ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣ ಅಭಿವೃದ್ಧಿ ಹಣ ಮುಟ್ಟುಗೋಲಿಗೆ ಚಿಂತನೆ

Last Updated 10 ಜೂನ್ 2011, 9:55 IST
ಅಕ್ಷರ ಗಾತ್ರ

ಮಂಡ್ಯ: ಗ್ರಾಮೀಣ ಭಾಗದಲ್ಲಿ ಕ್ರೀಡಾ ಚಟುವಟಿಕೆಗೆ ಉತ್ತೇಜನ ನೀಡಲು, ಕ್ರೀಡಾಸಕ್ತರಿಗೆ ಕನಿಷ್ಠ ಕ್ರೀಡಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ `ಪಂಚಾಯತ್ ಯುವ ಕ್ರೀಡಾ ಮತ್ತು ಖೇಲ್ ಅಭಿಯಾನ್~ ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ರೀಡಾಂಗಣ ಅಭಿವೃದ್ಧಿಪಡಿಸುವ ಯೋಜನೆ ಜಿಲ್ಲೆಯಲ್ಲಿ ವಿಫಲವಾಗಿದೆ.

ಸುಮಾರು ಒಂದು  ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರಾಮ ಪಂಚಾಯಿತಿಗಳ ಉಸ್ತುವಾರಿಯಲ್ಲಿ ಕ್ರೀಡಾಂಗಣಕ್ಕೆ ಸೂಕ್ತವಾದ ಶಾಲಾ ಮೈದಾನ ಅಥವಾ ಸೂಕ್ತ ಸ್ಥಳವನ್ನು ಗುರುತಿಸಿ ಕ್ರೀಡಾ ಕೋರ್ಟ್ ಅಭಿವೃದ್ಧಿ, ಕ್ರೀಡಾ ಪರಿಕರ ಒದಗಿಸುವುದು ಒದಗಿಸುವುದು ಈ ಯೋಜನೆಯ ಉದ್ದೇಶ.

ಜಿಲ್ಲೆಯಲ್ಲಿ 2008-09ನೇ ಸಾಲಿನಲ್ಲಿ 23 ಸ್ಥಳಗಳನ್ನು ಗುರುತಿಸಿ ಕ್ರೀಡಾಂಗಣ ಅಭಿವೃದ್ಧಿಗೆ ಮೊದಲ ಕಂತಿನಲ್ಲಿ ಗ್ರಾಪಂಗಳಿಗೆ ರೂ. 50 ಸಾವಿರ ಬಿಡುಗಡೆ ಮಾಡಲಾಗಿತ್ತು. ಆದರೆ, ಇದು ಸದ್ಬಳಕೆ ಆಗಿಲ್ಲ. ಹೀಗಾಗಿ, ಎರಡನೇ ಕಂತಿನಲ್ಲಿ ಈ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಆಗಬೇಕಿದ್ದ ಹಣ ಮುಟ್ಟುಗೋಲು ಹಾಕಿಕೊಳ್ಳುವ ಚಿಂತನೆ ನಡೆದಿದೆ.

`ಕ್ರೀಡಾಂಗಣದ ಅಭಿವೃದ್ಧಿ ಅಂಥ ತೃಪ್ತಿಕರವಾಗಿಲ್ಲ. ಹೀಗಾಗಿ, 2ನೇ ಕಂತಿನಲ್ಲಿ ಬಿಡುಗಡೆ ಮಾಡಬೇಕಿದ್ದ ಹಣ ಮುಟ್ಟುಗೋಲು ಹಾಕಿಕೊಂಡು, ನಿರ್ಮಿತಿ ಕೇಂದ್ರದ ಮೂಲಕ ಖೋ-ಖೋ, ವಾಲಿಬಾಲ್, ಕಬಡ್ಡಿ ಕ್ರೀಡೆಗಳಿಗೆ ಕೋರ್ಟ್ ಅಭಿವೃದ್ಧಿಪಡಿಸುವ ಉದ್ದೇಶವಿದೆ~ ಎನ್ನುತ್ತಾರೆ ಯುವಜನಸೇವಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ.

ಜಿಲ್ಲೆಯಲ್ಲಿ ಉದ್ದೇಶಿತ ಯೋಜನೆಯ ಪ್ರಗತಿ ಕುರಿತ ವರದಿಯನ್ನು ಸಿದ್ಧಪಡಿಸುತ್ತಿದ್ದು, ಶೀಘ್ರದಲ್ಲಿಯೇ ಜಿಪಂ ಸಿಇಒ ಅವರಿಗೆ ಸಲ್ಲಿಸಲಾಗುವುದು. ಆ ನಂತರವೇ ಮುಂದಿನ ತೀರ್ಮಾನ ಕೈಬೊಳ್ಳಬೇಕಾಗಿದೆ  ಎಂದು ಪ್ರತಿಕ್ರಿಯಿಸಿದರು.

2008-09ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಪಂಚಾಯತ್ ಯುವ ಕ್ರೀಡಾ ಮತ್ತು ಖೇಲ್ ಅಭಿಯಾನ್ ಯೋಜನೆ ಜಾರಿಗೆ ಬಂದಿತು. ಮೊದಲ ವರ್ಷ ಜಾರಿಗೆ ಬಂದ 23 ಗ್ರಾಮ ಪಂಚಾಯಿತಿಗಳ ಪೈಕಿ  ಮದ್ದೂರು ತಾಲ್ಲೂಕು ಕ್ಯಾತಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಒಂದು ರೂಪಾಯಿ ಬಳಸದಿದ್ದರೂ ಹಣ ಬಳಕೆ ಪ್ರಮಾಣ ಪತ್ರ ನೀಡಲಾಗಿದೆ ಎನ್ನುತ್ತಾರೆ.

ಉಳಿದಂತೆ ಮೂರು-ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರವೇ ಕ್ರೀಡೆಗೆ ಉತ್ತೇಜನ ನೀಡುವಂತೆ ಮೈದಾನ ಅಭಿವೃದ್ಧಿ ಪಡಿಸಲು ಹಣ ಬಳಕೆಯಾಗಿದೆ. ಉಳಿದೆಡೆ ಕೆಲಸ ಸಮಾಧಾನಕರವಾಗಿಲ್ಲ. ಕೆಲವೆಡೆ, ಸ್ಪಷ್ಟ ಯೋಜನೆಯಿಲ್ಲದೇ ಮಣ್ಣು ಮೈದಾನಕ್ಕೆ ಮಣ್ಣು ತುಂಬಿಸಿದ್ದರೂ ಮಳೆಯಲ್ಲಿ ಅದೂ ಕೊಚ್ಚಿಹೋಗಿದೆ ಎಂದರು.

ಕ್ರೀಡಾಂಗಣ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದ್ದರೂ ಅದರ ಮೇಲ್ವಿಚಾರಣೆ ಕಷ್ಟವಾಗಿದೆ. ಅಲ್ಲದೆ, ನಿಯಮಿತ ಮೆಲ್ವಿಚಾರಣೆಯಾಗಲಿ ಇಲ್ಲ. ಇಲಾಖೆಯೇ ವತಿಯಿಂದಲೇ ಎಲ್ಲವನ್ನು ಮೇಲ್ವಿಚಾರಣೆ ಮಾಡುವುದು ಕಷ್ಟ ಆಗುತ್ತದೆ.  ಮೇಲ್ವಿಚಾರಣೆ ಕೊರತೆ, ಸ್ಥಳೀಯವಾಗಿ ಕ್ರೀಡಾ ಮೂಲಸೌಕರ್ಯ ಕಲ್ಪಿಸುವಲ್ಲಿ ಆಯ್ಕೆಯಾದ ಸ್ಥಳಗಳ ಗ್ರಾಮ ಪಂಚಾಯಿತಿಗಳ ನಿರಾಸಕ್ತಿಯ ಪರಿಣಾಮ, ಯೋಜನೆಯ ಉದ್ದೇಶವೇ ಈಡೇರಿಲ್ಲ ಎಂದು ವಿಷಾದಿಸಿದರು.

ಅಲ್ಲದೆ, 2009-10ನೇ ಸಾಲಿನಲ್ಲಿಯೂ 23 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆ ಜಾರಿಗೊಳಿಸಲು ಗುರುತಿಸಲಾಗಿದೆ. ಆದರೆ, ಇನ್ನೂ ಹಣ ಬಿಡುಗಡೆ ಆಗಿಲ್ಲ. ಇಲ್ಲಿ, ಗ್ರಾಮ ಪಂಚಾಯಿತಿಗಳ ಬದಲಿಗೆ ನಿರ್ಮಿತಿ ಕೇಂದ್ರ ಇಲ್ಲವೇ, ಕರ್ನಾಟಕ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೂಲಕ ಕೆಲಸ ಜಾರಿಗೊಳಿಸುವ ಸಾಧ್ಯತೆಗಳು ಇವೆ ಎನ್ನುತ್ತಾರೆ.ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT