ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್ ಖಾದ್ಯಲೋಕ

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

`ಹಬ್ಬವೆಂದರೆ ನಮಗೆ ಸಂಪ್ರದಾಯಕ್ಕೆ ಮೊದಲ ಆದ್ಯತೆ. ಪ್ರತಿದಿನ ಮೂರು ಬಾರಿ ಪ್ರಾರ್ಥನೆ ಸಲ್ಲಿಸುತ್ತೇವೆ. ಮೊಮ್ಮಗ (12 ವರ್ಷದ ಮಾರ್ಕ್ ಬ್ರೂಕ್ಸ್) ಕೂಡ ತಪ್ಪಿಸಿಕೊಳ್ಳುವುದಿಲ್ಲ. ಕ್ರಿಸ್‌ಮಸ್‌ನಲ್ಲಿ ವೈನ್ ಮತ್ತು ಕೇಕ್ ಸಾಂಪ್ರದಾಯಿಕ ಆಹಾರ. ಅದಿಲ್ಲದೆ ಹಬ್ಬವಿಲ್ಲ. ದೇವರೇ (ಯೇಸುಕ್ರಿಸ್ತ) ಪಾಲಿಸಿದ ಕ್ರಮವನ್ನು ನಾವು ಬಿಡಬಾರದಲ್ವಾ? ಅದಕ್ಕೆ ಪ್ರತಿವರ್ಷವೂ ಮನೆಯ್ಲ್ಲಲೇ ವೈನ್ ತಯಾರಿಸುತ್ತೇವೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಕಪ್ಪು ದ್ರಾಕ್ಷಿ ತಗೋತೀವಿ. ಒಂದು ತಿಂಗಳಲ್ಲಿ ವೈನ್ ತಯಾರಾಗುತ್ತದೆ. ಈ ಬಾರಿ ಕೇಕ್ ಹೊರಗಿಂದ ತರಿಸಿದ್ದೇವೆ. ಇಲ್ಲದಿದ್ದರೆ ಅದನ್ನೂ ನಾವೇ ತಯಾರಿಸುತ್ತೇವೆ' ಎಂದು, 64ರ ಹುಡುಗಿ ಗ್ರೇಸಿ ಸ್ಟುವರ್ಟ್ ಅವರು ವಿವರಿಸುತ್ತಿದ್ದರೆ ಮುಖದ ತುಂಬಾ ಹಬ್ಬದ ಕಳೆಯಿತ್ತು.

ಜೆ.ಪಿ. ನಗರ ಒಂಬತ್ತನೇ ಹಂತದಲ್ಲಿರುವ ನಂದಿ ಗಾರ್ಡನ್ ಅಪಾರ್ಟ್‌ಮೆಂಟ್‌ನ 5ಸಿ-6ನೇ ಗೃಹಗುಚ್ಛದಲ್ಲಿರುವ ನೆಲಮಹಡಿಯ ಮನೆಗೆ ಸೋಮವಾರ ಬೆಳಿಗ್ಗೆ 10ಕ್ಕೆ ಭೇಟಿ ಕೊಟ್ಟಾಗ ಹಬ್ಬದ ಹೊರಾಂಗಣ, ಒಳಾಂಗಣದ ತಯಾರಿ ಮುಗಿಸಿ ಅಡುಗೆಮನೆಯಲ್ಲಿ ಗ್ರೇಸಿ ಅವರು ತಮ್ಮ ಮಗಳು ವನೀಸಾ ಬ್ರೂಕ್ಸ್ ಜತೆ ತಿಂಡಿ ತಿನಿಸುಗಳ ಜೋಡಣೆಯಲ್ಲಿ ನಿರತರಾಗಿದ್ದರು.

ಪ್ರವೇಶದ್ವಾರದಿಂದ ಹಿಡಿದು ಮನೆಯ ತುಂಬೆಲ್ಲ ಹಬ್ಬದ್ದೇ ವಾತಾವರಣ. ಪುಟ್ಟ ಪುಟ್ಟ ಗೊಂಬೆಗಳು, ಹೂವು ಮತ್ತು ಬೆಳ್ಳಿ ಬಣ್ಣದ ಪುಟಾಣಿ ಗಂಟೆಗಳ ಗೊಂಚಲು, ನಕ್ಷತ್ರಾಕಾರದ ಪೇಪರ್ ಕಟಿಂಗ್‌ಗಳು, ದೊಡ್ಡದಾದ ಸಾಂತಾಕ್ಲಾಸ್‌ನ ಪೋಸ್ಟರ್... ಬಾಗಿಲು ದಾಟಿ ಹಾಲ್‌ಗೆ ಕಾಲಿಟ್ಟರೆ, ಹತ್ತು ಅಡಿ ಎತ್ತರದ ಕ್ರಿಸ್‌ಮಸ್ ಟ್ರೀ ನೀಲಿ ಮತ್ತು ಕೆಂಪುಬಣ್ಣದ ನಕ್ಷತ್ರಾಕಾರದ ಮಿನಿಯೇಚರ್ ದೀಪಗಳು ಕಣ್ಣುಮಿಟುಕಿಸಿ ಒಳಗೆ ಬರಮಾಡಿಕೊಳ್ಳುತ್ತಿದ್ದವು. ಮರದ ತುಂಬಾ ಮತ್ತದೇ ಪುಟಾಣಿ ಬೆಲ್‌ಗಳು, ಬೆಳ್ಳಿ ಬಣ್ಣ ಲೇಪಿಸಿಕೊಂಡ ಹೂವು, ಆಲಂಕಾರಿಕ ವಸ್ತುಗಳು, ಮರದ ಬುಡದಲ್ಲಿ ಒಂದೆರಡು ಉಡುಗೊರೆಯ ಪೊಟ್ಟಣಗಳು... ಪಕ್ಕದ ಒಂದು ಮೇಜಿನಲ್ಲಿ ಸಾಲಂಕೃತ ಕ್ರಿಬ್...

`ಕ್ರಿಬ್ ರೆಡಿಯಾಗಿದೆ. ಆದರೆ ಇವತ್ತು (ಸೋಮವಾರ) ರಾತ್ರಿ 12 ಗಂಟೆಗೂ ಮೊದಲು ಕ್ರಿಬ್‌ನಲ್ಲಿ ಬಾಲಯೇಸುವಿನ ಗೊಂಬೆ ಇಡುವ ಹಾಗಿಲ್ಲ. ಆದ್ದರಿಂದ ರಾತ್ರಿ ಚರ್ಚ್‌ನಲ್ಲಿ ಪ್ರಾರ್ಥನೆ ಮುಗಿಸಿ  ಬಂದಮೇಲೆ ಕ್ರಿಬ್‌ನಲ್ಲಿ ಯೇಸುವನ್ನು ಕೂರಿಸುತ್ತೇವೆ. ಸಂಪ್ರದಾಯದ ಬಗ್ಗೆ ನಮ್ಮಮ್ಮ ಅಷ್ಟು ಪಕ್ಕಾ' ಎಂದು ಮಾತು ಸೇರಿಸಿದರು, ವನೀಸಾ ಬ್ರೂಕ್ಸ್.

ಕಲ್‌ಕಲ್, ರೋಸ್ ಕುಕಿ, ಟರ್ಕಿ...

ಕ್ರಿಸ್‌ಮಸ್‌ನಲ್ಲಿ ಕೆಲವು ಆಹಾರಗಳನ್ನು ಕಡ್ಡಾಯವಾಗಿ ಮಾಡಬೇಕು. `ಕಲ್‌ಕಲ್' ಇರಲೇಬೇಕು. ಕೇಕ್‌ನಷ್ಟೇ ಅವಶ್ಯ. ಮೂರು ದಿನದಿಂದ ಅದ್ರಲ್ಲೇ ಬ್ಯುಸಿ ಇದ್ದೆವು. ನಿನ್ನೆ ರಾತ್ರಿ ಎಲ್ಲಾ ಮಾಡಿ ಮುಗಿಸಿದೆವು ಅಂದರು ಗ್ರೇಸಿ. `ಗುಲಾಬಿ ಆಕಾರದಲ್ಲಿ ಇರುವುದರಿಂದ ಇದನ್ನು ರೋಸ್ ಕುಕಿ ಅಂತ ಕರೀತಾರೆ. ಮೈದಾಕ್ಕೆ ಕಾಯಿ ಹಾಲು, ಸಕ್ಕರೆ, ಮೊಟ್ಟೆಯ ಹಳದಿ ಭಾಗ ಸೇರಿಸಿ ಚೆನ್ನಾಗಿ ಕಲಸಿ ಹಿಟ್ಟು ಸಿದ್ಧಪಡಿಸಿಕೊಳ್ಳುತ್ತೇವೆ. ನೋಡಿ ಈ ಅಚ್ಚು ಇದ್ಯಲ್ಲ ಇದನ್ನು ಕುದಿಯುವ ಎಣ್ಣೆಯಲ್ಲಿ ಚೆನ್ನಾಗಿ ಅದ್ದಿ ಬಿಸಿಮಾಡಿಕೊಂಡು ಆ ಹಿಟ್ಟಿನಲ್ಲಿ ಒಮ್ಮೆ ಜೋರಾಗಿ ಅಮುಕಿದರೆ ಹಿಟ್ಟು ಅಚ್ಚಿನಲ್ಲಿ ಕೂರುತ್ತದೆ. ಅದನ್ನು ಎಣ್ಣೆಯಲ್ಲಿ ಕರಿದರೆ ರೋಸ್ ಕುಕಿ ಸಿದ್ಧ. ಕಲ್‌ಕಲ್ ಎಲ್ಲರ ಫೇವರಿಟ್.

ಒಂದು ಕೆ.ಜಿ. ಮೈದಾಹಿಟ್ಟನ್ನು ಮೂರು ಮೊಟ್ಟೆ ಮತ್ತು 200 ಗ್ರಾಂ ತುಪ್ಪದೊಂದಿಗೆ ಕಲಸಿ ಊಟಕ್ಕೆ ಬಳಸುವ ಫೋರ್ಕ್‌ನ ಬೆನ್ನಲ್ಲಿ ತಿರುವುತ್ತಾ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಂಡು ಎಣ್ಣೆಯಲ್ಲಿ ಕರಿಯಬೇಕು. ಕಲ್‌ಕಲ್ ಕಲ್ಲಿನಂತೆ ಗಟ್ಟಿಯಾದರೆ ತಿನ್ನಲು ಕಷ್ಟ. ಗರಿಮುರಿಯಾಗಿದ್ದರೇ ಚಂದ. ಇದಕ್ಕೆ ಹಿಟ್ಟು ಕಲಸೋದೂ ಒಂದು ಕಲೆ' ಎಂದು ವನೀಸಾ ವಿವರಿಸಿದರು.

ವಿಶಾಖಪಟ್ಟಣದಲ್ಲೇ ಹುಟ್ಟಿ ಬೆಳೆದ ಗ್ರೇಸಿ ಅವರ ಪತಿ ರೈಲ್ವೇ ಅಧಿಕಾರಿಯಾಗಿ ನಿವೃತ್ತರಾದವರು. ಇದೀಗ ಮಗಳ ಮದುವೆಯ ನಂತರ ಬೆಂಗಳೂರಿಗೆ ಸ್ಥಳಾಂತರವಾದರೂ ವಿಶಾಖಪಟ್ಟಣದಲ್ಲಿನ ಕ್ರಿಸ್‌ಮಸ್ ಆಚರಣೆಯನ್ನು ಮರೆತಿಲ್ಲ. `ಹಬ್ಬಕ್ಕೆ ಹತ್ತು ದಿನವಿರುವಾಗ ಆತ್ಮೀಯರು ಮತ್ತು ಬಂಧುಗಳ ಮನೆಗೆ ಹೋಗಿ ವೈನ್, ಕೇಕ್ ಕೊಟ್ಟು ಹಬ್ಬದ ಶುಭಾಶಯ ತಿಳಿಸಿ ಬರುತ್ತಿದ್ದೆವು. ಇಲ್ಲಿ ಇರುವ 450 ಫ್ಲ್ಯಾಟ್‌ಗಳಲ್ಲಿ ಪರಿಚಯದವರ ಸಂಖ್ಯೆ ಬಹಳ ಕಡಿಮೆ. ಇಲ್ಲಿ ನೆಂಟರೂ ಅಷ್ಟೊಂದಿಲ್ಲ' ಎಂಬ ಬೇಸರ ಆ ಹಿರಿಜೀವಕ್ಕೆ.

`ಅತ್ತೆ ಕೇಕ್ ಮತ್ತು ವೈನ್ ತುಂಬಾ ಚೆನ್ನಾಗಿ ಮಾಡುತ್ತಾರೆ. ಈ ಬಾರಿ ನಾನು ಫ್ರಾನ್ಸ್‌ನಿಂದ ತಂದ ವೈನ್ ಕೂಡಾ ಇದೆ. ಪ್ರತಿ ವರ್ಷ ಹಬ್ಬಕ್ಕೆ ಮೊದಲು ಮನೆಗೆ ಪೇಂಟಿಂಗ್ ಮಾಡೋದು ಯಾರು ಗೊತ್ತಾ? ನನ್ನ ಹೆಂಡತಿ. ಅವಳು ಒಬ್ಬ ಚಿತ್ರಕಲಾವಿದೆಯೂ ಹೌದು. ಕ್ರಿಸ್‌ಮಸ್ ಟ್ರೀ, ಕ್ರಿಬ್, ಈ ಎಲ್ಲ ಅಲಂಕಾರಗಳನ್ನು ತಾಯಿ ಮಗಳೇ ಹಂಚಿಕೊಂಡು ಮಾಡುತ್ತಾರೆ' ಎಂದು ಶ್ಲಾಘಿಸಿದರು ಮನೆಯ ಯಜಮಾನ, ಹಾರ್ಡ್‌ವೇರ್ ಇಂಜಿನಿಯರ್ ಪರ್ಸಿ ಬ್ರೂಕ್ಸ್.

ಟರ್ಕಿ ಬದಲು ಕೋಳಿ
ನಮ್ಮ ಹಬ್ಬದಲ್ಲಿ ಮಾಂಸಾಹಾರದಲ್ಲಿ ಟರ್ಕಿ (ಕೋಳಿಗಿಂತ ಮೂರ‌್ನಾಲ್ಕು ಪಟ್ಟು ದೊಡ್ಡ ಗಾತ್ರದ ಪಕ್ಷಿ) ಮತ್ತು ಹಂದಿಮಾಂಸಕ್ಕೆ ಅಗ್ರಸ್ಥಾನ. ನಮ್ಮದು ಪುಟ್ಟ ಸಂಸಾರ ಅಲ್ವಾ ಹಾಗಾಗಿ ಟರ್ಕಿಯಂತಹ ದೊಡ್ಡ ಪಕ್ಷಿಯನ್ನು ತಂದು ರೋಸ್ಟ್ ಮಾಡೋದು ವ್ಯರ್ಥ. ಅದಕ್ಕಾಗಿ ಕೋಳಿಯನ್ನೇ ಬಳಸುತ್ತೇವೆ.
ಸ್ಕಿನ್ ಔಟ್ ಮಾಡಿದ ಇಡಿ ಕೋಳಿಗೆ ಟರ್ಕಿಗೆ ಬಳಸುವ ಮಸಾಲೆ ತುಂಬಿ ಮೈಕ್ರೋಓವೆನ್‌ನಲ್ಲಿ 90 ಡಿಗ್ರಿಯಲ್ಲಿ ಬೇಯಿಸುತ್ತೇವೆ. ಬಾಯಲ್ಲಿ ನೀರೂರಿಸುವಂತಹ ರುಚಿ ಅದರದು.

ಉಳಿದಂತೆ ಹಂದಿಮರಿಯ ಮಾಂಸದಲ್ಲೂ ಬಗೆಬಗೆಯ ಖಾದ್ಯ ಮಾಡುತ್ತೇವೆ. ಕಬಾಬ್, ಬಿರಿಯಾನಿ, ತರಕಾರಿ ಪಲಾವ್ ಇದ್ದೇ ಇರುತ್ತದೆ ಎಂದು ಅಡುಗೆಯ ತಯಾರಿಯನ್ನು ಬಣ್ಣಿಸಿದರು ಬ್ರೂಕ್ಸ್ ದಂಪತಿ. ಅತಿಥಿಗಳ ಸತ್ಕಾರ ಹಬ್ಬದ ಸಂಪ್ರದಾಯಗಳಲ್ಲೊಂದು. ಹಾಗಾಗಿ ಎಲ್ಲಾ ತಿನಿಸುಗಳು, ಕೇಕ್ ಮತ್ತೊಂದು ಸ್ಪೆಷಲ್ ಉಡುಗೊರೆಯೊಂದಿಗೆ ಪ್ರತಿಯೊಬ್ಬರ ಕೈಗೂ ಉಡುಗೊರೆ ಚೀಲಗಳನ್ನು ಕೊಡಲು ಮರೆಯಲಿಲ್ಲ ತಾಯಿ ಮಗಳು. ಮಕ್ಕಳ `ಗಿಫ್ಟ್ ಹ್ಯಾಂಪರ್'ನಲ್ಲಿ ಬಗೆಬಗೆ ಚಾಕೊಲೇಟ್‌ಗಳು, ಬಿಸ್ಕತ್ತು ಪೊಟ್ಟಣಗಳಿಗೆ ಆದ್ಯತೆ! ಶುಭ ಕೋರಿ, ಆಶೀರ್ವಾದ ಮಾಡಿ ಮತ್ತೊಮ್ಮೆ ಹಬ್ಬ ಆಹ್ವಾನಿಸಿ ಬಾಯ್ತುಂಬಾ ನಕ್ಕು ಕಳುಹಿಸಿಕೊಟ್ಟರು ಗ್ರೇಸಿಯಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT