ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್ ಸಂಭ್ರಮ: ಶಾಂತಿಗಾಗಿ ಪ್ರಾರ್ಥನೆ

Last Updated 26 ಡಿಸೆಂಬರ್ 2012, 7:06 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಗತ್ತಿಗೆ ತ್ಯಾಗ ಹಾಗೂ ಶಾಂತಿಯ ಸಂದೇಶ ನೀಡಿದ ಏಸು ಕ್ರಿಸ್ತ ಭುವಿಯಲ್ಲಿ ಅವತರಿಸಿದ ದಿನವಾದ ಕ್ರಿಸ್‌ಮಸ್ ಹುಬ್ಬಳ್ಳಿಯಲ್ಲಿ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.

ಕ್ರೈಸ್ತರ ಅತಿ ದೊಡ್ಡ ಹಬ್ಬ ಎನಿಸಿದ ಕ್ರಿಸ್‌ಮಸ್ ಅಂಗವಾಗಿ ನಗರದಲ್ಲಿ ಚರ್ಚ್‌ಗಳು ಹಾಗೂ ಕ್ರೈಸ್ತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಬೆಳಕಿನ ಅಲಂಕಾರ ಮಾಡಲಾಗಿತ್ತು.

ಕ್ಯಾಥೊಲಿಕ್ ಚರ್ಚ್‌ಗಳಲ್ಲಿ ಸೋಮವಾರ ರಾತ್ರಿಯಿಂದಲೇ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪ್ರೊಟೆಸ್ಟೆಂಟ್ ಚರ್ಚ್‌ಗಳಲ್ಲಿ ಮಂಗಳವಾರ ಬೆಳಗಿನ ಜಾವದಿಂದ ವಿಶೇಷ ಪ್ರಾರ್ಥನೆ ನಡೆಯಿರು, ಗಂಟಾನಾದ ಮೊಳಗಿತು. ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಕ್ರೈಸ್ತರು ಕ್ರಿಸ್‌ಮಸ್ ಹಬ್ಬದ ಸಂದೇಶವಾದ ಪ್ರೀತಿ, ಸಹೋದರತ್ವ, ಸಮಾನತೆ ಹಾಗೂ ಬಂಧುತ್ವವನ್ನು ಸಾರುವ ಕೆರೊಲ್ ಗೀತೆಗಳನ್ನು ಹಾಡಿ ಸಂಭ್ರಮಿಸಿದರು.

ಮನೆ ಹಾಗೂ ಚರ್ಚ್‌ಗಳ ಎದುರು ಏಸು ಹುಟ್ಟಿನ ಸಂದರ್ಭದ ಸ್ಮರಣಾರ್ಥ ಗೋದಲಿ ನಿರ್ಮಿಸಿ, ಕ್ರಿಸ್‌ಮಸ್ ಟ್ರೀ ಅಲಂಕರಿಸಲಾಗಿತ್ತು. ಚರ್ಚ್‌ಗಳ ಎದುರು ಹಾಗೂ ಶಾಪಿಂಗ್ ಮಾಲ್‌ಗಳಲ್ಲಿ ಸಾಂತಾಕ್ಲಾಸ್ ವೇಷಧಾರಿಗಳು ಬಲೂನು ಹಿಡಿದು ಮಕ್ಕಳನ್ನು ರಂಜಿಸುತ್ತಾ ಅವರಿಗೆ ಕಾಣಿಕೆ ನೀಡಿದರು.

ಕ್ಯಾಥೋಲಿಕ್ ಪಂಗಡದ ಶಾಂತಿನಗರ ಇನ್‌ಫೆಂಟ್ ಜೀಸಸ್ ಚರ್ಚ್, ಕೇಶ್ವಾಪುರದ ಸೇಂಟ್ ಜೋಸೆಫ್ ಚರ್ಚ್, ಚೇತನಾ ಕಾಲೊನಿಯ ಸೇಂಟ್ ಪಾಲ್ಸ್ ಚರ್ಚ್, ತಬೀಬ್‌ಲ್ಯಾಂಡ್ ಚರ್ಚ್, ಗೋಕುಲ ರಸ್ತೆಯ ಚರ್ಚ್‌ಗಳಲ್ಲಿ ರಾತ್ರಿ 11.30ರಿಂದ ಬೆಳಗಿನ ಜಾವ 2.30ರವರೆಗೆ ವಿಶೇಷ ಪೂಜೆ ನಡೆಯಿತು.

ಮುಂಜಾನೆ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಪೂಜೆ, ಪ್ರಾರ್ಥನೆ ನೆರವೇರಿತು. ಭಕ್ತರು ಏಸು ಸ್ತುತಿಗೀತೆಗಳನ್ನು ಹಾಡಿದರು. ಕೇಶ್ವಾಪುರದ ಸೇಂಟ್ ಜೋಸೆಫ್ ಚರ್ಚ್‌ನಲ್ಲಿ ನಡೆದ ಪ್ರಾರ್ಥನೆಯಲ್ಲಿ ಕೇಶ್ವಾಪುರ, ಬಾದಾಮಿ ನಗರ, ರೈಲ್ವೆ ಪ್ರದೇಶ, ಹೊಸೂರು ಭಾಗದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು ಎಂದು ಚರ್ಚ್‌ನ ಫಾದರ್ ಜೋಸೆಫ್ ರಾಡ್ರಿಗ್ಸ್ `ಪ್ರಜಾವಾಣಿ'ಗೆ ತಿಳಿಸಿದರು.

ಪ್ರೊಟೆಸ್ಟೆಂಟ್ ಪಂಗಡದ ಘಂಟಿಕೇರಿ ಚರ್ಚ್‌ನಲ್ಲಿ ಮುಂಜಾನೆ ನಡೆದ ಆರಾಧನೆಯಲ್ಲಿ ಪಕ್ಕದ ಕ್ರಿಶ್ಚಿಯನ್ ಕಾಲೊನಿಯ ಒಂದು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಆರಾಧನೆಯ ವೇಳೆ ಫಾದರ್ ಇಮ್ಯಾನುವೆಲ್ ಯಶವಂತ್ ಅಡಿನಾ ಏಸು ಕ್ರಿಸ್ತರ ಜನನ ಸಂದೇಶ ನೀಡಿದರು. ಬೆಳಿಗ್ಗೆ 7.30ರಿಂದ 10.15ರವರೆಗೆ ಪ್ರಾರ್ಥನೆ ನಡೆಯಿತು. ಕ್ರಿಸ್‌ಮಸ್ ಅಂಗವಾಗಿ ಚರ್ಚ್ ವ್ಯಾಪ್ತಿಯ ಸ್ತ್ರೀಯರ ಸಮಾಜದಿಂದ ಬುಧವಾರ ಕ್ರಿಸ್‌ಮಸ್ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ದೇಶಪಾಂಡೆ ನಗರದ ಚರ್ಚ್‌ನಲ್ಲಿ ಸಂಗೀತ, ಬೈಬಲ್ ಪಠಣ, ಪ್ರವಚನ ಹಾಗೂ ಪವಿತ್ರ ಸಮುದಾಯ ಸೇವೆ ನಡೆಯಿತು. ಪ್ರಾರ್ಥನೆಯಲ್ಲಿ ದೇಶಪಾಂಡೆ ನಗರ, ವಿದ್ಯಾನಗರ, ಬೆಂಗೇರಿ, ಕೇಶ್ವಾಪುರದ ಭಕ್ತರು ಪಾಲ್ಗೊಂಡಿದ್ದರು. ಬೆಳಿಗ್ಗೆ 9ರಿಂದ 11.30ರವರೆಗೆ ನಡೆದ ಫಾದರ್ ಸ್ಯಾಮುವೆಲ್ ಕ್ಯಾಲ್‌ವಿಲ್ ನೇತೃತ್ವದಲ್ಲಿ ಪ್ರಾರ್ಥನೆ ನಡೆಯಿತು.

ಪ್ರಾರ್ಥನೆಯ ನಂತರ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಬಂಧುಗಳೊಂದಿಗೆ ಸೇರಿ ಸಿಹಿ ಅಡುಗೆ ಹಾಗೂ ವಿಶೇಷ ತಿನಿಸುಗಳನ್ನು ಮಾಡಿ, ಹೊಸ ಬಟ್ಟೆಗಳನ್ನು ತೊಟ್ಟು, ಹಬ್ಬ ಆಚರಣೆ ಮಾಡಿದರು. ಅಕ್ಕಪಕ್ಕದ ಮನೆಯವರಿಗೆ ಕ್ರಿಸ್‌ಮಸ್ ಕೇಕ್, ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು.

ಧಾರವಾಡ ವರದಿ
ಧಾರವಾಡ:
ಯೇಸುವಿನ ಜನನವನ್ನು ನೆನಪಿಸುವ ಕ್ರಿಸ್‌ಮಸ್ ಹಬ್ಬದ ಆಚರಣೆಗೆ ಕಳೆದ ನಾಲ್ಕು ದಿನಗಳಿಂದ ನಗರದ ಚರ್ಚ್‌ಗಳು ಹಾಗೂ ಪ್ರತಿಮೆಗಳು ದೀಪಾಲಂಕಾರಗಳಿಂದ ಸಿಂಗಾರಗೊಂಡು ಕಾಯುತ್ತಿದ್ದ ಆ ಘಳಿಗೆ ಬಂದೇ ಬಿಟ್ಟಿತ್ತು.

ಬುಧವಾರ ಬೆಳಿಗ್ಗೆಯೇ ಕ್ರಿಶ್ಚಿಯನ್ನರು ಚರ್ಚ್‌ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ, ಬೈಬಲ್ ಪಠಣ ಹಾಗೂ ಯೇಸು ಕುರಿತ ಗಾಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿತ್ತು. ನಗರದ ಹೆಬಿಕ್ ಸ್ಮಾರಕ ಚರ್ಚ್, ಆಲ್ ಸೇಂಟ್ಸ್ ಚರ್ಚ್ ಹಾಗೂ ಹೋಲಿ ಕ್ರಾಸ್ ಚರ್ಚ್‌ಗೆ ಆಗಮಿಸಿ ಬಿಷಪ್ ಹಾಗೂ ರೆವೆರಂಡ್ ಫಾದರ್ ಅವರ ಸಮ್ಮುಖದಲ್ಲಿ ಪ್ರಾರ್ಥನೆ ಮಾಡಿದರು.

ಹೆಬಿಕ್ ಸ್ಮಾರಕ ಚರ್ಚ್‌ನಲ್ಲಿ ಉತ್ತರ ಪ್ರಾಂತದ ಧರ್ಮಾಧ್ಯಕ್ಷ ಬಿಷಪ್ ರವಿಕುಮಾರ್ ನಿರಂಜನ್ ಹಾಗೂ ರೆ.ಎಸ್.ಎಸ್.ಸಕ್ಕರಿ ಸೇರಿದಂತೆ ಹಲವು ಪಾದ್ರಿಗಳ ಸಮ್ಮುಖದಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆದವು.

ಬಳಿಕ ಮನೆಯಲ್ಲಿ ತಯಾರಿಸಲಾದ ವಿಶೇಷ ಕೇಕ್, ಚಕ್ಕುಲಿಗಳನ್ನು ತಮ್ಮ ನೆರೆಹೊರೆಯರೊಂದಿಗೂ ಹಂಚಿಕೊಂಡು ತಿಂದರು. ಕ್ರಿಸ್‌ಮಸ್ ಹಬ್ಬದ ಸಂಭ್ರಮದ ನಗರದೆಲ್ಲೆಡೆ ಮನೆ ಮಾಡಿದ್ದು, ಆಕರ್ಷಕ ವಿದ್ಯುತ್ ದೀಪಾಲಂಕಾರಗಳನ್ನು ಹಲವು ಓಣಿಗಳಲ್ಲಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT