳ ಕುಮ್ಮಕ್ಕಿಲ್ಲದೆ ಎರಡು ಕೊಲೆ ಮಾಡಿಸುವಷ್ಟು ಸಾಮರ್ಥ್ಯ ಇಂಥ ಕಿರಿಯ ಅಧಿಕಾರಿಯೊಬ್ಬರಿಗೆ ಇರುವ ಬಗ್ಗೆಯೇ ಅನೇಕರಿಗೆ ಅನುಮಾನ ಇತ್ತು. `ವಿನಾಕಾರಣ ನನ್ನನ್ನು ಇದರಲ್ಲಿ ಸಿಕ್ಕಿಸಿದ್ದಾರೆ~ ಎಂದಾತ ಪತ್ನಿಗೆ ಹೇಳಿದ್ದರಂತೆ. `ಪ್ರಭಾವಿಗಳನ್ನು ರಕ್ಷಿಸಲು ನನ್ನ ಗಂಡನನ್ನು ಬಲಿಪಶು ಮಾಡಿದರು~ ಎಂದು ಸ್ವತಃ ವೈದ್ಯೆಯೂ ಆಗಿರುವ ಮಾಲತಿ ಸಚಿನ್ ದೂರಿದ್ದರು.

ತನ್ನನ್ನು ಕೊಲ್ಲಲು ಸಂಚು ನಡೆದಿದೆ. ಆದ್ದರಿಂದ ಹೊರಗೆ ಇರುವುದಕ್ಕಿಂತ ಜೈಲೇ ಸುರಕ್ಷಿತ ಎಂದು ಸಚನ್ ತನ್ನ ಪತ್ನಿ ಬಳಿ ಹೇಳಿದ್ದರು. ಇಲಾಖೆಯ ಹಣ ನುಂಗಿ ನೀರುಕುಡಿಯಲು ಒತ್ತಡ ತಂದವರ ಹೆಸರನ್ನು ಕೋರ್ಟ್ ಮುಂದೆ ಬಹಿರಂಗಪಡಿಸಲು ತೀರ್ಮಾನಿಸಿದ್ದರು.

ಆದರೆ ಕೋರ್ಟ್‌ಗೆ ಹಾಜರ್ ಮಾಡುವ ಹಿಂದಿನ ದಿನವೇ ಅವರನ್ನು ಜೈಲಿನೊಳಗೆ ಭೀಕರವಾಗಿ ಕೊಚ್ಚಿ ಸಾಯಿಸಲಾಯಿತು.
`ಇದರ ಹಿಂದಿನ ಉದ್ದೇಶ ಸ್ಪಷ್ಟ. ಆತ ಹಗರಣಕ್ಕೆ ಕಾರಣರಾದ ಪ್ರಭಾವಿ ರಾಜಕಾರಣಿಗಳ ಹೆಸರನ್ನು ಕೋರ್ಟ್‌ನಲ್ಲಿ ಹೇಳುವವನಿದ್ದ. ಅದಕ್ಕಾಗಿಯೇ ಅವನನ್ನು ಮುಗಿಸಿದರು~ ಎಂಬುದು ಸಚನ್ ಸೋದರ ಆರ್.ಕೆ. ಸಚನ್ ಅವರ ಆರೋಪ.

`ಸಿಂಗ್ ಭ್ರಷ್ಟರಾಗಿದ್ದರೆ ಬದುಕುತ್ತಿದ್ದರೇನೋ. ಆದರೆ ಅದಕ್ಕೆ ಒಪ್ಪದೆ ಸಾವನ್ನು ಆಹ್ವಾನಿಸಿಕೊಂಡರು. ಇಂಥ ಘಟನೆಗಳನ್ನು ನಿತ್ಯ ನೋಡುತ್ತಿದ್ದೇನೆ. ಭ್ರಷ್ಟ ರಾಜಕಾರಣಿಗಳು, ಹಿರಿಯ ಅಧಿಕಾರಿಗಳಿಗೆ ಶಿಕ್ಷೆ ಆಗಿದ್ದೇ ಇಲ್ಲ. ತಿಮಿಂಗಿಲಗಳು ಬಚಾವಾಗುತ್ತವೆ. ಸಣ್ಣ ಪುಟ್ಟ ಮೀನುಗಳಷ್ಟೇ ಸಿಕ್ಕಿಬೀಳುತ್ತವೆ~ ಎಂದು ಸಿಂಗ್ ಅವರ ಸೋದರ ಸಂಬಂಧಿ ಇಂದರ್ ಸಿಂಗ್ ವಿಷಾದದಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT