ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಪ್ರತಿಭೆಗೆ ಅಡ್ಡಿಯಾದ ಬಡತನ

ಕಲಿಕೆ, ದುಡಿಮೆ ಜೊತೆ ಜಿಮ್ನಾಸ್ಟಿಕ್‌ ಸಾಧಕ ವಿನಾಯಕ ಚವ್ಹಾಣ್ಣ
Last Updated 7 ಜನವರಿ 2014, 8:17 IST
ಅಕ್ಷರ ಗಾತ್ರ

ಪ್ರಮುಂಡಗೋಡ: ಬಾಲ್ಯದಿಂದಲೇ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಒಂದೆಡೆ, ಸೂಕ್ತ ಪ್ರೋತ್ಸಾಹದ ಕೊರತೆ ಇನ್ನೊಂದೆಡೆ. ಇದರ ಬೆನ್ನಲ್ಲೇ ಯಶಸ್ಸನ್ನು ಹಂಬಲಿಸುವ ಮನಸ್ಸಿಗೆ ಬಡತನ ಅಡೆತಡೆಯಾಗಿ ಕಂಡ ಕನಸನ್ನು ದೂರ ಮಾಡುತ್ತಿದೆ.

ಮುಂಡಗೋಡದ ವಿನಾಯಕ ರಮೇಶ ಚವ್ಹಾಣ ರಾಷ್ಟ್ರಮಟ್ಟದ ಜಿಮ್ನಾಸ್ಟಿಕ್‌ನ ವಿವಿಧ ವಿಭಾಗಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ತೋರಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ­ಶಿಕ್ಷಣವನ್ನು ಧಾರವಾಡದ ಶಾರದಾ ಹೈಸ್ಕೂಲ್‌ ಹಾಗೂ ಕೆ.ಪಿ.ಇ.ಎಸ್‌ ಕೇಂದ್ರಗಳಲ್ಲಿ ಪಡೆದು ಸಾಯಿ ಸ್ಪೋರ್ಟ್ಸ್‌ ಹಾಸ್ಟೆಲ್‌ಗೆ ಸೇರಿಕೊಂಡು ಕ್ರೀಡಾಪಟುವಿನ ಪಯಣ ಆರಂಭಿಸಿದರು.

ನುರಿತ ತರಬೇತುದಾರರಿಂದ ಪ್ರಾಥಮಿಕ ತರಬೇತಿಯನ್ನು ಪಡೆದು ಜಿಮ್ನಾಸ್ಟಿಕ್‌ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುತ್ತ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

ಎಸ್ಸೆಸ್ಸೆಲ್ಸಿಯಲ್ಲಿ ಕಡಿಮೆ ಅಂಕ ಬಂದಿರುವುದು ಹಾಗೂ ಮನೆಯಲ್ಲಿನ ಕಿತ್ತು ತಿನ್ನುವ ಬಡತನ ಈತನ ಕ್ರೀಡಾ ಪಯಣಕ್ಕೆ ಅಲ್ಪವಿರಾಮ ಹಾಕಿತ್ತಲ್ಲದೇ ಮರಳಿ ಮನೆಗೆ ಬಂದು ಶಿಕ್ಷಣ ಮುಂದುವರಿಸುವ ಪರಿಸ್ಥಿತಿ ನಿರ್ಮಾಣ ಮಾಡಿತು.

ಆದರೂ ಛಲ ಬಿಡದ ಈತ ಮುಂಡಗೋಡದ ಸರ್ಕಾರಿ ಜೂನಿಯರ್‌ ಕಾಲೇಜನಲ್ಲಿ ಪಿ.ಯು.ಸಿ ವಿದ್ಯಾಭ್ಯಾಸ ಮಾಡುತ್ತಲೇ ಜಿಮ್ನಾಸ್ಟಿಕ್‌ ಕ್ರೀಡೆಯಲ್ಲಿ ಪಾಲ್ಗೊಂಡಿದ್ದಾರೆ. ಸದ್ಯ ಇಲ್ಲಿಯ ಪ್ರಥಮ ದರ್ಜೆ ಕಾಲೇಜನಲ್ಲಿ ಬಿ.ಕಾಂ. ಮೂರನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ವಿನಾಯಕ ಚವ್ಹಾಣ ಕಾಲೇಜು ಬಿಟ್ಟ ನಂತರ ಪೆಟ್ರೋಲ್‌ ಬಂಕ್‌ವೊಂದರಲ್ಲಿ ದುಡಿಯುತ್ತಿದ್ದಾರೆ.

ಟಿ.ವಿ, ಕ್ರೀಡಾ ಪುಸ್ತಕಗಳಲ್ಲಿ ಸಾಧಕರ ಯಶೋಗಾಥೆ ಕೇಳಿ, ಓದಿ ತಾನು ಹೀಗೆ ಆಗಬೇಕು ಎಂದು ಗೆಳೆಯರೊಂದಿಗೆ ಕೂಡಿ ಕಾಲಕಳೆಯುವ ವಯಸ್ಸಿ ನಲ್ಲಿಯೇ ಜಿಮ್ನ್ಯಾಸ್ಟಿಕ್‌ ಕ್ರೀಡೆಯತ್ತ ಒಲವು ತೋರಿ ರಾಷ್ಟ್ರಮಟ್ಟದಲ್ಲಿ ಪ್ರತಿಭೆ ಮೆರೆದಿದ್ದಾರೆ. ಈಗ ಕ್ರೀಡೆಯಲ್ಲಿ ಮುಂದುವರಿಯಲು ಆರ್ಥಿಕ ತೊಂದರೆ ಎದುರಾಗಿದೆ. ಕೌಟುಂಬಿಕ ನಿರ್ವ ಹಣೆಯ ಜವಾಬ್ದಾರಿಯ ನಡುವೆ ಕ್ರೀಡಾ ಸಾಧನೆಯ ಕನಸು ಹೆಪ್ಪು ಗಟ್ಟುತ್ತಿದೆ.

ಕ್ರೀಡಾ ಪ್ರತಿಭೆಯ ಸಾಧನೆ: ಧಾರವಾಡದಲ್ಲಿ 2004, 2005, 2006ರಲ್ಲಿ ನಡೆದ 14ವರ್ಷ ವಯೋಮಿತಿ ಒಳಗಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿನಾಯಕ ಎರಡನೇ ಸ್ಥಾನ ಪಡೆದಿದ್ದರು. 2007ರಲ್ಲಿ ಬೀದರ್‌ ಟೂರ್ನಿಯಲ್ಲಿ ಪ್ರಥಮ ಸ್ಥಾನ, ಹಾಸನದಲ್ಲಿ ನಡೆದ 17ವರ್ಷ ಒಳಗಿನ ಸ್ಪರ್ಧೆಯಲ್ಲಿ ಪ್ರಥಮ, 2009ರಲ್ಲಿ ಧಾರವಾಡದ ಟೂರ್ನಿಯಲ್ಲಿ ಪ್ರಥಮ, 2009ರ ಮೈಸೂರು ದಸರಾ ಸ್ಪರ್ಧೆಯಲ್ಲಿ ಪ್ರಥಮ, 2010ರಲ್ಲಿ ಬೆಂಗಳೂರಿ­ನಲ್ಲಿ ನಡೆದ 19 ವರ್ಷ ವಯೋಮಿತಿ ಒಳಗಿನ ಸ್ಪರ್ಧೆಯಲ್ಲಿ ಪ್ರಥಮ, 2011ರಲ್ಲಿ ತುಮಕೂರಿನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, 2012 ಹಾಗೂ 13ರಲ್ಲಿ ಸತತ ಎರಡು ವರ್ಷಗಳ ಕಾಲ ಯೂನಿರ್ವಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾರೆ.

ಪುಣೆ, ವಾರಂಗಲ್‌, ಮುಂಬೈ, ಪಂಜಾಬ್‌, ಔರಂಗಾಬಾದ, ಅಲಹಾಬಾದ್‌, ಜೈಪುರ, ಕೋಲ್ಕತ್ತಾ, ತಮಿಳುನಾಡು ಸೇರಿದಂತೆ ಒಟ್ಟು 18 ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವ ಹಿಸಿದ್ದಾರೆ. ಪಂಜಾಬ್‌ನಲ್ಲಿ ದ್ವಿತೀಯ ಹಾಗೂ ಔರಂಗಾಬಾದನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ (ಸಿನಿಯರ್‌ ವಿಭಾಗ) ಭಾಗವಹಿಸಿ ದ್ದಾರೆ. ಇದುವರೆಗೆ ಒಟ್ಟು 18 ಬಂಗಾರದ ಪದಕ, 25 ಬೆಳ್ಳಿ ಹಾಗೂ 22ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

‘ಜಿಮ್ನಾಸ್ಟಿಕ್‌ ಸಾಧನೆ ಮಾಡಬೇಕೆಂಬ ಆಸೆ ಚಿಕ್ಕ ವಯಸ್ಸಿ ನಿಂದಲೂ ಇತ್ತು. ಆದರೆ ಮನೆಯಲ್ಲಿನ ಬಡತನ ನನ್ನ ಸಾಧನೆಗೆ ತೊಡಕಾಗಿದೆ. ಆದರೂ ನನ್ನ ಮಾವ, ತಂದೆ, ತಾಯಿ, ಗುರುಗಳ ಆಶೀರ್ವಾದದಿಂದ ಇದುವರೆಗಿನ ಸಾಧನೆಯಾಗಿದೆ. ಕಳೆದ 3– 4ತಿಂಗಳ ಹಿಂದೆ ತಂದೆ ತೀರಿಹೋಗಿದ್ದು, ಮನೆಯ ಜವಾಬ್ದಾರಿ ನನ್ನ ಮೇಲಿದೆ. ಪದವಿ ವಿದ್ಯಾಭ್ಯಾಸ ಪಡೆಯುತ್ತಲೇ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಶಿಕ್ಷಣ, ಕ್ರೀಡೆ ಎರಡನ್ನೂ ಮುಂದುವರಿಸಲು ಕಷ್ಟ ವಾಗುತ್ತಿದೆ. ಇಲ್ಲಿಯವರೆಗೆ ಸರ್ಕಾರ ದಿಂದ ಯಾವುದೇ ಸೌಲಭ್ಯ   ಸಿಕ್ಕಿಲ್ಲ. ಸರ್ಕಾರ ಪ್ರೋತ್ಸಾಹಿಸಿದರೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ವಿನಾಯಕ ಹೇಳುತ್ತಾರೆ

ವಿನಾಯಕ ಚವ್ಹಾಣಗೆ ಪ್ರೋತ್ಸಾಹಿಸಲು ಇಚ್ಛಿಸುವ ಆಸಕ್ತರು ದೂರವಾಣಿ ಸಂಖ್ಯೆ 7411460926 ಗೆ ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT