ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಕಂಠೀರವರು!

Last Updated 12 ಜುಲೈ 2012, 19:30 IST
ಅಕ್ಷರ ಗಾತ್ರ

ಮೊದಲ ಸ್ಥಾನದೊಂದಿಗೆ `ಫಿನಿಷ್ ಲೈನ್~ ದಾಟಿದ ಬಳಿಕ ಗೆಲುವಿನ ಚಿಹ್ನೆ ತೋರಿಸಿ ನಗು ಬೀರುತ್ತಿರುವ ಅಥ್ಲೀಟ್‌ಗಳು ಒಂದೆಡೆಯಾದರೆ, ತಮ್ಮೆಲ್ಲಾ ಶಕ್ತಿಯನ್ನು ತೋಳುಗಳಲ್ಲಿ ಸಂಚಯಿಸಿ ಕಬ್ಬಿಣದ ಗುಂಡು, ಡಿಸ್ಕ್ ಎಸೆಯುವ ಸ್ಪರ್ಧಿಗಳು ಮತ್ತೊಂದೆಡೆ.

ಹರ್ಡಲ್ಸ್ ವೇಳೆ ತಡೆ ದಾಟುವಲ್ಲಿ ಎಡವಿ ಟ್ರ್ಯಾಕ್‌ನಲ್ಲಿ ಬಿದ್ದ ಅಥ್ಲೀಟ್ ಇತರ ಸ್ಪರ್ಧಿಗಳು ಮುನ್ನುಗ್ಗುವುದನ್ನು ದಯನೀಯ ಸ್ಥಿತಿಯಲ್ಲಿ ನೋಡುತ್ತಿದ್ದರೆ, ಮಧ್ಯಮ ದೂರದ ಓಟ ಪೂರೈಸಿದ ಬಳಿಕ ಬಳಲಿಕೆಯಿಂದ ಕುಸಿದು ಬಿದ್ದ ಅಥ್ಲೀಟ್‌ಗಳ ಸ್ನಾಯುಗಳನ್ನು `ಮಸಾಜ್~ ಮಾಡುವ ಸಹ ಸ್ಪರ್ಧಿಗಳು...

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರದಿಂದ ಬುಧವಾರದವರೆಗೆ ನಡೆದ 24ನೇ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಕಂಡುಬಂದ ಕೆಲ ದೃಶ್ಯಗಳಿವು. ನೋಡುಗರಿಗೆ ರೋಮಾಂಚನ, ಕುತೂಹಲ ಹಾಗೂ ಮನರಂಜನೆ ಉಂಟುಮಾಡುವ ದೃಶ್ಯಗಳಿಗೆ ಅಲ್ಲಿ ಕೊರತೆಯಿರಲಿಲ್ಲ.

ಆದರೆ ಅದನ್ನು ನೋಡಲು ಪ್ರೇಕ್ಷಕರು ಮಾತ್ರ ಇರಲಿಲ್ಲ ಎಂಬುದು ಬೇಸರದ ಸಂಗತಿ.
`ನಮ್ಮ ಪ್ರದರ್ಶನ ನೋಡಲು ಜನರು ಆಗಮಿಸಬೇಕೆಂದೇನೂ ಇಲ್ಲ. ಅಥ್ಲೆಟಿಕ್ಸ್ ಮೇಲಿನ ಮೋಹದಿಂದ ಇಲ್ಲಿ ಸ್ಪರ್ಧಿಸುತ್ತಿದ್ದೇವೆ. ಮುಂದೊಂದು ದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ  ಮಿಂಚಿದರೆ ಜನರೇ ನಮ್ಮನ್ನು ಗುರುತಿಸುತ್ತಾರೆ~ ಎಂಬುದು ಕೂಟದ 14 ವರ್ಷ ವಯಸ್ಸಿನೊಳಗಿನವರ ವಿಭಾಗದ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಕೆಲವು ಅಥ್ಲೀಟ್‌ಗಳ ಧೈರ್ಯದ ನುಡಿ. 

ಕಂಠೀರವ ಕ್ರೀಡಾಂಗಣದ ಸುತ್ತಲಿನ ರಸ್ತೆಗಳಲ್ಲಿ ಸಾಲು ಸಾಲು ವಾಹನಗಳು ತಮ್ಮ ಗುರಿಯೆಡೆಗೆ ಧಾವಿಸುತ್ತಿದ್ದರೆ, ಒಳಭಾಗದಲ್ಲಿರುವ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಅಥ್ಲೀಟ್‌ಗಳು ಗೆಲುವಿನ ಗುರಿಯೆಡೆಗಿನ ಧಾವಂತದಲ್ಲಿದ್ದರು. ಕ್ರೀಡಾಂಗಣ 1500ಕ್ಕೂ ಅಧಿಕ ಆಥ್ಲೀಟ್‌ಗಳ `ಸಂಗಮ~ ಸ್ಥಳವಾಗಿ ಬದಲಾಗಿತ್ತು. ಆದರೆ ಅಂಗಳದೊಳಗೆ ನಡೆಯುವ ತುರುಸಿನ ಚಟುವಟಿಕೆಗಳು ಹೊರಲೋಕಕ್ಕೆ ತಿಳಿಯುತ್ತಿರಲಿಲ್ಲ.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಥ್ಲೀಟ್‌ಗಳಿಗೆ ಊಟ, ವಸತಿ ಒಳಗೊಂಡಂತೆ ಎಲ್ಲ ವ್ಯವಸ್ಥೆಯನ್ನು ಕ್ರೀಡಾಂಗಣದಲ್ಲೇ ಮಾಡಲಾಗಿತ್ತು. ಇದರಿಂದ ಅವರಿಗೆ ಹೊರಕ್ಕೆ ಹೋಗುವ ಅನಿವಾರ್ಯತೆ ಕೂಡಾ ಇರಲಿಲ್ಲ. ಅಥ್ಲೆಟಿಕ್ ಚಾಂಪಿಯನ್‌ಷಿಪ್ ನೋಡಲು ಎಷ್ಟು ಮಂದಿ ಆಗಮಿಸುತ್ತಾರೆಂಬುದು ಎಲ್ಲರಿಗೂ ತಿಳಿದ ವಿಚಾರ. ಈ ಕಾರಣ ಜನರ ಓಡಾಟವೂ ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ.
 
ಇದರಿಂದಾಗಿ ಇಷ್ಟು ದೊಡ್ಡ ಕೂಟ ನಡೆಯುತ್ತಿದೆ ಎಂಬುದು ಹೆಚ್ಚಿನವರಿಗೆ ತಿಳಿಯದೇ ಹೋಯಿತು.ಅಥ್ಲೀಟ್‌ಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅವರು ಹೊಸ ವೇಗ, ದೂರ ಹಾಗೂ ಎತ್ತರವನ್ನು ಕಂಡುಕೊಳ್ಳುವತ್ತ ಗಮನಹರಿಸಿದರು. ಕೆಲವರು ಕೂಟ ದಾಖಲೆಯೊಂದಿಗೆ ಚಿನ್ನದ ನಗು ಬೀರಿದರು. ಮೂಡುಬಿದಿರೆಯ ಆಳ್ವಾಸ್, ಡಿವೈಎಸ್‌ಎಸ್, ರೈಲ್ವೇಸ್, ಇಂಡೋ ಜರ್ಮನ್ ಮತ್ತು ಎಸ್‌ಎಐ ಸ್ಪರ್ಧಿಗಳಿಂದ ಗಮನಾರ್ಹ ಪ್ರದರ್ಶನ ಮೂಡಿಬಂತು. ಪದಕ ಗೆದ್ದವರು ವಿಜಯವೇದಿಕೆಯಲ್ಲಿ ಸಂಭ್ರಮಿಸಿದರೆ, ಪದಕವಂಚಿತರು ಮುಂದಿನ ಬಾರಿ ಪ್ರಯತ್ನಿಸುವ ನಿರ್ಧಾರದೊಂದಿಗೆ ಕ್ರೀಡಾಂಗಣಕ್ಕೆ `ಗುಡ್‌ಬೈ~ ಹೇಳಿದರು.

ಊಟ ಚೆನ್ನಾಗಿತ್ತು...
`ನಾನು ಕೂಟದ ಮೊದಲ ಎರಡು ದಿನ ಕ್ರೀಡಾಂಗಣದಲ್ಲಿ ಊಟ ಮಾಡಲಿಲ್ಲ. ಆದರೆ ಇಲ್ಲಿನ ಊಟ ಚೆನ್ನಾಗಿದೆ ಎಂದು ಸಹ ಸ್ಪರ್ಧಿಗಳು ಹೇಳಿದ್ದರಿಂದ ಮೂರನೇ ದಿನ ಕ್ರೀಡಾಂಗಣದಲ್ಲೇ ಊಟ ಮಾಡಲು ನಿರ್ಧರಿಸಿದೆ. ಮಧ್ಯಾಹ್ನಕ್ಕೆ ಚಿಕನ್ ಬಿರಿಯಾನಿ ಇತ್ತು. ಮೊದಲ ಎರಡು ದಿನ ಇಲ್ಲೇ ಊಟ ಮಾಡಿದ್ದರೆ ಚೆನ್ನಾಗಿತ್ತು ಎಂದು ಮನದಲ್ಲೇ ಭಾವಿಸಿದೆ~ ಎಂಬುದು ಮೂಡುಬಿದಿರೆ ಆಳ್ವಾಸ್ ತಂಡದ ಅಥ್ಲೀಟ್ ಒಬ್ಬನ ಪ್ರತಿಕ್ರಿಯೆ.

`ಈ ಹಿಂದೆ ಇಲ್ಲಿ ಹಲವು ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗಳು ನಡೆದಿವೆ. ಕೂಟದಲ್ಲಿ ಪಾಲ್ಗೊಂಡ ಎಲ್ಲ ಅಥ್ಲೀಟ್‌ಗಳಿಗೆ ಇಂತಹ ಊಟ ಸಿದ್ಧಪಡಿಸಿದ್ದು ನನಗೆ ನೆನಪಿಲ್ಲ. ಎಲ್ಲವೂ ಅಚ್ಚುಕಟ್ಟಾಗಿ ನಡೆಯಿತು. ಇದರ ಕ್ರೆಡಿಟ್ ಸಂಘಟಕರಿಗೆ ಸಲ್ಲಬೇಕು~ ಎಂಬುದು ಹಿರಿಯ ಕೋಚ್ ವಿ.ಆರ್. ಬೀಡು ಅವರ ಹೇಳಿಕೆ. 

ಕಂಠೀರವ ಕ್ರೀಡಾಂಗಣದಲ್ಲಿ ಇಂದಿನಿಂದ ಮೂರು ದಿನ ರಾಷ್ಟ್ರೀಯ ಯುವ ಅಥ್ಲೆಟಿಕ್ ಚಾಂಪಿಯನ್‌ಷಿಪ್ ನಡೆಯಲಿದೆ. ಸ್ಪರ್ಧಿಗಳನ್ನು ಹುರಿದುಂಬಿಸಲು ಕೆಲವರಾದರೂ ಕ್ರೀಡಾಂಗಣದತ್ತ ಹೆಜ್ಜೆಯಿಟ್ಟರೆ ಚೆನ್ನ...

ಸಂಘಟಕರಯಶಸ್ಸಿನ ಓಟ...

ದೊಡ್ಡ ಸಂಖ್ಯೆಯ ಅಥ್ಲೀಟ್‌ಗಳಿದ್ದರೂ, ಊಟ ಒಳಗೊಂಡಂತೆ ಎಲ್ಲ ವ್ಯವಸ್ಥೆಗಳಲ್ಲಿ ಯಾವುದೇ ಕೊರತೆಯಾಗದಂತೆ ಸಂಘಟಕರು ನೋಡಿಕೊಂಡರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಪೋಷಕ ವಿ. ಉಮೇಶ್, ಅಧ್ಯಕ್ಷ ಎ.ಮುನಿಸಂಜೀವಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಎಚ್.ಎನ್. ಆನಂದ್ ಕುಮಾರ್ ಒಳಗೊಂಡಂತೆ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಮತ್ತು ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಕೂಟವನ್ನು ಯಶಸ್ವಿಯಾಗಿ ಸಂಘಟಿಸಿದೆ.

ಜೂನಿಯರ್ ಮತ್ತು ಸೀನಿಯರ್ ಚಾಂಪಿಯನ್‌ಷಿಪ್ ಜೊತೆಯಾಗಿ ನಡೆದ ಕಾರಣ ಸ್ಪರ್ಧೆಗಳನ್ನು ನಿಗದಿತ ಸಮಯದೊಳಗೆ ಕೊನೆಗೊಳಿಸಲು ಸಂಘಟಕರು ಸಾಕಷ್ಟು ಪ್ರಯಾಸಪಟ್ಟರು. ವಿವಿಧ ಸ್ಪರ್ಧೆಗಳನ್ನು ನಡೆಸಲು ನಿಯೋಜಿತಗೊಂಡಿದ್ದ ಅಧಿಕಾರಿಗಳಿಗಂತೂ ಅಲ್ಪ ಬಿಡುವು ಕೂಡಾ ಇರಲಿಲ್ಲ. ಕೆಲವರು ಮಧ್ಯಾಹ್ನದ ಊಟವನ್ನು ಸಂಜೆಯ ಹೊತ್ತಲ್ಲಿ ಹೊಟ್ಟೆಗಿಳಿಸುವ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT