ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಂಗಣದ ಬಗ್ಗೆ ಹರಿಯಾಣ ಮೆಚ್ಚುಗೆ

Last Updated 20 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಸಿರಿನಿಂದ ಕಂಗೊಳಿಸುತ್ತಿರುವ ರಾಜ ಕ್ರೀಡಾಂಗಣದಲ್ಲಿ ರಣಜಿ ಕ್ರಿಕೆಟ್‌ನ ಸಡಗರ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮೈದಾನದಲ್ಲಿ ಹರಿಯಾಣದ ಆಟಗಾರರ ಸಂಭ್ರಮ. ಈ ಟೂರ್ನಿಯಲ್ಲಿ ಕೇವಲ ಒಂದು ಗೆಲುವು ಪಡೆದು `ಬಿ' ಗುಂಪಿನ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಅಮಿತ್ ಮಿಶ್ರಾ ಪಡೆಗೆ ಮತ್ತೊಂದು ಗೆಲುವು ಪಡೆಯುವ ಗುರಿ.

ಈ ಮನಮೋಹಕ ಕ್ರೀಡಾಂಗಣವನ್ನು ಕಂಡ ಅಮಿತ್ ಮಿಶ್ರಾ ಬಳಗ ಇಲ್ಲಿ ಕೆಲ ಹೊತ್ತು ಕಾಲ ಕಳೆದು ಖುಷಿ ಪಟ್ಟಿತು. ಸಂಘಟಕರಿಗೆ ಅಚ್ಚರಿ ಮೂಡಿಸಿ ಬುಧವಾರ ರಾತ್ರಿ ದಿಢೀರ್ ನಗರಕ್ಕೆ ಬಂದ 18 ಸದಸ್ಯರನ್ನೊಳಗೊಂಡ ಹರಿಯಾಣ ಕ್ರಿಕೆಟ್ ತಂಡ ಗುರುವಾರ ಬಿಸಿಲಿನ ಝಳ ಕಡಿಮೆಯಾಗುತ್ತಿದ್ದಂತೆ ಮೈದಾನ ತಲುಪಿತು. ಆಟಗಾರರು ಸುಮಾರು ಎರಡು ತಾಸು ಮೈದಾನದಲ್ಲಿ ಕಳೆದು ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವ ಪ್ರಯತ್ನ ಮಾಡಿದರು. ಮೈದಾನದ ಸುತ್ತಮುತ್ತಲಿನ ಪರಿಸರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಆಟಗಾರರು ಮೊದಲ ನೋಟದಲ್ಲೇ `ಬೌಲ್ಡ್' ಆದರು. 
 
ಒಂದು ತುದಿಯಲ್ಲಿ ಹಸಿರು ಹೊದ್ದು ನಿಂತಿರುವ ಬೆಟ್ಟ, ಇನ್ನೊಂದು ತುದಿಯಲ್ಲಿ ಉಣಕಲ್ ಕೆರೆಯಿಂದ ಬೀಸುವ ತಂಗಾಳಿ. ಇದರ ನಡುವೆ ಹಸಿರಿನಿಂದ ಕಂಗೊಳಿಸುವ ಮೈದಾನದ ಪಿಚ್ ಬಳಿಗೆ  ಕೋಚ್ ಅಶ್ವನಿ ಕುಮಾರ್, ವೇಗಿ ಜೋಗಿಂದರ್ ಶರ್ಮಾ, ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಹಾಗೂ, ವೇಗಿ ಮೋಹಿತ್ ಶರ್ಮಾ ಹೋಗಿ ಕೆಲವು ಹೊತ್ತು ಮಾತನಾಡಿದರು. ನಂತರ ಅಶ್ವನಿ ಕುಮಾರ್ ವ್ಯವಸ್ಥಾಪಕ ಸುರೀಂದರ್ ಸಿಂಗ್ ಅವರ ಜೊತೆ ಕೆಲ ಹೊತ್ತು ಚರ್ಚೆ ನಡೆಸಿದರು. ಅತ್ತ ತಂಡದ ಸದಸ್ಯರು `ಫೂಟ್-ವಾಲಿ' ಆಟದಲ್ಲಿ ನಿರತರಾದರು.

ಸೂರ್ಯ ಪಶ್ಚಿಮದಂಚಿಗೆ ಮುಖ ಮಾಡುತ್ತಿದ್ದಂತೆ ನೆಟ್ಸ್ ಕಡೆಗೆ ಹೆಜ್ಜೆ ಹಾಕಿದರಾದರೂ, ಅಭ್ಯಾಸದ ಗೊಡವೆಗೆ ಹೋಗಲಿಲ್ಲ.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅಶ್ವನಿ ಕುಮಾರ್, ಮೈದಾನ ಹಾಗೂ ಪಿಚ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. `ಪಿಚ್ ಉತ್ತಮವಾಗಿದ್ದು ಬೌಲರ್ ಹಾಗೂ ಬ್ಯಾಟ್ಸ್‌ಮನ್ ಇಬ್ಬರೂ ಮಿಂಚಲು ಅವಕಾಶವಿದೆ' ಎಂದು ಅವರು ಹೇಳಿದರು.
 
ಮೈದಾನದ ಕುರಿತು ಮಾತನಾಡುವಾಗ ಸುರೀಂದರ್ ಸಿಂಗ್ `ರಣಜಿ ಪಂದ್ಯಕ್ಕೆ ಇಷ್ಟು ಸುಂದರ, ಸುಸಜ್ಜಿತ ಮೈದಾನವನ್ನು ಬೇರೆಲ್ಲೂ ನೋಡಿಲ್ಲ' ಎಂದರು. 
 
ಅಚ್ಚರಿ ಮೂಡಿಸಿದ ಮಿಶ್ರಾ ಪಡೆ: ಆಗಾಗ ಗೂಗ್ಲಿ ಎಸೆದು ಅಚ್ಚರಿ ಮೂಡಿಸುವ ಅಮಿತ್ ಮಿಶ್ರಾ ಪಡೆ ಹುಬ್ಬಳ್ಳಿಗೆ ಬಂದದ್ದು ಕೂಡ ಅಚ್ಚರಿಯೇ. ಗುರುವಾರ ನಗರಕ್ಕೆ ಬರಬೇಕಾಗಿದ್ದ ತಂಡ ಬುಧವಾರ ರಾತ್ರಿ ಬಂದು ಸಂಘಟಕರಿಗೆ ಗೊಂದಲ ಮೂಡಿಸಿತು. ಶುಕ್ರವಾರ ನೆಟ್ಸ್‌ಗೆ ಬರಬೇಕಾದವರು ಗುರುವಾರವೇ ಬಂದಿದ್ದು ಅಚ್ಚರಿಗೆ ಕಾರಣವಾಯಿತು.
 
`ಕರ್ನಾಟಕ ಹಾಗೂ ಹರಿಯಾಣ ತಂಡಗಳು ಗುರುವಾರ ರಾತ್ರಿ ನಗರಕ್ಕೆ ಬರುವುದಾಗಿ ಮಾಹಿತಿ ಬಂದಿತ್ತು. ಆದರೆ ಬುಧವಾರ ರಾತ್ರಿ ಏಕಾಏಕಿ ಹರಿಯಾಣ ತಂಡ ಬೆಂಗಳೂರಿನಿಂದ ಹೊರಟ ಬಗ್ಗೆ ತಿಳಿಸಲಾಯಿತು. ತಕ್ಷಣ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಯಿತು' ಎಂದು ಕೆಎಸ್‌ಸಿಎ ಸ್ಥಳೀಯ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.
 
`ನಮಗೆ ಬಂದ ಮಾಹಿತಿಯಂತೆ ಬುಧವಾರವೇ ಹುಬ್ಬಳ್ಳಿಗೆ ಬಂದಿದ್ದೇವೆ. ಆದರೆ ಸಂಪರ್ಕದ ಕೊರತೆಯಿಂದಾಗಿ ಸರಿಯಾಗಿ ಮಾಹಿತಿ ರವಾನೆಯಾಗಲಿಲ್ಲ' ಎಂದು ಹರಿಯಾಣ ತಂಡದ ವ್ಯವಸ್ಥಾಪಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT