ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯಾ ಯೋಜನೆ ಸಲ್ಲಿಕೆ

Last Updated 19 ಜನವರಿ 2011, 10:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾನಗರ ಪಾಲಿಕೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮತ್ತೆ ನೂರು ಕೋಟಿ ರೂಪಾಯಿ ವಿಶೇಷ ಅನುದಾನ ಒದಗಿಸಲು ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಈ ಅನುದಾನ ಪಡೆದುಕೊಳ್ಳುವುದಕ್ಕಾಗಿ ಕ್ರಿಯಾ ಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಹೇಳಿದ್ದಾರೆ.

ರಸ್ತೆ, ರಸ್ತೆ ಬದಿ ಚರಂಡಿ ಅಭಿವೃದ್ಧಿ, ಫುಟ್‌ಪಾತ್ ಮತ್ತು ಪಾದಚಾರಿ ಸುರಂಗ ಮಾರ್ಗ ನಿರ್ಮಾಣಕ್ಕೆ ರೂ. 35 ಕೋಟಿ; ಒಳಚರಂಡಿ ವಿಸ್ತರಣಾ ಜಾಲ ಕಾಮಗಾರಿಗಳಿಗೆ (25 ಕಿ.ಮೀ.) ರೂ. 5 ಕೋಟಿ; ಮಳೆ ನೀರು ಚರಂಡಿ ಕಾಮಗಾರಿಗಳು, ಬೀದಿ ದೀಪಗಳ ಅಳವಡಿಕೆ, ಮೂಲಸೌಕರ್ಯ ಅಭಿವೃದ್ಧಿ, ಆಶ್ರಯ ಕಾಲೋನಿಗಳ ಸುಧಾರಣೆ, ನೆರೆ ಹಾವಳಿಯಿಂದ ಹಾನಿಗೊಳಗಾದ ಪ್ರದೇಶಗಳ ಅಭಿವೃದ್ಧಿ, ಸ್ಮಶಾನಗಳ ಅಭಿವೃದ್ಧಿ, ಹಳ್ಳಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ರೂ. 20 ಕೋಟಿ; ಉದ್ಯಾನಗಳ ಅಭಿವೃದ್ಧಿ, ನಗರ ಅರಣ್ಯೀಕರಣ, ಕೆರೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ರೂ. 10 ಕೋಟಿ; ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉತ್ತೇಜನಕ್ಕಾಗಿ ರೂ. 10 ಕೋಟಿ ನಿಗದಿಪಡಿಸಲಾಗಿದೆ.ಮಣಿವಣ್ಣನ್ ಆಯುಕ್ತರಾಗಿದ್ದ ಅವಧಿಯಲ್ಲಿ 30 ಕೋಟಿ ರೂಪಾಯಿಯಲ್ಲಿ ನಿರ್ಮಿಸಲಾದ ರಸ್ತೆಗಳ ರಕ್ಷಣೆಗಾಗಿ 10 ಕೋಟಿ ರೂಪಾಯಿಯ ಕಾಮಗಾರಿ  ಈ ಕ್ರಿಯಾಯೋಜನೆಯಲ್ಲಿ ಒಳಗೊಂಡಿದೆ ಎಂದು ಅವರು ವಿವರಿಸಿದರು.

ಈ ವಿಶೇಷ ಅನುದಾನಕ್ಕೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದು, ಮುಂಬರುವ ಬಜೆಟ್‌ನಲ್ಲಿ ಅನುಮೋದನೆ ದೊರೆಯಲಿದೆ ಎಂದು ಅವರು ತಿಳಿಸಿದರು.ಈ ಹಿಂದೆ ರಾಜ್ಯ ಸರ್ಕಾರ ಮಂಜೂರು ಮಾಡಿದ 100 ಕೋಟಿ ರೂಪಾಯಿ ವಿಶೇಷ ಅನುದಾನದಲ್ಲಿ 88 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪೈಕಿ 82 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಇದರಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 32.5 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದರು.

ಈ ವಿಶೇಷ ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳನ್ನು ಮೂರನೇ ಪಕ್ಷದಿಂದ ಪರಿಶೀಲನೆ ನಡೆಸಲಾಗಿದೆ. ನವನಗರದ ಕ್ಯಾನ್ಸರ್ ಆಸ್ಪತ್ರೆ ಬಳಿಯ ರಸ್ತೆಯೊಂದನ್ನು ಹೊರತುಪಡಿಸಿ, ಉಳಿದೆಲ್ಲ ಕಾಮಗಾರಿಗಳಿಗೆ ತೃಪ್ತಿ ವ್ಯಕ್ತಪಡಿಸಲಾಗಿದೆ. ನವನಗರ ರಸ್ತೆಯ ಈ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರ ಎಚ್.ಬಿ. ಮಧುಕರ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ತಿಳಿಸಿದರು.ಸಾರ್ವಜನಿಕ ಶೌಚಾಲಯ: ಅವಳಿ ನಗರದ ವಿವಿಧೆಡೆ ಹಣ ಕೊಟ್ಟು ಬಳಕೆ ಮಾಡುವ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಸುಲಭ ಇಂಟರ್‌ನ್ಯಾಶನಲ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಸಿಸಿ ಟಿವಿ: ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿ ಕರ್ತವ್ಯಪಾಲನೆ ಪರಿಶೀಲಿಸುವ ನಿಟ್ಟಿನಲ್ಲಿ ಮುಖ್ಯ ಕಚೇರಿ ಹಾಗೂ ವಲಯ ಕಚೇರಿಯಲ್ಲಿ ಸಿ.ಸಿ. ಟಿವಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.ಸ್ವಚ್ಛತಾ ಕೆಲಸ ಕೈಗೊಳ್ಳುವ ಪೌರ ಕಾರ್ಮಿಕರು ಹಾಗೂ ಇತರ ಸಿಬ್ಬಂದಿಯ ಸಮಯಪಾಲನೆ ಪರಿಶೀಲನೆಗಾಗಿ ಹೆಬ್ಬೆಟ್ಟು ಒತ್ತುವ ಮೂಲಕ ಸಮಯ ದಾಖಲಿಸಿಕೊಳ್ಳುವ ‘ಮೊಬೈಲ್ ಬಯೋಮೆಟ್ರಿಕ್ ಸಿಸ್ಟಮ್’ ಅಳವಡಿಕೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಕಾರ್ಯಾಚರಣೆ ಎಚ್ಚರಿಕೆ
ಹುಬ್ಬಳ್ಳಿ: ಕಟ್ಟಡ ಉಪವಿಧಿಗಳನ್ನು ಉಲ್ಲಂಘಿಸಿದ ಹಾಗೂ ಪಾರ್ಕಿಂಗ್ ಸೌಲಭ್ಯ ಕಲ್ಪಿಸದ ಅವಳಿ ನಗರದ ಬೃಹತ್ ಕಟ್ಟಡಗಳ ವಿರುದ್ಧ ಬರುವ ಏಪ್ರಿಲ್‌ನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದರು. 45 ಕಟ್ಟಡಗಳನ್ನು  ಗುರುತಿಸಲಾಗಿದೆ  ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT