ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್ಮಸ್ ಬಜಾರ್

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಕಿ ಅವಘಡದಿಂದ ನವೀಕರಣಗೊಂಡ ರಸೆಲ್‌ ಮಾರುಕಟ್ಟೆಯಲ್ಲಿ ಈಗ ಮತ್ತೊಂದು ಹಬ್ಬದ ಸಡಗರ. ಎದುರಿಗಿರುವ ಸೇಂಟ್‌ ಮೇರಿಸ್‌ ಚರ್ಚ್‌ ಕ್ರಿಸ್ಮಸ್‌ನ ಕ್ಯಾರಲ್‌ನಿಂದ ಕಳೆಗಟ್ಟುತ್ತಿರುವ ಸಂದರ್ಭದಲ್ಲೇ ರಸೆಲ್‌ ಮಾರುಕಟ್ಟೆ ದೇಶ ವಿದೇಶಿ ಹಣ್ಣು, ತರಕಾರಿಗಳಿಂದ ನಳನಳಿಸುತ್ತಿದೆ. ಕೆಂಪು ಜಲಾಪೆನೊಸ್‌, ಕೆಂಪು ಕೋಸು, ಆರ್ಟಿಚೋಕ್ಸ್‌, ಸೆಲೆರಿ, ಬ್ರಕೋಲಿ, ವಾಟರ್‌ ಕ್ರೆಸ್‌, ಅವಕಾಡೊಸ್‌, ಕಿವಿ, ಗ್ಲಾಡಿಯೋಲಿ, ಟುಲಿಪ್‌ ಹಾಗೂ ಗುಲಾಬಿಗಳಿಂದ ಮಾರುಕಟ್ಟೆ ತುಂಬಿಹೋಗಿದೆ. ನೆಲಕ್ಕೆ ಹಾಸಿರುವ ಹೊಸ ಕೆಂಪು ಹಾಸು ಕ್ರಿಸ್ಮಸ್‌ ಸಡಗರದಲ್ಲಿರುವ ಗ್ರಾಹಕರಿಗೆ ಸ್ವಾಗತ ಕೋರುತ್ತಿದೆ. ಕ್ರಿಸ್ಮಸ್‌ನ ಮುನ್ನಾದಿನ ಹಾಗೂ ಕ್ರಿಸ್ಮಸ್‌ನ ದಿನದಂದು ಸೇಂಟ್‌ ಮೇರೀಸ್‌ ಚರ್ಚ್‌ಗೆ ಬರುವ ಕ್ರೈಸ್ತ ಬಾಂಧವರು ಪ್ರಾರ್ಥನೆ ಮುಗಿಸಿ ನೇರವಾಗಿ ಇಲ್ಲಿಗೆ ಬರುತ್ತಾರೆ.

1927ರಲ್ಲಿ ಆರಂಭವಾದ ರಸೆಲ್‌ ಮಾರುಕಟ್ಟೆಯ ಚಟುವಟಿಕೆ ಪ್ರತಿ ಕ್ರಿಸ್ಮಸ್‌ ವೇಳೆಗೆ ಗರಿಗೆದರುತ್ತದೆ. ಏಕೆಂದರೆ ಡಿ. 24 ಹಾಗೂ 25ರಂದು ಸಂಪ್ರದಾಯದಂತೆ ಇಲ್ಲಿ ಮಾರುಕಟ್ಟೆ ಪ್ರದರ್ಶನ ಏರ್ಪಾಡಾಗುತ್ತದೆ. ಹಣ್ಣು–ಹೂವು, ತರಕಾರಿ, ಮಾಂಸ ಹಾಗೂ ಮೀನು ಎಂಬ ನಾಲ್ಕು ವಿಭಾಗಗಳಲ್ಲಿ ಜಗತ್ತಿನ ಅತಿ ಪ್ರಸಿದ್ಧ ತಳಿಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಈ ಸಂದರ್ಭವನ್ನೇ ಎದುರು ನೋಡುತ್ತಿರುವ ಕ್ರೈಸ್ತ ಬಾಂಧವರು ತಮ್ಮಿಷ್ಟದ ಹಣ್ಣು, ತರಕಾರಿ, ಮಾಂಸ ಖರೀದಿಸಿ, ಇಲ್ಲಿರುವ ಕೇಕ್‌ ಶೋ ವೀಕ್ಷಿಸಿ ಮನೆಯತ್ತ ಹೆಜ್ಜೆ ಹಾಕುವುದು ಸಾಮಾನ್ಯ.

‘ನಮ್ಮಲ್ಲಿ ಉತ್ತಮ ಮಾಲ್‌ಗಳಿರುಬಹುದು. ಆದರೆ ಹಬ್ಬದ ಸಂದರ್ಭದಲ್ಲಿ ಸಂಭ್ರಮಿಸಲು ಇರುವ ಏಕೈಕ ಮಾರುಕಟ್ಟೆಯಿದು. ಅದರಲ್ಲೂ ಇಂತಹ ವಸ್ತು ಪ್ರದರ್ಶನ ಬೇರೆಲ್ಲೂ ಸಿಗಲಾರದು. ಹಬ್ಬದ ಸಂದರ್ಭ ಮಾತ್ರವಲ್ಲ ನೀರಿನ ಸೆಲೆಯ ಮೇಲೆ ನಿರ್ಮಿಸಲಾಗಿರುವ ಈ ಮಾರುಕಟ್ಟೆ ವಾತಾನುಕೂಲ. ವರ್ಷದ ಯಾವ ಋತುವಿನಲ್ಲಾದರೂ ದಣಿವಿಲ್ಲದೇ ಇಲ್ಲಿ ಶಾಪಿಂಗ್ ಮಾಡಬಹುದು. ಇಂಥ ಮಾರುಕಟ್ಟೆ ಹಾಗೂ ಅದರ ಸಂಭ್ರಮವನ್ನು ಕಾಪಾಡಿಕೊಂಡು ಹೋಗುವ ಜರೂರತ್ತು ನಮ್ಮೆಲ್ಲರ ಮೇಲಿದೆ’ ಎಂದು ಡಿಲಿಷಿಯಸ್‌ ಡ್ರೈ ಫ್ರೂಟ್‌ ಮಳಿಗೆಯ ಮಾಲೀಕ ಹಾಗೂ ರಸೆಲ್‌ ಮಾರುಕಟ್ಟೆ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಇದ್ರಿಸ್‌ ಚೌಧುರಿ ಹೇಳುತ್ತಾರೆ.

ಮಾರುಕಟ್ಟೆ ಪ್ರಾರಂಭವಾದ ವರ್ಷದಿಂದ ಆಚರಿಸುತ್ತಿರುವ ಈ ಉತ್ಸವಕ್ಕೆ ಬ್ರಿಟಿಷರ ಕಾಲದಲ್ಲಿ ಪ್ರವೇಶ ದರ ಕೂಡಾ ನಿಗದಿಪಡಿಸಲಾಗಿತ್ತಂತೆ. ರಸೆಲ್‌ ಮಾರುಕಟ್ಟೆಯ ಪ್ರದರ್ಶನ ಎಂದರೆ ಎಲ್ಲೆಡೆ ಸಂಭ್ರಮ, ಪ್ರದರ್ಶನ ನೋಡಲು ಜನರ ನೂಕುನುಗ್ಗಲು, ಗ್ರಾಹಕರು ಮಾತ್ರವಲ್ಲ ವರ್ತಕರಲ್ಲೂ ಅಷ್ಟೇ ಉತ್ಸಾಹ ತುಂಬಿರುತ್ತಿತ್ತು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

1983ರವರೆಗೂ ವಾರ್ಷಿಕ ಉತ್ಸವದಂತೆ ನಡೆದುಕೊಂಡು ಬರುತ್ತಿದ್ದ ರಸೆಲ್ ಮಾರುಕಟ್ಟೆಯ ಈ ಉತ್ಸವದಲ್ಲಿ ಸರ್ವಶ್ರೇಷ್ಠ ತಳಿಯ ಹಣ್ಣು, ತರಕಾರಿ, ಮಾಂಸ, ಮೀನಿಗೆ ಚಿನ್ನದ ಪದಕ ನೀಡಿ ಗೌರವಿಸುವ ಪರಿಪಾಠವೂ ಇತ್ತಂತೆ. ಡಿ. 24ರ ಬೆಳಿಗ್ಗೆ ಆರಂಭವಾಗುತ್ತಿದ್ದ ಮಾರುಕಟ್ಟೆ ಉತ್ಸವಕ್ಕೆ ಬ್ರಿಟಿಷರ ಕಾಲದಲ್ಲಿ ಆಗಿನ ಅಧಿಕಾರಿಗಳು ತೀರ್ಪುಗಾರರಾಗಿ ಆಗಮಿಸಿದರೆ, ನಂತರ ವರ್ಷಗಳಲ್ಲಿ ಪಾಲಿಕೆಯ ಮೇಯರ್‌, ಪಾಲಿಕೆ ಸದಸ್ಯರು, ಅಧಿಕಾರಿಗಳು, ತೋಟಗಾರಿಕೆ ಅಧಿಕಾರಿಗಳು ಪಾಲ್ಗೊಂಡು ಆ ಉತ್ಸವದ ಅತ್ಯುತ್ತಮ ಮಳಿಗೆಯನ್ನು ಆಯ್ಕೆ ಮಾಡುತ್ತಿದ್ದರು. ಈ ಎಲ್ಲಾ ಪ್ರಕ್ರಿಯೆ ಮುಗಿಯುವವರೆಗೂ ಜನರಿಗೆ ಪ್ರವೇಶಕ್ಕೆ ನಿರ್ಬಂಧವಿರುತ್ತಿತ್ತು.

‘ರಸೆಲ್‌ ಮಾರುಕಟ್ಟೆಯ ಈ ಪ್ರದರ್ಶನ ಆರಂಭದ ದಿನದಿಂದ 1983ರವರೆಗೆ ಬಹಳ ವಿಜೃಂಭಣೆಯಿಂದ ನಡೆಯುತ್ತಿತ್ತು. ಪಾಲಿಕೆಯೇ ಮುಂದೆ ನಿಂತು ಮಾರುಕಟ್ಟೆಗೆ ಸುಣ್ಣ ಬಣ್ಣ ಬಳಿಯುವ ಉಸ್ತುವಾರಿ ವಹಿಸಿಕೊಳ್ಳುತ್ತಿತ್ತು. ನಮ್ಮ ಮಳಿಗೆಯೂ ಮೂರು ಬಾರಿ ಚಿನ್ನದ ಪದಕ ಗೆದ್ದಿದೆ. ಆದರೆ 1983ರಿಂದ ಅದೇಕೋ ಪಾಲಿಕೆ ಈ ಜವಾಬ್ದಾರಿಯಿಂದ ಬದಿ ಸರಿಯಿತು. ನಂತರ 1993ರಲ್ಲಿ ಒಮ್ಮೆ ಪಾಲಿಕೆಯ ನೇತೃತ್ವದಲ್ಲೇ ಮಾರುಕಟ್ಟೆ ಪ್ರದರ್ಶನ ನಡೆಯಿತಾದರೂ ಅದು ಆ ಒಂದು ವರ್ಷಕ್ಕಷ್ಟೇ ಸೀಮಿತಗೊಂಡಿದ್ದು ವಿಪರ್ಯಾಸ’ ಎನ್ನುವುದು ಚೌಧುರಿ ಅವರ ಬೇಸರ.

ರಿಯಾಯಿತಿ ದರ
ಅಂದಹಾಗೆ, ಕ್ರಿಸ್ಮಸ್ ಸಂದರ್ಭಕ್ಕಾಗಿ ರಸೆಲ್‌ ಮಾರುಕಟ್ಟೆಯಲ್ಲಿ ಆಯೋಜಿಸಿರುವ ಕೇಕ್‌ ಪ್ರದರ್ಶನದಲ್ಲಿ ಆರು ಅಡಿ ಎತ್ತರದ ‘ಕೊಚ್ಚಾಡಿಯನ್‌’ ಚಿತ್ರದ ಪಾತ್ರಧಾರಿಯಾಗಿ ರಜನಿಕಾಂತ್‌ ಹಾಗೂ ‘ಜೈಹೋ’ ಚಿತ್ರದ ಪಾತ್ರಧಾರಿಯಾಗಿ ಸಲ್ಮಾನ್‌ ಖಾನ್‌ ಅವರ ಕೇಕ್‌ ಪ್ರತಿಕೃತಿಗಳು ಈ ಬಾರಿಯ ಪ್ರದರ್ಶನದ ಕೇಂದ್ರಬಿಂದುವಾಗಲಿದೆ.

ಹಬ್ಬದ ಸಂದರ್ಭಕ್ಕಾಗಿ ಇರಾನ್‌, ಟುನಿಷ್ಯಾ ಸೇರಿದಂತೆ ಮಧ್ಯ ಪ್ರಾಚ್ಯದ ಕರ್ಜೂರ, ವಾಲ್‌ನಟ್‌ ಮುಂತಾದ ಒಣಹಣ್ಣುಗಳು, ದಕ್ಷಿಣ ಆಫ್ರಿಕಾ, ಐರೋಪ್ಯ ರಾಷ್ಟ್ರ, ನ್ಯೂಜಿಲೆಂಡ್‌, ಆಸ್ಟ್ರೇಲಿಯಾ, ಅಮೆರಿಕ, ಆಗ್ನೇಯ ಏಷ್ಯಾ ರಾಷ್ಟ್ರಗಳಿಂದ ದ್ರಾಕ್ಷಿ, ಪ್ಲಮ್‌, ಗುವಾ, ಕಿವಿ, ಥಾಯ್ಲೆಂಡ್‌, ಸೇಬು, ರಂಬುಟಾನ್‌ ಹಣ್ಣುಗಳು ಮಾರುಕಟ್ಟೆಗೆ ಬಂದಿಳಿದಿವೆ. ಐರೋಪ್ಯ ರಾಷ್ಟ್ರದ ತರಹೇವಾರಿ ಹೂವುಗಳು. ಲೆಟ್ಯೂಸ್‌, ರೋಸ್‌ಮೇರಿ, ಕೆಂಪು, ಹಳದಿ ಕ್ಯಾಪ್ಸಿಕಂ, ಲೆಮನ್‌ ಗ್ರಾಸ್‌ ಇತ್ಯಾದಿ, ವೈನ್‌, ಶಾಂಪೇನ್‌ ಇತ್ಯಾದಿ ರಸೆಲ್‌ ಮಾರುಕಟ್ಟೆಯಲ್ಲಿ ಲಭ್ಯ. ಮಾರುಕಟ್ಟೆ ಪ್ರದರ್ಶನದ ವೇಳೆ ರಿಯಾಯಿತಿ ದರದಲ್ಲಿ ವಸ್ತುಗಳು ಸಿಗುವುದರಿಂದ ಗ್ರಾಹಕರಿಗೆ ಹಬ್ಬದ ಸಂದರ್ಭದಲ್ಲಿ ರಿಯಾಯಿತಿ ಉಡುಗೊರೆಯೂ ದೊರೆಯಲಿದೆ.

***

ರಸೆಲ್‌ ಮಾರುಕಟ್ಟೆಯ ಕತೆ
​ಶಿವಾಜಿನಗರದಲ್ಲಿ ಸ್ಥಾಪಿಸಲಾದ ರಸೆಲ್‌ ಮಾರುಕಟ್ಟೆ 1927ರಲ್ಲಿ ಆರಂಭವಾಯಿತು. ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ ಕಂಟೋನ್ಮೆಂಟ್‌ ಪ್ರದೇಶದ ಮುನ್ಸಿಪಲ್‌ ಕಮಿಷನರ್‌ ಟಿ.ಬಿ. ರಸೆಲ್‌ ಅವರ ಹೆಸರನ್ನೇ ಇದಕ್ಕೆ ಇಡಲಾಗಿದೆ. ಮಾರುಕಟ್ಟೆಯನ್ನು ಹಾಜಿ ಸರ್‌ ಇಸ್ಮಾಯಿಲ್‌ ಸೇಟ್‌ ಅವರು ಉದ್ಘಾಟಿಸಿದ್ದರು.

ಇದೇ ಸ್ಥಳದಲ್ಲಿದ್ದ ಹಳೆಯ ಮಾರುಕಟ್ಟೆ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಹಾಗೂ ಬೆಳೆಯುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ನೂತನ ಮಾರುಕಟ್ಟೆಯನ್ನು ನಿರ್ಮಿಸಿದ್ದು ಅದು ಇಂಡೋ ಸಾರ್ಸನೆಕ್‌ ಶೈಲಿಯಲ್ಲಿದೆ. ಪ್ರತಿಯೊಂದು ವಿಭಾಗಕ್ಕೂ ಪ್ರತ್ಯೇಕ ಮಾರಾಟ ಸ್ಥಳವನ್ನು ನಿರ್ಮಿಸಲಾಗಿದ್ದು ಸ್ಟೀಲ್‌, ಇಟ್ಟಗೆ ಹಾಗೂ ಸುಣ್ಣದಿಂದ ನಿರ್ಮಿಸಲಾಗಿದೆ.

ಜವಾಬ್ದಾರಿ ಮರೆತ ಪಾಲಿಕೆ
ಮಾರುಕಟ್ಟೆ ಪ್ರದರ್ಶನದ ಜವಾಬ್ದಾರಿಯನ್ನು ಪಾಲಿಕೆ ಕೈಬಿಟ್ಟಾಗ ರಸೆಲ್‌ ಮಾರುಕಟ್ಟೆಯ ವರ್ತಕರ ಸಂಘವೇ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿದೆ. ಜತೆಗೆ ಈ ಸಂಪ್ರದಾಯವನ್ನು ಮುರಿಯುವ ಮನಸ್ಸು ನಮಗೂ ಇಲ್ಲ ಎನ್ನುವುದು ಇದ್ರಿಸ್ ಮಾತು.
ಇದು ಮಾರುಕಟ್ಟೆಯಷ್ಟೇ ಅಲ್ಲ. ಸ್ವಾತಂತ್ರ್ಯಪೂರ್ವದ ಐತಿಹಾಸಿಕ ಸ್ಮಾರಕವಿರುವ ಪಾರಂಪರಿಕ ಸ್ಥಳವೂ ಹೌದು. ಹೀಗಾಗಿ ಇದನ್ನು ಉಳಿಸುವ ಸಲುವಾಗಿ ಹಲವು ಬಾರಿ ಬಿಬಿಎಂಪಿಗೆ ಮನವಿ ಮಾಡಿದ್ದೇವೆ. ಮಾರುಕಟ್ಟೆಗೆ ಒಟ್ಟು 17 ದ್ವಾರಗಳಿವೆ. ಎಲ್ಲಿಯೂ ಭದ್ರತೆ ಹಾಗೂ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿಲ್ಲ.

1850ರಲ್ಲಿ ನಿರ್ಮಿಸಿದ ಗಡಿಯಾರ ಗೋಪುರದಲ್ಲಿದ್ದ ಗಡಿಯಾರ ಕಳುವಾಗಿದೆ. ಹೀಗಾಗಿ ವರ್ತಕರೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಂಡಿದ್ದಾರೆ. ಶೌಚಾಲಯ ವ್ಯವಸ್ಥೆ ಇಲ್ಲ. ಇವೆಲ್ಲದರ ಕುರಿತು ಪಾಲಿಕೆಯ ಗಮನ ಸೆಳೆಯಲು ಹಲವು ಬಾರಿ ಪ್ರಯತ್ನ ನಡೆಸಿದ್ದೇವೆ’ ಎನ್ನುವುದು ಅವರ ಆರೋಪ.

ಮಾರುಕಟ್ಟೆ ಪ್ರದರ್ಶನ ಆಯೋಜಿಸಲು ನಾವೇನೂ ದೊಡ್ಡ ಮೊತ್ತದ ಹಣ ನಿರೀಕ್ಷಿಸುವುದಿಲ್ಲ.  ಸುಣ್ಣಬಣ್ಣ ಹಾಗೂ ಕನಿಷ್ಠ ಸೌಲಭ್ಯವನ್ನು ಪಾಲಿಕೆ ಒದಗಿಸಲಿ. ಪ್ರದರ್ಶನದ ಉಳಿದ ವ್ಯವಸ್ಥೆಯನ್ನು ವರ್ತಕರೇ ತಮ್ಮ ಸಂಘದಿಂದ ಆಯೋಜಿಸುತ್ತಾರೆ. ಅಗ್ನಿ ಆಕಸ್ಮಿಕದ ಬಳಿಕ ಬಿಬಿಎಂಪಿ ಮಾರುಕಟ್ಟೆಯ ಮಳಿಗೆಗಳಿಂದ ತೆರಿಗೆ ಸಂಗ್ರಹಿಸಿಲ್ಲ. ಈ ಕುರಿತು ಮೇಯರ್‌ಗೂ ಮನವಿ ಸಲ್ಲಿಸಲಾಗಿದೆ. ಮೇಯರ್‌ ಕೂಡಾ ಅಧಿಕಾರಿಗಳನ್ನು ಕಳುಹಿಸಿ ಹಣ ಪಡೆಯುವ ಭರವಸೆ ನೀಡಿ ತಿಂಗಳುಗಳೇ ಕಳೆದರೂ ಈವರೆಗೂ ಯಾರೂ ಬಂದಿಲ್ಲ. ಈ ಬಾಕಿ ಮೊತ್ತ ಈಗ ರೂ25ಲಕ್ಷವನ್ನೂ ಮೀರಿದೆ. ಈ ಹಣವನ್ನು ಪಾಲಿಕೆ ಬಳಸಿಕೊಂಡು ಮಾರುಕಟ್ಟೆ ಕ್ಷೇಮಾಭಿವೃದ್ಧಿಗೆ ನೆರವು ನೀಡಬೇಕಾಗಿದೆ’ ಎನ್ನುವುದು ಮೊಹಮ್ಮದ್‌ ಇದ್ರಿಸ್‌ ಚೌಧುರಿ ಅವರ ಮನವಿ.

‘2012ರಲ್ಲಾದ ಬೆಂಕಿ ಆಕಸ್ಮಿಕದ ನಂತರ ಇಲ್ಲೊಂದು ಆಧುನಿಕ ಮಾಲ್‌ ನಿರ್ಮಿಸಲು ಪಾಲಿಕೆ ಮುಂದಾಗಿತ್ತು. ಆದರೆ ಪಾರಂಪರಿಕ ಸ್ಮಾರಕಗಳನ್ನು ಹೊಂದಿರುವ ಈ ಮಾರುಕಟ್ಟೆಯನ್ನು ನವೀಕರಿಸಲು ಅವಕಾಶ ನೀಡಲಾಗಿಲ್ಲ. ಸುಟ್ಟುಹೋದ ಭಾಗಗಳ ನವೀಕರಣಕ್ಕಾಗಿ ರೂ1.75 ಕೋಟಿ ಹಣವನ್ನು ವರ್ತಕರೇ ಸಂಗ್ರಹಿಸಿ ಖರ್ಚು ಮಾಡಿದ್ದಾರೆ. ಪಾಲಿಕೆಯಿಂದ  ಪರಿಹಾರ ರೂಪವಾಗಿ ದೊರೆತದ್ದು ಕೇವಲ ರೂ33 ಲಕ್ಷ ಮಾತ್ರ. ಮೂರು ತಿಂಗಳ ಹಿಂದೆ ಪಾಲಿಕೆಯು ಬೆಸ್ಕಾಂಗೆ ನಿರಾಕ್ಷೇಪಣಾ ಪತ್ರ ನೀಡದೆ ಮಾರುಕಟ್ಟೆ ಕತ್ತಲೆಯಲ್ಲಿರುವಂತೆ ಮಾಡಿತ್ತು. ಆದರೆ ಸ್ಥಳೀಯ ನಾಯಕರ ನೆರವಿನಿಂದ ವಿದ್ಯುತ್‌ ಪಡೆಯುವಲ್ಲಿ ಸಫಲರಾದೆವು. ಹೀಗಾಗಿ ಈ ಬಾರಿಯ ಮಾರುಕಟ್ಟೆ ಉತ್ಸವಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಸಂಭ್ರಮದಿಂದಲೇ ಆಚರಿಸಲು ತೀರ್ಮಾನಿಸಲಾಗಿದೆ’ ಎಂದು ಚೌಧುರಿ ತಿಳಿಸುತ್ತಾರೆ.

ಮೇಯರ್ ಹೀಗಂತಾರೆ...
ರಸೆಲ್‌ ಮಾರುಕಟ್ಟೆ ತೀರಾ ಹಳೆಯದಾದ್ದರಿಂದ ಅಲ್ಲೊಂದು ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲು ಪಾಲಿಕೆ ತೀರ್ಮಾನಿಸಿತ್ತು. ಈ ಹಿಂದೆ ಅಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದ ನಂತರ ಮಳಿಗೆಗಳನ್ನು ಖಾಲಿ ಮಾಡಲು ವರ್ತಕರಿಗೆ ಸೂಚಿಸಲಾಗಿತ್ತು. ಆದರೆ ಅದಕ್ಕೆ ಅವಕಾಶ ಕೊಡದೆ ತಾವೇ ಹಣ ಹೊಂದಿಸಿಕೊಂಡು ಶಿಥಿಲಾವಸ್ಥೆಯ್ಲಲಿರುವ ಮಾರುಕಟ್ಟೆಯನ್ನು ದುರಸ್ತಿ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಪಾಲಿಕೆ ಅವರಿಂದ ತೆರಿಗೆ ಸ್ವೀಕರಿಸುತ್ತಿಲ್ಲ. ಒಂದೊಮ್ಮೆ ಇಲ್ಲಿನ ವರ್ತಕರು ಮಳಿಗೆ ತೆರವುಗೊಳಿಸಿದಲ್ಲಿ ಅಲ್ಲಿನ ಪಾರಂಪರಿಕ ಆಸ್ತಿಗಳಿಗೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಆಧುನಿಕ ಹಾಗೂ ಸುವ್ಯವಸ್ಥಿತ ಮಳಿಗೆ ನಿರ್ಮಿಸುವ ಗುರಿ ಪಾಲಿಕೆಯದ್ದು.

– ಬಿ.ಎಸ್‌. ಸತ್ಯನಾರಾಯಣ, ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT